AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget 2023: ಸ್ವಂತ ಸೂರಿನ ಆಸೆಗೆ ನೀರೆರೆಯುತ್ತಾ ಈ ಬಾರಿಯ ಬಜೆಟ್?

ಭಾರತದಲ್ಲಿ ಬಡ್ಡಿ ದರ ಏರಿಕೆ ಕಾಣುತ್ತಿರುವುದು ರಿಯಲ್ ಎಸ್ಟೇಟ್ ಉದ್ಯಮಕ್ಕೆ ತುಸು ಹೊಡೆತ ಕೊಟ್ಟಿದೆ. ದೇಶದ ಆರ್ಥಿಕತೆಯ ಆರೋಗ್ಯದ ದೃಷ್ಟಿಯಿಂದ ಈ ವಲಯ ಆರೋಗ್ಯಯುತವಾಗಿ ಇರುವುದು ಅವಶ್ಯಕ.

Budget 2023: ಸ್ವಂತ ಸೂರಿನ ಆಸೆಗೆ ನೀರೆರೆಯುತ್ತಾ ಈ ಬಾರಿಯ ಬಜೆಟ್?
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jan 10, 2023 | 2:39 PM

Share

ಸ್ವಂತ ಮನೆ ಹೊಂದಬೇಕೆಂಬುದು ಪ್ರತಿಯೊಬ್ಬರ ಕನಸು. ಸರ್ವರಿಗೂ ಸೂರು ನಿರ್ಮಿಸಬೇಕೆಂಬುದು ಸರ್ಕಾರದ ಬಯಕೆಯೂ ಹೌದು. ಅದು ನನಸಾಗಬೇಕೆಂದರೆ ಸರ್ಕಾರದ ವಸತಿ ಯೋಜನೆಗಳು ಮತ್ತು ರಿಯಲ್ ಎಸ್ಟೇಟ್ ಉದ್ಯಮ (Real estate) ಎರಡೂ ಸಮರ್ಪಕವಾಗಿರಬೇಕು. ಕೋವಿಡ್ ಬಳಿಕ ರಿಯಲ್ ಎಸ್ಟೇಟ್ ಉದ್ಯಮ ಮೈಕೊಡವಿ ನಿಂತಿದ್ದು ಹೌದು. ಆದರೆ, ಇದೀಗ ಜಾಗತಿಕ ಆರ್ಥಿಕ ಹಿಂಜರಿತದ (Global economic recession) ಪರಿಸ್ಥಿತಿ ಉದ್ಭವಿಸುತ್ತಿರುವ ಹಿನ್ನೆಲೆಯಲ್ಲಿ ಗೃಹ ನಿರ್ಮಾಣ ವಲಯ ಕುಂಟುತ್ತಾ ಸಾಗಬೇಕಾಗಬಹುದು. ಈ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ ನಲ್ಲಿ (Union Budget 2023) ರಿಯಲ್ ಎಸ್ಟೇಟ್ ಉದ್ಯಮ ಮತ್ತು ಸ್ವಂತ ಮನೆಯ ಆಸೆವಂತರು ಕೆಲ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಭಾರತದಲ್ಲಿ ಬಡ್ಡಿ ದರ ಏರಿಕೆ ಕಾಣುತ್ತಿರುವುದು ರಿಯಲ್ ಎಸ್ಟೇಟ್ ಉದ್ಯಮಕ್ಕೆ ತುಸು ಹೊಡೆತ ಕೊಟ್ಟಿದೆ. ದೇಶದ ಆರ್ಥಿಕತೆಯ ಆರೋಗ್ಯದ ದೃಷ್ಟಿಯಿಂದ ಈ ವಲಯ ಆರೋಗ್ಯಯುತವಾಗಿ ಇರುವುದು ಅವಶ್ಯಕ. ಸಾಲದ ಬಡ್ಡಿ ದರ ಹೆಚ್ಚಾದರೆ ಜನರು ಭೂಮಿ ಕೊಳ್ಳಲು ಹಿಂದೇಟು ಹಾಕುತ್ತಾರೆ. ಆದ್ದರಿಂದ ತಜ್ಞರ ಪ್ರಕಾರ ಜನರಿಗೆ ಗೃಹ ಸಾಲಗಳು ಕೈಗೆಟುಕುವ ಹಾಗೆ ಇರಬೇಕು.

