AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಯೋ ಐಪಿಒಗೆ ನಿರೀಕ್ಷೆಮೀರಿದ ಸ್ಪಂದನೆ; ವಿಶ್ವದಾಖಲೆಗಳು, ಮೈಲಿಗಲ್ಲುಗಳು

ರಿಲಯನ್ಸ್ ಇಂಡಸ್ಟ್ರೀಸ್ಗೆ ಸೇರಿದ ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒ ಮುಕ್ತಾಯಗೊಂಡಿದೆ. ಭಾರತದ ಅತಿದೊಡ್ಡ ಐಪಿಒ ಎನ್ನುವ ದಾಖಲೆ ಇದರದ್ದಾಗಿದೆ. ಅತಿಹೆಚ್ಚು ಅಪ್ಲಿಕೇಶನ್ಸ್ ಪಡೆದ ಐಪಿಒ ಎನ್ನುವ ವಿಶ್ವ ದಾಖಲೆಯೂ ಇದರದ್ದಾಗಿದೆ. 30,213 ಕೋಟಿ ರೂ ಹೂಡಿಕೆಗೆ ಸಲ್ಲಿಕೆಯಾದ ಬಿಡ್​ಗಳ ಒಟ್ಟು ಮೌಲ್ಯ 7 ಲಕ್ಷ ಕೋಟಿ ರೂ ದಾಟಿದೆ. ಇಂಥ ಇನ್ನೂ ಹಲವು ದಾಖಲೆಗಳು, ಮೈಲಿಗಲ್ಲುಗಳನ್ನು ಜಿಯೋ ಸಾಧಿಸಿದೆ.

ಜಿಯೋ ಐಪಿಒಗೆ ನಿರೀಕ್ಷೆಮೀರಿದ ಸ್ಪಂದನೆ; ವಿಶ್ವದಾಖಲೆಗಳು, ಮೈಲಿಗಲ್ಲುಗಳು
ಜಿಯೋImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 23, 2026 | 7:46 PM

Share

ಮುಂಬೈ, ಅಕ್ಟೋಬರ್ 23: ಜಿಯೋ ಪ್ಲಾಟ್​ಫಾರ್ಮ್ಸ್ ಸಂಸ್ಥೆಯ ಆರಂಭಿಕ ಸಾರ್ವಜನಿಕ ಕೊಡುಗೆ ಅಥವಾ ಐಪಿಒ ಅದ್ವಿತೀಯ ಎನಿಸುವಂತಹ ಸ್ಪಂದನೆ ಪಡೆದಿದೆ. ಇದರ ಐಪಿಒದಲ್ಲಿ ಷೇರುಗಳು ಬಿಸಿದೋಸೆಯಂತೆ ವಿತರಣೆಯಾಗಿವೆ. ಆಂಕರ್ ಇನ್ವೆಸ್ಟರ್​ಗಳು, ಸಾಂಸ್ಥಿಕ ಹೂಡಿಕೆದಾರರು, ಎನ್​ಆರ್​ಐಗಳು, ಶ್ರೀಮಂತರು, ರೀಟೇಲ್ ಹೂಡಿಕೆದಾರರು, ಉದ್ಯೋಗಿಗಳು ಹೀಗೆ ಎಲ್ಲಾ ಕೆಟಗರಿಯಲ್ಲೂ ಬಹಳ ಅಧಿಕ ಜನರು ಷೇರುಗಳನ್ನು ಪಡೆಯಲು ಯತ್ನಿಸಿದ್ದಾರೆ.

ಅತಿಹೆಚ್ಚು ಅಪ್ಲಿಕೇಶನ್ಸ್, ಅತಿವೇಗದ ಸಬ್​ಸಕ್​ರಿಪ್ಷನ್, ಅತಿಹೆಚ್ಚು ಬಂಡವಾಳ ಇತ್ಯಾದಿ ಹಲವು ದಾಖಲೆಗಳು, ಮೈಲಿಗಲ್ಲುಗಳನ್ನು ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒ ಮುಟ್ಟಿದೆ. ಈ ದಾಖಲೆಗಳು ಯಾವುವು ಎನ್ನುವ ವಿವರ ಇಲ್ಲಿದೆ:

ಇದನ್ನೂ ಓದಿ: ಎನ್​ಎಸ್​ಇ ಸೋಷಿಯಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಎನ್​ಎಸ್​ಡಿಸಿ ಪದಾರ್ಪಣೆ; ಹೊಸ ಕೌಶಲ್ಯಾಭಿವೃದ್ಧಿ ಯೋಜನೆ; ನಬಾರ್ಡ್​ನಿಂದ 4 ಕೋಟಿ ರೂ

