ಮೂರು ಬಾರಿ ಸಾಯಲು ಹೋಗಿದ್ದ ಚರಣ್ ರಾಜ್; ತಪ್ಪಿದ್ದು ಹೇಗೆ?
ನಟ ಚರಣ್ ರಾಜ್ ತಮ್ಮ ಕಷ್ಟದ ದಿನಗಳನ್ನು ಸಂದರ್ಶನ ಒಂದರಲ್ಲಿ ಹಂಚಿಕೊಂಡಿದ್ದಾರೆ. ಮೂರು ಬಾರಿ ಸಾಯಲು ಹೋಗಿದ್ದ ಅವರು, ಊಟವಿಲ್ಲದೆ ಹಸಿವಿನಿಂದ ಕಷ್ಟಪಟ್ಟಿದ್ದರು. ನಿರ್ದೇಶಕ ಸಿದ್ಲಿಂಗಯ್ಯ ಅವರ ಬೆಂಬಲದಿಂದ ಸಿನಿಮಾ ರಂಗದಲ್ಲಿ ನೆಲೆ ಕಂಡುಕೊಂಡರು. ಅವರ ಜೀವನ ಪಯಣದ ಸವಾಲುಗಳು ಮತ್ತು ಅದರಿಂದ ಹೊರಬಂದ ರೀತಿ ನಿಜಕ್ಕೂ ಸ್ಫೂರ್ತಿದಾಯಕ.

ಹಿರಿಯ ನಟ ಚರಣ್ ರಾಜ್ (Charan Raj) ಅವರು ಇತ್ತೀಚೆಗೆ ಹೆಚ್ಚು ಸಿನಿಮಾಗಳನ್ನು ಮಾಡುತ್ತಿಲ್ಲ. ಆದರೆ, ಅವರು ಚಿತ್ರರಂಗದ ಜೊತೆ ಇರೋ ನಂಟು ಮುಂದುವರಿಸಿಕೊಂಡು ಹೋಗಿದ್ದನ್ನು ಕಾಣಬಹುದು. ಕನ್ನಡ, ತಮಿಳು, ತೆಲುಗು, ಒಡಿಯಾ ಸೇರಿ 11 ಭಾಷೆಗಳಲ್ಲಿ ಅವರು ನಟಿಸಿದ್ದಾರೆ ಎಂಬುದು ವಿಶೇಷ. ಈ ಮೊದಲು ಜೀವನ ಅಷ್ಟು ಸುಲಭದಲ್ಲಿ ಇರಲಿಲ್ಲ. ಅವರು ಮೂರು ಬಾರಿ ಸಾಯಲು ಹೋಗಿದ್ದರು ಎಂದರೆ ನೀವು ನಂಬಲೇಬೇಕು. ‘ಕಲಾ ಮಾಧ್ಯಮ’ಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ.
ಚರಣ್ ರಾಜ್ ವಾಸವಿರೋದು ಚೆನ್ನೈನಲ್ಲಿ. ಸಮಯ ಸಿಕ್ಕಾಗ ಅವರು ಬೆಂಗಳೂರಿನ ಹೊರವಲಯದಲ್ಲಿ ಇರುವ ಫಾರ್ಮ್ಹಹೌಸ್ಗೆ ಬರುತ್ತಾರೆ. ಅಲ್ಲಿ ಸಮಯ ಕಳೆದ ಹೋಗುತ್ತಾರಂತೆ. ಅವರು ಈಗ ತಮ್ಮ ಜರ್ನಿ ಬಗ್ಗೆ ಮಾತನಾಡಿದರು. ತಮ್ಮನ್ನು ಬೆಳೆಸಿದವರನ್ನು ಅವರು ನೆನಪಿಸಿಕೊಂಡರು ಎಂಬುದು ವಿಶೇಷ.
