ಗೋಲ್ಡ್ ಲೋನ್ ವಲಯಕ್ಕೆ ಬಿರ್ಲಾ ಗ್ರೂಪ್ ಎಂಟ್ರಿ: 3 ವರ್ಷಗಳಲ್ಲಿ 1,000 ಹೊಸ ಬ್ರಾಂಚ್‌ ತೆರೆಯಲು ಯೋಜನೆ

ಭಾರತದಲ್ಲಿ ಚಿನ್ನದ ಸಾಲ ಮಾರುಕಟ್ಟೆ ಅಭೂತಪೂರ್ವ ಬೆಳವಣಿಗೆ ಕಾಣುತ್ತಿದೆ. ಆದಿತ್ಯ ಬಿರ್ಲಾ ಕ್ಯಾಪಿಟಲ್ ಈ ಕ್ಷೇತ್ರಕ್ಕೆ ಪ್ರವೇಶಿಸಿದ್ದು, ಮುಂದಿನ 3 ವರ್ಷಗಳಲ್ಲಿ 1,000 ಶಾಖೆಗಳನ್ನು ತೆರೆಯುವ ಗುರಿ ಹೊಂದಿದೆ. ಚಿನ್ನದ ಬೆಲೆ ಏರಿಕೆ, ಆರ್‌ಬಿಐ ನಿಯಮಗಳು ಮತ್ತು ಸಾಲ ಪ್ರಕ್ರಿಯೆಯ ಸರಳತೆ ಇದಕ್ಕೆ ಮುಖ್ಯ ಕಾರಣ. 2026ರ ವೇಳೆಗೆ 3.3 ಲಕ್ಷ ಕೋಟಿ ರೂ. ತಲುಪುವ ನಿರೀಕ್ಷೆಯಿದೆ.

ಗೋಲ್ಡ್ ಲೋನ್ ವಲಯಕ್ಕೆ ಬಿರ್ಲಾ ಗ್ರೂಪ್ ಎಂಟ್ರಿ: 3 ವರ್ಷಗಳಲ್ಲಿ 1,000 ಹೊಸ ಬ್ರಾಂಚ್‌ ತೆರೆಯಲು ಯೋಜನೆ
ಸಾಂದರ್ಭಿಕ ಚಿತ್ರ

Updated on: Aug 22, 2026 | 9:20 AM

ಕೊಲ್ಕತ್ತಾ, ಆ.22: ದೇಶದಲ್ಲಿ ಚಿನ್ನದ ಬೆಲೆ ಗಗನಕ್ಕೇರುತ್ತಿದ್ದಂತೆ, ಅದರ ಪ್ರಭಾವ ಕೇವಲ ಆಭರಣ ಮಾರುಕಟ್ಟೆಗೆ ಸೀಮಿತವಾಗಿಲ್ಲ. ಚಿನ್ನದ ಮೇಲಿನ ಸಾಲ (Gold Loan) ಕ್ಷೇತ್ರದಲ್ಲೂ ಈಗ ಅಭೂತಪೂರ್ವ ಸಂಚಲನ ಸೃಷ್ಟಿಯಾಗಿದೆ. ಭಾರತದ ಪ್ರಮುಖ ಕಾರ್ಪೊರೇಟ್ ದೈತ್ಯರಾದ ಟಾಟಾ (Tata) ಮತ್ತು ಗೋದ್ರೇಜ್ (Godrej) ಬೆನ್ನಲ್ಲೇ ಇದೀಗ ಆದಿತ್ಯ ಬಿರ್ಲಾ ಕ್ಯಾಪಿಟಲ್ (Aditya Birla Capital) ಸಂಸ್ಥೆಯು ಭರ್ಜರಿಯಾಗಿ ಗೋಲ್ಡ್ ಲೋನ್ ರಂಗಕ್ಕೆ ಧುಮುಕಿದೆ.

ವರದಿಗಳ ಪ್ರಕಾರ, 2026ರ ಮೇ ತಿಂಗಳ ವೇಳೆಗೆ ಭಾರತದಲ್ಲಿ ಆಭರಣಗಳ ಮೇಲಿನ ಬಾಕಿ ಸಾಲದ ಮೊತ್ತ 3.3 ಲಕ್ಷ ಕೋಟಿ ರೂ. ತಲುಪಿದೆ. 2025-26ರ ಹಣಕಾಸು ವರ್ಷದಲ್ಲಿ ಈ ವಲಯವು ಸುಮಾರು ಶೇ. 50ರಷ್ಟು ಬೃಹತ್ ಬೆಳವಣಿಗೆಯನ್ನು ಕಾಣುವ ಮೂಲಕ ಚಿಲ್ಲರೆ ಸಾಲ ಕ್ಷೇತ್ರದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ವಿಭಾಗವಾಗಿ ಹೊರಹೊಮ್ಮಿದೆ. ಆರ್‌ಬಿಐ ನಿಗಾ ವಹಿಸಿದ್ದರೂ, ಎನ್‌ಬಿಎಫ್‌ಸಿಗಳ (NBFC) ಗೋಲ್ಡ್ ಲೋನ್ ಪೋರ್ಟ್‌ಫೋಲಿಯೋ ಶೇ. 70ರಷ್ಟು ಜಿಗಿತ ಕಂಡಿದೆ.