ಜಿಯೋ ಐಪಿಒಗೆ ದಾಖಲೆ ಸಬ್​ಸಕ್​ರಿಪ್ಷನ್

30,213 ಕೋಟಿ ರೂ ಬಂಡವಾಳ ಸಂಗ್ರಹಣೆಯ ಗುರಿ ಇರುವ ಜಿಯೋ ಐಪಿಒನಲ್ಲಿ ಬಿಡ್ ಮಾಡಲಾಗಿರುವ ಷೇರುಗಳ ಒಟ್ಟು ಮೊತ್ತ 7 ಲಕ್ಷ ಕೋಟಿ ರೂ. ಆಂಕರ್ ಬುಕ್​ನಿಂದಲೇ 8,110 ಕೋಟಿ ರೂಗೆ 2.5 ಕೋಟಿ ರೂ ಬಿಡ್ ಸಲ್ಲಿಕೆಯಾಗಿತ್ತು. ರೀಟೇಲ್ ಕೆಟಗರಿಯಲ್ಲಿ ಬರೋಬ್ಬರಿ 4.5 ಲಕ್ಷ ಕೋಟಿ ರೂ ಬಿಡ್ಡಿಂಗ್ ಆಗಿದೆ. ಇದು ಭಾರತದ ಷೇರು ಮಾರುಕಟ್ಟೆ ಮಟ್ಟಿಗೆ ಹೊಸ ದಾಖಲೆಯಾಗಿದೆ.

ಒಂದು ಕೋಟಿ ಅರ್ಜಿಗಳ ವಿಶ್ವದಾಖಲೆ

ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒದಲ್ಲಿ ಹೂಡಿಕೆ ಮಾಡಲು ಸಲ್ಲಿಸಲಾದ ವೈಯಕ್ತಿಕ ಹೂಡಿಕೆದಾರರ ಅರ್ಜಿಗಳ ಸಂಖ್ಯೆ 1 ಕೋಟಿ ದಾಟಿದೆ. ವಿಶ್ವದಲ್ಲಿ ಈ ಮೈಲಿಗಲ್ಲು ಮುಟ್ಟಿದ ಮೊದಲ ಐಪಿಒ ಎನಿಸಿದೆ. ಭಾರತದ್ದೇ ವಾರೀ ಎನರ್ಜೀಸ್ ಕಳೆದ ವರ್ಷದ ಐಪಿಒದಲ್ಲಿ 97.3 ಲಕ್ಷ ಅರ್ಜಿಗಳನ್ನು ಪಡೆದು ಸ್ಥಾಪಿಸಿದ್ದ ದಾಖಲೆಯನ್ನು ಜಿಯೋ ಮುರಿದಿದೆ.

ಭಾರತದ ಅತಿದೊಡ್ಡ ಐಪಿಒ

ಜಿಯೋ ಪ್ಲಾಟ್​ಫಾರ್ಮ್ಸ್ ಐಪಿಒ 30,213 ಕೋಟಿ ರೂ ಗಾತ್ರದ್ದಾಗಿದೆ. ಇದು ಭಾರತದ ಕಾರ್ಪೊರೇಟ್ ಇತಿಹಾಸದಲ್ಲೇ ಅತಿದೊಡ್ಡ ಐಪಿಒ ಎನಿಸಿದೆ. ಹ್ಯೂಂಡಾಯ್ ಮೋಟಾರ್ ಇಂಡಿಯಾ ಸಂಸ್ಥೆ 27,870 ಕೋಟಿ ರೂ ಮೊತ್ತದ ಐಪಿಒ ಬಿಡುಗಡೆ ಮಾಡಿತ್ತು. ಆ ದಾಖಲೆಯನ್ನು ಜಿಯೋ ಹಿಂದಿಕ್ಕಿದೆ.

ಅತಿವೇಗದಲ್ಲಿ ಐಪಿಒ ಸಬ್​ಸ್ಕ್ರಿಪ್ಷನ್ ಪಡೆದ ದಾಖಲೆ ಜಿಯೋ

ಜಿಯೋ ಐಪಿಒ ಅಕ್ಟೋಬರ್ 21ರಿಂದ 23ರವರೆಗೆ ಇತ್ತು. ಅಕ್ಟೋಬರ್ 21ರಂದು ಮಾರುಕಟ್ಟೆ ಆರಂಭಗೊಂಡ ಮೊದಲ 100 ನಿಮಿಷದೊಳಗೆ ಅದರ ಸಬ್​ಸ್ಕ್ರಿಪ್ಷನ್ ಪೂರ್ಣಗೊಂಡಿತ್ತು. ಅದು ಆಫರ್ ಮಾಡಿದ್ದ ಎಲ್ಲಾ 27 ಕೋಟಿ ಷೇರುಗಳಿಗೂ ಬಿಡ್ ಸಲ್ಲಿಕೆಯಾಗಿತ್ತು. ಇದು ಆಗಲು 2 ಗಂಟೆ ಕೂಡ ಬೇಕಾಗಲಿಲ್ಲ.