‘ನಾನು ಯಾವುದನ್ನೂ ಕೇಳಿಕೊಂಡು ಬಂದಿಲ್ಲ. ಕಲಾವಿದ ಆಗಬೇಕು ಎಂದು ಬೆಳಗಾವಿಯಿಂದ ಓಡಿ ಬಂದೆ. ಒಂದು ಸಿನಿಮಾ ಮಾಡಿ ಹೋಗಬೇಕು ಎಂದುಕೊಂಡವನು ನಾನು. ವಾಪಸ್ ಹೋದರೆ ಫ್ರೆಂಡ್ಸ್ ಬಿಡಲ್ಲ ಅನ್ನೋದು ಗೊತ್ತಿತ್ತು. ಹೀಗಾಗಿ, ಒಂದು ಸಿನಿಮಾ ಮಾಡಿಯೇ ಹೋಗೋದು ಎಂದು ನಿರ್ಧರಿಸಿದೆ. ಆಗ ಸಿದ್ಲಿಂಗಯ್ಯ ಅವರು (ನಿರ್ದೇಶಕರು) ಸಿನಿಮಾ ಅಕವಾಶ ಕೊಟ್ಟರು’ ಎಂದಿದ್ದಾರೆ ಚರಣ್ ರಾಜ್.
‘ಭೂಮಿ ಮೇಲೆ ನಂದು ಏನಿದೆ ಅದೆಲ್ಲ ಅವರದ್ದು. ಅವರು ನನ್ನನ್ನು ಮೇಲೆ ಎತ್ತಿಲ್ಲದೆ ಇದ್ದಿದ್ದರೆ ನಾನು ಎಲ್ಲಿ ಇರುತ್ತಿದ್ದೆನೋ ಗೊತ್ತಿಲ್ಲ. ನಾನು ಸಾಯಬೇಕು ಎಂದು ಮೂರು ಬಾರಿ ರೈಲ್ವೆ ಟ್ರ್ಯಾಕ್ ಹತ್ತಿರ ಹೋಗಿದ್ದೆ’ ಎಂದು ಹಳೆಯ ಘಟನೆ ನೆನೆದರು.
‘ಸಿನಿಮಾ ಅವಕಾಶ ಸಿಗುತ್ತಲೇ ಇರಲಿಲ್ಲ. 1978ರ ಸಮಯ. ನಾನು ಆರ್ಕೆಸ್ಟ್ರಾದಲ್ಲಿ ಇದ್ದೆ. ಊಟಕ್ಕೂ ಇರುತ್ತಿರಲಿಲ್ಲ. ಮೂರು ದಿನ ನೀರು ಕುಡಿದುಕೊಂಡೇ ಇದ್ದ ಉದಾಹರಣೆ ಇದೆ. ಟೀ ಕುಡಿಯೋಕೆ ಗೆಳೆಯರ ಜೊತೆ ಹೋದಾಗ ಒಂದು ಬನ್ ಕೊಡಿಸಿ ಎಂದು ಕೇಳಿಕೊಳ್ಳುತ್ತಿದ್ದೆ. ಹಾಗೆ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದೆ. ಮೂರು ದಿನ ಉಪವಾಸ ಇದ್ದ ಉದಾಹರಣೆ ಇದೆ’ ಎಂದಿದ್ದಾರೆ ಅವರು.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ಗೆ ನಮನ ಸಲ್ಲಿಸಿದ ರಾಮ್ ಚರಣ್, ವಿಜಯ್ ಸೇತುಪತಿ
‘ನಾನು ಕಲಾವಿದ ಆಗೋದಿಲ್ಲ ಎಂದು ಅನಿಸುತ್ತಾ ಇತ್ತು. ಮೂರು ಬಾರಿ ಸಾಯೋಕೆ ಹೋಗಿದ್ದೆ. ಮೊದಲ ಬಾರಿ ಯಾರೋ ಕುಡಿದುಕೊಂಡವನು ಒದ್ದ. ಎರಡನೇ ಬಾರಿಗೆ ತಾಯಿ ನೆನಪಾಗಿ ಬಂದೆ. ನಾನು ಇಲ್ಲಿಯವರೆಗೆ ಬರೋದಕ್ಕೆ ಸಿದ್ಲಿಂಗಯ್ಯ ಕಾರಣ. ಅಬ್ಬಯ್ಯ ನಾಯ್ಡು ನನ್ನ ನಡೆಸಿಕೊಂಡು ಹೋದರು’ ಎಂದಿದ್ದಾರೆ ಚರಣ್ ರಾಜ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:52 am, Thu, 4 December 25



