ಪಿಎಲ್ಐ ಸ್ಕೀಮ್ ಅಡಿಯಲ್ಲಿ ಸೋಲಾರ್ ಪಿವಿ ಮಾಡ್ಯೂಲ್; ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆ 43,000
PLI scheme for Solar Module manufacturing creates 43,000 jobs in 9 states: ಪಿಎಲ್ಐ ಸ್ಕೀಮ್ ಅಡಿಯಲ್ಲಿ ಸೋಲಾರ್ ಫೋಟೋ ವೋಲ್ಟಾಯ್ಕ್ ಮಾಡ್ಯೂಲ್ಗಳನ್ನು ತಯಾರಿಸಲು ವಿವಿಧ ಸಂಸ್ಥೆಗಳಿಗೆ ಅನುಮತಿಸಲಾಗಿದೆ. ದೇಶಾದ್ಯಂತ 9 ರಾಜ್ಯಗಳಲ್ಲಿ ಸ್ಥಾಪನೆಯಾಗಿರುವ ಪಿವಿ ಮಾಡ್ಯೂಲ್ ಘಟಕಗಳಿಂದ 43,000 ಉದ್ಯೋಗಗಳು ಸೃಷ್ಟಿಯಾಗಿವೆ. ಗುಜರಾತ್ನಲ್ಲೇ ಅರ್ಧದಷ್ಟು ಉದ್ಯೋಗಗಳು ಸೃಷ್ಟಿಯಾಗಿವೆ. ತಮಿಳುನಾಡಿನಲ್ಲೂ 6,800 ಉದ್ಯೋಗಗಳು ಸೃಷ್ಟಿಯಾಗಿವೆ.

ನವದೆಹಲಿ, ಡಿಸೆಂಬರ್ 4: ಸೋಲಾರ್ ಪಿವಿ ಮಾಡ್ಯೂಲ್ಗಳ (Solar PV Modules) ತಯಾರಿಕೆಗೆ ಪುಷ್ಟಿ ನೀಡಲು ಕೇಂದ್ರ ಸರ್ಕಾರ ನಡೆಸುತ್ತಿರುವ ಪಿಎಲ್ಐ ಸ್ಕೀಮ್ನಿಂದ (PLI scheme) ದೇಶಾದ್ಯಂತ 43,000 ಉದ್ಯೋಗಗಳು ಸೃಷ್ಟಿಯಾಗಿವೆ. ಇದರಲ್ಲಿ 11,220 ನೇರ ಉದ್ಯೋಗಗಳು ಒಳಗೊಂಡಿವೆ. ಲೋಕಸಭೆಯಲ್ಲಿ ಸಲ್ಲಿಕೆಯಾಗಿರುವ ದತ್ತಾಂಶದಿಂದ ಈ ಮಾಹಿತಿ ತಿಳಿದುಬಂದಿದೆ.
2025ರ ಅಕ್ಟೋಬರ್ವರೆಗೂ ಈ ಪಿವಿ ಮಾಡ್ಯೂಲ್ ಪಿಎಲ್ಐ ಸ್ಕೀಮ್ನಿಂದ 43,000 ಉದ್ಯೋಗಗಳ ಸೃಷ್ಟಿಯಾಗಿರುವುದು ತಿಳಿದುಬಂದಿದೆ. ಗುಜರಾತ್, ತಮಿಳುನಾಡು, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ಮಧ್ಯಪ್ರದೇಶ, ಉತ್ತರಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಹಾಗೂ ಒಡಿಶಾ ಈ ಒಂಬತ್ತು ರಾಜ್ಯಗಳಲ್ಲಿ ಸೋಲಾರ್ ಮಾಡ್ಯೂಲ್ ಪಿಎಲ್ಐ ಸ್ಕೀಮ್ನಿಂದ ಈ ಉದ್ಯೋಗಗಳು ಸಿಕ್ಕಿವೆ.
