Gold Loan: ಎಲ್ಟಿವಿ ಏರಿಕೆಯಿಂದ ಹಿಡಿದು ಚಿನ್ನದ ಹರಾಜುವರೆಗೆ, ಆರ್ಬಿಐನ ಹೊಸ ಗೋಲ್ಡ್ ಲೋನ್ ನಿಯಮಗಳನ್ನು ತಿಳಿದಿರಿ
RBI New Gold Loan Rules: ಆರ್ಬಿಐ ಒಡವೆ ಸಾಲದ ವಿಚಾರದಲ್ಲಿ ಹೊಸ ನಿಯಮಗಳನ್ನು ರೂಪಿಸಿದ್ದು, 2026ರ ಎಪ್ರಿಲ್ 1ರಿಂದ ಜಾರಿಗೆ ಬರುತ್ತವೆ. ಚಿನ್ನದ ಮೌಲ್ಯದ ಮೇಲೆ ಸಿಗುವ ಹಣದ ಪ್ರಮಾಣವನ್ನು ಹೆಚ್ಚು ಮಾಡಲಾಗಿದೆ. ಸಾಲ ತೀರಿದ ಬಳಿಕ ಕೂಡಲೇ ಗ್ರಾಹಕರಿಗೆ ಚಿನ್ನ ಮರಳಿಸದೆ ವಿಳಂಬ ಮಾಡಿದರೆ ದಿನಕ್ಕೆ ಇಂತಿಷ್ಟು ಹಣವಾಗಿ ದಂಡ ತೆರಬೇಕಾಗುತ್ತದೆ.

ಭಾರತೀಯರಿಗೆ ಚಿನ್ನ ಬಹುರೀತಿಯಲ್ಲಿ ಉಪಯೋಗವಾಗುತ್ತದೆ. ಸಂಕಷ್ಟದ ಸ್ಥಿತಿ ಬಂದಾಗ ಒಡವೆಗಳನ್ನು ಅಡವಿಟ್ಟು ಕಡಿಮೆ ಬಡ್ಡಿದರಕ್ಕೆ ಸಾಲ ಪಡೆಯಬಹುದು. ಬಹಳ ಸುಲಭವಾಗಿ ಸಾಲ ಸಿಗುತ್ತದೆ. ಚಿನ್ನದ ಮೇಲೆ ಸಾಲ (gold loan) ಪಡೆಯುವವರಿಗೆ ಆರ್ಬಿಐ ಮತ್ತಷ್ಟು ಖುಷಿಯ ಸುದ್ದಿ ಕೊಟ್ಟಿದೆ. ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನು ಅಡವಿಟ್ಟು ಪಡೆಯುವ ಸಾಲಗಳಿಗೆ ಹೊಸ ನಿಯಮಗಳನ್ನು ಆರ್ಬಿಐ ರೂಪಿಸಿದೆ. ಇದು ಮುಂದಿನ ಹಣಕಾಸು ವರ್ಷದಿಂದ ಜಾರಿಗೆ ಬರಲಿದೆ. ಅಂದರೆ, 2026ರ ಏಪ್ರಿಲ್ 1ರಿಂದ ಹೊಸ ಗೋಲ್ಡ್ ಲೋನ್ ನಿಯಮಗಳು ಚಾಲ್ತಿಗೆ ಬರಲಿವೆ. ಎಲ್ಲಾ ಕಮರ್ಷಿಯಲ್ ಬ್ಯಾಂಕುಗಳು, ಎನ್ಬಿಎಫ್ಸಿಗಳು, ಸಹಕಾರಿ ಬ್ಯಾಂಕುಗಳು, ಹೌಸಿಂಗ್ ಫೈನಾನ್ಸ್ ಸಂಸ್ಥೆಗಳಿಗೆ ಈ ಹೊಸ ನಿಯಮ ಅನ್ವಯ ಆಗುತ್ತದೆ. ಆರ್ಬಿಐನ ಪ್ರಮುಖ ಎಂಟು ಪರಿಷ್ಕೃತ ಗೋಲ್ಡ್ ಲೋನ್ ನಿಯಮಗಳ ಮಾಹಿತಿ ಈ ಕೆಳಕಂಡಂತೆ ಇದೆ.
