Oil Rig: ಭಾರತದ ಎಂಇಐಎಲ್​ನಿಂದ ಹೈಡ್ರಾಲಿಕ್ ರಿಗ್ ತಯಾರಿಕೆ; ಕೇಂದ್ರ ಸಚಿವರ ಶ್ಲಾಘನೆ

|

Updated on: Feb 09, 2024 | 6:43 PM

Megha Engineering and Infrastructures Ltd: ಹೈದರಾಬಾದ್ ಮೂಲದ ಮೇಘಾ ಎಂಜಿನಿಯರಿಂಗ್ ಅಂಡ್ ಇನ್​ಫ್ರಾಸ್ಟ್ರಕ್ಚರ್ ಸಂಸ್ಥೆ ಆಟೊಮೇಟೆಡ್ ಹೈಡ್ರಾಲಿಕ್ ವರ್ಕೋವರ್ ರಿಗ್ ಅನ್ನು ತಯಾರಿಸಿದೆ. ಗೋವಾದಲ್ಲಿ ನಡೆದ ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಈ ರಿಗ್ ಅನ್ನು ಅನಾವರಣಗೊಳಿಸಿದ್ದಾರೆ. ಸರ್ಕಾರಿ ಸ್ವಾಮ್ಯದ ಒಎನ್​ಜಿಸಿ ಸಂಸ್ಥೆ ತನ್ನ ತೈಲ ಅನ್ವೇಷಣೆಗೆ ಈ 20 ರಿಗ್​ಗಳನ್ನು ಪಡೆಯಲಿದೆ.

Oil Rig: ಭಾರತದ ಎಂಇಐಎಲ್​ನಿಂದ ಹೈಡ್ರಾಲಿಕ್ ರಿಗ್ ತಯಾರಿಕೆ; ಕೇಂದ್ರ ಸಚಿವರ ಶ್ಲಾಘನೆ
ಹರ್ದೀಪ್ ಸಿಂಗ್ ಪುರಿ
Follow us on

ಗೋವಾ, ಫೆಬ್ರುವರಿ 9: ಭಾರತದ ಮೇಘಾ ಎಂಜಿನಿಯರಿಂಗ್ ಅಂಡ್ ಇನ್​ಫ್ರಾಸ್ಟ್ರಕ್ಚರ್ (MEIL) ಆಟೊಮೇಟೆಡ್ ಹೈಡ್ರಾಲಿಕ್ ವರ್ಕೋವರ್ ರಿಗ್ ತಯಾರಿಸಿದೆ. ಇಂಡಿಯಾ ಎನರ್ಜಿ ವೀಕ್ 2024 ಕಾರ್ಯಕ್ರಮದಲ್ಲಿ ಈ ಮೇಡ್ ಇನ್ ಇಂಡಿಯಾ ಎಚ್​ಎಚ್ 150 ಹೈಡ್ರಾಲಿಕ್ ವರ್ಕೋವರ್ ರಿಗ್ (HH 150 Hydraulic Workover Rig) ಅನ್ನು ಅನಾವರಣಗೊಳಿಸಲಾಗಿದೆ. ರಿಗ್ ಎಂಬುದು ತೈಲ ಹೊರತೆಗೆಯಲು ಬಳಸುವ ಒಂದು ಸಾಧನ. ಮೇಘಾ ಎಂಜಿನಿಯರಿಂಗ್ ತಯಾರಿಸಿರುವ ಈ ರಿಗ್ ಅಂತಾರಾಷ್ಟ್ರೀಯ ಗುಣಮಟ್ಟದ್ದಾಗಿದ್ದು, ಶೇ. 55ರಷ್ಟು ದೇಶೀಯವಾಗಿ ನಿರ್ಮಿತವಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

ಸಚಿವರು ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಈ 20 ಆಟೊಮೇಟೆಡ್ ರಿಗ್​ಗಳನ್ನು ಒಎನ್​ಜಿಸಿಗೆ ನೀಡಲಾಗುತ್ತಿದೆ ಎಂದೂ ಸಚಿವರು ಹೇಳಿದ್ದಾರೆ. ಭಾರತದ ತೈಲ ಸಂಕ್ಷೇಪಗಳಲ್ಲಿ ಒಎನ್​ಜಿಸಿ ಈ 20 ಆಯಿಲ್ ರಿಗ್​ಗಳನ್ನು ಬಳಸಿ ತೈಲ ಹೆಕ್ಕುವ ಕೆಲಸ ಮಾಡಲಿದೆ.

