2,000 ರೂವರೆಗಿನ ಕಾರ್ಡ್ ಹಣ ಪಾವತಿಗೆ ಶೇ. 18ರಷ್ಟು ಜಿಎಸ್ಟಿ; ಯಾರಿಗೆ ಬೀಳುತ್ತೆ ಹೊರೆ?
18% GST on below Rs 2,000 transaction through card: ಕಾರ್ಡ್ಗಳ ಮೂಲಕ ಮಾಡಲಾಗುವ 2,000 ರೂವರೆಗಿನ ಹಣ ಪಾವತಿಗೆ ಜಿಎಸ್ಟಿ ತೆರಿಗೆ ವಿಧಿಸುವ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿದೆ. ಪೇಮೆಂಟ್ ಗೇಟ್ವೇ ಶುಲ್ಕದ ಮೇಲೆ ಶೇ. 18ರಷ್ಟು ಜಿಎಸ್ಟಿ ಹಾಕಬಹುದು. ಪೇಮೆಂಟ್ ಅಗ್ರಿಗೇಟರ್ಸ್ಗೆ ವಿಧಿಸಲಾಗುವ ಈ ಶುಲ್ಕದ ಮೇಲಿನ ತೆರಿಗೆ ಹೊರೆ ಅಂಗಡಿ ಮುಂಗಟ್ಟುಗಳಿಗೆ ವರ್ಗವಾಗಬಹುದು. ಅಲ್ಲಿಂದ ಅಂತಿಮವಾಗಿ ಗ್ರಾಹಕರಿಗೆ ಈ ತೆರಿಗೆ ಹೊರೆ ಬೀಳಬಹುದು.
ನವದೆಹಲಿ, ಸೆಪ್ಟೆಂಬರ್ 8: ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಮಾಡಲಾಗುವ ಸಣ್ಣ ಪ್ರಮಾಣದ ಹಣ ಪಾವತಿಯನ್ನು ಮತ್ತೆ ಜಿಎಸ್ಟಿ ವ್ಯಾಪ್ತಿಗೆ ತರಲು ಸರ್ಕಾರ ಯೋಜಿಸುತ್ತಿದೆ. 2,000 ರೂವರೆಗಿನ ಡಿಜಿಟಲ್ ವಹಿವಾಟುಗಳಲ್ಲಿ ಪೇಮೆಂಟ್ ಅಗ್ರಿಗೇಟರ್ಸ್ ಮೇಲೆ ಶೇ. 18ರಷ್ಟು ಜಿಎಸ್ಟಿ ವಿಧಿಸುವ ಸಾಧ್ಯತೆ ಇದೆ. ಇಂಥದ್ದೊಂದು ಪ್ರಸ್ತಾಪ ನಾಳೆ (ಸೆ. 9) ನಡೆಯಲಿರುವ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಚರ್ಚೆಯಾಗಲಿದೆ. ಕೇಂದ್ರ ಮತ್ತು ರಾಜ್ಯಗಳ ಕಂದಾಯ ಅಧಿಕಾರಿಗಳಿರುವ ಜಿಎಸ್ಟಿ ಫಿಟ್ಮೆಂಟ್ ಕಮಿಟಿ ಈ ಹೊಸ ತೆರಿಗೆಯನ್ನು ಜಾರಿಗೆ ತರುವ ಬಗ್ಗೆ ಒಲವು ಹೊಂದಿರುವುದು ತಿಳಿದುಬಂದಿದೆ. ವರದಿಗಳ ಪ್ರಕಾರ ಸಣ್ಣ ಡಿಜಿಟಲ್ ವಹಿವಾಟಿಗೆ ಹೊಸ ಜಿಎಸ್ಟಿ ಹೊರೆ ಬೀಳುವುದು ಬಹುತೇಕ ಖಚಿತ ಎನ್ನಲಾಗಿದೆ.
2016ರಲ್ಲಿ ನೋಟ್ ಬ್ಯಾನ್ಗೆ ಮುನ್ನ ಕಾರ್ಡ್ ಮೂಲಕ ನಡೆಯುವ ಎಲ್ಲಾ ವಹಿವಾಟಿಗೆ ಜಿಎಸ್ಟಿ ತೆರಿಗೆ ಇರುತ್ತಿತ್ತು. ನೋಟ್ ಬ್ಯಾನ್ ಆದ ಬಳಿಕ ಸಾರ್ವಜನಿಕರನ್ನು ಡಿಜಿಟಲ್ ವಹಿವಾಟು ನಡೆಸಲು ಉತ್ತೇಜಿಸುವ ಸಲುವಾಗಿ ಸಣ್ಣ ವಹಿವಾಟುಗಳನ್ನು ಜಿಎಸ್ಟಿ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಈಗ ಮತ್ತೊಮ್ಮೆ ಅದು ಚಾಲನೆಗೆ ಬರುವ ಸಾಧ್ಯತೆ ಇದೆ.
