2025ರಲ್ಲಿ ಚೀನಾಗೆ ವ್ಯಾಪಾರ ಸುಗ್ಗಿ; ಭಾರತದ ರಫ್ತಿನಲ್ಲೂ 5.5 ಬಿಲಿಯನ್ ಡಾಲರ್​ನಷ್ಟು ಹೆಚ್ಚಳ

India's exports to China rise almost 9pc in 2025: 2025ರಲ್ಲಿ ಚೀನಾಗೆ ಭಾರತದ ರಫ್ತು ಶೇ. 8.7ರಷ್ಟು ಹೆಚ್ಚಿ 19.75 ಬಿಲಿಯನ್ ಡಾಲರ್ ಮುಟ್ಟಿದೆ. ಅದೇ ವೇಳೆ ಭಾರತಕ್ಕೆ ಚೀನಾದ ರಫ್ತು ಶೇ. 12.8ರಷ್ಟು ಏರಿಕೆ ಆಗಿದೆ. ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ವ್ಯಾಪಾರ ದಾಖಲೆಯ ಪ್ರಮಾಣಕ್ಕೆ ಏರಿದೆ. ಭಾರತಕ್ಕೆ ಟ್ರೇಡ್ ಡೆಫಿಸಿಟ್ ಕೂಡ ಗಣನೀಯವಾಗಿ ಹೆಚ್ಚಿದೆ.

2025ರಲ್ಲಿ ಚೀನಾಗೆ ವ್ಯಾಪಾರ ಸುಗ್ಗಿ; ಭಾರತದ ರಫ್ತಿನಲ್ಲೂ 5.5 ಬಿಲಿಯನ್ ಡಾಲರ್​ನಷ್ಟು ಹೆಚ್ಚಳ
ಭಾರತ ಚೀನಾ

Updated on: Jan 15, 2026 | 11:53 AM

ನವದೆಹಲಿ, ಜನವರಿ 15: ಕಳೆದ ವರ್ಷ ಚೀನಾ ದೇಶಕ್ಕೆ (China) ಭಾರತದ ರಫ್ತು ಸಖತ್ ಏರಿದೆ. 2024ರ ವರ್ಷಕ್ಕೆ ಹೋಲಿಸಿದರೆ 2025ರಲ್ಲಿ ಚೀನಾಗೆ ಭಾರತದ ರಫ್ತು 5.5 ಬಿಲಿಯನ್ ಡಾಲರ್​ನಷ್ಟು ಹೆಚ್ಚಿದೆ. 2024ರಲ್ಲಿ ಭಾರತವು ಚೀನಾಗೆ 14.25 ಬಿಲಿಯನ್ ಡಾಲರ್​​ನಷ್ಟು ರಫ್ತು ಮಾಡಿತ್ತು. 2025ರಲ್ಲಿ ಭಾರತದ ರಫ್ತು 19.75 ಬಿಲಿಯನ್ ಡಾಲರ್ ಮಟ್ಟ ಮುಟ್ಟಿದೆ. ಅಂದರೆ, ರಫ್ತಿನಲ್ಲಿ ಶೇ. 8.7ರಷ್ಟು ಏರಿಕೆ ಆಗಿದೆ.

ಚೀನಾದಿಂದ ಇನ್ನೂ ಹೆಚ್ಚು ಆಮದು…

ಚೀನಾಗೆ ಭಾರತದ ರಫ್ತು ಹೆಚ್ಚಿದೆಯಾದರೂ, ಅದಕ್ಕಿಂತ ಹೆಚ್ಚಳ ಆಗಿರುವುದು ಚೀನಾ ಭಾರತಕ್ಕೆ ಮಾಡಿದ ರಫ್ತಿನಲ್ಲಿ. 2025ರಲ್ಲಿ ಭಾರತಕ್ಕೆ ಚೀನಾದ ರಫ್ತಿನಲ್ಲಿ ಬರೋಬ್ಬರಿ ಶೇ. 12.8 ರಷ್ಟು ಹೆಚ್ಚಳ ಆಗಿದೆ. 2024ರಲ್ಲಿ ಭಾರತಕ್ಕೆ ಚೀನಾ 113.45 ಬಿಲಿಯನ್ ಡಾಲರ್​ನಷ್ಟು ರಫ್ತು ಮಾಡಿತ್ತು. 2025ರಲ್ಲಿ ಅದು 135.87 ಬಿಲಿಯನ್ ಡಾಲರ್​ಗೆ ಏರಿದೆ.

