UPI Payment: ಭಾರತದ ಯುಪಿಐ ಪೇಮೆಂಟ್ ವ್ಯವಸ್ಥೆ ಅಳವಡಿಕೆಗೆ ಹಲವು ದೇಶಗಳ ಒಲವು

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 10, 2023 | 2:23 PM

ಯುಪಿಐ ಪೇಮೆಂಟ್ ವ್ಯವಸ್ಥೆ ಅಳವಡಿಕೆಗೆ ಹಲವು ದೇಶಗಳಿಂದ ಆಸಕ್ತಿ ವ್ಯಕ್ತವಾಗಿದೆ. ಒಪ್ಪಂದವಾದರೆ, ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ನಿಂದ ತಾಂತ್ರಿಕ ತಿಳಿವು, ತಂತ್ರಾಂಶ ಇತ್ಯಾದಿ ನೆರವು ಸಿಗುತ್ತದೆ. ದುಬಾರಿ ಎನಿಸುವ ಈ ಯೋಜನೆಯನ್ನು ಸಣ್ಣ ದೇಶಗಳಿಗೆ ಅಳವಡಿಸುವುದು ಒಂದು ಸವಾಲು.

UPI Payment: ಭಾರತದ ಯುಪಿಐ ಪೇಮೆಂಟ್ ವ್ಯವಸ್ಥೆ ಅಳವಡಿಕೆಗೆ ಹಲವು ದೇಶಗಳ ಒಲವು
ಸಾಂದರ್ಭಿಕ ಚಿತ್ರ
Image Credit source: google image
Follow us on

ಕೋಲ್ಕತಾ: ಭಾರತದಲ್ಲಿ ಯುಪಿಐ ತಂತ್ರಜ್ಞಾನ ಆಧಾರಿತ ಪೇಮೆಂಟ್ ವ್ಯವಸ್ಥೆ (UPI- based Payment System) ಸಂಪೂರ್ಣ ಯಶಸ್ವಿಯಾಗಿರುವುದು ಹೌದು. ಭಾರತವೇ ಸ್ವಂತವಾಗಿ ರೂಪಿಸಿರುವ ಈ ಯುಪಿಐ ವ್ಯವಸ್ಥೆ ಇಡೀ ದೇಶದ ಗಮನ ಸೆಳೆದಿದೆ. ಇದನ್ನು ತಮ್ಮಲ್ಲೂ ಅಳವಡಿಸಿಕೊಳ್ಳಲು ಹಲವು ದೇಶಗಳು ಆಸಕ್ತಿ ವ್ಯಕ್ತಪಡಿಸಿವೆ ಎನ್ನಲಾಗಿದೆ. ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್ (UPI- Unified Payment Interface) ಅನ್ನು ರೂಪಿಸಿರುವ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (NPCI) ಸಿಇಒ ಮತ್ತು ಎಂಡಿ ದಿಲೀಪ್ ಆಸ್ಬೇ ಈ ಸಂಗತಿಯನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ. ಇಲ್ಲಿ ನಡೆಯುತ್ತಿರುವ ಜಿ20 ಸಭೆಯ (G20 Meeting ಬದಿಯಲ್ಲಿ ಮಾತನಾಡಿದ ದಿಲೀಪ್ ಆಸ್ಬೆ, ಯುಪಿಐ ವ್ಯವಸ್ಥೆ ಅಳವಡಿಸಿಕೊಳ್ಳಲು ಬಯಸುವ ದೇಶಗಳಿಗೆ ಭಾರತ ತಂತ್ರಾಂಶ ಮತ್ತಿತರ ತಂತ್ರಜ್ಞಾನ ನೆರವು ಒದಗಿಸುತ್ತದೆ ಎಂದೂ ಹೇಳಿದ್ದಾರೆ.

“ಹಲವು ದೇಶಗಳಿಂದ ಆಸಕ್ತಿ ವ್ಯಕ್ತವಾಗಿದೆ. ವಿವರವಾಗಿ ಪರಿಶೀಲನೆ ನಡೆಸುತ್ತಿದ್ದೇವೆ. ನಾವು ತಾಂತ್ರಿಕ ತಿಳಿವು, ತಂತ್ರಾಂಶ ಇತ್ಯಾದಿಯನ್ನು ಒದಗಿಸುತ್ತೇವೆ. ಒಪ್ಪಂದವಾಗಲು ಇನ್ನೂ 12 ತಿಂಗಳು ಆಗಬಹುದು. ಕೋಟ್ಯಂತರ ಮೊತ್ತ ವ್ಯಯವಾಗುವ ಯೋಜನೆಯನ್ನು ಸಣ್ಣ ದೇಶಕ್ಕೆ ಅನುಷ್ಠಾನಕ್ಕೆ ತರುವುದು ನಮ್ಮ ಧ್ಯೇಯವಾಗಿದೆ” ಎಂದು ಯುಪಿಐ ರೂವಾರಿಗಳು ತಿಳಿಸಿದ್ದಾರೆ.