ಆದರೆ, ಬಡ್ಡಿ ದರಗಳನ್ನು ಪರಿಷ್ಕರಿಸುವುದು ಆರ್ಬಿಐ ಹೊರತು ಸರ್ಕಾರವಲ್ಲ ಎಂಬುದು ನಿಜ. ಆದರೆ, ಬಜೆಟ್ ನಲ್ಲಿ ಸಾಲ ಸುಸೂತ್ರವಾಗಿ ಸಿಗುವ ರೀತಿಯಲ್ಲಿ ನಿಯಮಗಳನ್ನು ಪರಿಷ್ಕರಿಸಲಿ ಎಂಬುದು ಈ ಉದ್ಯಮದವರ ಅಪೇಕ್ಷೆ. ಇದಲ್ಲದೇ ಇನ್ನಷ್ಟು ಕೆಲ ಸಲಹೆಗಳನ್ನು ಈ ಉದ್ಯಮದವರು ವ್ಯಕ್ತಪಡಿಸಿದ್ದಾರೆ.

ಸುಗಮ ಸಾಲ

ನಿವೇಶನ, ಫ್ಲ್ಯಾಟ್ ಕೊಂಡಾಗ ಡೌನ್ ಪೇಮೆಂಟ್ ಮೊತ್ತವನ್ನು ಕಡಿಮೆಗೊಳಿಸುವುದು; ಗೃಹ ಸಾಲಗಳಿಗೆ ಅರ್ಹತಾ ಮಾನದಂಡವನ್ನು ಸಡಿಲಗೊಳಿಸುವುದು ಇತ್ಯಾದಿ ಕ್ರಮವನ್ನು ಬಜೆಟ್ ನಲ್ಲಿ ಪ್ರಕಟಿಸಬಹುದು ಎಂಬ ಸಲಹೆ ವ್ಯಕ್ತವಾಗಿದೆ. ಸಾಲದ ಮೇಲಿನ ಬಡ್ಡಿ ದರದ ಪರಿಷ್ಕರಣೆ ಬಜೆಟ್ ನಲ್ಲಿ ಸಾಧ್ಯವಾಗುವುದಿಲ್ಲ. ಆದರೆ, ಗೃಹ ಸಾಲಗಳ ಮೇಲಿನ ಬಡ್ಡಿಗೆ ತೆರಿಗೆ ಕಡಿತದ ಪ್ರಮಾಣವನ್ನು 5 ಲಕ್ಷ ರೂಪಾಯಿಗೆ ಹೆಚ್ಚಿಸಬಹುದು. ಇದರಿಂದ ಗೃಹ ಸಾಲ ತೆಗೆದುಕೊಳ್ಳುವವರಿಗೆ ಉತ್ತೇಜನ ಸಿಗುತ್ತದೆ.

ಅಗ್ಗದ ಮನೆಯ ಬೆಲೆ ಮಿತಿ ಹೆಚ್ಚಳ

ಅಗ್ಗದ ಮನೆಯ ವರ್ಗೀಕರಣವನ್ನು ಬದಲಾಯಿಸಬೇಕು. 45 ಲಕ್ಷ ರೂ ಮಿತಿಯನ್ನು 75 ಲಕ್ಷ ಅಥವಾ ಅದಕ್ಕೂ ಹೆಚ್ಚಿನ ಬೆಲೆಗೆ ಹೆಚ್ಚಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಸರ್ಕಾರದ ಅಗ್ಗದ ಗೃಹ ಯೋಜನೆ (ಅಫಾರ್ಡಬಲ್ ಹೌಸಿಂಗ್ ಸ್ಕೀಮ್) ಪ್ರಕಾರ 45 ಲಕ್ಷ ರೂ ಬೆಲೆಯೊಳಗೆ ನಿರ್ಮಾಣವಾಗುವುದು ಅಗ್ಗದ ಮನೆ ಎನಿಸುತ್ತದೆ. ಈ ಅಗ್ಗದ ಮನೆಗೆ ಶೇ. 1ರಷ್ಟು ಮಾತ್ರ ಜಿಎಸ್ಟಿ ಇರುತ್ತದೆ. ಅದಕ್ಕಿಂತ ಹೆಚ್ಚಿನ ಬೆಲೆಯ ಮನೆಗೆ ಶೇ. 5ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ.

ಇದನ್ನೂ ಓದಿ: Budget 2023: 35 ವಸ್ತುಗಳ ಮೇಲೆ ಆಮದು ಸುಂಕ ಹೆಚ್ಚಳ ಸಾಧ್ಯತೆ; ಯಾವ್ಯಾವುದರ ಬೆಲೆ ಹೆಚ್ಚಾಗಲಿದೆ?