2,000 ರೂ ವಹಿವಾಟಿಗೆ ಎಷ್ಟು ಜಿಎಸ್ಟಿ ಇರುತ್ತೆ?
ಪೇಮೆಂಟ್ ಗೇಟ್ವೇ ಮತ್ತು ಬ್ಯಾಂಕುಗಳ ನಡುವೆ ಪೇಮೆಂಟ್ ಮಧ್ಯವರ್ತಿಗಳಾಗಿರುವ ಪೇಟಿಎಂ, ಅಮೇಜಾನ್ ಪೇ, ಫೋನ್ಪೇ, ಗೂಗಲ್ ಪೇ, ರೇಜರ್ಪೇ ಇತ್ಯಾದಿ ಪೇಮೆಂಟ್ ಅಗ್ರಿಗೇಟರ್ಸ್ ಮೇಲೆ ಜಿಎಸ್ಟಿ ವಿಧಿಸಲಾಗುತ್ತದೆ. ಉದಾಹರಣೆಗೆ, ಕಾರ್ಡ್ ಮೂಲಕ 2,000 ರೂ ಹಣ ಪಾವತಿಸಿದರೆ ಅದಕ್ಕೆ ಪೇಮೆಂಟ್ ಗೇಟ್ವೇ ಸರ್ವಿಸ್ ಶುಲ್ಕವಾಗಿ ಶೇ. 0.5ರಿಂದ 2ರಷ್ಟು ಹಣವನ್ನು ಪೇಮೆಂಟ್ ಅಗ್ರಿಗೇಟರ್ಸ್ ನೀಡುತ್ತವೆ. ಸರಾಸರಿಯಾಗಿ ಶೇ. 1ರಷ್ಟು ಶುಲ್ಕ ಎಂದು ಭಾವಿಸಬಹುದು. ಈ ಶೇ. 1ರಷ್ಟು ಶುಲ್ಕದ ಮೇಲೆ ಶೇ. 18ರಷ್ಟು ಜಿಎಸ್ಟಿ ವಿಧಿಸುವ ಪ್ರಸ್ತಾಪ ಇದೆ.
ಇದನ್ನೂ ಓದಿ: ಸುಕನ್ಯಾ ಸಮೃದ್ಧಿ ಯೋಜನೆ: ಅ. 1ರಿಂದ ಬದಲಾಗಲಿವೆ 2 ನಿಯಮಗಳು, ಗಮನಿಸಿ
ಅಂದರೆ, 2,000 ರೂ ವಹಿವಾಟು ನಡೆದಲ್ಲಿ ಅದಕ್ಕೆ 200 ರೂ ಶುಲ್ಕ ಇರುತ್ತದೆ. ಈ 200 ರೂಗೆ ಶೇ. 18ರಷ್ಟು ಜಿಎಸ್ಟಿ ಎಂದರೆ 38 ರೂ ಆಗುತ್ತದೆ. ಸಾಮಾನ್ಯವಾಗಿ ಈ ಶುಲ್ಕ ಮತ್ತು ತೆರಿಗೆಯನ್ನು ಪೇಮೆಂಟ್ ಅಗ್ರಿಗೇಟರ್ಸ್ಗೆ ವಿಧಿಸಲಾಗುತ್ತದೆಯಾದರೂ ಆ ಹೊರೆಯನ್ನು ಅಂಗಡಿಗಳಿಗೆ ವರ್ಗಾಯಿಸಲಾಗುತ್ತದೆ. ಅಂಗಡಿಯವರೂ ಕೂಡ ಈ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸುತ್ತಾರೆ. ಹಾಗಾಗಿ, ಸರ್ಕಾರ ಯಾರಿಗೇ ಜಿಎಸ್ಟಿ ಹಾಕಿದರೂ ಅದರ ಹೊರೆ ಬೀಳುವುದು ಅಂತಿಮ ಗ್ರಾಹಕರಿಗೆಯೇ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