ಸುಕನ್ಯಾ ಸಮೃದ್ಧಿ ಯೋಜನೆ: ಅ. 1ರಿಂದ ಬದಲಾಗಲಿವೆ 2 ನಿಯಮಗಳು, ಗಮನಿಸಿ
Sukanya Samriddhi Yojana rules change from 2024 Oct 1st: ಅಕ್ಟೋಬರ್ 1ರಿಂದ ಕೆಲ ಸಣ್ಣ ಉಳಿತಾಯ ಯೋಜನೆಗಳ ನಿಯಮಗಳಲ್ಲಿ ಸರ್ಕಾರ ತುಸು ಬದಲಾವಣೆ ತಂದಿದೆ. ನ್ಯಾಷನಲ್ ಸೇವಿಂಗ್ಸ್ ಸ್ಕೀಮ್, ಸುಕನ್ಯಾ ಸಮೃದ್ಧಿ ಯೋಜನೆ, ಪಿಪಿಎಫ್ ಯೋಜನೆಗಳ ನಿಯಮದಲ್ಲಿ ಬದಲಾವಣೆ ತರಲಾಗುತ್ತಿದೆ. ಬಾಲಕಿಯರ ಹೆಸರಿನಲ್ಲಿ ಆರಂಭಿಸಲಾಗುವ ಸುಕನ್ಯಾ ಸಮೃದ್ಧಿ ಯೋಜನೆಯ ಎರಡು ನಿಯಮಗಳು ಬದಲಾಗುತ್ತಿದೆ, ಗಮನಿಸಿ.
ಹಣಕಾಸು ಸಚಿವಾಲಯವು ಕೆಲ ಸಣ್ಣ ಉಳಿತಾಯ ಯೋಜನೆಗಳ ಕೆಲ ನಿಯಮಗಳಲ್ಲಿ ಸ್ವಲ್ಪ ಬದಲಾವಣೆ ಮಾಡಿದೆ. ಅಕ್ಟೋಬರ್ 1ರಿಂದ ಇವು ಚಾಲನೆಗೆ ಬರಲಿವೆ. ಅಂಚೆ ಕಚೇರಿ ಮೂಲಕ ಮಾಡಿಸಲಾಗಿರುವ ಪಬ್ಲಿಕ್ ಪ್ರಾವಿಡೆಂಟ್ ಫಂಡ್, ಸ್ಮಾಲ್ ಸೇವಿಂಗ್ಸ್ ಸ್ಕೀಮ್, ನ್ಯಾಷನಲ್ ಸ್ಮಾಲ್ ಸೇವಿಂಗ್ಸ್ ಸ್ಕೀಮ್ ಹಾಗೂ ಸುಕನ್ಯಾ ಸಮೃದ್ದಿ ಸ್ಕೀಮ್ಗಳಲ್ಲಿನ ಕೆಲ ನಿಯಮಗಳಲ್ಲಿ ತಿದ್ದುಪಡಿ ಮಾಡಲಾಗಿದೆ. ಹೊಸ ನಿಯಮಗಳು ಜಾರಿಗೆ ಬರಲಿವೆ. ಸಣ್ಣ ಉಳಿತಾಯ ಯೋಜನೆಗಳನ್ನು ಹೆಚ್ಚು ಕಾನೂನುಬದ್ಧಗೊಳಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ಸುಕನ್ಯಾ ಸಮೃದ್ಧಿ ಅಕೌಂಟ್ನಲ್ಲಿ ಏನು ಬದಲಾವಣೆ ಮಾಡಲಾಗಿದೆ ಎನ್ನುವ ವಿವರ ಮುಂದಿದೆ ನೋಡಿ…
ಅ. 1ರಿಂದ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಬದಲಾಗುವ ನಿಯಮಗಳಿವು
ಬಾಲಕಿಯರ ಹೆಸರಿನಲ್ಲಿ ಅವರ ಅಜ್ಜ ಅಥವಾ ಅಜ್ಜಿ ಪಾಲಕರಾಗಿ (Guardian) ಸುಕನ್ಯಾ ಸಮೃದ್ಧಿ ಖಾತೆ ತೆರೆದಿದ್ದರೆ ಅದು ಸಿಂಧುವಾಗಿರುವುದಿಲ್ಲ. ಬಾಲಕಿಯ ತಂದೆ ಅಥವಾ ತಾಯಿಯ ಹೆಸರಿಗೆ ಖಾತೆಯ ಪಾಲಕತ್ವ ವರ್ಗಾವಣೆ ಆಗುತ್ತದೆ. ಅಥವಾ ಕಾನೂನು ಪ್ರಕಾರ ಯಾರು ಪಾಲಕರಾಗಿರುತ್ತಾರೋ ಅವರಿಗೆ ವರ್ಗಾವಣೆ ಆಗುತ್ತದೆ. ಒಂದು ವೇಳೆ ಬಾಲಕಿಗೆ ಅಜ್ಜ ಅಥವಾ ಅಜ್ಜಿ ಬಿಟ್ಟರೆ ಯಾರೂ ಪಾಲಕರಿಲ್ಲ ಎಂದಲ್ಲಿ ಅವರ ಹೆಸರಿನಲ್ಲೇ ಖಾತೆ ಇರುತ್ತದೆ. ವರ್ಗಾವಣೆ ಆಗುವುದಿಲ್ಲ.
