ಷೇರುಮಾರುಕಟ್ಟೆಯ ಸ್ಥಿರ ಪ್ರದರ್ಶನ; ದಾಖಲೆಯ ಸತತ 9ನೇ ವರ್ಷ ಸಕಾರಾತ್ಮಕ ರಿಟರ್ನ್ ಕೊಟ್ಟ ನಿಫ್ಟಿ, ಸೆನ್ಸೆಕ್ಸ್
Indian stock market updates: 2024ರಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಪಾಸಿಟಿವ್ ಆಗಿ ಅಂತ್ಯಗೊಳ್ಳುವ ಸಾಧ್ಯತೆ ದಟ್ಟವಾಗಿದೆ. ಸತತ 9ನೇ ವರ್ಷ ಈಕ್ವಿಟಿ ಮಾರುಕಟ್ಟೆ ಸಕಾರಾತ್ಮಕ ಸ್ಥಿತಿ ಹೊಂದಿದೆ. ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ವರದಿ ಪ್ರಕಾರ ಇಲ್ಲಿಯವರೆಗೆ ಸೆನ್ಸೆಕ್ಸ್ ಇಂಡೆಕ್ಸ್ ಶೇ. 8.62, ಮತ್ತು ನಿಫ್ಟಿ ಇಂಡೆಕ್ಸ್ ಶೇ 9.21ರಷ್ಟು ಪ್ರಗತಿ ತೋರಿವೆ. 2025ರಲ್ಲಿ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ಸರ್ಕಾರದಿಂದ ಬಂಡವಾಳ ವೆಚ್ಚ ಮತ್ತು ಖಾಸಗಿ ಅನುಭೋಗ ಹೆಚ್ಚಲಿದೆ. ಇದು ಈಕ್ವಿಟಿ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ನಿರೀಕ್ಷೆ ಇದೆ.
ನವದೆಹಲಿ, ಡಿಸೆಂಬರ್ 26: ಈ ವರ್ಷ ಜಾಗತಿಕ ರಾಜಕೀಯ ಮತ್ತು ಆರ್ಥಿಕ ತಲ್ಲಣಗಳ ನಡುವೆಯೂ ಭಾರತದ ಷೇರು ಮಾರುಕಟ್ಟೆ ಉತ್ತಮ ಪ್ರತಿರೋಧ ಶಕ್ತಿ ತೋರಿದೆ. 2024ರಲ್ಲಿ ಪ್ರಮುಖ ಸೂಚ್ಯಂಕಗಳು ಪಾಸಿಟಿವ್ ರಿಟರ್ನ್ ನೀಡುತ್ತಿವೆ. ಕಳೆದ ಒಂಬತ್ತು ವರ್ಷಗಳಿಂದಲೂ ಭಾರತದ ಈಕ್ವಿಟಿ ಮಾರುಕಟ್ಟೆಗಳು ಸಕಾರಾತ್ಮಕವಾಗಿ ಬೆಳವಣಿಗೆ ಹೊಂದಿವೆ. ಇದು ಷೇರು ಮಾರುಕಟ್ಟೆಯಲ್ಲಿ ಹೊಸ ದಾಖಲೆಯೇ ಎನಿಸಿದೆ. ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ನ ವಿಶ್ಲೇಷಣೆಯ ಪ್ರಕಾರ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ ಪ್ರಮುಖ ಸೂಚ್ಯಂಕವಾದ ನಿಫ್ಟಿ50 ಈ ವರ್ಷ ಇಲ್ಲಿಯವರೆಗೆ (ಡಿ. 24) ಶೇ. 9.21ರಷ್ಟು ಹೆಚ್ಚಳ ಕಂಡಿದೆ.
ಬಾಂಬೆ ಸ್ಟಾಕ್ ಎಕ್ಸ್ಚೇಂಜ್ನ ಸೆನ್ಸೆಕ್ಸ್ ಇಂಡೆಕ್ಸ್ ಇಲ್ಲಿಯವರೆಗೆ ಶೇ. 8.62ರಷ್ಟು ರಿಟರ್ನ್ ತಂದಿದೆ. ಈ ವರ್ಷಾಂತ್ಯದವರೆಗೆ ಇವತ್ತೂ ಸೇರಿ ನಾಲ್ಕು ಟ್ರೇಡಿಂಗ್ ದಿನಗಳಿದ್ದು, ಈ ಎರಡು ಇಂಡೆಕ್ಸ್ಗಳು ನೆಗಟಿವ್ ರಿಟರ್ನ್ ನೀಡುವ ಮಟ್ಟಕ್ಕೆ ಹೋಗುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ, 2024ರಲ್ಲಿ ಈಕ್ವಿಟಿ ಮಾರುಕಟ್ಟೆ ಸಕಾರಾತ್ಮಕವಾಗಿ ಅಂತ್ಯಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ: 2024ರಲ್ಲಿ ಮ್ಯೂಚುವಲ್ ಫಂಡ್ಗಳಿಗೆ ಹರಿದುಬಂತು 17 ಲಕ್ಷ ಕೋಟಿ ರೂ ಹೂಡಿಕೆ; ಒಟ್ಟಾರೆ ನಿರ್ವಹಿತ ಆಸ್ತಿ 68 ಲಕ್ಷ ಕೋಟಿ ರೂ
2024ರ ವಿಭಿನ್ನ ಹಂತಗಳು…
ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ನ ಈ ವರದಿಯು ಈಕ್ವಿಟಿ ಮಾರುಕಟ್ಟೆಯ 2024ರ ಬೆಳವಣಿಗೆಯನ್ನು ಎರಡು ಹಂತದಲ್ಲಿ ವರ್ಗೀಕರಿಸಿದೆ. ವರ್ಷದ ಮೊದಲಾರ್ಧ ಮತ್ತು ದ್ವಿತೀಯಾರ್ಧದಲ್ಲಿ ಈಕ್ವಿಟಿ ಓಟ ವಿಭಿನ್ನವಾಗಿರುವುದನ್ನು ಅದು ಗುರುತಿಸಿದೆ. ಮೊದಲಾರ್ಧದಲ್ಲಿ ಉತ್ತಮ ಆರ್ಥಿಕ ಚಟುವಟಿಕೆ ಮತ್ತು ಉತ್ತಮ ಕಾರ್ಪೊರೇಟ್ ಲಾಭ ಗಳಿಕೆ ಆಗಿತ್ತು.
