ತಪ್ಪದೇ ಗಮನಿಸಿ; ಒಂದಕ್ಕಿಂತ ಹೆಚ್ಚು ಖಾತೆ ಹೊಂದಿರುವುದೂ ಸೇರಿ ಪಿಪಿಎಫ್ ಯೋಜನೆಯ 3 ನಿಯಮಗಳಲ್ಲಿ ಮಾರ್ಪಾಡು; ಅ. 1ರಿಂದ ಜಾರಿ

PPF rules changes: ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಯೋಜನೆಯ ಕೆಲ ನಿಯಮಗಳಲ್ಲಿ ಮಾರ್ಪಾಡು ಮಾಡಲಾಗಿದೆ. ಅಪ್ರಾಪ್ತರ ಹೆಸರಿನಲ್ಲಿ ಪಿಪಿಎಫ್ ಅಕೌಂಟ್ ತೆರೆದಿರುವವರು, ಅಥವಾ ಒಂದಕ್ಕಿಂತ ಹೆಚ್ಚು ಪಿಪಿಎಫ್ ಖಾತೆ ಹೊಂದಿರುವವರು, ಮತ್ತು ಪಿಪಿಎಫ್ ಖಾತೆ ಹೊಂದಿರುವ ಎನ್​ಆರ್​ಐಗಳು ತಪ್ಪದೇ ಈ ಹೊಸ ನಿಯಮವನ್ನು ಗಮನಿಸಬೇಕು.

ತಪ್ಪದೇ ಗಮನಿಸಿ; ಒಂದಕ್ಕಿಂತ ಹೆಚ್ಚು ಖಾತೆ ಹೊಂದಿರುವುದೂ ಸೇರಿ ಪಿಪಿಎಫ್ ಯೋಜನೆಯ 3 ನಿಯಮಗಳಲ್ಲಿ ಮಾರ್ಪಾಡು; ಅ. 1ರಿಂದ ಜಾರಿ
ಪಿಪಿಎಫ್
Follow us
|

Updated on: Sep 04, 2024 | 6:50 PM

ನವದೆಹಲಿ, ಸೆಪ್ಟೆಂಬರ್ 4: ಸಣ್ಣ ಉಳಿತಾಯ ಯೋಜನೆಗಳ ನಿಯಮಗಳನ್ನು ಇನ್ನಷ್ಟು ಸರಿಪಡಿಸುವ ನಿಟ್ಟಿನಲ್ಲಿ ಹಣಕಾಸು ಸಚಿವಾಲಯವು ಕೆಲ ಸ್ಕೀಮ್ ನಿಯಮಗಳಲ್ಲಿ ಬದಲಾವಣೆ ತರಲು ಹೊರಟಿದೆ. ಎನ್​ಎಸ್​ಎಸ್, ಪಿಪಿಎಫ್ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿನ ಕೆಲ ನಿಯಮಗಳನ್ನು ಬದಲಾಯಿಸಲಾಗುತ್ತಿದೆ. ಪಬ್ಲಿಕ್ ಪ್ರಾವಿಡೆಂಟ್ ಫಂಡ್​ನಲ್ಲಿ ಮೂರು ಪ್ರಮುಖ ನಿಯಮಗಳನ್ನು ಬದಲಿಸಲಾಗಿದೆ. ಆಗಸ್ಟ್ 21ರಂದು ಹಣಕಾಸು ಸಚಿವಾಲಯ ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆ ಈ ಸಂಬಂಧ ಅಧಿಸೂಚನೆ ಹೊರಡಿಸಿದೆ. ಅಕ್ಟೋಬರ್ 1ರಿಂದ ಈ ಹೊಸ ನಿಯಮಗಳು ಚಾಲನೆಗೆ ಬರಲಿವೆ. ಪಿಪಿಎಫ್​ನಲ್ಲಿ ಆಗಲಿರುವ ಮೂರು ನಿಯಮಗಳ ಬದಲಾವಣೆ ಏನು ಎನ್ನುವ ವಿವರ ಮುಂದಿದೆ…

ಅಪ್ರಾಪ್ತರ ಹೆಸರಿನಲ್ಲಿ ಆರಂಭಿಸಲಾಗಿರುವ ಪಿಪಿಎಫ್ ಅಕೌಂಟ್

ಯಾವುದೇ ವಯಸ್ಸಿನವರು ಪಿಪಿಎಫ್ ಖಾತೆ ತೆರೆಯಬಹುದು. ಅಪ್ರಾಪ್ತರಾದರೆ ಅವರ ಹೆಸರಿನಲ್ಲಿ ಪಾಲಕರು ಖಾತೆ ತೆರೆಯಬಹುದು. ಈಗ ಒಂದು ಬದಲಾವಣೆ ಮಾಡಲಾಗಿದೆ. ಅಪ್ರಾಪ್ತರ ಹೆಸರಿನಲ್ಲಿ ಪಿಪಿಎಫ್ ಖಾತೆ ತೆರೆಯಬಹುದಾದರೂ ಅವರು ಪ್ರಾಪ್ತ ವಯಸ್ಸಿಗೆ ಬರುವವರೆಗೂ ಹೂಡಿಕೆ ಹಣಕ್ಕೆ ಶೇ. 7.1ರಷ್ಟು ಬಡ್ಡಿ ದಕ್ಕುವುದಿಲ್ಲ. ಸೇವಿಂಗ್ಸ್ ಅಕೌಂಟ್​ಗೆ ಸಿಗುವಷ್ಟೇ ಬಡ್ಡಿ ಮಾತ್ರ ಅದಕ್ಕೆ ಸಿಗುತ್ತದೆ.

