ನವದೆಹಲಿ: ಭಾರತದ ಒಟ್ಟು ಜಿಎಸ್‌ಟಿ ಆದಾಯ ಸಂಗ್ರಹವು (GST Revenue Collection) ಜೂನ್‌ನಲ್ಲಿ 1,61,497 ಕೋಟಿ ರೂಪಾಯಿಗಳಾಗಿದ್ದು, ಕಳೆದ ವರ್ಷದ ಇದೇ ಅವಧಿಗಿಂತ ಶೇಕಡಾ 12 ರಷ್ಟು ಏರಿಕೆಯನ್ನು ದಾಖಲಿಸಿದೆ ಎಂದು ಹಣಕಾಸು ಸಚಿವಾಲಯ (Finance Ministry) ಶನಿವಾರ ತಿಳಿಸಿದೆ. 2023 ರ ಏಪ್ರಿಲ್‌ನಲ್ಲಿ 1.87 ಲಕ್ಷ ಕೋಟಿ ರೂಪಾಯಿಗಳ ಜಿಎಸ್‌ಟಿ ಸಂಗ್ರಹವಾಗಿದ್ದು, ಇದು ಈವರೆಗಿನ ಗರಿಷ್ಠ ಸಂಗ್ರಹವಾಗಿದೆ. ಮೇ ತಿಂಗಳಲ್ಲಿ 1,57,090 ಕೋಟಿ ರೂಪಾಯಿ ಪರೋಕ್ಷ ತೆರಿಗೆ ಸಂಗ್ರಹವಾಗಿತ್ತು.
ಇದರೊಂದಿಗೆ ಮಾಸಿಕ ಜಿಎಸ್‌ಟಿ ಆದಾಯ ಸತತ 15ನೇ ತಿಂಗಳಿನಲ್ಲಿಯೂ 1.4 ಲಕ್ಷ ಕೋಟಿ ರೂ.ಗೂ ಹೆಚ್ಚು ಸಂಗ್ರಹವಾದಂತಾಗಿದೆ. ದೇಶದಲ್ಲಿ ಜಿಎಸ್‌ಟಿ ಜಾರಿಯಾದ ನಂತರ ಒಟ್ಟು ಆದಾಯವು ಆರನೇ ಬಾರಿಗೆ 1.6 ಲಕ್ಷ ಕೋಟಿ ಗಡಿ ದಾಟಿದೆ.
2021-22, 22-23 ಮತ್ತು 23-24 ರ ಹಣಕಾಸು ವರ್ಷಗಳ ಮೊದಲ ತ್ರೈಮಾಸಿಕದಲ್ಲಿ ಸರಾಸರಿ, ಮಾಸಿಕ ಒಟ್ಟು ಜಿಎಸ್‌ಟಿ ಸಂಗ್ರಹವು ಕ್ರಮವಾಗಿ 1.10 ಲಕ್ಷ ಕೋಟಿ ರೂ., 1.51 ಲಕ್ಷ ಕೋಟಿ ರೂ. ಮತ್ತು 1.69 ಲಕ್ಷ ಕೋಟಿ ರೂ. ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರ ಹೆಚ್ಚಳ: ಸರ್ಕಾರ ಆದೇಶ
ಜೂನ್‌ನಲ್ಲಿ ಸಂಗ್ರಹಿಸಲಾದ ಒಟ್ಟು ಜಿಎಸ್‌ಟಿ ಆದಾಯದಲ್ಲಿ ಸಿಜಿಎಸ್‌ಟಿ (ಕೇಂದ್ರ ಸಂಗ್ರಹ) 31,013 ಕೋಟಿ ರೂ., ಎಸ್‌ಜಿಎಸ್‌ಟಿ (ರಾಜ್ಯ ಸಂಗ್ರಹ) 38,292 ಕೋಟಿ ರೂ., ಐಜಿಎಸ್‌ಟಿ 80,292 ಕೋಟಿ ರೂ. (ಸರಕುಗಳ ಆಮದಿನ ಮೇಲೆ 39,035 ಕೋಟಿ ಸಂಗ್ರಹಿಸಲಾಗಿದೆ) ಮತ್ತು ಸೆಸ್ 11,900 ಕೋಟಿ (ಸರಕುಗಳ ಆಮದಿನ ಮೇಲೆ ಸಂಗ್ರಹಿಸಲಾದ ರೂ 1,028 ಕೋಟಿ ಸೇರಿದಂತೆ) ಆಗಿದೆ.
ಜೂನ್‌ನಲ್ಲಿ, ದೇಶೀಯ ವಹಿವಾಟುಗಳಿಂದ (ಸೇವೆಗಳ ಆಮದು ಸೇರಿದಂತೆ) ಸಂಗ್ರಹಿಸಲ್ಪಟ್ಟ ಆದಾಯವು ಕಳೆದ ವರ್ಷದ ಇದೇ ತಿಂಗಳಿನಲ್ಲಿ ಈ ಮೂಲಗಳಿಂದ ಬಂದ ಆದಾಯಕ್ಕಿಂತ ಶೇಕಡಾ 18 ರಷ್ಟು ಹೆಚ್ಚಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