ಬೆಂಗಳೂರು ಇತ್ಯಾದಿ ಮೆಟ್ರೊಪೊಲಿಟನ್ ನಗರಗಳಲ್ಲಿ ಒಂದು ಮನೆಯು ಅಗ್ಗದ ಮನೆ ಎನಿಸಬೇಕಾದರೆ ನಿರ್ಮಾಣ ವೆಚ್ಚ 45 ಲಕ್ಷ ರೂ ಒಳಗಿರಬೇಕು. ಹಾಗು ಒಳಾಂಗಣ ವಿಸ್ತೀರ್ಣ 60 ಚದರ ಮೀಟರ್ ಗಿಂತ ಹೆಚ್ಚಿರಬಾರದು. ಬೇರೆ ಪ್ರದೇಶಗಳಲ್ಲಿ ಕಟ್ಟಡದ ಒಳಾಂಗಣ ವಿಸ್ತೀರ್ಣ 90 ಚದರ ಮೀಟರ್ ವರೆಗೂ ಇರಲು ಅವಕಾಶ ಇದೆ.

ಈಗಿನ ಸಂದರ್ಭದಲ್ಲಿ ಅಗ್ಗದ ಮನೆಯ ವರ್ಗೀಕರಣದ ರೀತಿಯು ಅಪ್ರಸ್ತುತ ಎನಿಸುತ್ತದೆ. ಒಂದು ಸಾಧಾರಣ ಮನೆ ಕಟ್ಟಲು 45 ಲಕ್ಷ ರೂ ಸಾಕಾಗುವುದಿಲ್ಲ. ಆದ್ದರಿಂದ ಅಗ್ಗದ ಮನೆಯ ಬೆಲೆಯ ಮಿತಿಯನ್ನು ಹೆಚ್ಚಿಸಬೇಕೆಂಬುದು ಬೇಡಿಕೆ. ಒಂದು ವೇಳೆ ಈ ಬೇಡಿಕೆಯನ್ನು ಬಜೆಟ್ ನಲ್ಲಿ ಪರಿಗಣಿಸಿದರೆ ರಿಯಲ್ ಎಸ್ಟೇಟ್ ಡೆವಲಪರುಗಳಿಗೆ ಅನುಕೂಲವಾಗುತ್ತದೆ. ತತ್ ಫಲವಾಗಿ ಮನೆ ಖರೀದಿದಾರರಿಗೂ ಅನುಕೂಲವಾಗುತ್ತದೆ.

ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ವ್ಯವಸ್ಥೆ

ಮನೆ ನಿರ್ಮಾಣಕ್ಕೆ ಬಳಕೆಯಾಗುವ ಉಕ್ಕು ಮತ್ತು ಸಿಮೆಂಟುಗಳ ಮೇಲೆ ಶೇ. 18 ಮತ್ತು ಶೇ. 28ರಷ್ಟು ಜಿಎಸ್ಟಿ ಇದೆ. ಇದರಿಂದ ಮನೆ ನಿರ್ಮಾಣ ವೆಚ್ಚ ಹೆಚ್ಚಾಗುತ್ತದೆ. ಇದರ ಜೊತೆಗೆ ಒಟ್ಟಾರೆ ಮನೆಯ ಮೇಲೆ ಪ್ರತ್ಯೇಕ ಜಿಎಸ್ಟಿ ಇದೆ. ಮನೆ ನಿರ್ಮಾಣದ ವೇಳೆ ವಿವಿಧ ಸಾಮಗ್ರಿಗಳಿಗೆ ಪಾವತಿಸಿದ ತೆರಿಗೆಗೆ ಪ್ರತಿಯಾಗಿ ನಿರ್ಮಾಣಗಾರರಿಗೆ ಟ್ಯಾಕ್ಸ್ ಕ್ರೆಡಿಟ್ ಅವಕಾಶ ನೀಡಬೇಕು. ಈ ಬಜೆಟ್ ನಲ್ಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ವ್ಯವಸ್ಥೆಯನ್ನು ಮರಳಿ ಜಾರಿಗೆ ತರಬೇಕು ಎಂಬ ಒತ್ತಾಯ ಇದೆ. ಹಾಗೆಯೇ, ಸಿಮೆಂಟು ಮತ್ತು ಉಕ್ಕಿನ ಬೆಲೆ ಇಳಿಸುವುದರಿಂದ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಬಹಳ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯವೂ ಕೇಳಿಬಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