“ಚಿಕ್ಕ ದೇಶಗಳಲ್ಲಿ ಒಂದು ಡಿಜಿಟಲ್ ಪೇಮೆಂಟ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿ ಜಾರಿಗೆ ತರಲು ಆಗುವ ವೆಚ್ಚ ದೊಡ್ಡ ತೊಡಕಾಗುತ್ತದೆ. ಇಂಥ ಸಂದರ್ಭದಲ್ಲಿ ಎನ್ಪಿಸಿಐ ನೆರವಿಗೆ ಬರುತ್ತದೆ. ಪ್ರತೀ ಹಂತದಲ್ಲೂ ತರಬೇತಿ ಇತ್ಯಾದಿ ಸಹಾಯ ಒದಗಿಸುತ್ತದೆ” ಎಂದು ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಸಂಸ್ಥೆಯ ಮುಖ್ಯಸ್ಥರು ಸ್ಪಷ್ಟಪಡಿಸಿದ್ದಾರೆ.

ಜಿ20 ಸಭೆ ಕೋಲ್ಕತಾದಲ್ಲಿ ನಿನ್ನೆ ಜನವರಿ 9ರಂದು ಆರಂಭಗೊಂಡಿದೆ. ಮೂರು ದಿನಗಳ ಕಾಲ ಇದು ನಡೆಯಲಿದೆ. ಹಣಕಾಸು ಒಳಗೊಳ್ಳುವಿಕೆಗೆ ಜಾಗತಿಕ ಸಹಭಾಗಿತ್ವ ಹೇಗೆ ಸಾಧಿಸುವುದು ಎಂಬ ಬಗ್ಗೆ ಜಿ20 ದೇಶಗಳ ಹಿರಿಯ ಅಧಿಕಾರಿಗಳ ಮಧ್ಯೆ ಈ ಸಭೆ ನಡೆಯುತ್ತಿದೆ. ಅಂತರದೇಶೀಯ ಹಣ ವಹಿವಾಟು ವೆಚ್ಚವನ್ನು ಹೇಗೆ ಕಡಿಮೆಗೊಳಿಸಬೇಕೆಂದು ಸಭೆಯಲ್ಲಿ ಚರ್ಚಿಸಲಾಗುತ್ತಿದೆ.

ಇದನ್ನು ಓದಿ:UPI Payments: ಯುಪಿಐ ಪಾವತಿ ಗಣನೀಯ ಹೆಚ್ಚಳ, ದೇಶದ ಜನರಿಗೆ ಶಹಬ್ಬಾಸ್ ಎಂದ ಪ್ರಧಾನಿ ಮೋದಿ

ಸಿಂಗಾಪುರ, ಭಾರತ ಮಧ್ಯೆ ಸಮನ್ವಯತೆ

ನಿನ್ನೆ ಸಿಂಗಾಪುರದ ಹಣಕಾಸು ಪ್ರಾಧಿಕಾರದ ಹಿರಿಯ ಅಧಿಕಾರಿಯೊಬ್ಬರು ಮಾತನಾಡುತ್ತಾ ಸಿಂಗಾಪುರದ ಪೇ ನೌ ಮತ್ತು ಭಾರತದ ಯುಪಿಐ ನಡುವೆ ಸಮನ್ವಯತೆ ತರುವ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಸುಳಿವು ನೀಡಿದ್ದಾರೆ.

ಪೇನೌ ಎಂಬುದು ಸಿಂಗಾಪುರದ ಪೇಮೆಂಟ್ ಪ್ಲಾಟ್ ಫಾರ್ಮ್ ಆಗಿದೆ. ಭಾರತದ ಯುಪಿಐ ಮತ್ತು ಸಿಂಗಾಪುರದ ಪೇನೌ ಎರಡೂ ಒಟ್ಟಿಗೆ ಸೇರಿದರೆ ಈ ಎರಡು ದೇಶಗಳ ನಡುವಿನ ಹಣ ವಹಿವಾಟು ವೆಚ್ಚವನ್ನು (ರೆಮಿಟೆನ್ಸ್ ಕಾಸ್ಟ್) ಶೇ. 10ರಷ್ಟು ತಗ್ಗಿಸಬಹುದು ಎಂಬ ನಿರೀಕ್ಷೆ ಇದೆ. ಸಿಂಗಾಪುರದ ರೀತಿ ದುಬೈನಲ್ಲೂ ಇಂಥದ್ದೇ ರೀತಿಯ ಸಮನ್ವಯತೆಯ ವ್ಯವಸ್ಥೆ ಬಗ್ಗೆ ಎನ್ಪಿಸಿಐನಿಂದ ಪರಿಶೀಲನೆ ನಡೆಸಲಾಗುತ್ತಿದೆ.

