
ನವದೆಹಲಿ, ಅಕ್ಟೋಬರ್ 25: ಜಾಗತಿಕ ಮಾರುಕಟ್ಟೆಯಲ್ಲಿ ಆರ್ಥಿಕ ಅಸ್ಥಿರತೆ ಹಾಗೂ ಸವಾಲುಗಳು ಎದುರಾಗುತ್ತಿದ್ದರೂ, ಭಾರತದ ಆರ್ಥಿಕತೆಯು ಅತ್ಯಂತ ಕ್ಷಮತೆ ಪ್ರದರ್ಶಿಸುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ತನ್ನ ಇತ್ತೀಚಿನ ಮಾಸಿಕ ಬುಲೆಟಿನ್‌ನಲ್ಲಿ ಅಭಿಪ್ರಾಯಪಟ್ಟಿದೆ. ದೇಶದ ದೃಢವಾದ ಸ್ಥೂಲ ಆರ್ಥಿಕ ಮೂಲಭೂತ ಅಂಶಗಳೇ (Macroeconomic Fundamentals) ಈ ಬೆಳವಣಿಗೆಗೆ ಪ್ರಮುಖ ಆಧಾರವಾಗಿವೆ ಎಂದು ಆರ್‌ಬಿಐ ತನ್ನ ಅಕ್ಟೋಬರ್ ತಿಂಗಳ ವರದಿಯಲ್ಲಿ ಸ್ಪಷ್ಟಪಡಿಸಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಣದುಬ್ಬರ, ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಮತ್ತು ಪೂರೈಕೆ ಸರಪಳಿಯಲ್ಲಿನ ವ್ಯತ್ಯಯಗಳಂತಹ ಸವಾಲುಗಳಿದ್ದರೂ, ಭಾರತೀಯ ಆರ್ಥಿಕತೆಯು ತನ್ನ ಆಂತರಿಕ ಬಲದ ಮೇಲೆ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ರಿಸರ್ವ್ ಬ್ಯಾಂಕ್ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಮನ್ ಕಿ ಬಾತ್‌ನಲ್ಲಿ ಸ್ಥಳೀಯ ಉತ್ಪನ್ನಗಳ ಬಳಕೆಗೆ ಪ್ರಧಾನಿ ಮೋದಿ ಕರೆ: ಕರ್ನಾಟಕದ ಕಲಬುರಗಿ ತೊಗರಿಬೇಳೆ, ಬಿಹಾರದ ಮಖಾನಾ ಉಲ್ಲೇಖ
ದೇಶದಲ್ಲಿ ಗ್ರಾಹಕರ ಬೇಡಿಕೆ ಸ್ಥಿರವಾಗಿ ಪಾಲನೆ ಆಗಿರುವುದು ಹಾಗೂ ಖಾಸಗಿ ಮತ್ತು ಸಾರ್ವಜನಿಕ ಹೂಡಿಕೆಗಳು ನಿರಂತರವಾಗಿ ಹೆಚ್ಚುತ್ತಿರುವುದು ಆರ್ಥಿಕ ಬೆಳವಣಿಗೆಗೆ ಮುಖ್ಯ ಕಾರಣವಾಗಿದೆ ಎಂದು ಬುಲೆಟಿನ್‌ನಲ್ಲಿ ತಿಳಿಸಿದೆ.
ರೀಟೇಲ್ ಹಣದುಬ್ಬರವು ನಿಯಂತ್ರಣಕ್ಕೆ ಬರುತ್ತಿರುವುದು ಮತ್ತು ಬ್ಯಾಂಕಿಂಗ್ ವಲಯದ ಬಲವಾದ ಬ್ಯಾಲೆನ್ಸ್ ಶೀಟ್ ಆರ್ಥಿಕತೆಯ ಮೇಲಿನ ವಿಶ್ವಾಸವನ್ನು ಹೆಚ್ಚಿಸಿದೆ. ವಿದೇಶಿ ವಿನಿಮಯ ಮೀಸಲು ನಿಧಿ (Forex Reserves) ಕೂಡ ಉತ್ತಮ ಸ್ಥಿತಿಯಲ್ಲಿದ್ದು, ಬಾಹ್ಯ ಆಘಾತಗಳನ್ನು ತಡೆಯಲು ಇದು ದೇಶಕ್ಕೆ ನೆರವಾಗಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಜಿಯೋ ಐಪಿಒಗೆ ನಿರೀಕ್ಷೆಮೀರಿದ ಸ್ಪಂದನೆ; ವಿಶ್ವದಾಖಲೆಗಳು, ಮೈಲಿಗಲ್ಲುಗಳು
ಕೃಷಿ ಕ್ಷೇತ್ರದ ಉತ್ತಮ ಉತ್ಪಾದನೆ, ಸೇವಾ ವಲಯದ ಬಲವಾದ ಪ್ರದರ್ಶನ ಹಾಗೂ ಉತ್ಪಾದನಾ ವಲಯದಲ್ಲಿನ ಚೇತರಿಕೆಯು ಮುಂಬರುವ ತಿಂಗಳುಗಳಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ವೇಗವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಆರ್‌ಬಿಐ ತನ್ನ ಮಾಸಿಕ ಬುಲೆಟಿನ್‌ನಲ್ಲಿ ವಿಶ್ವಾಸ ವ್ಯಕ್ತಪಡಿಸಿದೆ.
ಈ ವರ್ಷ ಭಾರತದ ಜಿಡಿಪಿ ಶೇ. 7.1ರಷ್ಟು ಹೆಚ್ಚಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ನ ಎಂಪಿಸಿ ಸಮಿತಿ ತನ್ನ ಇತ್ತೀಚಿನ ಸಭೆಯಲ್ಲಿ ಅಂದಾಜಿಸಿದೆ. ಐಎಂಎಫ್, ವಿಶ್ವಬ್ಯಾಂಕ್ ಸೇರಿದಂತೆ ಹೆಚ್ಚಿನ ಅಂತರರಾಷ್ಟ್ರೀಯ ಹಣಕಾಸು ಏಜೆನ್ಸಿಗಳು ಭಾರತದ ಆರ್ಥಿಕ ಬೆಳವಣಿಗೆಯ ದರ ಕನಿಷ್ಠ ಶೇ. 7ರಷ್ಟು ಇರುತ್ತದೆಂದು ಹೇಳಿವೆ. ಕಳೆದ ಕೆಲ ವರ್ಷಗಳಿಂದಲೂ ವಿಶ್ವದ ಪ್ರಮುಖ ಆರ್ಥಿಕತೆಗಳ ಪೈಕಿ ಭಾರತವೇ ಅತಿವೇಗವಾಗಿ ವೃದ್ಧಿಕಾಣುತ್ತಿರುವುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