ಕ್ರೆಡಿಟ್ ಕಾರ್ಡ್ ಬಿಲ್ ನಿರೀಕ್ಷೆಗಿಂತ ಹೆಚ್ಚು ಬಂದಿದ್ದಾಗ, ಒಂದೇ ಬಾರಿಗೆ ಪಾವತಿಸುವುದು ಕಷ್ಟಸಾಧ್ಯವಾದಾಗ ಇಎಂಐ ಆಗಿ ಪರಿವರ್ತಿಸುವುದು ಉತ್ತಮ ವಿಧಾನ. ಇದರಿಂದ ನಿಮಗೆ ಹಣಕಾಸು ಒತ್ತಡ ನಿಭಾಯಿಸುವುದು ಸುಲಭವಾಗಲಿದೆ. ನಿರ್ದಿಷ್ಟ ಬಡ್ಡಿಗೆ ನಿಗದಿಪಡಿಸಿದ ಅವಧಿಗೆ ಇಎಂಐ ಆಗಿ ಪರಿವರ್ತಿಸಲು ಅವಕಾಶ ದೊರೆಯುತ್ತದೆ.
ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಇಎಂಐ ಆಗಿ ಪರಿವರ್ತಿಸುವಾಗ ಬಡ್ಡಿ ದರ ನಿಮ್ಮ ನಿರೀಕ್ಷೆಗಿಂತಲೂ ಹೆಚ್ಚಿರಬಹುದು ಎಂಬುದು ಗಮನದಲ್ಲಿರಲಿ. ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಬಿಲ್ ಇಎಂಐಗೆ ಬ್ಯಾಂಕ್ಗಳು ಹೆಚ್ಚಿನ ಬಡ್ಡಿ ವಿಧಿಸುತ್ತವೆ.
ವಸ್ತುಗಳ ಖರೀದಿ ವೇಳೆ ನಿಮಗೆ ‘ಝೀರೋ ಕಾಸ್ಟ್ ಅಥವಾ ನೋ ಕಾಸ್ಟ್ ಇಎಂಐ’ ಆಯ್ಕೆಗಳನ್ನು ಬ್ಯಾಂಕ್ಗಳು ನೀಡಬಹುದು. ಸಾಮಾನ್ಯವಾಗಿ ಮೂರರಿಂದ 12 ತಿಂಗಳ ವರೆಗೆ ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಬ್ಯಾಂಕ್ಗಳು ನೀಡುತ್ತವೆ. ಆದಾಗ್ಯೂ ಪ್ರೊಸೆಸಿಂಗ್ ಶುಲ್ಕದಂಥ ಹಿಡನ್ ಚಾರ್ಜಸ್ ಬಗ್ಗೆ ಗಮನ ಹರಿಸಿ.
ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಇಎಂಐ ಆಗಿ ಪರಿವರ್ತಿಸುವ ಬದಲು ವಸ್ತುಗಳ ಖರೀದಿ ವೇಳೆಯೇ ನೋ ಕಾಸ್ಟ್ ಇಎಂಐ ಇದ್ದರೆ ಆ ಆಯ್ಕೆಯನ್ನು ಬಳಸುವುದು ಉತ್ತಮ. ಇದರಿಂದ ಬಡ್ಡಿ ಪಾವತಿಸುವುದನ್ನು ತಪ್ಪಿಸಬಹುದು.
ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದನ್ನು ಮಾತ್ರ ತಪ್ಪಿಸಬೇಡಿ. ಇದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಮತ್ತು ಸಾಲ ಪಡೆಯುವ ಅರ್ಹತೆ ಮೇಲೆ ನಕಾರಾತ್ಮಕ ಪರಿಣಾಮವಾಗಲಿದೆ. ಅವಧಿ ಮುಗಿದ ಬಳಿಕ ಬಿಲ್ ಪಾವತಿಸುವುದಕ್ಕೆ ಹೆಚ್ಚಿನ ಬಡ್ಡಿ ಪಾವತಿಸಬೇಕಾಗುತ್ತದೆ. ಹೆಚ್ಚು ಬಡ್ಡಿ ಪಾವತಿಸಿಯೂ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದಕ್ಕಿಂತ ಬಿಲ್ ಅನ್ನು ಇಎಂಐ ಆಗಿ ಪರಿವರ್ತಿಸುವುದು ಒಳ್ಳೆಯದು. ಆದರೆ ಇದಕ್ಕೂ ಬ್ಯಾಂಕ್ಗಳು ಹೆಚ್ಚಿನ ಬಡ್ಡಿ ವಿಧಿಸುತ್ತವೆ ಎಂಬುದು ತಿಳಿದಿರಲಿ.
ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಇಎಂಐ ಆಗಿ ಪರಿವರ್ತಿಸುವುದಕ್ಕೆ ಯಾವುದೇ ದಾಖಳೆಗಳ ಅಗತ್ಯ ಇರುವುದಿಲ್ಲ. ಆನ್ಲೈನ್ ಮೂಲಕವೇ ಬಿಲ್ ಅನ್ನು ಇಎಂಐ ಆಗಿ ಪರಿವರ್ತಿಸುವ ಆಯ್ಕೆಗಳನ್ನು ಬ್ಯಾಂಕ್ಗಳು ಗ್ರಾಹಕರಿಗೆ ನೀಡುತ್ತಿವೆ.
ಇಎಂಐ ಆಗಿ ಪರಿವರ್ತಿಸಿದಾಗ ಆ ಒಟ್ಟು ಮೊತ್ತವು ನಿಮ್ಮ ಕ್ರೆಡಿಟ್ ಕಾರ್ಡ್ನಲ್ಲಿ ಬ್ಲಾಕ್ ಆಗುತ್ತದೆ ಎಂಬುದು ಗಮನದಲ್ಲಿರಲಿ. ಇಎಂಐ ಪಾವತಿಸಿದ ನಂತರ ಆ ಮೊತ್ತವು ಅನ್ಬ್ಲಾಕ್ ಆಗುತ್ತದೆ. ಉದಾಹರಣೆಗೆ; ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿ 50,000 ರೂ. ಎಂದಿಟ್ಟುಕೊಳ್ಳಿ. 30,000 ರೂ. ಬಿಲ್ ಬಂದಿದ್ದು, ಅದನ್ನು ನೀವು ಇಎಂಐ ಆಗಿ ಪರಿವರ್ತಿಸಿದರೆ ಅಷ್ಟೂ ಮೊತ್ತ ಬ್ಲಾಕ್ ಆಗಿಬಿಡುತ್ತದೆ. ಇನ್ನುಳಿದ 20,000 ರೂ.ವನ್ನಷ್ಟೇ ನೀವು ಬಳಸಿಕೊಳ್ಳಬಹುದಾಗಿದೆ. ಇಎಂಐ ಪಾವತಿಸಿದ ನಂತರವಷ್ಟೇ ಆ ಮೊತ್ತ ಅನ್ಬ್ಲಾಕ್ ಆಗುತ್ತದೆ.
Published On - 2:26 pm, Fri, 10 February 23