ಮೇಘಾ ಎಂಜಿನಿಯರಿಂಗ್ ಅಂಡ್ ಇನ್​ಫ್ರಾಸ್ಟ್ರಕ್ಚರ್ ಲಿ ಸಂಸ್ಥೆ ತೆಲಂಗಾಣ ಮೂಲದ್ದಾಗಿದ್ದು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಿಂದ ಹಿಡಿದು ಹೈಡ್ರೋ ಕಾರ್ಬನ್​ವರೆಗೆ ಬಹಳಷ್ಟು ಕ್ಷೇತ್ರಗಳಲ್ಲಿ ಕ್ರಿಯಾಶೀಲವಾಗಿದೆ.

ಇದನ್ನೂ ಓದಿ: ಬಿಟ್ಸಿಲಾವನ್ನು ಖರೀದಿಸಿದ ಪೇಟಿಎಂ ಇ-ಕಾಮರ್ಸ್; ಹೆಸರೂ ಕೂಡ ಪೈ ಪ್ಲಾಟ್​ಫಾರ್ಮ್ಸ್ ಎಂದು ಬದಲು

‘ಭಾರತದ ದೇಶೀಯ ತೈಲ ಮತ್ತು ಅನಿಲ ಶೋಧ ಕಾರ್ಯಕ್ಕೆ ವೇಗ ನೀಡಲು ಮತ್ತು ಆ ಮೂಲಕ ಸ್ವಾವಲಂಬನೆ ಭಾರತವನ್ನಾಗಿ ನಿರ್ಮಿಸಲು ಮತ್ತು ಇಂಧನ ಭದ್ರತೆ ಒದಗಿಸುವ ಗುರಿಗೆ ನಾವು ಬೆಂಬಲ ನೀಡುತ್ತೇವೆ. ಈ ನಿಟ್ಟಿನಲ್ಲಿ ನಮ್ಮ ದೇಶೀಯ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು, ಹಾಗೂ ವಿಶ್ವ ದರ್ಜೆ ಉಪಕರಣ ಸರಬರಾಜು ಮಾಡಲು ಬದ್ಧರಾಗಿದ್ದೇವೆ,’ ಎಂದು ಎಂಇಐಎಲ್​ನ ಎಂಡಿ ಪಿ.ವಿ. ಕೃಷ್ಣ ರೆಡ್ಡಿ ಹೇಳಿದ್ದಾರೆ.

ಎಲೆಕ್ಟ್ರಿಕ್ ಮೊಬಿಲಿಟಿ, ಸಾರಿಗೆ, ಸ್ವಚ್ಛ ಇಂಧನ, ಕಮ್ಯೂನಿಕೇಶನ್ಸ್ ಇನ್​ಫ್ರಾಸ್ಟ್ರಕ್ಚರ್ ಕ್ಷೇತ್ರಗಳಲ್ಲಿ ಎಂಇಐಎಲ್ ಇದೆ. ಡ್ರಿಲ್​ಮೆಕ್ ಐಎನ್​ಟಿ, ಡ್ರಿಲ್​ಮೆಕ್ ಎಸ್​ಪಿಎ, ಮೇಘಾ ಗ್ಯಾಸ್, ಒಲೆಕ್ಟ್ರ, ಎವೇಟ್ರಾನ್ಸ್, ಐಕಾಮ್ ಇವು ಎಂಇಐಎಲ್​ನ ಅಂಗ ಸಂಸ್ಥೆಗಳಾಗಿವೆ.

ಹೈದರಾಬಾದ್​ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಂಇಐಎಲ್ 20 ದೇಶಗಳಲ್ಲಿ ಘಟಕ ಹೊಂದಿದೆ. ರಕ್ಷಣಾ ಕ್ಷೇತ್ರ ಇತ್ಯಾದಿ ವಿವಿಧ ಕ್ಷೇತ್ರಗಳಿಗೆ ಇದರ ಉತ್ಪನ್ನಗಳು ಸರಬರಾಜು ಆಗುತ್ತವೆ.

ಇದನ್ನೂ ಓದಿ: ಏರ್​ಬಸ್​ನ ಎ220 ವಿಮಾನಗಳಿಗೆ ಬಾಗಿಲು ತಯಾರಿಕೆಯ ಗುತ್ತಿಗೆ ಪಡೆದ ಬೆಂಗಳೂರಿನ ಕಂಪನಿ

ಕೆಲ ತಿಂಗಳ ಹಿಂದೆ ಮೇಘಾ ಎಂಜಿನಿಯರಿಂಗ್ ಸಂಸ್ಥೆ ಮೊಂಗೋಲಿಯಾ ದೇಶದಲ್ಲಿ ಕಚ್ಛಾ ತೈಲದ ರಿಫೈನರಿ ಘಟಕ ಸ್ಥಾಪಿಸಲು 648 ಮಿಲಿಯನ್ ಡಾಲರ್ ಮೌಲ್ಯದ ಗುತ್ತಿಗೆ ಪಡೆದಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