ಸಣ್ಣ ಸಾಲಗಳಿಗೆ ಹೆಚ್ಚಿನ ಎಲ್ಟಿವಿ
ಎರಡೂವರೆ ಲಕ್ಷ ರೂವರೆಗಿನ ಸಾಲಗಳಿಗೆ ಎಲ್ಟಿವಿಯನ್ನು ಶೇ. 75ರಿಂದ ಶೇ. 85ಕ್ಕೆ ಏರಿಸಲಾಗಿದೆ. ಅಂದರೆ, ನೀವು ಅಡವಿಡುವ ಚಿನ್ನದ ಒಟ್ಟು ಮೌಲ್ಯದ ಶೇ. 85ರಷ್ಟು ಹಣವನ್ನು ಸಾಲವಾಗಿ ಪಡೆಯಬಹುದು.
ಬ್ಯಾಂಕುಗಳು ಗ್ರಾಹಕನ ಕ್ರೆಡಿಟ್ ಪರಿಶೀಲನೆ ಕಡ್ಡಾಯ ಇಲ್ಲ
ಸಣ್ಣ ಸಾಲಗಳಿಗೆ (2.5 ಲಕ್ಷ ರೂ) ಬ್ಯಾಂಕುಗಳು ಗ್ರಾಹಕನ ಆದಾಯ ಪರಿಶೀಲನೆ ಅಥವಾ ಕ್ರೆಡಿಟ್ ಸ್ಕೋರ್ ಪರಿಶೀಲನೆ ಇತ್ಯಾದಿಯನ್ನು ಮಾಡುವುದು ಕಡ್ಡಾಯವಲ್ಲ. ಕಡಿಮೆ ಆದಾಯ ಗುಂಪಿನವರಿಗೆ, ಮತ್ತು ಕ್ರೆಡಿಟ್ ಹಿಸ್ಟರಿಯೇ ಇಲ್ಲದವರಿಗೆ ಸಾಲ ಸಿಗುವುದು ಸುಲಭವಾಗುತ್ತದೆ.
ಇದನ್ನೂ ಓದಿ: ಅಡವಿಟ್ಟ ಚಿನ್ನ, ಲಾಕರ್ನಲ್ಲಿಟ್ಟ ಚಿನ್ನ ಕಳುವಾದರೆ ಏನಾಗುತ್ತದೆ? ಗ್ರಾಹಕರಿಗೆ ಏನು ಪರಿಹಾರ? ಇಲ್ಲಿದೆ ಡೀಟೇಲ್ಸ್
ಚಿನ್ನ, ಬೆಳ್ಳಿ ಅಡವಿಡಲು ಮಿತಿ
ಚಿನ್ನದ ಒಡವೆ 1 ಕಿಲೋವರೆಗೂ ಇಡಬಹುದು. ಬೆಳ್ಳಿ ಒಡವೆಗಳನ್ನು 10 ಕಿಲೋವರೆಗೆ ಇಡಬಹುದು. ಗೋಲ್ಡ್ ಕಾಯಿನ್ ಆದರೆ 50 ಗ್ರಾಮ್ ಮಿತಿ ಇದೆ. ಸಿಲ್ವರ್ ಕಾಯಿನ್ ಆದರೆ 500 ಗ್ರಾಮ್ ಮಿತಿ ಇದೆ.
ಸಾಲ ತೀರಿಸಿದ ಕೂಡಲೇ ಗಿರವಿ ವಸ್ತು ವಾಪಸ್
ಗೋಲ್ಡ್ ಲೋನ್ ಮುಕ್ತಾಯಗೊಂಡ ದಿನವೇ ಅಡವಿಟ್ಟ ವಸ್ತುಗಳನ್ನು ಗ್ರಾಹಕರಿಗೆ ಮರಳಿಸಬೇಕು. ಏಳು ಕಾರ್ಯದಿನಗಳವರೆಗೆ ವಿನಾಯಿತಿ ಇರುತ್ತದೆ. ಅದಕ್ಕೂ ಮೇಲ್ಪಟ್ಟು ವಿಳಂಬವಾದರೆ ದಿನಕ್ಕೆ 7,000 ರೂನಂತೆ ಬ್ಯಾಂಕು ಪರಿಹಾರ ಕೊಡಬೇಕು.