ಇದನ್ನೂ ಓದಿ: ಟ್ಯಾರಿಫ್ನಿಂದ ರುಪಾಯಿ ಮೌಲ್ಯ ಕುಸಿದಿದೆ, ಆದರೆ, ಕರೆನ್ಸಿ ದುರ್ಬಲಗೊಂಡಿಲ್ಲ: ಎಸ್ಬಿಐ ರಿಸರ್ಚ್
ರಿಲಾಯನ್ಸ್ ಇಂಡಸ್ಟ್ರೀಸ್, ಅದಾನಿ ನ್ಯೂ ಇಂಡಸ್ಟ್ರೀಸ್, ಎಫ್ಎಸ್ ಇಂಡಿಯಾ ಸೋಲಾರ್ ವೆಂಚರ್ಸ್, ವಿಎಸ್ಎಲ್ ಗ್ರೀನ್ ಪವರ್, ಟಿಪಿ ಸೋಲಾರ್, ಆಂಪಿನ್ ಸೋಲಾರ್, ರಿನ್ಯೂ ಫೋಟೋ ವೋಲ್ಟಾಯ್ಕ್ಸ್, ಗ್ರಿವ್ ಎನರ್ಜಿ, ಅವಾಡ ಎಲೆಕ್ಟ್ರೋ ಮೊದಲಾದ ಸಂಸ್ಥೆಗಳು ಪಿಎಲ್ಐ ಸ್ಕೀಮ್ ಅಡಿಯಲ್ಲಿ ಪಿವಿ ಮಾಡ್ಯೂಲ್ಗಳ ತಯಾರಿಕಾ ಘಟಕಗಳನ್ನು ಸ್ಥಾಪನೆ ಮಾಡಿವೆ.
ರಿಲಾಯನ್ಸ್ ಇಂಡಸ್ಟ್ರೀಸ್, ಅದಾನಿ ನ್ಯೂ ಇಂಡಸ್ಟ್ರೀಸ್ ಮೊದಲಾದ ಕಂಪನಿಗಳು ಭಾರೀ ಹೂಡಿಕೆಯೊಂದಿಗೆ ಗುಜರಾತ್ನಲ್ಲಿ ಪಿವಿ ಮಾಡ್ಯೂಲ್ ತಯಾರಿಕಾ ಘಟಕಗಳನ್ನು ಸ್ಥಾಪನೆ ಮಾಡಿವೆ. ಈ ರಾಜ್ಯವೊಂದರಲ್ಲೇ 22,400 ಮಂದಿಗೆ ಕೆಲಸ ಸಿಕ್ಕಿದೆ. ತಮಿಳುನಾಡಿನಲ್ಲಿ 6,800 ಉದ್ಯೋಗಗಳು ಸೃಷ್ಟಿಯಾಗಿವೆ.
ಇದನ್ನೂ ಓದಿ: ಭಾರತದಲ್ಲಿ ಈ 3 ಬ್ಯಾಂಕುಗಳು ಅತೀ ಸುರಕ್ಷಿತವೆಂದು ಆರ್ಬಿಐ ಘೋಷಣೆ; ಇವುಗಳಿಗೆ ವಿಶೇಷ ಮಾರ್ಗಸೂಚಿ
ಭಾರತದಲ್ಲಿ ಪಿಎಲ್ಐ ಸ್ಕೀಮ್ ಅಡಿಯಲ್ಲಿ ಅನುಮತಿಸಲಾಗಿರುವ ಘಟಕಗಳಿಂದ ಒಟ್ಟು 48.3 ಗಿಗಾವ್ಯಾಟ್ ಪಿವಿ ಮಾಡ್ಯೂಲ್ ತಯಾರಿಕಾ ಸಾಮರ್ಥ್ಯ ಹೆಚ್ಚಲಿದೆ. ಸದ್ಯ ಭಾರತದಲ್ಲಿ ಇದರ ಸಾಮರ್ಥ್ಯ 121.68 ಗಿಗಾವ್ಯಾಟ್ನಷ್ಟಿದೆ. ಈಗಲೂ ಕೂಡ ಚೀನಾದಿಂದ ಸಾಕಷ್ಟು ಪಿವಿ ಮಾಡ್ಯೂಲ್ಗಳನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಜಗತ್ತಿನಲ್ಲಿ ಪಿವಿ ಮಾಡ್ಯೂಲ್ಗಳನ್ನು ಅತಿಹೆಚ್ಚು ತಯಾರಿಸುತ್ತಿರುವುದು ಮತ್ತು ರಫ್ತು ಮಾಡುತ್ತಿರುವುದು ಚೀನಾ ದೇಶವೇ.
ಚೀನಾ ಒಂದು ವರ್ಷದಲ್ಲಿ ಸುಮಾರು 236 ಗಿಗಾವ್ಯಾಟ್ನಷ್ಟು ಪಿವಿ ಮಾಡ್ಯೂಲ್ಗಳನ್ನು ರಫ್ತು ಮಾಡುತ್ತದೆ. ಅದರ ಸ್ಥಾಪಿತ ಪಿವಿ ಘಟಕಗಳ ಸಾಮರ್ಥ್ಯ ಇನ್ನೂ ಅಧಿಕ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




