Rahul Bajaj 1938- 2022: ಭಾರತದ ಉದ್ಯಮಿಗಳ ಪೈಕಿ ಸೆಲೆಬ್ರಿಟಿ ಸ್ಥಾನಕ್ಕೇರಿದ ಕೆಲ ಮಂದಿಯಲ್ಲಿ ರಾಹುಲ್ ಬಜಾಜ್ ಕೂಡ ಒಬ್ಬರು

| Updated By: Srinivas Mata

Updated on: Feb 12, 2022 | 5:51 PM

ಭಾರತದಲ್ಲಿ ಸೆಲೆಬ್ರಿಟಿ ಮಟ್ಟಕ್ಕೆ ಏರಿದ್ದ ಕೆಲವೇ ಉದ್ಯಮಿಗಳಲ್ಲಿ ಒಬ್ಬರಾದ ರಾಹುಲ್ ಬಜಾಜ್ ಫೆಬ್ರವರಿ 12ರಂದು ನಿಧನರಾಗಿದ್ದು, ಅವರ ಸ್ವ ವಿವರ ಇಲ್ಲಿದೆ.

Rahul Bajaj 1938- 2022: ಭಾರತದ ಉದ್ಯಮಿಗಳ ಪೈಕಿ ಸೆಲೆಬ್ರಿಟಿ ಸ್ಥಾನಕ್ಕೇರಿದ ಕೆಲ ಮಂದಿಯಲ್ಲಿ ರಾಹುಲ್ ಬಜಾಜ್ ಕೂಡ ಒಬ್ಬರು
ರಾಹುಲ್ ಬಜಾಜ್ (ಸಂಗ್ರಹ ಚಿತ್ರ)
Follow us on

ಭಾರತದಲ್ಲಿ ಸೆಲೆಬ್ರಿಟಿ ಸ್ಥಾನಮಾನದಲ್ಲಿ ನಿಲ್ಲುವಂಥ ಕೆಲವೇ ಉದ್ಯಮಿಗಳ ಪೈಕಿ ರಾಹುಲ್ ಬಜಾಜ್ (Rahul Bajaj) ಕೂಡ ಒಬ್ಬರು. ಬಜಾಜ್ ಸಮೂಹವನ್ನು ಯಶಸ್ಸಿನತ್ತ ಮುನ್ನಡೆಸಿದ ದೊಡ್ಡ ಹೆಸರು ಅವರದು. ಫೆಬ್ರವರಿ 12ನೇ ತಾರೀಕಿನಂದು ತಮ್ಮ 83ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 1938ನೇ ಇಸವಿಯ ಜೂನ್​ 10ನೇ ತಾರೀಕಿನಂದು ಬಂಗಾಲ ಪ್ರಾಂತ್ಯದಲ್ಲಿ ಜನಿಸಿದವರು ರಾಹುಲ್ ಬಜಾಜ್. ವೈವಿಧ್ಯಮಯವಾದ ಉದ್ಯಮವನ್ನು ನಡೆಸುವ ಬಜಾಜ್ ಸಮೂಹ ಕಂಪೆನಿಗಳು ವಾಹನದಿಂದ ಹಣಕಾಸು ಹಾಗೂ ಗೃಹೋಪಯೋಗಿ ವಸ್ತುಗಳ ತನಕ ನಾನಾ ಉತ್ಪನ್ನಗಳನ್ನು ಮಾರಾಟ ಮಾಡುತ್ತದೆ. ರಾಹುಲ್ ಬಜಾಜ್ ಅವರ ನಿವ್ವಳ ಆಸ್ತಿ ಮೌಲ್ಯ 890 ಕೋಟಿ ಅಮೆರಿಕನ್ ಡಾಲರ್. ಭಾರತದ ರೂಪಾಯಿ ಲೆಕ್ಕದಲ್ಲಿ ಹೇಳುವುದಾದರೆ, 67,060.17 ಕೋಟಿ ಆಗುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟಗಾರ ಮತ್ತು ದಾನಿಯಾದ ಜಮ್ನಾಲಾಲ್ ಬಜಾಜ್ ಅವರ ಮೊಮ್ಮಗ ರಾಹುಲ್ ಬಜಾಜ್. ದೆಹಲಿ ವಿಶ್ವವಿದ್ಯಾಲಯದಿಂದ ರಾಹುಲ್ ಬಜಾಜ್ ಅರ್ಥಶಾಸ್ತ್ರದ ಆನರ್ಸ್ ಮಾಡಿದರು. ಆ ನಂತರು ಬಾಂಬೆ ವಿಶ್ವವಿದ್ಯಾಲಯದ ಕಾನೂನು ಪದವಿ ಪಡೆದು, ಅಮೆರಿಕದ ಬೋಸ್ಟನ್​ನಲ್ಲಿ ಇರುವ ಹೆಸರಾಂತ ಹಾರ್ವರ್ಡ್ ಬಿಜಿನೆಸ್ ಸ್ಕೂಲ್​ನಲ್ಲಿ ಮಾಸ್ಟರ್​ ಆಫ್ ಬಿಜಿನೆಸ್ ಅಡ್ಮಿನಿಸ್ಟ್ರೇಷನ್ ಮುಗಿಸಿದರು.

