Airbus Contract: ಏರ್ಬಸ್ನ ಎ220 ವಿಮಾನಗಳಿಗೆ ಬಾಗಿಲು ತಯಾರಿಕೆಯ ಗುತ್ತಿಗೆ ಪಡೆದ ಬೆಂಗಳೂರಿನ ಕಂಪನಿ
Bengaluru's Dynamatic Gets Airbus Contract To Manufacture Doors: ಏರ್ಬಸ್ ತನ್ನ ಎ220 ವಿಮಾನಗಳಿಗೆ ಬಾಗಿಲು ತಯಾರಿಸುವ ಗುತ್ತಿಗೆಯನ್ನು ಡೈನಮ್ಯಾಟಿಕ್ ಟೆಕ್ನಾಲಜೀಸ್ಗೆ ಕೊಟ್ಟಿದೆ. ಬೋಯಿಂಗ್ ಮತ್ತು ಏರ್ಬಸ್ ವಿಶ್ವದ ಅತಿದೊಡ್ಡ ಏರ್ಕ್ರಾಫ್ಟ್ ತಯಾರಕ ಸಂಸ್ಥೆಗಳೆನಿಸಿವೆ. ಡೈನಮ್ಯಾಟಿಕ್ ಟೆಕ್ನಾಲಜೀಸ್ ಬೆಂಗಳೂರು ಮೂಲದ್ದಾಗಿದ್ದು, ಏರ್ಬಸ್ ಮತ್ತು ಬೋಯಿಂಗ್ನಿಂದ ಈ ಹಿಂದೆಯೂ ಗುತ್ತಿಗೆಗಳನ್ನು ಪಡೆದಿದೆ.
ನವದೆಹಲಿ, ಫೆಬ್ರುವರಿ 9: ವಿಶ್ವದ ಅತಿದೊಡ್ಡ ವಿಮಾನ ತಯಾರಕ ಸಂಸ್ಥೆ ಏರ್ಬಸ್ ತನ್ನ ಸಣ್ಣ ಗಾತ್ರದ ಎ220 ವಿಮಾನಗಳಿಗೆ ಬಾಗಿಲುಗಳನ್ನು (Airbus A220 Plane Doors Manufacturing) ತಯಾರಿಸುವ ಗುತ್ತಿಗೆಯನ್ನು ಬೆಂಗಳೂರು ಮೂಲದ ಡೈನಾಮ್ಯಾಟಿಕ್ ಟೆಕ್ನಾಲಜೀಸ್ಗೆ (Dynamatic Technologies) ನೀಡಿದೆ. ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಈ ಮಾಹಿತಿ ನೀಡಿದ್ದು, ಭಾರತದ ಏರೋಸ್ಪೇಸ್ ಉತ್ಪಾದನಾ ಕಂಪನಿಯೊಂದು ಪಡೆದ ಅತಿದೊಡ್ಡ ರಫ್ತು ಗುತ್ತಿಗೆಗಳಲ್ಲಿ ಒಂದಾಗಿದೆ ಎಂದು ಹೇಳಿದ್ದಾರೆ. ಆದರೆ ಎಷ್ಟು ಮೊತ್ತಕ್ಕೆ ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂಬುದು ಗೊತ್ತಾಗಿಲ್ಲ. ಏರ್ಬಸ್ನ ಎ220 ವಿಮಾನಗಳ ಎಲ್ಲಾ ಬಾಗಿಲುಗಳನ್ನೂ ಡೈನಾಮ್ಯಾಟಿಕ್ ಟೆಕ್ನಾಲಜೀಸ್ ಸಂಸ್ಥೆಯೇ ತಯಾರಿಸಿಕೊಡಲಿದೆ.