ಎರಡನೇ ಭಾಗದಲ್ಲಿ (ಜುಲೈನಿಂದ ಈಚೆಗೆ) ಆರ್ಥಿಕ ಚಟುವಟಿಕೆ ಮಂದಗೊಂಡಿದೆ, ಬೆಳವಣಿಗೆ ಮಂದಗೊಂಡಿದೆ. ಕಾರ್ಪೊರೇಟ್ ಗಳಿಕೆಯೂ ತಗ್ಗಿದೆ. ಹಣದುಬ್ಬರ ನಿಯಂತ್ರಣಕ್ಕೆ ಬಾರದಿರುವುದರಿಂದ ಬಡ್ಡಿದರವೂ ಸಕಾಲಕ್ಕೆ ಇಳಿಕೆ ಆಗಲಿಲ್ಲ. ಇದು ಒಟ್ಟಾರೆ ಈಕ್ವಿಟಿ ಮಾರುಕಟ್ಟೆಯಲ್ಲಿ ಪ್ರಕ್ಷುಬ್ದ ವಾತಾವರಣ ನೆಲಸುವಂತೆ ಮಾಡಿರಬಹುದು. ವಿದೇಶೀ ಹೂಡಿಕೆದಾರರು ಹೊರಹೋಗಲು ಇವೆಲ್ಲಾ ಅಂಶಗಳು ಕಾರಣವಾಗಿರಬಹುದು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇಷ್ಟಾದರೂ ನಿಫ್ಟಿ50 ಇಂಡೆಕ್ಸ್ ಇಲ್ಲಿಯವರೆಗೆ ಶೇ. 9.21ರಷ್ಟು ಲಾಭ ಮಾಡಿದೆ. ಸೆನ್ಸೆಕ್ಸ್ ಶೇ. 8.62ರಷ್ಟು ಹೆಚ್ಚಳ ಕಂಡಿದೆ. ಇದು ಭಾರತೀಯ ಮಾರುಕಟ್ಟೆಯ ಶಕ್ತಿಯನ್ನು ತೋರಿಸುತ್ತದೆ ಎಂದು ಹೇಳಿರುವ ಸ್ಟ್ಯಾಂಡರ್ಡ್ ಚಾರ್ಟರ್ಡ ಬ್ಯಾಂಕ್ನ ವರದಿಯು 2025ರಲ್ಲಿ ಹೆಚ್ಚಿನ ಆಶಾಭಾವನೆಯನ್ನು ವ್ಯಕ್ತಪಡಿಸಿದೆ.
ಇದನ್ನೂ ಓದಿ: ಬಂಡವಾಳ ಮಾರುಕಟ್ಟೆಯಿಂದ ಕಂಪನಿಗಳು ಪಡೆದ ಫಂಡಿಂಗ್ 10 ವರ್ಷದಲ್ಲಿ 10 ಪಟ್ಟು ಹೆಚ್ಚಳ: ವರದಿ
2025ರಲ್ಲಿ ಹೆಚ್ಚು ಆಶಾಭಾವನೆ
ಮುಂದಿನ ವರ್ಷ ಆರ್ಥಿಕ ಬೆಳವಣಿಗೆ ಉತ್ತಮಗೊಳ್ಳುವ ಸಾಧ್ಯತೆ ಹೆಚ್ಚಿದೆ. ಸರ್ಕಾರದಿಂದ ಬಂಡವಾಳ ವೆಚ್ಚ ಹೆಚ್ಚಬಹುದು. ಖಾಸಗಿ ಅನುಭೋಗ ಪ್ರಮಾಣವೂ 2025ರಲ್ಲಿ ಹೆಚ್ಚಬಹುದು. ಗ್ರಾಮೀಣ ಭಾಗದಲ್ಲಿ ಆದಾಯ ಹೆಚ್ಚಬಹುದು ಎಂದು ವರದಿಯಲ್ಲಿ ನಿರೀಕ್ಷಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