ಅಲ್ಟ್ರಾಟೆಕ್ನಿಂದ ಖರೀದಿ; ಇಂಡಿಯಾ ಸಿಮೆಂಟ್ಸ್ ಸಿಇಒ ಎನ್ ಶ್ರೀನಿವಾಸನ್ ರಾಜೀನಾಮೆ
India Cements CEO N Srinivasan resigns: ಕುಮಾರಮಂಗಲಂ ಬಿರ್ಲಾ ಒಡೆತನದ ಅಲ್ಟ್ರಾಟೆಕ್ ಸಿಮೆಂಟ್ ಸಂಸ್ಥೆ ಇಂಡಿಯಾ ಸಿಮೆಂಟ್ಸ್ ಅನ್ನು ಖರೀದಿಸಿದೆ. ಇದರ ಬೆನ್ನಲ್ಲೇ ಇಂಡಿಯಾ ಸಿಮೆಂಟ್ಸ್ ಸಂಸ್ಥೆಯ ಸಿಇಒ, ಎಂಡಿ ಆಗಿದ್ದ ಎನ್ ಶ್ರೀನಿವಾಸನ್ ರಾಜೀನಾಮೆ ನೀಡಿದ್ದಾರೆ. ಕಂಪನಿಯ ಮಂಡಳಿಯ ನಾಲ್ವರು ಸ್ವತಂತ್ರ ನಿರ್ದೇಶಕರೂ ರಾಜೀನಾಮೆ ನೀಡಿದ್ದಾರೆ. ಏಳು ಮಂದಿ ಹೊಸ ಸ್ವತಂತ್ರ ನಿರ್ದೇಶಕರು ನೇಮಕವಾಗಿದ್ದಾರೆ.
ಚೆನ್ನೈ, ಡಿಸೆಂಬರ್ 26: ತಮಿಳುನಾಡು ಮೂಲದ ಇಂಡಿಯಾ ಸಿಮೆಂಟ್ಸ್ ಸಂಸ್ಥೆಯ ಸಿಇಒ ಎನ್ ಶ್ರೀನಿವಾಸನ್ ಅವರು ರಾಜೀನಾಮೆ ನೀಡಿದ್ದಾರೆ. ಇಂಡಿಯಾ ಸಿಮೆಂಟ್ಸ್ ಸಂಸ್ಥೆಯನ್ನು ಅಲ್ಪ್ರಾಟೆಕ್ ಖರೀದಿಸಿರುವ ಒಪ್ಪಂದಕ್ಕೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ) ಒಪ್ಪಿಗೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಕುಮಾರಮಂಗಳಂ ಬಿರ್ಲಾ ಒಡೆತನದ ಅಲ್ಟ್ರಾಟೆಕ್ ಸಿಮೆಂಟ್ ಸಂಸ್ಥೆ ಇಂಡಿಯಾ ಸಿಮೆಂಟ್ಸ್ನಲ್ಲಿ ಪ್ರಮುಖ ಪಾಲನ್ನು ಖರೀದಿಸುತ್ತಿದೆ. 7,000 ಕೋಟಿ ರೂ ಮೊತ್ತದ ಡೀಲ್ ಆಗಿದೆ ಎನ್ನಲಾಗಿದೆ.
ಒಪ್ಪಂದ ಅಂತಿಮಗೊಳ್ಳುತ್ತಿದ್ದಂತೆಯೇ ಇಂಡಿಯಾ ಸಿಮೆಂಟ್ಸ್ನ ಮಾಲೀಕರ ಅಧಿಕಾರ ತಪ್ಪಿದಂತಾಗಿದೆ. ರೆಗ್ಯುಲೇಟರಿ ಫೈಲಿಂಗ್ನಲ್ಲಿ ಐಸಿಎಲ್ ಸಂಸ್ಥೆ ಎನ್ ಶ್ರೀನಿವಾಸನ್ ರಾಜೀನಾಮೆ ನೀಡಿರುವ ಸಂಗತಿಯನ್ನು ಘೋಷಿಸಿದೆ. ಐಪಿಎಲ್ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ನ ಮಾಜಿ ಮಾಲೀಕರಾದ ಎನ್ ಶ್ರೀನಿವಾಸನ್ ಅವರು ಇಂಡಿಯಾ ಸಿಮೆಂಟ್ಸ್ನ ಮುಖ್ಯಸ್ಥರಾಗಿ ಯಶಸ್ಸು ಗಳಿಸಿದ್ದರು. ಶ್ರೀನಿವಾಸನ್ ಮಾತ್ರವಲ್ಲದೇ ಅವರ ಕುಟುಂಬದ ಇತರ ಕೆಲ ಸದಸ್ಯರು ಇಂಡಿಯಾ ಸಿಮೆಂಟ್ಸ್ನಲ್ಲಿ ಪ್ರಮುಖ ಅಧಿಕಾರ ಹೊಂದಿದ್ದರು. ಪತ್ನಿ ಚಿತ್ರಾ ಶ್ರೀನಿವಾಸನ್, ಮಗಳು ರೂಪಾ ಗುರುನಾಥ್, ವಿ.ಎಂ. ಮೋಹನ್ ಅವರು ಐಸಿಎಲ್ನ ಮಂಡಳಿಯಿಂದ ಹೊರಬಂದಿದ್ದಾರೆ.