ಇದನ್ನೂ ಓದಿ: ಈ ಪೋಸ್ಟ್ ಆಫೀಸ್ ಸ್ಕೀಮ್​ನಲ್ಲಿ ಒಮ್ಮೆ ಹೂಡಿಕೆ ಮಾಡಿ, ಮಾಸಿಕ 20,000 ರೂ ಪಡೆಯಿರಿ

ಹಾಗೆಯೇ, ಪ್ರಾಪ್ತ ವಯಸ್ಸಿಗೆ ಬಂದ ನಂತರದಿಂದ ಪಿಪಿಎಫ್​ನ ಮೆಚ್ಯೂರಿಟಿ ಅವಧಿಯನ್ನು ಲೆಕ್ಕ ಹಾಕಲಾಗುತ್ತದೆ. ಅಂದರೆ 18 ವರ್ಷ ವಯಸ್ಸಾದ ನಂತರ 15 ವರ್ಷಕ್ಕೆ ಪಿಪಿಎಫ್ ಮೆಚ್ಯೂರ್ ಆಗುತ್ತದೆ. ಈ ಅವಧಿಯಲ್ಲಿ ಘೋಷಿತ ಬಡ್ಡಿದರ ನೀಡಲಾಗುತ್ತದೆ.

ಒಂದಕ್ಕಿಂತ ಹೆಚ್ಚು ಪಿಪಿಎಫ್ ಖಾತೆಗಳಿದ್ದರೆ?

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಸ್ಕೀಮ್​ನಲ್ಲಿ ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಒಂದೇ ಖಾತೆ ಮಾತ್ರವೇ ರಚಿಸಬಹುದು. ಎರಡು ಖಾತೆ ತೆರೆದಿದ್ದರೆ, ಮೊದಲ ಖಾತೆಯನ್ನು ಪ್ರೈಮರಿ ಅಕೌಂಟ್ ಎಂದು ಪರಿಗಣಿಸಲಾಗುತ್ತದೆ. ಈ ಪ್ರಾಥಮಿಕ ಖಾತೆಗೆ ಮಾತ್ರವೇ ನಿಗದಿತ ಬಡ್ಡಿದರ ಸಿಗುತ್ತದೆ. ಎರಡನೇ ಖಾತೆಗೆ ಏನೂ ಸಿಗುವುದಿಲ್ಲ. ಎರಡನೇ ಖಾತೆಯಲ್ಲಿನ ಹಣವನ್ನು ಪ್ರೈಮರಿ ಖಾತೆಗೆ ವಿಲೀನ ಮಾಡಲಾಗುತ್ತದೆ. ಇದರಲ್ಲಿ ಒಂದೂವರೆ ಲಕ್ಷ ರೂಗಿಂತ ಹೆಚ್ಚು ಹಣ ಇದ್ದಲ್ಲಿ ಆ ಹೆಚ್ಚುವರಿ ಹಣವನ್ನು ಯಾವುದೇ ಬಡ್ಡಿ ಇಲ್ಲದೇ ಮರಳಿಸಲಾಗುತ್ತದೆ.

ಇದನ್ನೂ ಓದಿ: ಇವತ್ತಿನ ಒಂದು ಕೋಟಿ ರೂ ಹಣದ ನಿಜ ಮೌಲ್ಯ 30 ವರ್ಷದ ಬಳಿಕ ಎಷ್ಟಾಗಬಹುದು? ಭವಿಷ್ಯದ ಭದ್ರತೆಗೆ ಇದು ಬಹಳ ಮುಖ್ಯ

ಎನ್​ಆರ್​ಐಗಳ ಪಿಪಿಎಫ್ ಖಾತೆಗೆ ಸೆಪ್ಟೆಂಬರ್​ವರೆಗೆ ಮಾತ್ರ ಬಡ್ಡಿ

1968ರ ಪಿಪಿಎಫ್ ಸ್ಕೀಮ್ ಅಡಿಯಲ್ಲಿ ಫಾರ್ಮ್ ಎಚ್​ನಲ್ಲಿ ಖಾತೆದಾರರ ನಿವಾಸ ಸ್ಥಿತಿಯನ್ನು ಕೇಳಿರುವುದಿಲ್ಲ. ಎನ್​ಆರ್​ಐಗಳೂ ಖಾತೆ ತೆರೆಯಬಹುದಿತ್ತು. ಈಗ ಎನ್​ಆರ್​ಐಗಳು ಪಿಪಿಎಫ್ ಖಾತೆ ತೆರೆಯಲು ಅವಕಾಶ ಹೊಂದಿರುವುದಿಲ್ಲ. ಹಿಂದಿನ ಸ್ಕೀಮ್​ನಲ್ಲಿ ಖಾತೆ ಹೊಂದಿದವರಿಗೆ ಅದನ್ನು ಮುಂದುವರಿಸಲು ಈಗ ಅವಕಾಶ ಇರುವುದಿಲ್ಲ. ಹಾಗೂ ಅನಿವಾಸಿ ಭಾರತೀಯರು ಪಿಪಿಎಫ್ ಖಾತೆ ಹಿಂಪಡೆಯದೇ ಮುಂದುವರಿಸಬಹುದಾದರೂ ಬಡ್ಡಿದರ ಸಿಗುವುದಿಲ್ಲ. ಸೆಪ್ಟೆಂಬರ್ 30ರವರೆಗೂ ಸೇವಿಂಗ್ಸ್ ಅಕೌಂಟ್​ಗೆ ಸಿಗುವಷ್ಟೇ ಬಡ್ಡಿ ಮಾತ್ರ ಇದಕ್ಕೆ ಬರುತ್ತದೆ. ಅದಾದ ಮೇಲೆ ಶೂನ್ಯ ಬಡ್ಡಿ ಸಿಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