ರೆಮಿಟೆನ್ಸ್ ವೆಚ್ಚ ಎಷ್ಟು?

ಒಂದು ದೇಶದಿಂದ ಜನರು ಮತ್ತೊಂದು ದೇಶದ ಜನರಿಗೆ ಹಣ ರವಾನೆ ಮಾಡುವುದು ರೆಮಿಟೆನ್ಸ್. ಅಂತರದೇಶೀಯ ಹಣಕಾಸು ವಹಿವಾಟು ಆದ್ದರಿಂದ ಬ್ಯಾಂಕ್ ವೆಚ್ಚ ಇತ್ಯಾದಿ ತಗುಲುತ್ತದೆ. ಹೊರಗಿನ ದೇಶಗಳಲ್ಲಿ ಕೆಲಸದಲ್ಲಿರುವ ಭಾರತೀಯರು ಹಣ ಕಳುಹಿಸಬೇಕೆಂದರೆ ರಿಮಿಟೆನ್ಸ್ ವೆಚ್ಚ ಸುಮಾರು ಶೇ. 6ರ ಆಸುಪಾಸು ಇದೆ. 2027ರಷ್ಟರಲ್ಲಿ ಈ ವೆಚ್ಚವನ್ನು ಶೇ. 3ಕ್ಕೆ ಇಳಿಸುವುದು ಗುರಿಯಾಗಿದೆ.

ಏನಿದು ಯುಪಿಐ?

ಯುಪಿಐ ಎಂಬುದು ಒಂದು ಬ್ಯಾಂಕ್ ಖಾತೆಯಿಂದ ಇನ್ನೊಂದು ಬ್ಯಾಂಕ್ ಖಾತೆಗೆ ಹಣ ರವಾನೆ ಮಾಡುವ ಒಂದು ರಿಯಲ್ ಟೈಮ್ ಪೇಮೆಂಟ್ ಸಿಸ್ಟಂ ಆಗಿದೆ. ಓಪನ್ ಸೋರ್ಸ್ ಎಪಿಐ ತಂತ್ರಾಂಶದಿಂದ ನಿರ್ವಹಿತವಾಗುವ ವ್ಯವಸ್ಥೆ ಇದಾಗಿದೆ. ಸರ್ಕಾರಿ ಸ್ವಾಮ್ಯದ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ ಆಫ್ ಇಂಡಿಯಾ ಸಂಸ್ಥೆ ಈ ಯುಪಿಐ ಸಿಸ್ಟಂನ ಹರಿಕಾರ. 2016ರಲ್ಲಿ ಮೊದಲ ಬಾರಿಗೆ ಇದು ರೂಪಿತವಾಯಿತು. ಆರ್​ಬಿಐನ ಭೀಮ್ ಆಪ್ ಮೊದಲ ಬಾರಿಗೆ ಯುಪಿಐ ಆಧಾರಿತ ಪೇಮೆಂಟ್ ಪ್ಲಾಟ್ ಫಾರ್ಮ್ ಒದಗಿಸಿತು. ಬಳಿಕ ಪೇಟಿಎಂ, ಫೋನ್ ಪೇ ಕೂಡ ಯುಪಿಐ ಅಳವಡಿಸಿಕೊಂಡವು. ಅದಾದ ಬಳಿಕ ಅಮೇಜಾನ್ ಪೇ, ವಾಟ್ಸಾಪ್ ಇತ್ಯಾದಿ ಹಲವು ಪ್ಲಾಟ್ ಫಾರ್ಮ್ ಗಳಲ್ಲಿ ಯುಪಿಐ ಆಧಾರಿತ ಪೇಮೆಂಟ್ ಸೌಲಭ್ಯ ಅಳವಡಿಕೆಯಾಗಿವೆ.

ಭಾರತದಲ್ಲಿ ಒಂದು ದಿನದಲ್ಲಿ ಯುಪಿಐ ಮೂಲಕ ನಡೆಯುತ್ತಿರುವ ಹಣ ವಹಿವಾಟು ಸಂಖ್ಯೆ ಬರೋಬ್ಬರಿ 28 ಕೋಟಿ. ಮುಂದಿನ ಮೂರು ವರ್ಷಗಳಲ್ಲಿ ಒಂದು ದಿನದಲ್ಲಿ ನೂರು ಕೋಟಿ ವಹಿವಾಟು ನಡೆಸಲು ಸಾಧ್ಯವಾಗುವಂತಹ ಮಟ್ಟಕ್ಕೆ ಯುಪಿಐ ಅನ್ನು ಬಲಪಡಿಸುವ ಗುರಿ ಇಟ್ಟುಕೊಂಡಿದೆ ಎನ್ಪಿಸಿಐ.

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:23 pm, Tue, 10 January 23