ದೊಡ್ಡ ಮೌಲ್ಯದೊಂದಿಗೆ ಲಿಸ್ಟ್ ಆಗಲಿರುವ ಜಿಯೋ

ಜಿಯೋ ಪ್ಲಾಟ್​ಫಾರ್ಮ್ಸ್​ನ ಐಪಿಒ ಷೇರುಬೆಲೆ 1,119 ರೂ ಇದೆ. ಅಕ್ಟೋಬರ್ 28ರಂದು ಇದು ಎನ್​ಎಸ್​ಇ ಮತ್ತು ಬಿಎಸ್​ಇ ಎಕ್ಸ್​ಚೇಂಜ್​ಗಳಲ್ಲಿ ಲಿಸ್ಟ್ ಆಗಲಿದೆ. ಆಗ ಅದರ ಮಾರುಕಟ್ಟೆ ಸಂಪತ್ತು ಅಥವಾ ಮಾರ್ಕೆಟ್ ಕ್ಯಾಪಿಟಲ್ 10 ಲಕ್ಷ ಕೋಟಿ ರೂ ದಾಟುವ ನಿರೀಕ್ಷೆ ಇದೆ. ಭಾರತದಲ್ಲಿ ಹೊಸದಾಗಿ ಲಿಸ್ಟ್ ಆಗುವ ಕಂಪನಿಯೊಂದು ಇಷ್ಟೊಂದು ಮೌಲ್ಯ ಹೊಂದಿರುವುದು ಇದೇ ಮೊದಲು. ಲಿಸ್ಟಿಂಗ್ ಆದ ದಿನವೇ ಜಿಯೊ ಪ್ಲಾಟ್​ಫಾರ್ಮ್ಸ್ ಭಾರತದ ಅತಿಹೆಚ್ಚು ಮಾರುಕಟ್ಟೆ ಸಂಪತ್ತಿರುವ ಕಂಪನಿಗಳ ಸಾಲಿಗೆ ಸೇರಲಿದೆ.

ಇದನ್ನೂ ಓದಿ: ಭಾರತೀಯ ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚುತ್ತಿದೆ ಸ್ಟಾರ್ಟ್‌ಅಪ್ ಕ್ರೇಜ್: ಸರ್ಕಾರಿ ಉದ್ಯೋಗಕ್ಕಿಂತ ಸ್ವಂತ ಉದ್ಯಮಕ್ಕೇ ಜೈ

ಜಿಯೋ ಪ್ಲಾಟ್​ಫಾರ್ಮ್ಸ್ ಷೇರುಗಳ ಜಿಎಂಪಿ ಶೇ. 21ರಷ್ಟಿದೆ. ಅಂದರೆ, ಕಾಳಸಂತೆಯಲ್ಲಿ ಇದರ ಷೇರುಗಳಿಗೆ ಇರುವ ಡಿಮ್ಯಾಂಡ್ ಎಷ್ಟು ದೊಡ್ಡದಿದೆ ಎಂಬುದನ್ನು ಇದು ತೋರಿಸುತ್ತದೆ. ಅಂದರೆ, ಇದು ಲಿಸ್ಟ್ ಆಗುವಾಗ ಶೇ. 20ಕ್ಕಿಂತ ಹೆಚ್ಚಿನ ಷೇರುಬೆಲೆ ಹೊಂದಿರುವ ಸಾಧ್ಯತೆ ಇದೆ.

ಇನ್ನು, ಜಿಯೋ ಐಪಿಒಗೆ ಬಿಡ್ ಸಲ್ಲಿಸಿದವರಿಗೆ ಷೇರುಗಳನ್ನು ಅಲಾಟ್ ಮಾಡುವ ದಿನಾಂಕ ಅಕ್ಟೋಬರ್ 26 ಇದೆ. ಹೆಚ್ಚಿನ ಮಂದಿಗೆ ಇದರ ಅಲಾಟ್ಮೆಂಟ್ ಸಿಗುವ ಸಾಧ್ಯತೆ ಕಡಿಮೆ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More