
ನವದೆಹಲಿ, ಜೂನ್ 8: ಭಾರತದಲ್ಲಿ ಬಡತನ ಮತ್ತು ಅತಿಬಡತನ (extreme poverty) ಸಾಕಷ್ಟು ಕಡಿಮೆ ಆಗುತ್ತಿರುವುದು ವಿವಿಧ ಸಂಸ್ಥೆಗಳ ಅಂಕಿ ಅಂಶದಿಂದ ತಿಳಿದುಬರುತ್ತದೆ. ವಿಶ್ವಬ್ಯಾಂಕ್ (World Bank) ಬಿಡುಗಡೆ ಮಾಡಿದ ಇತ್ತೀಚಿನ ದತ್ತಾಂಶದ ಪ್ರಕಾರ ಅತಿಬಡತನ ಕಳೆದ ಒಂದು ದಶಕದಲ್ಲಿ ಗಣನೀಯವಾಗಿ ತಗ್ಗಿದೆ. 2011-12ರಲ್ಲಿ ಶೇ. 27.1ರಷ್ಟಿದ್ದ ಅತಿಬಡತನವು 2022-23ರಲ್ಲಿ ಶೇ. 5.3ಕ್ಕೆ ಇಳಿದಿದೆ. ಗಮನಾರ್ಹ ಸಂಗತಿ ಎಂದರೆ, ಅತಿಬಡತನಕ್ಕೆ ಪರಿಗಣಿಸಲಾದ ಕನಿಷ್ಠ ಮಟ್ಟವನ್ನು ಎತ್ತರಿಸಲಾಗಿದ್ದರೂ ಇದು ಇಷ್ಟು ಪ್ರಮಾಣದಲ್ಲಿ ಇಳಿಕೆ ಆಗಿದೆ.
ಒಬ್ಬ ವ್ಯಕ್ತಿಯ ಒಂದು ದಿನದ ಆದಾಯ 3 ಡಾಲರ್ (ಸುಮಾರು 250 ರೂ) ಮಟ್ಟಕ್ಕಿಂತ ಕಡಿಮೆ ಇದ್ದರೆ ಅದನ್ನು ಅತಿಬಡತನ ಎಂದು ಪರಿಗಣಿಸಲಾಗುತ್ತದೆ. ಈ ಹಿಂದೆ 2.15 ಡಾಲರ್ ಇದ್ದ ಮಾನದಂಡ ಮಟ್ಟವನ್ನು ಹೆಚ್ಚಿಸಿ, 2021ರ ಪರ್ಚೇಸಿಂಗ್ ಪವರ್ ಪ್ಯಾರಿಟಿ ಆಧಾರದ ಮೇಲೆ ಲೆಕ್ಕ ಮಾಡಲಾಯಿತು. ಈ ಹಿಂದಿನ ಮಾನದಂಡದಲ್ಲಿ 2017ರ ಪರ್ಚೇಸಿಂಗ್ ಪವರ್ ಪ್ಯಾರಿಟಿ ಲೆಕ್ಕ ಪರಿಗಣಿಸಲಾಗಿತ್ತು.
ಇದನ್ನೂ ಓದಿ: ಮೋದಿ ನೇತೃತ್ವದಲ್ಲಿ ಬದಲಾಗಿದೆ ಭಾರತ: ಹೀನಾ ಖಾನ್, ಸುಭಾಷ್ ಘಾಯ್ ಅನಿಸಿಕೆ
ಈ ರೀತಿ ಅತಿಬಡತನಕ್ಕೆ ಮಾನದಂಡ ಮಟ್ಟವನ್ನು ಹೆಚ್ಚಿಸಿದ ಬಳಿಕ ಜಾಗತಿಕವಾಗಿ ಅತಿಬಡತನ ಪ್ರಮಾಣ 12.5 ಕೋಟಿಯಷ್ಟು ಹೆಚ್ಚಾಯಿತು. ಆದರೆ, ಭಾರತದಲ್ಲಿ ಅಚ್ಚರಿ ಎಂಬಂತೆ ಈ ಅತಿಬಡತನ ಕಡಿಮೆ ಆಗಿದೆ.
2011-12ರಲ್ಲಿ 34.45 ಕೋಟಿ ಜನರು ಅತಿಬಡತನದ ಸ್ಥಿತಿಯಲ್ಲಿದ್ದರು. 2022-23ರಲ್ಲಿ ಈ ಸಂಖ್ಯೆ 7.52 ಕೋಟಿಗೆ ಇಳಿಮುಖವಾಗಿದೆ. ಬಡತನ ಎಷ್ಟಿದೆ ಎಂದು ತಿಳಿಯಲು ಸರಿಯಾದ ದತ್ತಾಂಶ ಪಡೆಯುವುದು ಮುಖ್ಯ ಎಂಬುದನ್ನು ಈ ಅಂಕಿ ಅಂಶ ತೋರಿಸುತ್ತದೆ ಎಂಬುದು ಸರ್ಕಾರದ ಅನಿಸಿಕೆ.
ಇದನ್ನೂ ಓದಿ: ಗಮನಿಸಿ, ಆಯುಷ್ಮಾನ್ ಕಾರ್ಡ್ ಜೊತೆಗೆ ABHA ಕೂಡ ಇದ್ದರೆ ಪ್ರಯೋಜನ ಹೆಚ್ಚು; ಅದು ಹೇಗೆ, ಇಲ್ಲಿದೆ ಮಾಹಿತಿ
ಭಾರತವು ಅತಿ ಬಡತನ ಅಳೆಯಲು ಇರುವ ವಿಧಾನದಲ್ಲಿ ಸ್ವಲ್ಪ ಬದಲಾವಣೆ ಮಾಡಿತು. ತನ್ನ ಗೃಹ ಅನುಭೋಗ ವೆಚ್ಚ ಸಮೀಕ್ಷೆಯಲ್ಲಿ ಈ ಮೊದಲು ಯೂನಿಫಾರ್ಮ್ ರೆಫರೆನ್ಸ್ ಪೀರಿಯಡ್ ವಿಧಾನ ಅನುಸರಿಸಲಾಗುತ್ತಿತ್ತು. ಇದರ ಬದಲು ಮಾಡಿಫೈಡ್ ಮಿಕ್ಸೆಡ್ ರೀಕಾಲ್ ಪೀರಿಯಡ್ ವಿಧಾನವನ್ನು ಅನುಸರಿಸಲಾಯಿತು. ಇದರಿಂದ ದೇಶದಲ್ಲಿ ಅನುಭೋಗ ಮಟ್ಟವನ್ನು ಹೆಚ್ಚು ನಿಖರವಾಗಿ ಅಳೆಯಲು ಸಾಧ್ಯವಾಗಿದೆ. ಹಾಗೆಯೇ, ಬಡತನ ಮಟ್ಟವನ್ನೂ ಹೆಚ್ಚು ನಿಖರವಾಗಿ ಅಳೆಯಲು ಸಾಧ್ಯವಾಗಿದೆ. ಹೀಗಾಗಿ, ಭಾರತದಲ್ಲಿ ಅತಿಬಡತನ ಪ್ರಮಾಣ ಇಳಿಕೆ ಆಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