ಚಾಟ್ಜಿಪಿಟಿ ಬಳಸಿ ವಂಚಕನಿಗೇ ಮಂಕುಬೂದಿ ಎರಚಿದ ವ್ಯಕ್ತಿ; ಹೀಗೊಂದು ಮಾದರಿ ಪ್ರಕರಣ
Reddit user shares his experience of stealing from a thief: ಆನ್ಲೈನ್ನಲ್ಲಿ ಆಗಂತುಕರು ವಂಚಿಸಲು ಯತ್ನಿಸುತ್ತಿರುವುದು ಗೊತ್ತಾದಾಗ ಹೆಚ್ಚಿನ ಜನರು ತಪ್ಪಿಸಿಕೊಂಡರೆ ಸಾಕೆಂದು ಸುಮ್ಮನಾಗುತ್ತಾರೆ. ಆದರೆ, ದೆಹಲಿಯ ವ್ಯಕ್ತಿಯೊಬ್ಬರು ವಂಚಕನಿಗೆ ಮಂಕುಬೂದಿ ಯಾಕಿ ದಮ್ಮಯ್ಯ ಎಂದು ಬೇಡಿಕೊಳ್ಳುವಂತೆ ಮಾಡಿದ ಘಟನೆ ಇದೆ. ರೆಡ್ಡಿಟ್ನಲ್ಲಿ ಈ ಅನುಭವ ಹಂಚಿಕೊಂಡಿರುವ ಆ ವ್ಯಕ್ತಿ, ತಾನು ಚಾಟ್ಜಿಪಿಟಿ ಬಳಸಿ ಹೇಗೆ ಯಾಮಾರಿಸಿದೆ ಎಂದು ಘಟನೆ ವಿವರಿಸಿದ್ದಾರೆ. ಬಹಳ ಕುತೂಹಲಕಾರಿಯಾಗಿದೆ ಈ ಘಟನೆ.

ನವದೆಹಲಿ, ಡಿಸೆಂಬರ್ 4: ಆನ್ಲೈನ್ನಲ್ಲಿ ಜನರನ್ನು ಯಾಮಾರಿಸಲು ವಂಚಕರು (online scammers) ನಾನಾ ರೀತಿಯಲ್ಲಿ ಪ್ರಯತ್ನ ಮಾಡುತ್ತಾರೆ. ಎಸ್ಸೆಮ್ಮೆಸ್, ವಾಟ್ಸಾಪ್ ಮೆಸೇಜ್ಗಳಲ್ಲಿ ಲಿಂಕ್ಗಳನ್ನು ಕಳುಹಿಸುವುದು, ಸುಳ್ಳು ಕಥೆಗಳನ್ನು ಸೃಷ್ಟಿಸಿ ಹಣ ಪಡೆಯುವುದು, ಸುಳ್ಳು ಬ್ಯುಸಿನೆಸ್ ಟ್ರಾನ್ಸಾಕ್ಷನ್ ಜಾಲಕ್ಕೆ ಸಿಲುಕಿಸಿ ಹಣ ಹೂಡಿಕೆಗೆ ಪುಸಲಾಯಿಸುವುದು ಇತ್ಯಾದಿ ಹಲವು ಮಾರ್ಗಗಳನ್ನು ವಂಚಕರು ಅನುಸರಿಸುತ್ತಾರೆ. ಈ ವಂಚನೆ ಎಸಗುತ್ತಿರುವುದು ಗೊತ್ತಾದಾಗ, ಹೆಚ್ಚಿನ ಜನರು ಆ ವಂಚಕರಿಂದ ತಪ್ಪಿಸಿಕೊಂಡರೆ ಸಾಕಪ್ಪಾ ಎಂದು ದೂರ ಉಳಿಯಲು ಪ್ರಯತ್ನಿಸುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿಯು ತನಗೆ ವಂಚನೆ ಎಸಗಲು ಬಂದ ವಂಚಕನಿಗೇ ಮಂಕುಬೂದಿ ಹಾಕಿ, ಆತನ ಬೆವರಿಳಿಸಿದ ಘಟನೆ ನಡೆದಿದೆ.
