ಟ್ಯಾರಿಫ್ನಿಂದ ರುಪಾಯಿ ಮೌಲ್ಯ ಕುಸಿದಿದೆ, ಆದರೆ, ಕರೆನ್ಸಿ ದುರ್ಬಲಗೊಂಡಿಲ್ಲ: ಎಸ್ಬಿಐ ರಿಸರ್ಚ್
SBI Research report defends Rupee: ಡಾಲರ್ ಎದುರು ರುಪಾಯಿ ಮೌಲ್ಯ ಗುರುವಾರ ಒಂದು ಹಂತದಲ್ಲಿ 90.56ರವರೆಗೂ ಕುಸಿದಿದೆ. ಎಸ್ಬಿಐ ರಿಸರ್ಚ್ ವರದಿ ಪ್ರಕಾರ ರುಪಾಯಿ ಮೌಲ್ಯ ಅತಿಹೆಚ್ಚು ಕುಸಿದಿದೆಯದರೂ, ಕರೆನ್ಸಿ ದುರ್ಬಲಗೊಂಡಿಲ್ಲ. ಅತಿ ಕಡಿಮೆ ಪ್ರಕ್ಷುಬ್ದತೆಯ ಕರೆನ್ಸಿಗಳಲ್ಲಿ ರುಪಾಯಿಯೂ ಒಂದು ಎಂದು ಈ ವರದಿಯಲ್ಲಿ ಹೇಳಲಾಗಿದೆ.

ನವದೆಹಲಿ, ಡಿಸೆಂಬರ್ 4: ಡಾಲರ್ ಎದುರು ರುಪಾಯಿ ಕರೆನ್ಸಿ ಮೌಲ್ಯ ಗುರುವಾರ 90.56ರವರೆಗೆ ಕುಸಿದಿತ್ತು. ಪ್ರತೀ ಡಾಲರ್ಗೆ ರುಪಾಯಿ ಮೌಲ್ಯ 90ರ ಗಡಿ ದಾಟಿದ್ದು ಇದೇ ಮೊದಲು. ದಿನದಿಂದ ದಿನಕ್ಕೆ ರುಪಾಯಿ ಕರೆನ್ಸಿ ಮೌಲ್ಯ (Dollar vs Rupee) ಕುಂದುತ್ತಲೇ ಇದೆ. ಕೆಲ ವರದಿಗಳ ಪ್ರಕಾರ ಈ ವರ್ಷ ಏಷ್ಯಾದ ಕರೆನ್ಸಿಗಳ ಪೈಕಿ ರುಪಾಯಿಯದ್ದೇ ಅತ್ಯಂತ ಕಳಪೆ ಸಾಧನೆ ಎನ್ನಲಾಗಿದೆ. ಎಸ್ಬಿಐ ರಿಸರ್ಚ್ನ ವರದಿಯೊಂದರ ಪ್ರಕಾರ, ರುಪಾಯಿ ಮೌಲ್ಯ ಕಡಿಮೆ ಆಗುತ್ತಿದೆಯಾದರೂ, ಅದು ದುರ್ಬಲಗೊಂಡಿಲ್ಲ ಎಂದಿದೆ.
‘ರುಪಾಯಿ ಇಳಿಯುತ್ತಿದೆ ಎಂದರೆ ಅದು ದುರ್ಬಲ ಕರೆನ್ಸಿ ಎಂದೇನಲ್ಲ. ಆಂತರಿಕ ಶಕ್ತಿಯು ಬಾಹ್ಯ ಶಕ್ತಿಗಳನ್ನು ಪ್ರತಿರೋಧಿಸಬೇಕು. ರುಪಾಯಿ ದರ ಕುಸಿತದಿಂದ ಮಾರುಕಟ್ಟೆಯ ಭಾವನೆಗಳಿಗೆ ಘಾಸಿ ಆಗಬಹುದು. ಆದರೆ, ಕರೆನ್ಸಿ ನಿರ್ವಹಣೆಯು ಸೆಂಟ್ರಲ್ ಬ್ಯಾಂಕ್ನ (RBI) ಜವಾಬ್ದಾರಿಯಲ್ಲ ಎಂಬುದೂ ಹೌದು,’ ಎಂದು ಎಸ್ಬಿಐ ರಿಸರ್ಚ್ ತನ್ನ ವರದಿಯಲ್ಲಿ ಹೇಳಿದೆ.
