ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈಯ (Mumbai) ವರ್ಲಿಯಲ್ಲಿರುವ ಐಷಾರಾಮಿ ಪೆಂಟ್ಹೌಸ್ (Penthouse) ಅನ್ನು ಉದ್ಯಮಿಯೊಬ್ಬರು 240 ಕೋಟಿ ರೂ.ಗೆ ಖರೀದಿಸಿದ್ದಾರೆ. ಇದನ್ನು ದೇಶದ ಅತಿ ದುಬಾರಿ ಅಪಾರ್ಟ್ಮೆಂಟ್ ಡೀಲ್ ಎಂದೇ ಹೇಳಲಾಗಿದೆ. ವರ್ಲಿಯ ಅನ್ನಿ ಬೆಸೆಂಟ್ ರಸ್ತೆಯಲ್ಲಿರುವ ‘ತ್ರೀ ಸಿಕ್ಸ್ಟಿ ವೆಸ್ಟ್ (Three Sixty West)’ ಐಷಾರಾಮಿ ಪೆಂಟ್ಹೌಸ್ ಅನ್ನು ‘ವೆಲ್ಸ್ಪನ್ ಗ್ರೂಪ್’ನ ಅಧ್ಯಕ್ಷ ಬಿ.ಕೆ. ಗೋಯೆಂಕಾ (BK Goenka) ಖರೀದಿಸಿದ್ದಾರೆ. ಮಾರುಕಟ್ಟೆ ಮೂಲಗಳ ಪ್ರಕಾರ ಪೆಂಟ್ಹೌಸ್ ಗಗನಚುಂಬಿ ಕಟ್ಟಡದ ಟವರ್ ಬಿ ವಿಭಾಗದ 63, 64 ಮತ್ತು 65ನೇ ಮಹಡಿಯಲ್ಲಿದೆ. ದುಬಾರಿ ಪೆಂಟ್ಹೌಸ್ 30,000 ಚದರ ಅಡಿ ವ್ಯಾಪ್ತಿಯಲ್ಲಿದೆ. ಸರ್ಕಾರದ ಕೊಳೆಗೇರಿ ಪುನರ್ವಸತಿ ಯೋಜನೆಯಡಿ ರೂಪಿಸಲಾದ 300 ಚದರ ಅಡಿ ವಠಾರಕ್ಕಿಂತ ಸುಮಾರು 100 ಪಟ್ಟು ದೊಡ್ಡದಾಗಿದೆ ಎಂದು ವರದಿ ಉಲ್ಲೇಖಿಸಿದೆ. ಬುಧವಾರ (ಫೆಬ್ರವರಿ 8) ಖರೀದಿ ವಹಿವಾಟು ನಡೆದಿದೆ. ಖರೀದಿದಾರರು ಪೆಂಟ್ಹೌಸ್ನಲ್ಲಿ ವಾಸಿಸುವ ಉದ್ದೇಶ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
‘ದೇಶದಲ್ಲಿ ಈವರೆಗೆ ಮಾರಾಟವಾದ ಅಪಾರ್ಟ್ಮೆಂಟ್ಗಳ ಪೈಕಿ ಇದುವೇ ಅತಿ ದುಬಾರಿಯದ್ದಾಗಿದೆ. ಅಲ್ಟ್ರಾ-ಲಕ್ಷುರಿ ಸೆಗ್ಮೆಂಟ್ನಲ್ಲಿ ಮುಂದಿನ ಎರಡು ತಿಂಗಳ ಒಳಗಾಗಿ ಇನ್ನಷ್ಟು ವಹಿವಾಟಿನ ಗುರಿ ಹೊಂದಿದ್ದೇವೆ. ಯಾಕೆಂದರೆ 2023ರ ಏಪ್ರಿಕ್ ಬಳಿಕ ತೆರಿಗೆ ಕಾಯ್ದೆಯ ಸೆಕ್ಷನ್ 54ರ ಅಡಿ ಬಂಡವಾಳ ಗಳಿಕೆಯ ಮಿತಿಯನ್ನು 10 ಕೋಟಿ ರೂ.ಗೆ ನಿಗದಿಪಡಿಸಲಾಗಿದೆ. ಅದಕ್ಕಿಂತ ಹೆಚ್ಚಿನ ಗಳಿಕೆಗೆ ತೆರಿಗೆ ಪಾವತಿಸಬೇಕಾಗುತ್ತದೆ’ ಎಂದು ರಿಯಲ್ ಎಸ್ಟೇಟ್ ಸಂಸ್ಥೆ ಲೈಸೆಸ್ ಫೋರಸ್ನ ಎಂಡಿ ಪಂಕಜ್ ಕಪೂರ್ ಹೇಳಿದ್ದಾರೆ.
ಇದನ್ನೂ ಓದಿ: Credit Card: ಕ್ರೆಡಿಟ್ ಕಾರ್ಡ್ ಬಿಲ್ ಇಎಂಐಗೆ ಪರಿವರ್ತಿಸುವುದು ಒಳ್ಳೆಯದೇ? ಇಲ್ಲಿವೆ ಸಾಧಕ ಬಾಧಕಗಳ ವಿವರ
‘ತ್ರೀ ಸಿಕ್ಸ್ಟಿ ವೆಸ್ಟ್’ ಟವರ್ಗೆ ಹೊಂದಿಕೊಂಡಂತಿರುವ ಮತ್ತೊಂದು ಪೆಂಟ್ಹೌಸ್ ಅನ್ನು ಬ್ಯುಲ್ಡರ್ ವಿಕಾಸ್ ಒಬೆರಾಯ್ 240 ಕೋಟಿ ರೂ.ಗೆ ಖರೀದಿಸಿದ್ದಾರೆ. ಬ್ಯುಲ್ಡರ್ ಹಾಗೂ ಉದ್ಯಮಿ ಸುಧಾಕರ್ ಶೆಟ್ಟಿ ಸಹಭಾಗಿತ್ವದಲ್ಲಿ ಒಬೆರಾಯ್ ಅವರು ಐಷಾರಾಮಿ ಪೆಂಟ್ಹೌಸ್ ಅಭಿವೃದ್ಧಿಪಡಿಸಿದ್ದಾರೆ. ಇದನ್ನು ತಮ್ಮ ಕಂಪನಿ ಆರ್.ಎಸ್. ಎಂಟರ್ಪ್ರೈಸಸ್ ಲಿಮಿಟೆಡ್ನಿಂದ ಒಬೆರಾಯ್ ಖರೀದಿಸಿದ್ದಾರೆ ಎನ್ನಲಾಗಿದೆ.
ಗಗನಚುಂಬಿ ಕಟ್ಟದ ಅತಿ ಎತ್ತರದ ಮಹಡಿಯಲ್ಲಿರುವ ಫ್ಲ್ಯಾಟ್ ಅನ್ನು ಸಾಮಾನ್ಯವಾಗಿ ಪೆಂಟ್ಹೌಸ್ ಎಂದು ಕರೆಯಲಾಗುತ್ತದೆ. ಪೆಂಟ್ಹೌಸ್ ಎಂದು ಕರೆಯಲ್ಪಡುವ ಈ ಫ್ಲ್ಯಾಟ್ಗಳು ಅತ್ಯಂತ ಐಷಾರಾಮಿಯಾಗಿರುತ್ತವೆ.
ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:26 pm, Fri, 10 February 23