ಇದನ್ನೂ ಓದಿ: ರಷ್ಯನ್ ತೈಲ, ಕಲ್ಲಿದ್ದಲು ಖರೀದಿ: ಭಾರತವನ್ನು ಹಿಂದಿಕ್ಕಿದ ಟರ್ಕಿ

ದಾಖಲೆ ಮಟ್ಟದ ಟ್ರೇಡ್ ಡೆಫಿಸಿಟ್

ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ವ್ಯಾಪಾರ 2025ರಲ್ಲಿ ಒಟ್ಟು 155.62 ಬಿಲಿಯನ್ ಡಾಲರ್​ನಷ್ಟು ಇದೆ. ಇದು ಸಾರ್ವಕಾಲಿಕ ಗರಿಷ್ಠ ಮೊತ್ತವಾಗಿದೆ. ಭಾರತದ ರಫ್ತು ಹೆಚ್ಚಳಕ್ಕಿಂತಲೂ ಚೀನಾದ ರಫ್ತು ಹೆಚ್ಚಳ ಅಧಿಕ ಇರುವುದರಿಂದ ಚೀನಾದೊಂದಿಗಿನ ಭಾರತದ ಟ್ರೇಡ್ ಡೆಫಿಸಿಟ್ ಕೂಡ ಅಧಿಕಗೊಂಡಿದೆ. ಇದರೊಂದಿಗೆ ಈ ಟ್ರೇಡ್ ಡೆಫಿಸಿಟ್ 116.12 ಬಿಲಿಯನ್ ಡಾಲರ್​ಗೆ ಹೆಚ್ಚಿದೆ. ಇದು ಭಾರತಕ್ಕೆ ಎದುರಾಗಿರುವ ಅತಿದೊಡ್ಡ ಟ್ರೇಡ್ ಡೆಫಿಸಿಟ್ ಆಗಿದೆ.

ಸಕಾರಾತ್ಮಕ ಅಂಶವೆಂದರೆ ಚೀನಾದ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಭಾರತದ ಸರಕುಗಳು ಪ್ರವೇಶ ಮಾಡಿ ಸ್ಪರ್ಧೆಯೊಡ್ಡುವುದು ಹೆಚ್ಚಾಗುತ್ತಿದೆ. ಟೆಲಿಕಾಂ ಉಪಕರಣ, ಮಸಾಲೆ ಪದಾರ್ಥ, ಮೀನು ಇತ್ಯಾದಿ ವಸ್ತುಗಳು ಚೀನಾಗೆ ರಫ್ತಾಗುವುದು ಹೆಚ್ಚಿದೆ. ಇದೇ ವೇಳೆ, ಚೀನಾದ ಐಟಿ, ಫಾರ್ಮಾ ಮತ್ತು ಕೃಷಿ ಕ್ಷೇತ್ರದ ಮಾರುಕಟ್ಟೆಯ ಮೇಲೂ ಭಾರತ ಕಣ್ಣಿಟ್ಟಿದೆ.

ಇದನ್ನೂ ಓದಿ: ರಫ್ತು ಸಜ್ಜಿತ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ನಂ. 1; ಕರ್ನಾಟಕದ ಸ್ಥಾನವೆಷ್ಟು?

ಅಮೆರಿಕ ಟ್ಯಾರಿಫ್ ನಡುವೆಯೂ ಚೀನಾ ರಫ್ತು ಭಯಂಕರ ಹೆಚ್ಚಳ

ಇದೇ ವೇಳೆ ಚೀನಾದ ಒಟ್ಟಾರೆ ರಫ್ತು 2025ರಲ್ಲಿ ಗಣನೀಯವಾಗಿ ಹೆಚ್ಚಿದೆ. 2025ರಲ್ಲಿ ಅದರ ರಫ್ತು 3.77 ಟ್ರಿಲಿಯನ್ ಡಾಲರ್ ಇದ್ದರೆ, ಆಮದು 2.58 ಟ್ರಿಲಿಯನ್ ಡಾಲರ್ ಇದೆ. ಅಂದರೆ, ಚೀನಾಗೆ ದಾಖಲೆಯ 1.2 ಟ್ರಿಲಿಯನ್ ಡಾಲರ್​ನಷ್ಟು ಟ್ರೇಡ್ ಸರ್​ಪ್ಲಸ್ ಆದಂತಾಯಿತು. ಅಂದರೆ, ಆಮದಿಗಿಂತ ರಫ್ತು ಬಹಳ ಅಧಿಕ ಇದೆ. ಅಮೆರಿಕದ ಟ್ಯಾರಿಫ್ ನಡುವೆಯೂ ಚೀನಾದ ವ್ಯಾಪಾರ ಹೆಚ್ಚಿರುವುದು ಅದು ಹಲವಾರು ಕ್ಷೇತ್ರಗಳಲ್ಲಿ ರಫ್ತು ಉದ್ಯಮಗಳನ್ನು ನೆಲಗೊಳಿಸಿರುವುದು ಕಾರಣ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