ಇದನ್ನೂ ಓದಿ: ತಪ್ಪದೇ ಗಮನಿಸಿ; ಒಂದಕ್ಕಿಂತ ಹೆಚ್ಚು ಖಾತೆ ಹೊಂದಿರುವುದೂ ಸೇರಿ ಪಿಪಿಎಫ್ ಯೋಜನೆಯ 3 ನಿಯಮಗಳಲ್ಲಿ ಮಾರ್ಪಾಡು; ಅ. 1ರಿಂದ ಜಾರಿ
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಆಗುವ ಮತ್ತೊಂದು ನಿಯಮ ಬದಲಾವಣೆ ಎರಡಕ್ಕಿಂತ ಹೆಚ್ಚು ಖಾತೆಗಳ ಕುರಿತಾದ್ದು. ಒಂದು ಕುಟುಂಬದಲ್ಲಿ ಎರಡಕ್ಕಿಂತ ಹೆಚ್ಚು ಸುಕನ್ಯಾ ಸಮೃದ್ಧಿ ಖಾತೆ ಇರುವಂತಿಲ್ಲ. ಹಾಗೊಂದು ವೇಳೆ ಎರಡಕ್ಕಿಂತ ಹೆಚ್ಚು ಅಕೌಂಟ್ಗಳಿದ್ದರೆ ನಿಯಮಿತವಲ್ಲದ ಖಾತೆ ಅಥವಾ ಖಾತೆಗಳನ್ನು ಮುಚ್ಚಲಾಗುತ್ತದೆ.
ಈ ಎರಡು ನಿಯಮ ಬದಲಾವಣೆಗಳು ಅಕ್ಟೋಬರ್ 1ರಿಂದ ಚಾಲನೆಗೆ ಬರುತ್ತವೆ.
ಏನಿದು ಸುಕನ್ಯಾ ಸಮೃದ್ಧಿ ಯೋಜನೆ?
10 ವರ್ಷದೊಳಗಿನ ಹೆಣ್ಮಕ್ಕಳ ಭವಿಷ್ಯಕ್ಕೆಂದು ಪೋಷಕರು ಹೂಡಿಕೆ ಮಾಡಬಹುದಾದ ಸ್ಕೀಮ್ ಇದು. ಹೆಣ್ಮಗುವಿನ ಹೆಸರಿನಲ್ಲಿ ಅಂಚೆ ಕಚೇರಿ ಅಥವಾ ಬ್ಯಾಂಕುಗಳಲ್ಲಿ ಸ್ಕೀಮ್ನ ಖಾತೆ ತೆರೆಯಬಹುದು.
21 ವರ್ಷಕ್ಕೆ ಈ ಸ್ಕೀಮ್ ಮೆಚ್ಯೂರ್ ಆಗುತ್ತದೆ. ವರ್ಷಕ್ಕೆ ಒಂದೂವರೆ ಲಕ್ಷ ರೂವರೆಗೆ ಠೇವಣಿ ಇಡಬಹುದು. ಒಂದು ಹೆಣ್ಮಗುವಿನ ಹೆಸರಿನಲ್ಲಿ ಒಂದು ಖಾತೆ ಮಾತ್ರವೇ ತೆರೆಯಬಹುದು. ಈ ಸ್ಕೀಮ್ನಲ್ಲಿನ ಹೂಡಿಕೆಗೆ ಸರ್ಕಾರ ವರ್ಷಕ್ಕೆ ಶೇ. 8.2 ಬಡ್ಡಿ ನೀಡುತ್ತದೆ. ಈ ಹಣಕ್ಕೆ ಆದಾಯ ತೆರಿಗೆ ಡಿಡಕ್ಷನ್ ಅವಕಾಶ ಇದೆ. ಅಲ್ಲದೇ ಇಲ್ಲಿ ಸಿಗುವ ಬಡ್ಡಿ ಲಾಭಕ್ಕೆ ಯಾವ ತೆರಿಗೆಯನ್ನೂ ವಿಧಿಸಲಾಗುವುದಿಲ್ಲ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