ರೆಡ್ಡಿಟ್ ಯೂಸರ್ವೊಬ್ಬರು ಈ ಘಟನೆಯನ್ನು ಹಂಚಿಕೊಂಡಿದ್ದಾರೆ. ಚಾಟ್ಜಿಪಿಟಿ (ChatGPT) ನೆರವಿನಿಂದ ವಂಚಕನ ಗುರುತು ಪತ್ತೆ ಮಾಡಿ ಆತ ಬೇಡಿಕೊಳ್ಳುವಂತೆ ಮಾಡಿದೆ ಎಂದು RailfanHSs ಎನ್ನುವ ಐಡಿ ಹೊಂದಿರುವ ದೆಹಲಿಯ ವ್ಯಕ್ತಿಯೊಬ್ಬರು ರೆಡ್ಡಿಟ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸ್ಕ್ಯಾಮರ್ ಅಟಕಾಯಿಸಿಕೊಂಡಿದ್ದು ಹೀಗೆ…
ತಾನು ಕಾಲೇಜು ಸೀನಿಯರ್ ಹಾಗೂ ಐಎಎಸ್ ಅಧಿಕಾರಿ ಎಂದು ಹೇಳಿಕೊಂಡು ಫೇಸ್ಬುಕ್ನಲ್ಲಿ ವಂಚಕನು ಮೆಸೇಜ್ ಹಾಕಿದ್ದಾನೆ. ಸಿಆರ್ಪಿಎಫ್ ಅಧಿಕಾರಿ ತನ್ನ ಸ್ನೇಹಿತನಾಗಿದ್ದು, ಆತ ಬೇರೆ ಊರಿಗೆ ವರ್ಗಾವಣೆ ಆಗುತ್ತಿದ್ದು ಬಹಳ ಕಡಿಮೆ ದರದಲ್ಲಿ ಗೃಹೋಪಯೋಗಿ ವಸ್ತುಗಳನ್ನು ಮಾರುತ್ತಿದ್ದಾನೆ ಎಂದು ಹೇಳಿದ್ದಾನೆ.
ಇದನ್ನೂ ಓದಿ: ಮೂರು ಬಾರಿ ಸಾಯಲು ಹೋಗಿದ್ದ ಚರಣ್ ರಾಜ್; ತಪ್ಪಿದ್ದು ಹೇಗೆ?
ಆ ವಂಚಕ ಹೆಸರಿಸಿದ ಕಾಲೇಜು ಸೀನಿಯರ್ ವಾಸ್ತವವಾಗಿ ತನಗೆ ಪರಿಚಯವಿರುವ ವ್ಯಕ್ತಿಯೇ ಆಗಿದ್ದು, ಫೋನ್ ನಂಬರ್ ಕೂಡ ಇದೆ. ಆದರೂ ಫೇಸ್ಬುಕ್ನಲ್ಲಿ ಮೆಸೇಜ್ ಹಾಕಿದ್ದರಿಂದ ಅನುಮಾನ ಬಂದಿತು. ತಾನು ವಾಟ್ಸಾಪ್ನಲ್ಲಿ ಖಚಿತಪಡಿಸಿಕೊಂಡ ಬಳಿಕ ವಂಚಕನ ಆಟ ಎಂಬುದು ಗೊತ್ತಾಯಿತು ಎಂದು ವಿವರಿಸಿರುವ ಈ ರೆಡ್ಡಿಟ್ ಬಳಕೆದಾರ, ತಾನು ಸ್ಕ್ಯಾಮರ್ನನ್ನು ಉಪೇಕ್ಷಿಸುವ ಬದಲು ಆತನೊಂದಿಗೆಯೇ ಆಟವಾಡಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.
ಇದೇ ವೇಳೆ, ಆ ವಂಚಕನು ಬೇರೆ ನಂಬರ್ನಿಂದ ಸಂಪರ್ಕ ಮಾಡಿ, ಕ್ಯುಆರ್ ಕೋಡ್ ಕಳುಹಿಸಿ, ಕೂಡಲೇ ಹಣ ವರ್ಗಾಯಿಸುವಂತೆ ತಿಳಿಸಿದ್ದಾನೆ. ಈಗ ಈ ರೆಡ್ಡಿಟ್ ಬಳಕೆದಾರ ಚಾಟ್ಜಿಪಿಟಿ ಬಳಸಿ ಒಂದು ವೆಬ್ಪೇಜ್ ನಿರ್ಮಿಸುತ್ತಾರೆ. ಆ ಪೇಜ್ಗೆ ಹೋದರೆ ಜಿಯೋಲೊಕೇಶನ್ ಬಯಲಾಗುತ್ತದೆ, ಫ್ರಂಟ್ ಕ್ಯಾಮರಾ ತಾನಾಗೇ ಕ್ಲಿಕ್ ಮಾಡುತ್ತದೆ. ಅಂಥದ್ದೊಂದು ವೆಬ್ಪೇಜ್ ಸೃಷ್ಟಿಸಿದ ಇವರು, ಆ ವಂಚಕನಿಗೆ ಅದನ್ನು ಕಳುಹಿಸಿ, ಆ ವೆಬ್ಪೇಜ್ಗೆ ಕ್ಯುಆರ್ ಕೋಡ್ ಅಪ್ಲೋಡ್ ಮಾಡುವಂತೆ ಪುಸಲಾಯಿಸಿದ್ದಾರೆ.