ಯೂರೋಪ್ನ ಏರ್ಬಸ್ ಸಂಸ್ಥೆ ಮೇಕ್ ಇನ್ ಇಂಡಿಯಾ ನೀತಿಗೆ ಬದ್ಧವಾಗಲು ಆಸಕ್ತಿ ತೋರಿದೆ. ಭಾರತದಿಂದ ಅಮದು ಮಾಡಿಕೊಳ್ಳಲಾಗುವ ತನ್ನ ಬಿಡಿಭಾಗಗಳು ಮತ್ತು ಸೇವೆಗಳ ಮೊತ್ತವನ್ನು ಮುಂದಿನ ಕೆಲ ವರ್ಷಗಳಲ್ಲಿ 1.5 ಬಿಲಿಯನ್ ಡಾಲರ್ಗೆ ಹೆಚ್ಚಿಸಲು ಯೋಜಿಸಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಡೈನಾಮ್ಯಾಟಿಕ್ ಟೆಕ್ನಾಲಜೀಸ್ಗೆ ವಿಮಾನ ಬಾಗಿಲುಗಳ ತಯಾರಿಕೆಯ ಗುತ್ತಿಗೆ ನೀಡಿರುವುದೂ ಒಂದು ಪ್ರಮುಖ ಹೆಜ್ಜೆಯಾಗಿದೆ.
ಡೈನಾಮ್ಯಾಟಿಕ್ ಟೆಕ್ನಾಲಜೀಸ್ ಸಂಸ್ಥೆ ಎ220 ವಿಮಾನಗಳಿಗೆ ಮೊದಲ ಬಾಗಿಲನ್ನು ಇನ್ನೊಂದು ವರ್ಷದಲ್ಲಿ, ಅಂದರೆ 2025ರ ಆರಂಭದಲ್ಲಿ ಸರಬರಾಜು ಮಾಡುವ ನಿರೀಕ್ಷೆ ಇದೆ. ಈ ಒಂದು ಸಣ್ಣ ಎ220 ವಿಮಾನದಲ್ಲಿ 100-150 ಸೀಟುಗಳಿರುತ್ತವೆ. ಸುಮಾರು ಎಂಟು ಡೋರ್ಗಳಿರುತ್ತವೆ.
ಇದನ್ನೂ ಓದಿ: ಸೂರ್ಯೋದಯ್ ಸ್ಕೀಮ್: ಮನೆಯಲ್ಲಿ ಸೌರ ವಿದ್ಯುತ್ ವ್ಯವಸ್ಥೆ ತರಲು ಎಷ್ಟು ವೆಚ್ಚವಾಗುತ್ತೆ? ಇಲ್ಲಿದೆ ಡೀಟೇಲ್ಸ್
ನೆದರ್ಲ್ಯಾಂಡ್ಸ್ನಲ್ಲಿ ಪ್ರಧಾನ ಕಚೇರಿ ಇರುವ, ಹಾಗೂ ಫ್ರಾನ್ಸ್ನಲ್ಲಿ ಪ್ರಮುಖ ಕಾರ್ಯಾಚರಣೆ ಕಚೇರಿ ಹೊಂದಿರುವ ಏರ್ಬಸ್ ವಿಶ್ವದ ಅತಿದೊಡ್ಡ ವಿಮಾನ ತಯಾರಕ ಸಂಸ್ಥೆ. ಅಮೆರಿಕದ ಬೋಯಿಂಗ್ ಕೂಡ ಏರ್ಬಸ್ನಷ್ಟೇ ಬೃಹತ್ತಾದುದು. ವಿಶ್ವದ ಏರೋಸ್ಪೇಸ್ ಮ್ಯಾನುಫ್ಯಾಕ್ಚರಿಂಗ್ನಲ್ಲಿ ಇರುವ ಪ್ರಮುಖ ಕಂಪನಿಗಳು ಇವೆರಡೆಯೇ.
