IND vs AUS: ಸ್ಮಿತ್ ಶತಕ; 474 ರನ್ಗಳಿಗೆ ಆಸ್ಟ್ರೇಲಿಯಾ ಆಲೌಟ್
IND vs AUS: ಮೆಲ್ಬೋರ್ನ್ ಟೆಸ್ಟ್ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 474 ರನ್ಗಳಿಗೆ ತನ್ನ ಆಲೌಟ್ ಆಗಿದೆ. ತಂಡದ ಪರ ಸ್ಟೀವ್ ಸ್ಮಿತ್ 140 ರನ್ಗಳ ಇನ್ನಿಂಗ್ಸ್ ಆಡಿದರೆ, ಕೊನ್ಸ್ಟಾಸ್, ಖವಾಜಾ ಹಾಗೂ ಲಬುಶೇನ್ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಭಾರತದ ಪರ ಬುಮ್ರಾ 4 ಹಾಗೂ ಜಡೇಜಾ 3 ವಿಕೆಟ್ ಪಡೆದರು.
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೆಲ್ಬೋರ್ನ್‌ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆತಿಥೇಯ ಆಸ್ಟ್ರೇಲಿಯಾ ತಂಡ ಪಂದ್ಯದ ಎರಡನೇ ದಿನದಾಟದ ಎರಡನೇ ಸೆಷನ್ನಲ್ಲಿ ಆಲೌಟ್ ಆಗುವ ಮೂಲಕ 474 ರನ್ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಮೊದಲ ದಿನದಾಟದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 311 ರನ್ ಗಳಿಸಿದ್ದ ಆಸ್ಟ್ರೇಲಿಯಾ ಇಲ್ಲಿಂದ ತನ್ನ ಎರಡನೇ ದಿನದಾಟವನ್ನು ಮುಂದುವರೆಸಿತು. ಮೊದಲ ದಿನದಾಟದಂತ್ಯಕ್ಕೆ 68 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಸ್ಮಿತ್ ಎರಡನೇ ದಿನದಾಟದಲ್ಲಿ ಅಮೋಘ ಶತಕ ಸಿಡಿಸಿದರೆ, 8 ರನ್ಗಳಿಂದ ಬ್ಯಾಟಿಂಗ್ ಮುಂದುವರೆಸಿದ ನಾಯಕ ಪ್ಯಾಟ್ ಕಮಿನ್ಸ್ 49 ರನ್ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು.
ಸ್ಮಿತ್ ಶತಕ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಪರ ಮೊದಲ ಮೂವರು ಬ್ಯಾಟ್ಸ್‌ಮನ್‌ಗಳು ಅರ್ಧಶತಕ ಗಳಿಸಿದರು. ಇದರ ನಂತರ ಸ್ಟೀವ್ ಸ್ಮಿತ್ ತಮ್ಮ ಟೆಸ್ಟ್ ವೃತ್ತಿಜೀವನದ 34 ನೇ ಶತಕ ಬಾರಿಸಿದರೆ, ನಾಯಕ ಪ್ಯಾಟ್ ಕಮಿನ್ಸ್ 49 ರನ್ಗಳ ಇನಿಂಗ್ಸ್ ಆಡಿದರು. ಎರಡನೇ ದಿನದಾಟದ ಆರಂಭದಿಂದಲೂ ಆಸ್ಟ್ರೇಲಿಯಾ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಹೀಗಾಗಿ ಭಾರತದ ಬೌಲರ್‌ಗಳು ಇಂದು ನಾಲ್ಕು ವಿಕೆಟ್ ಪಡೆಯಲು ಕಠಿಣ ಪರಿಶ್ರಮ ಪಡಬೇಕಾಯಿತು. ಅಂತಿಮವಾಗಿ ಆಸ್ಟ್ರೇಲಿಯಾ ತನ್ನ ಕೊನೆಯ 4 ವಿಕೆಟ್ಗಳನ್ನು ಕಳೆದುಕೊಂಡು 163 ರನ್ ಕಲೆಹಾಕಿತು.
4 ವಿಕೆಟ್ ಪಡೆದ ಬುಮ್ರಾ
ಆಸೀಸ್ ಪರ ಗರಿಷ್ಠ ಇನ್ನಿಂಗ್ಸ್ ಆಡಿದ ಸ್ಟೀವ್ ಸ್ಮಿತ್ 140 ರನ್ ಗಳಿಸಿ ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದರು. ಇತ್ತ ಭಾರತದ ಪರ ಜಸ್ಪ್ರೀತ್ ಬುಮ್ರಾ ಗರಿಷ್ಠ ನಾಲ್ಕು ವಿಕೆಟ್ ಪಡೆದರೆ, ರವೀಂದ್ರ ಜಡೇಜಾ ಮೂರು ವಿಕೆಟ್ ಪಡೆದರು. ಆಕಾಶ್ ದೀಪ್ ಎರಡು ವಿಕೆಟ್ ಪಡೆದರೆ, ಸುಂದರ್ ಒಂದು ವಿಕೆಟ್ ಪಡೆದರು. ಇದೀಗ ಆಸ್ಟ್ರೇಲಿಯಾವನ್ನು ಆಲೌಟ್ ಮಾಡಿ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಭಾರತದ ಪರ ಯಶಸ್ವಿ ಜೈಸ್ವಾಲ್ ಹಾಗೂ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.
ಉಭಯ ತಂಡಗಳು
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್, ನಿತೀಶ್ ಕುಮಾರ್ ರೆಡ್ಡಿ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಆಸ್ಟ್ರೇಲಿಯಾ ತಂಡ: ಉಸ್ಮಾನ್ ಖವಾಜಾ, ಸ್ಯಾಮ್ ಕಾನ್‌ಸ್ಟೆಂಟ್ಸ್, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್, ನಾಥನ್ ಲಿಯಾನ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:20 am, Fri, 27 December 24