ಅದಾದ ಮೇಲೆ ಅವರು ತೆಗೆದುಕೊಂಡ ಅತಿ ಮುಖ್ಯ ಜವಾಬ್ದಾರಿ ಅಂದರೆ ಬಜಾಜ್ ಆಟೋ ಸಮೂಹದ ಸಿಇಒ ಹುದ್ದೆ. 1968ನೇ ಇಸವಿಯಲ್ಲಿ. ತಮ್ಮ ಮಹತ್ವಾಕಾಂಕ್ಷೆ ಹಾಗೂ ಸಾಮರ್ಥ್ಯ, ಪ್ರತಿಭೆ ಮೂಲಕ ಸಣ್ಣ ವಾಹನ ಕಂಪೆನಿಯನ್ನು ಜಾಗತಿಕ ಮಟ್ಟದಲ್ಲಿ ಬೆಳೆಸಿದರು. ಕೇವಲ ಒಂದು ದಶಕದಲ್ಲಿ ನೂರು ಕೋಟಿಯ ದಾಖಲೆಯನ್ನು ಮೀರಿತು. ಆಗೆಲ್ಲ ಬಜಾಜ್ ಚೇತಕ್ ಸ್ಕೂಟರ್​ಗೆ ಐದಾರು ವರ್ಷ ಕಾಯಬೇಕಾಗುತ್ತಿತ್ತು. ಬಜಾಜ್ ಉತ್ಪನ್ನಗಳಿಗೆ ಇದ್ದ ಬೇಡಿಕೆಗೆ ಇದೊಂದು ನಿದರ್ಶನ ಅಷ್ಟೇ. ಇವೆಲ್ಲ ಉದಾರೀಕರಣದ ಆರಂಭದ ಹಾಗೂ ಕಠಿಣ ಸಮಯದಲ್ಲಿ ಸಾಧಿಸಿದವು. 2001ನೇ ಇಸವಿಯಲ್ಲಿ ಷೇರು ಮಾರುಕಟ್ಟೆ ಹಾಗೂ ಬಜಾಜ್ ಸಮೂಹ ಎರಡೂ ಸಹ ಭಾರೀ ಇಳಿಮುಖ ಕಾಣುವಂತಾಯಿತು. ದೇಶೀಯವಾಗಿ ಅತ್ಯುತ್ತಮ ಕಂಪೆನಿ ಎಂಬ ಕಿರೀಟ ಇದ್ದ ಹೊರತಾಗಿಯೂ ಆ ಬಿಸಿ ಅನುಭವಿಸಬೇಕಾಯಿತು.

ಆದರೆ, ಯಾವಾಗ ಜಾಗತಿಕ ದೈತ್ಯ ವಾಹನ ಕಂಪೆನಿ ಹೋಂಡಾ ಹೀರೋ ಸಮೂಹದೊಂದಿಗೆ ಸೇರಿ ಭಾರತದ ಮಾರುಕಟ್ಟೆ ಪ್ರವೇಶಿಸಿತೋ ಆಗ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಆ ಸವಾಲಿಗೆ ಜವಾಬು ಎಂಬಂತೆ ರಾಹುಲ್ ಅವರು ಕಂಡುಕೊಂಡಿದ್ದು ಬಜಾಜ್ ಪಲ್ಸರ್ ಮೋಟಾರ್ ಸೈಕಲ್. ಬಿಡುಗಡೆಯಾದ ದಿನದಿಂದಲೂ ಸವಾರರ ನೆಚ್ಚಿನ ವಾಹನ ಎಂಬ ಮೆಚ್ಚುಗೆಗೆ ಪಾತ್ರವಾಗಿ ಹಾಗೇ ತನ್ನ ಸ್ಥಾನ ಉಳಿಸಿಕೊಂಡಿದೆ ಬಜಾಜ್ ಪಲ್ಸರ್. ರಾಹುಲ್ ಬಜಾಜ್ ಅವರ ಮತ್ತೊಂದು ಅಮೋಘ ಹೆಜ್ಜೆ ಅಂದರೆ, ಅದು ವಿವಿಧ ವಲಯಗಳಿಗೆ ಬಜಾಜ್ ಸಮೂಹದ ಪ್ರವೇಶ. ರಾಹುಲ್ ಬಜಾಜ್ ಫೈನಾನ್ಸ್ ಸಮೂಹ ಸ್ಥಾಪಿಸಿದರು. ಅದು ಇನ್ಷೂರೆನ್ಸ್ ಸೇವೆಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. ಅದನ್ನು ಹೊರತುಪಡಿಸಿ, ಬಜಾಜ್ ಗೃಹೋಪಯೋಗಿ ವಸ್ತುಗಳಿಗೆ ಭಾರತೀಯ ಗ್ರಾಹಕರಿಂದ ಉತ್ತಮ ವಿಮರ್ಶೆ ಬಂದಿದೆ. ಉಕ್ಕು ಹಾಗೂ ಮಿಶ್ರ ಲೋಹಗಳ ತಯಾರಿಕೆ ಆರಂಭಿಸಲಾಯಿತು. ಕ್ರೇನ್ ಮತ್ತು ಫೋರ್ಜಿಂಗ್ ವಲಯದಲ್ಲೂ ಬಜಾಜ್ ಸಮೂಹದ ಹೆಜ್ಜೆ ಗುರುತುಗಳಿವೆ.