ಡೈನಮ್ಯಾಟಿಕ್ ಹೊಸ ಸಂಸ್ಥೆಯಲ್ಲ…
ಬೆಂಗಳೂರಿನ ಡೈನಾಮ್ಯಾಟಿಕ್ ಟೆಕ್ನಾಲಜೀಸ್ ಈ ಕ್ಷೇತ್ರಕ್ಕೆ ಹೊಸಬನೇನಲ್ಲ. ಸಾಕಷ್ಟು ವರ್ಷಗಳಿಂದ ಏರೋಸ್ಪೇಸ್ ಕ್ಷೇತ್ರದ ಮ್ಯಾನುಫ್ಯಾಕ್ಚರಿಂಗ್ನಲ್ಲಿ ತೊಡಗಿಸಿಕೊಂಡಿದೆ. ಏರ್ಬಸ್ ಜೊತೆಗಿನ ನಂಟೂ ಅದಕ್ಕೆ ಹೊಸದಲ್ಲ. ಇವೇ ಏರ್ಬಸ್ ಎ220 ವಿಮಾನಗಳಿಗೆ ಕಾಕ್ಪಿಟ್ ಎಸ್ಕೇಪ್ ಹ್ಯಾಚ್ ಡೋರ್ ಅನ್ನೂ ಈ ಕಂಪನಿ ತಯಾರಿಸುತ್ತದೆ. ಅಷ್ಟೇ ಅಲ್ಲ, ಏರ್ಬಸ್ ಎ330 ಮತ್ತು ಎ320 ವಿಮಾನಗಳಿಗೆ ಫ್ಲ್ಯಾಪ್ ಟ್ರ್ಯಾಕ್ ಬೀಮ್ ತಯಾರಿಸಿಕೊಡುತ್ತದೆ.
ಇದನ್ನೂ ಓದಿ: ಟಿವಿ ಚಾನಲ್ನಲ್ಲಿ ಬರೋ ಬಿಸಿನೆಸ್ ತಜ್ಞರಿಗೆ ದಂಡ ಕಕ್ಕಿಸಿದ ಸೆಬಿ; ಒಳಗೊಳಗೆ ನಡೆದಿರುತ್ತೆ ಡೀಲಿಂಗ್, ಹುಷಾರ್
ಏರ್ಬಸ್ ಜೊತೆಗೆ ಮಾತ್ರವಲ್ಲ ಬೋಯಿಂಗ್ ಕಂಪನಿ ಜೊತೆಗೂ ಡೈನಮ್ಯಾಟಿಕ್ ಟೆಕ್ನಾಲಜೀಸ್ ಗುತ್ತಿಗೆ ಹೊಂದಿದೆ. ಬೋಯಿಂಗ್ನ ಕೆಲ ವಿಮಾನಗಳು ಹಾಗೂ ಹೆಲಿಕಾಪ್ಟರುಗಳಿಗೆ ಕೆಲ ಬಿಡಿಭಾಗಗಳನ್ನು ಬೆಂಗಳೂರಿನ ಈ ಸಂಸ್ಥೆ ತಯಾರಿಸಿಕೊಡುತ್ತದೆ.
ಹೈಡ್ರಾಲಿಕ್ ಪಂಪ್ನಿಂದ ಏರೋಸ್ಪೇಸ್ವರೆಗೆ…
ಉದಯಂತ್ ಮಲ್ಹೋತ್ರಾ ಸಿಇಒ ಆಗಿರುವ ಡೈನಾಮ್ಯಾಟಿಕ್ ಟೆಕ್ನಾಲಜೀಸ್ ಸ್ಥಾಪನೆಯಾಗಿದ್ದು 1973ರಲ್ಲಿ. ಹೈಡ್ರಾಲಿಕ್ ಪಂಪ್ಗಳನ್ನು ಆರಂಭದಲ್ಲಿ ತಯಾರಿಸುತ್ತಿದ್ದ ಇದು ತೊಂಬತ್ತರ ದಶಕದಲ್ಲಿ ಏರೋಸ್ಪೇಸ್ ಶ್ರೇಣಿಯ ಭಾಗಗಳನ್ನು ತಯಾರಿಸಲು ಆರಂಭಿಸಿತು. ಎಚ್ಎಎಲ್ ಜೊತೆಗೂ ಅದು ಸಹಭಾಗಿತ್ವದಲ್ಲಿ ಜೆಟ್ ತಯಾರಿಕೆಯಲ್ಲಿ ತೊಡಗಿಸಿಕೊಂಡಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