ಚಿನ್ನಕ್ಕೆ ಹಾನಿಯಾದರೆ ನಷ್ಟದ ಭರ್ತಿ
ಅಡವಿಟ್ಟ ಚಿನ್ನ ಅಥವಾ ಬೆಳ್ಳಿಯನ್ನು ಬ್ಯಾಂಕು ಕಳೆದುಕೊಂಡರೆ ಅಥವಾ ಅವುಗಳಿಗೆ ಹಾನಿಯಾದರೆ ಆಗ ಬ್ಯಾಂಕು ಆ ಗ್ರಾಹಕರಿಗೆ ಪೂರ್ಣವಾಗಿ ಪರಿಹಾರ ಒದಗಿಸಬೇಕು.
ಇದನ್ನೂ ಓದಿ: ದೇಶಭ್ರಷ್ಟ ಅನ್ನಿ ಒಪ್ತೀನಿ, ಆದ್ರೆ ಕಳ್ಳ ಅನ್ನೋಕೆ ನಾನೇನು ಕದ್ದಿದ್ದೀನಿ? ಹೊಟ್ಟೆಯೊಳಗಿನ ಸಂಕಟವೆಲ್ಲಾ ಬಿಚ್ಚಿಟ್ಟ ವಿಜಯ್ ಮಲ್ಯ
ಪಾರದರ್ಶಕವಾಗಿ ಹರಾಜು ಪ್ರಕ್ರಿಯೆ ನಡೆಯಬೇಕು
ಸಾಲ ತೀರಿಸದೇ ಇದ್ದಾಗ ಬ್ಯಾಂಕುಗಳು ಚಿನ್ನವನ್ನು ಹರಾಜು ಹಾಕಬಹುದು. ಆದರೆ, ಅದಕ್ಕೆ ಮುನ್ನ ಸರಿಯಾದ ರೀತಿಯಲ್ಲಿ ಗ್ರಾಹಕರಿಗೆ ನೋಟೋಸ್ ನೀಡಬೇಕು. ಚಿನ್ನದ ಮಾರುಕಟ್ಟೆ ಮೌಲ್ಯದ ಶೇ. 90ರಷ್ಟು ಮೊತ್ತವಾದರೂ ರಿಸರ್ವ್ ಪ್ರೈಸ್ ಆಗಿರಬೇಕು. ಹರಾಜು ಬಳಿಕ ಉಳಿಯುವ ಹೆಚ್ಚುವರಿ ಹಣವನ್ನು ಏಳು ಕಾರ್ಯದಿನದೊಳಗೆ ಗ್ರಾಹಕರಿಗೆ ಮರಳಿಸಬೇಕು.
ಗ್ರಾಹಕರಿಗೆ ಅರ್ಥವಾಗುವ ಭಾಷೆಯಲ್ಲಿ ಸಾಲದ ವಿವರವನ್ನು ನೀಡಬೇಕು. ಬುಲೆಟ್ ರೀಪೇಮೆಂಟ್ ಸಾಲ ಗ್ರಾಹಕರು 12 ತಿಂಗಳೊಳಗೆ ಅಸಲು ಮತ್ತು ಬಡ್ಡಿ ಪೂರ್ತಿ ಕಟ್ಟಿ ತೀರಿಸಬೇಕು. ಇವೇ ಮುಂತಾದ ನಿಯಮಗಳನ್ನು ಆರ್ಬಿಐ ರೂಪಿಸಿದೆ. ಇವು 2026ರ ಏಪ್ರಿಲ್ 1ರಿಂದ ಜಾರಿಗೆ ಬರುತ್ತವೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