ಇದನ್ನೂ ಓದಿ: 2024ರಲ್ಲಿ ಮ್ಯೂಚುವಲ್ ಫಂಡ್ಗಳಿಗೆ ಹರಿದುಬಂತು 17 ಲಕ್ಷ ಕೋಟಿ ರೂ ಹೂಡಿಕೆ; ಒಟ್ಟಾರೆ ನಿರ್ವಹಿತ ಆಸ್ತಿ 68 ಲಕ್ಷ ಕೋಟಿ ರೂ
ಸ್ವತಂತ್ರ ನಿರ್ದೇಶಕರೂ ರಾಜೀನಾಮೆ…
ಇವರೆಲ್ಲರೂ ಕೂಡ ಇಂಡಿಯಾ ಸಿಮೆಂಟ್ಸ್ನಲ್ಲಿ ಹೊಂದಿದ್ದ ಎಲ್ಲಾ ಷೇರುಪಾಲನ್ನೂ ಬಿಟ್ಟುಕೊಟ್ಟಿದ್ದಾರೆ. ಇವರ ಮಾಲೀಕತ್ವದ ಎಲ್ಲಾ ಸಂಸ್ಥೆಗಳು ಇಂಡಿಯಾ ಸಿಮೆಂಟ್ಸ್ನಲ್ಲಿ ಹೊಂದಿದ್ದ ಯಾವುದೇ ಈಕ್ವಿಟಿ ಷೇರುಗಳನ್ನೂ ಬಿಟ್ಟುಕೊಡಲಾಗಿದೆ. ಎನ್ ಶ್ರೀನಿವಾಸನ್ ಅವರು ಇಂಡಿಯಾ ಸಿಮೆಂಟ್ಸ್ ಸಂಸ್ಥೆಯಲ್ಲಿ ಸಿಇಒ ಮಾತ್ರವಲ್ಲದೇ ವೈಸ್ ಛೇರ್ಮನ್, ಎಂಡಿ ಮತ್ತು ಡೈರೆಕ್ಟರ್ ಕೂಡ ಆಗಿದ್ದರು.
ಡಿಸೆಂಬರ್ 24ರಂದು 7,000 ಕೋಟಿ ರೂ ಮೊತ್ತದ ಒಪ್ಪಂದ ಅಂತಿಮಗೊಂಡ ಬಳಿಕ ಇಂಡಿಯಾ ಸಿಮೆಂಟ್ಸ್ ಲಿ ಸಂಸ್ಥೆಯ ಪೂರ್ಣಾಧಿಕಾರ ಅಲ್ಟ್ರಾಟೆಕ್ ಸಿಮೆಂಟ್ಗೆ ದಕ್ಕಿದೆ. ಇಂಡಿಯಾ ಸಿಮೆಂಟ್ಸ್ನ ಮಂಡಳಿಯಲ್ಲಿ ಸ್ವತಂತ್ರ ನಿರ್ದೇಶಕರಾಗಿದ್ದ ಎಸ್ ಬಾಲಸುಬ್ರಮಣಿಯನ್ ಆದಿತ್ಯನ್, ಕೃಷ್ಣ ಶ್ರೀವಾಸ್ತವ, ಲಕ್ಷ್ಮೀ ಅಪರ್ಣಾ ಶ್ರೀಕುಮಾರ್ ಮತ್ತು ಸಂಧ್ಯಾ ರಾಜನ್ ಅವರು ಡಿಸೆಂಬರ್ 25, ನಿನ್ನೆ ಸಂಜೆ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ: ಬಂಡವಾಳ ಮಾರುಕಟ್ಟೆಯಿಂದ ಕಂಪನಿಗಳು ಪಡೆದ ಫಂಡಿಂಗ್ 10 ವರ್ಷದಲ್ಲಿ 10 ಪಟ್ಟು ಹೆಚ್ಚಳ: ವರದಿ
ಈ ಮೇಲಿನ ನಾಲ್ವರು ಸ್ವತಂತ್ರ ನಿರ್ದೇಶಕರ ಸ್ಥಾನಕ್ಕೆ ಕೆ.ಸಿ. ಝನ್ವರ್, ವಿವೇಕ್ ಅಗರ್ವಾಲ್, ಇ.ಆರ್. ರಾಜ್ ನಾರಾಯಣನ್ ಮತ್ತು ಅಶೋಕ್ ರಾಮಚಂದ್ರನ್ ಅವರನ್ನು ನೇಮಿಸಲಾಗಿದೆ. ಇದರ ಜೊತೆಗೆ ಅಲ್ಕಾ ಭರೂಚಾ, ವಿಕಾಸ್ ಬಾಲಿಯಾ, ಸುಕನ್ಯಾ ಕೃಪಾಲು ಅವರೂ ಕೂಡ ಸ್ವತಂತ್ರ ನಿರ್ದೇಶಕರಾಗಿ ಐಸಿಎಲ್ ಮಂಡಳಿ ಸೇರ್ಪಡೆಯಾಗಿದ್ದಾರೆ.
ಬಿರ್ಲಾ ಗ್ರೂಪ್ಗೆ ಸೇರಿದ ಅಲ್ಟ್ರಾಟೆಕ್ ಸಂಸ್ಥೆ ಈ ಹಿಂದೆ ಇಂಡಿಯಾ ಸಿಮೆಂಟ್ಸ್ನ ಶೇ. 32.72ರಷ್ಟು ಈಕ್ವಿಟಿ ಷೇರುಗಳನ್ನು ಖರೀದಿಸಿತ್ತು. ಹೆಚ್ಚುವರಿ ಶೇ. 26ರಷ್ಟು ಷೇರು ಖರೀದಿಗೆ ಅನುಮತಿಯೂ ಲಭಿಸಿತ್ತು. ಅದರಂತೆ ಈಗ ಬಹುಪಾಲು ಷೇರುಗಳನ್ನು ಅಲ್ಟ್ರಾಟೆಕ್ ಖರೀದಿ ಮಾಡಿ, ಸಂಪೂರ್ಣ ಮಾಲಕತ್ವ ಪಡೆದುಕೊಂಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