ಇತರ ಕಂಪನಿಗಳಂತೆ ಬೇರೆ ಕಂಪನಿಯನ್ನು ಖರೀದಿಸದೆ, ಬಿರ್ಲಾ ಕ್ಯಾಪಿಟಲ್ ಸ್ವತಃ ತನ್ನದೇ ಆದ ಗೋಲ್ಡ್ ಲೋನ್ ಜಾಲವನ್ನು ಸ್ಥಾಪಿಸುತ್ತಿದೆ. ಮುಂದಿನ 3 ವರ್ಷಗಳಲ್ಲಿ 1,000 ಪ್ರತ್ಯೇಕ ಗೋಲ್ಡ್ ಲೋನ್ ಶಾಖೆಗಳನ್ನು ತೆರೆಯಲು ಯೋಜಿಸಿದ್ದು, 2027ರ ಮಾರ್ಚ್ ವೇಳೆಗೆ 200 ರಿಂದ 300 ಶಾಖೆಗಳನ್ನು ಪ್ರಾರಂಭಿಸಲಿದೆ. ಕೇರಳ ಮೂಲದ ‘ಯೋಗ್‌ಲೋನ್ಸ್’ (Yogloans) ಸಂಸ್ಥೆಯ ಶೇ. 88.6 ರಷ್ಟು ಪಾಲುದಾರಿಕೆಯನ್ನು ಪಡೆದುಕೊಂಡಿದೆ. (160+ ಶಾಖೆಗಳು, 32,000 ಗ್ರಾಹಕರು, 700+ ಕೋಟಿ ರೂ. ಸಾಲದ ಮೌಲ್ಯ).

‘ಕನಕದುರ್ಗಾ ಫೈನಾನ್ಸ್’ನ ಗೋಲ್ಡ್ ಲೋನ್ ವಿಭಾಗವನ್ನು ಖರೀದಿಸಿದ್ದು, 280 ಕೋಟಿ ರೂ. ಪೋರ್ಟ್‌ಫೋಲಿಯೋ ಪಡೆದುಕೊಂಡಿದೆ. 2031ರ ವೇಳೆಗೆ ಇದನ್ನು 5,000 ಕೋಟಿ ರೂ.ಗೆ ತಲುಪಿಸುವ ಗುರಿ ಹೊಂದಿದೆ.

ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ವಾರ್ಷಿಕ 3,075 ರೂ ಪಾಸ್; ಇದರ ಬಳಕೆ ಹೇಗೆ, ಬಳಕೆಯಾಗದ ಟೋಲ್​ಗಳು ಯಾವುವು?

ಚಿನ್ನದ ಸಾಲದ ಕ್ರೇಜ್ ಹೆಚ್ಚಾಗಲು ಕಾರಣಗಳೇನು?

ಚಿನ್ನದ ದರ ಏರಿಕೆ: ಬಂಗಾರದ ಬೆಲೆ ಹೆಚ್ಚಾದಂತೆ, ಗ್ರಾಹಕರಿಗೆ ಅದೇ ಪ್ರಮಾಣದ ಚಿನ್ನವನ್ನು ಅಡಮಾನವಿಟ್ಟು ಹೆಚ್ಚಿನ ಮೊತ್ತದ ಸಾಲ ಪಡೆಯುವ ಅವಕಾಶ ಸಿಗುತ್ತದೆ.

ಸುರಕ್ಷಿತ ಸಾಲಕ್ಕೆ ಆದ್ಯತೆ: ಆರ್‌ಬಿಐ ಪರ್ಸನಲ್ ಲೋನ್‌ನಂತಹ ಅಸುರಕ್ಷಿತ (Unsecured) ಸಾಲಗಳ ಮೇಲೆ ಕಠಿಣ ನಿಯಮ ತಂದಿರುವುದರಿಂದ ಫೈನಾನ್ಸ್ ಕಂಪನಿಗಳು ಈಗ ಸುರಕ್ಷಿತವಾದ ಗೋಲ್ಡ್ ಲೋನ್ ಕಡೆಗೆ ಗಮನ ಹರಿಸುತ್ತಿವೆ.

ಸರಳ ಪ್ರಕ್ರಿಯೆ: ಗೃಹ ಸಾಲದಂತೆ ದೀರ್ಘಾವಧಿಯ ಕಾನೂನು ಪ್ರಕ್ರಿಯೆಗಳು ಬೇಕಾಗಿಲ್ಲ. ಅತ್ಯಂತ ವೇಗವಾಗಿ ಸಾಲ ಮಂಜೂರಾಗುತ್ತದೆ.

ಬದಲಾದ ಗ್ರಾಹಕರ ಮನಸ್ಥಿತಿ: ಹಿಂದೆ ಕೇವಲ ಗ್ರಾಮೀಣ ಪ್ರದೇಶದವರು ಅಥವಾ ಸಣ್ಣ ವ್ಯಾಪಾರಿಗಳು ತುರ್ತು ಹಣಕ್ಕೆ ಚಿನ್ನ ಅಡವಿಡುತ್ತಿದ್ದರು. ಆದರೆ ಈಗ ಶ್ರೀಮಂತರು ಹಾಗೂ ದೊಡ್ಡ ಮಟ್ಟದ ಸಾಲ ಬೇಕಿದ್ದವರೂ ಗೋಲ್ಡ್ ಲೋನ್ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:18 am, Sat, 22 August 26

Loading...
Unable to load recommendations.
Follow Us