ದೆಹಲಿ ವ್ಯಕ್ತಿ ರೆಡ್ಡಿಟ್ನಲ್ಲಿ ಹಾಕಿದ ಪೋಸ್ಟ್ ಇದು
Used ChatGPT to locate a scammer and made him beg me byu/RailfanHS indelhi
ಎಲ್ಲರನ್ನೂ ಯಾಮಾರಿಸುತ್ತಾ ಬಂದಿದ್ದ ಆ ವಂಚಕ, ತನಗೇ ಯಾರಾದರೂ ಯಾಮಾರಿಸಬಹುದು ಎಂದು ಭಾವಿಸಿರಲಿಲ್ಲ. ಈ ದೆಹಲಿ ವ್ಯಕ್ತಿ ಕಳುಹಿಸಿದ ಲಿಂಕ್ ಅನ್ನು ಆ ವಂಚಕ ಕ್ಲಿಕ್ ಮಾಡುತ್ತಿದ್ದಂತೆಯೇ ಆತನ ಜಿಪಿಎಸ್ ಲೊಕೇಶನ್, ಐಪಿ ಅಡ್ರೆಸ್, ಮತ್ತು ಮುಖದ ಚಹರೆ ಎಲ್ಲವೂ ಬಯಲಾಗಿ ಹೋಗುತ್ತದೆ.
ಇದನ್ನೂ ಓದಿ: ಭಾರತದಲ್ಲಿ ಈ 3 ಬ್ಯಾಂಕುಗಳು ಅತೀ ಸುರಕ್ಷಿತವೆಂದು ಆರ್ಬಿಐ ಘೋಷಣೆ; ಇವುಗಳಿಗೆ ವಿಶೇಷ ಮಾರ್ಗಸೂಚಿ
ಈ ಎಲ್ಲಾ ವಿವರವನ್ನೂ ಈ ದಿಲ್ಲಿ ವ್ಯಕ್ತಿ ವಂಚಕನಿಗೆ ಕಳುಹಿಸುತ್ತಾರೆ. ಅದನ್ನು ಕಂಡೊಡನೆ ವಂಚಕ ಗಾಬರಿ ಬೀಳುತ್ತಾನೆ. ಹಲವು ಬಾರಿ ಕರೆ ಮಾಡಿ, ತನ್ನನ್ನು ಕ್ಷಮಿಸುವಂತೆಯೂ, ಪ್ರಕರಣವನ್ನೂ ದೊಡ್ಡದು ಮಾಡಬೇಡವೆಂದೂ ಪರಿಪರಿಯಾಗಿ ಬೇಡಿಕೊಂಡಿದ್ದಾನೆ. ಮತ್ತೆಂದೂ ಈ ಕೆಲಸ ಮಾಡೋದಿಲ್ಲ ಎಂದೂ ಹೇಳಿದ್ದಾನೆ.
ಈ ಘಟನೆಯನ್ನು ಹಂಚಿಕೊಂಡಿರುವ ಈ ದಿಲ್ಲಿ ವ್ಯಕ್ತಿ, ಆ ವಂಚಕ ತನ್ನ ಕೆಲಸ ನಿಲ್ಲಿಸೋದಿಲ್ಲ ಅಂತ ತನಗೆ ಗೊತ್ತು. ಆದರೆ, ಒಬ್ಬ ಕಳ್ಳನಿಂದಲೇ ಕದ್ದಿದ್ದೇನೆ ಎನ್ನುವ ಸಮಾಧಾನ ನನಗೆ ಸಿಕ್ಕಿದೆ ಎಂದು ಕೊನೆಯಲ್ಲಿ ತಿಳಿಸಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