ಇದನ್ನೂ ಓದಿ: ಭಾರತದಲ್ಲಿ ಈ 3 ಬ್ಯಾಂಕುಗಳು ಅತೀ ಸುರಕ್ಷಿತವೆಂದು ಆರ್ಬಿಐ ಘೋಷಣೆ; ಇವುಗಳಿಗೆ ವಿಶೇಷ ಮಾರ್ಗಸೂಚಿ
ಅತ್ಯಂತ ಕಡಿಮೆ ಪ್ರಕ್ಷುಬ್ದತೆಯ ಕರೆನ್ಸಿಗಳಲ್ಲಿ ರುಪಾಯಿ
ಭಾರತದ ಮೇಲೆ ಅಮೆರಿಕ ಶೇ 50ರಷ್ಟು ಟ್ಯಾರಿಫ್ ವಿಧಿಸಿರುವುದು ರುಪಾಯಿ ಮೌಲ್ಯ ಕುಸಿತಕ್ಕೆ ದೊಡ್ಡ ಕಾರಣ ಎಂಬುದು ಎಸ್ಬಿಐ ಅಂದಾಜು. 2025ರ ಏಪ್ರಿಲ್ 2ರಂದು ಅಮೆರಿಕವು ಟ್ಯಾರಿಫ್ ವಿಧಿಸಿದಾಗಿನಿಂದ ಡಾಲರ್ ಎದುರು ರುಪಾಯಿ ಶೇ. 5.5ರಷ್ಟು ಕುಸಿದಿದೆ. ಇದು ದೊಡ್ಡ ಆರ್ಥಿಕತೆಗಳ ಕರೆನ್ಸಿಗಳ ಪೈಕಿ ಅತಿಹೆಚ್ಚು ಕುಸಿತ ಕಂಡಿರುವುದು ರುಪಾಯಿಯೇ. ಆದರೆ, ಈ ವರದಿಯ ಪ್ರಕಾರ, ಅತಿಹೆಚ್ಚು ಪ್ರಕ್ಷುಬ್ಧತೆಯ ಕರೆನ್ಸಿಗಳಲ್ಲಿ ರುಪಾಯಿ ಇಲ್ಲ.
ಏಪ್ರಿಲ್ 2ರ ನಂತರ ರುಪಾಯಿ ಕರೆನ್ಸಿಯ ವೊಲಾಟಾಲಿಟಿ ಅಥವಾ ಪ್ರಕ್ಷುಬ್ದತೆ ಶೇ. 1.7 ಮಾತ್ರವೇ. ಚೀನಾ, ವಿಯೆಟ್ನಾಂ, ಇಂಡೋನೇಷ್ಯಾ, ಜಪಾನ್ ದೇಶಗಳಿಗಿಂತ ಭಾರತದ ಮೇಲೆಯೇ ಅಧಿಕ ಟ್ಯಾರಿಫ್ ಹಾಕಿರುವುದು ರುಪಾಯಿ ಮೌಲ್ಯಯಲು ಹೆಚ್ಚು ಪ್ರಭಾವಿಸಿರಬಹುದು ಎಂಬುದು ಈ ವರದಿಯ ಅನಿಸಿಕೆ.
ಇದನ್ನೂ ಓದಿ: ಸಹಕಾರಿ ತತ್ವದಲ್ಲಿ ರಸ್ತೆಗಿಳಿದ ಭಾರತ್ ಟ್ಯಾಕ್ಸಿ; ರಾಪಿಡೋ, ಓಲಾ, ಊಬರ್ಗೆ ಪ್ರಬಲ ಪೈಪೋಟಿ
ಆರ್ಬಿಐ ರಿಪೋ ದರ ಕಡಿತಗೊಳಿಸಬಾರದು
ರುಪಾಯಿ ಮೌಲ್ಯ ಕುಸಿತಕ್ಕೆ ಪ್ರತಿಯಾಗಿ ಆರ್ಬಿಐ ತನ್ನ ಬಡ್ಡಿದರ ಇಳಿಸಬೇಕು ಎಂದು ಕೇಳಿಬರುತ್ತಿರುವ ವಾದವನ್ನು ಎಸ್ಬಿಐ ರಿಸರ್ಚ್ ತಂಡ ತಳ್ಳಿಹಾಕಿದೆ. ರುಪಾಯಿ ಕುಸತಕ್ಕೆ ಪ್ರತಿಯಾಗಿ ರಿಪೋ ದರ ಇಳಿಸಿದರೆ ಅದು ಅಪ್ರಸ್ತುತ ಪ್ರತಿಕ್ರಿಯೆ ಎನಿಸುತ್ತದೆ. ಈ ಹಂತದಲ್ಲಿ ಬಡ್ಡಿ ದರ ಬದಲಾಯಿಸುವುದು ರುಪಾಯಿಗೆ ಮಾರಕವೇ ಆಗುತ್ತದೆ ಎಂದು ಎಸ್ಬಿಐ ರಿಸರ್ಚ್ ತನ್ನ ವರದಿಯಲ್ಲಿ ಎಚ್ಚರಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