ಕಾನ್ಫಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿಯ ಅಧ್ಯಕ್ಷರಾಗಿ ಎರಡು ಅವಧಿಗೆ ಅಧ್ಯಕ್ಷರಾಗಿ, ಅಂದರೆ 1979-80 ಹಾಗೂ 1999- 2000ನೇ ಇಸವಿಯಲ್ಲಿ ಹೀಗೆ ಎರಡು ಬಾರಿ ತಮ್ಮ ನಾಯಕತ್ವ ಗುಣವನ್ನು ರಾಹುಲ್ ಬಜಾಜ್ ಪ್ರದರ್ಶಿಸಿದ್ದಾರೆ. ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಫ್ಯಾಕ್ಚರರ್ಸ್ ಅಧ್ಯಕ್ಷರಾಗಿ, ಡೆವಲಪ್​ಮೆಂಟ್ ಕೌನ್ಸಿಲ್ ಫಾರ್ ಆಟೋಮೊಬೈಲ್ಸ್ ಅಂಡ್ ಅಲೈಡ್ ಇಂಡಸ್ಟ್ರೀಸ್​ ಮುಖ್ಯಸ್ಥರಾಗಿ ಜವಾಬ್ದಾರಿ ಹೊತ್ತಿದ್ದಾರೆ. ಈ ಪಟ್ಟಿ ಇಲ್ಲಿಗೆ ನಿಲ್ಲುವುದಿಲ್ಲ. ಮರಾಠ ವಾಣಿಜ್ಯ, ಕೈಗಾರಿಕೆ ಹಾಗೂ ಕೃಷಿ ಒಕ್ಕೂಟದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 1986ರಿಂದ 1989ರ ಮಧ್ಯೆ ಇಂಡಿಯನ್ ಏರ್​ಲೈನ್ಸ್​ ಅಧ್ಯಕ್ಷರಾಗಿದ್ದರು ರಾಹುಲ್ ಬಜಾಜ್. ಅವರ ಸೇವೆ 2003ರಿಂದ 2006ರ ಮಧ್ಯೆ ಐಐಟಿ ಬಾಂಬೆಗೂ ವಿಸ್ತರಣೆ ಆಯಿತು.

ರಾಹುಲ್ ಬಜಾಜ್ ಅವರ ತಂದೆ ಹೆಸರು ಕಮಲ್​ನಯನ್ ಬಜಾಜ್ ಹಾಗೂ ತಾಯಿ ಸಾವಿತ್ರಿ. ಇನ್ನು ಅವರ ಪತ್ನಿಯ ಹೆಸರು ರೂಪಾ ಬಜಾಜ್. ಅವರು 2013ರಲ್ಲೇ ತೀರಿಕೊಂಡಿದ್ದಾರೆ. ಮಕ್ಕಳು: ರಾಜೀವ್ ಬಜಾಜ್, ಸಂಜೀವ್ ಬಜಾಜ್ ಹಾಗೂ ಸುನೈನಾ ಅಗರ್​ವಾಲ್. ರಾಹುಲ್ ಬಜಾಜ್ ಅವರಿಗೆ 2001ರಲ್ಲಿ ಪದ್ಮಭೂಷಣ ಬಂದಿದೆ. ಫ್ರೆಂಚ್ ಸರ್ಕಾರದಿಂದ ಆರ್ಡರ್ ಆಫ್ ಲೀಜನ್ ಗೌರವ ದಕ್ಕಿದೆ. ಇದರ ಹೊರತಾಗಿ ಏಳು ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್, ಅದರಲ್ಲೂ ಐಐಟಿ ರೂರ್ಕಿಯಿಂದ ದೊರೆತಿದೆ. ಇನ್ನೂ ಸಾಕಷ್ಟು ಗೌರವ- ಸಮ್ಮಾನಗಳು ಅವರಿಗೆ ಲಭಿಸಿದ್ದವು.

ಇದನ್ನೂ ಓದಿ: ಬಜಾಜ್ ಆಟೋ ಕಂಪೆನಿ ಅಧ್ಯಕ್ಷ ಹುದ್ದೆಗೆ ರಾಹುಲ್ ಬಜಾಜ್ ರಾಜೀನಾಮೆ

Published On - 5:50 pm, Sat, 12 February 22