
ನವದೆಹಲಿ, ಏಪ್ರಿಲ್ 15: ಶ್ರೀಮಂತರ ಶ್ರೀಮಂತಿಕೆ ಹೆಚ್ಚಿದಷ್ಟೂ, ಅವರು ತಮ್ಮ ಸಂಪತ್ತನ್ನು ಮುಚ್ಚಿಡುವ (Reported income) ಪ್ರವೃತ್ತಿಯೂ ಹೆಚ್ಚುತ್ತದೆ. ತೆರಿಗೆ ಬಾಧ್ಯತೆ ಕಡಿಮೆ ಮಾಡಲು ಶ್ರೀಮಂತರು ಈ ತಂತ್ರ ಅನುಸರಿಸುತ್ತಾರೆ. ಆರ್ಬಿಐನ ಮಾನಿಟರಿ ಪಾಲಿಸಿ ಕಮಿಟಿಯ ಆರು ಸದಸ್ಯರಲ್ಲಿ ಒಬ್ಬರಾದ ರಾಮ್ ಸಿಂಗ್ (Ram Singh) ಅವರು ಸಂಶೋಧನಾ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತದ ಶೇ. 5 ಅತಿ ಶ್ರೀಮಂತರು ತಮ್ಮ ಆದಾಯದಲ್ಲಿ ಶೇ. 4ರಷ್ಟನ್ನು ಮಾತ್ರವೇ ಬಹಿರಂಗಪಡಿಸುತ್ತಾರೆ ಎನ್ನುವ ಸಂಗತಿಯನ್ನು ತಿಳಿಸಿದ್ದಾರೆ. ಶ್ರೀಮಂತಿಕೆ ಹೆಚ್ಚಾದಂತೆ, ಸಂಪತ್ತು ಮರೆಮಾಚುವುದೂ ಹೆಚ್ಚುತ್ತದೆ.
ಶೇ. 0.1ರಷ್ಟು ಅತಿಶ್ರೀಮಂತರು ಬಹಿರಂಗಪಡಿಸುವ ಆದಾಯ ಶೇ. 2 ಮಾತ್ರವೇ. ಇನ್ನೂ ಹೆಚ್ಚಿನ ಶ್ರೀಮಂತರು ಶೇ. 0.5ರಷ್ಟು ಆಸ್ತಿಯನ್ನು ತೋರ್ಪಡಿಸುತ್ತಾರೆ. ಅಂದರೆ ಅವರ ಶೇ. 99.5ರಷ್ಟು ಸಂಪತ್ತು ಬೆಳಕಿಗೆ ಬರುವುದೇ ಇಲ್ಲ. ಅವರ ನೂರು ರುಪಾಯಿಯಲ್ಲಿ 50 ಪೈಸೆ ಮಾತ್ರವೇ ತೆರಿಗೆ ಲೆಕ್ಕಕ್ಕೆ ಹೋಗುತ್ತದೆ. ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿರುವ ಅಗ್ರ 10 ಭಾರತೀಯ ಕುಟುಂಬಗಳು 0.6 ಪ್ರತಿಶತದಷ್ಟು ಸಂಪತ್ತನ್ನು ಮಾತ್ರವೇ ತೋರಿಸಿದ್ದಾರೆ.
ಇದನ್ನೂ ಓದಿ: ಒಮ್ಮೆಯೂ ಸಾಲ ಮಾಡದವನಿಗೆ ಸಿಗಲ್ವಾ ಸಾಲ? ಇರಲ್ವಾ ಕ್ರೆಡಿಟ್ ಸ್ಕೋರ್? ಇಲ್ಲಿದೆ ಉತ್ತರ
ಇದಕ್ಕೆ ತದ್ವಿರುದ್ಧದ ವರ್ತನೆ ಕೆಳಗಿನ ಸ್ತರದ ಜನರದ್ದು. ಅತ್ಯಂತ ಕಡಿಮೆ ಆದಾಯ ಹೊಂದಿರುವ ಶೇ. 10ರಷ್ಟು ಕುಟುಂಬಗಳು ತಮ್ಮ ಆದಾಯಕ್ಕಿಂತ ಶೇ. 188ರಷ್ಟು ಹೆಚ್ಚಿನ ಸಂಪತ್ತನ್ನು ತೋರಿಸುತ್ತವೆ.
ಡೆಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್ನ ನಿರ್ದೇಶಕರಾಗಿರುವ ರಾಮ್ ಸಿಂಗ್ ಅವರು ಬರೆದಿರುವ ‘ಶ್ರೀಮಂತರು ತಮ್ಮ ಆದಾಯ ಮರೆಮಾಚುತ್ತಾರಾ?’ ಎನ್ನುವ ಈ ಪೇಪರ್ನಲ್ಲಿ ಇನ್ನೂ ಕೆಲ ಅಚ್ಚರಿ ಮತ್ತು ಆಘಾತಕಾರಿ ಸಂಗತಿಗಳಿವೆ. ಚುನಾವಣೆ ಸ್ಪರ್ಧೆಗೆ ನಾಮಪತ್ರದ ಜೊತೆ ಸಲ್ಲಿಸುವ ಅಫಿಡವಿಟ್ಗಳು, ಆದಾಯ ತೆರಿಗೆ ಇಲಾಖೆ ಪ್ರಕಟಿಸಿದ ಅಂಕಿ ಅಂಶಗಳು, ಫೋರ್ಬ್ಸ್ ಶ್ರೀಮಂತರ ಪಟ್ಟಿ, ಇವುಗಳ ಆಧಾರದ ಮೇಲೆ ರಾಮ್ ಸಿಂಗ್ ಅವರು ಈ ವರದಿಯನ್ನು ಬರೆದಿದ್ದಾರೆ.
ಶ್ರೀಮಂತರು ತೆರಿಗೆಯಿಂದ ತಪ್ಪಿಸಿಕೊಳ್ಳಲು ಆಸ್ತಿಪಾಸ್ತಿ ವಿವರನ್ನು ಸಹಜವಾಗಿಯೇ ಮುಚ್ಚಿಡಲು ಯತ್ನಿಸುತ್ತಾರೆ. ಹೀಗೆ ಮುಚ್ಚಿಟ್ಟರೂ ಭಾರತದಲ್ಲಿ ಆರ್ಥಿಕ ಅಸಮಾನತೆ ದಟ್ಟವಾಗಿ ಕಾಣುತ್ತದೆ. ದೇಶದ ಶೇ. 60ರಷ್ಟು ಸಂಪತ್ತು ಐದು ಪ್ರತಿಶತ ಜನರ ಕೈಯಲ್ಲಿದೆ. ಕೆಳಗಿನ ಶೇ. 50ರಷ್ಟು ಜನರ ಬಳಿ ಇರುವ ಆಸ್ತಿ ಶೇ. 3 ಮಾತ್ರವೇ ಎಂದು ಆಕ್ಸ್ಫ್ಯಾಮ್ ವರದಿ ಇತ್ತೀಚೆಗೆ ತಿಳಿಸಿತ್ತು.
ಇದನ್ನೂ ಓದಿ: ಮೆಹುಲ್ ಚೋಕ್ಸಿ, ನೀರವ್ ಮೋದಿ 13,000 ಕೋಟಿ ರೂ ಪಂಗನಾಮ ಹಾಕಿ ದೇಶ ಬಿಟ್ಟುಹೋದ ಕಥೆ
ಆದರೆ, ಶ್ರೀಮಂತರು ಮುಚ್ಚಿಟ್ಟ ಆಸ್ತಿಯನ್ನು ಪರಿಗಣಿಸಿದರೆ ಈ ಅಸಮಾನತೆಯ ಅಂತರ ಇನ್ನೂ ಹೆಚ್ಚಾಗಬಹುದು. ದೇಶದ ಶೇ. 80ಕ್ಕಿಂತಲೂ ಹೆಚ್ಚು ಆಸ್ತಿ ಕೇವಲ ಐದು ಪ್ರತಿಶತ ಜನರ ಬಳಿ ನೆಲಸಿದ್ದರೂ ಇರಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:10 pm, Tue, 15 April 25