40 ವರ್ಷದೊಳಗಿನ ಶ್ರೀಮಂತ ಭಾರತೀಯ ಪಟ್ಟಿಯಲ್ಲಿ ನಿಖಿಲ್ ಕಾಮತ್​ಗೆ ಅಗ್ರಸ್ಥಾನ

ಪೋಷಕರು ಮಾಡಿದ್ದ ಆಸ್ತಿಯನ್ನು ಹೊಂದಿಲ್ಲದೆ ಸ್ವ ಪರಿಶ್ರಮದ ಮೂಲಕ ಶ್ರೀಮಂತರಾದ ಭಾರತೀಯರ ಪೈಕಿ ನಿಖಿಲ್ ಕಾಮತ್ ಅಗ್ರಸ್ಥಾನ ಪಡೆದಿದ್ದಾರೆ. ಎರಡನೇ ಸ್ಥಾನವನ್ನು ಓಲಾ ಎಲೆಕ್ಟ್ರಿಕ್‌ನ ಭವಿಶ್ ಅಗರ್ವಾಲ್ ಪಡೆದಿದ್ದಾರೆ.

40 ವರ್ಷದೊಳಗಿನ ಶ್ರೀಮಂತ ಭಾರತೀಯ ಪಟ್ಟಿಯಲ್ಲಿ ನಿಖಿಲ್ ಕಾಮತ್​ಗೆ ಅಗ್ರಸ್ಥಾನ
TV9kannada Web Team

| Edited By: Rakesh Nayak Manchi

Sep 30, 2022 | 11:38 AM

ಸ್ವ ಪರಿಶ್ರಮದ ಮೇಲೆ ಶ್ರೀಮಂತರಾದ 40 ವರ್ಷದೊಳಗಿನ ಭಾರತೀಯರ ಪೈಕಿ ನಿಖಿಲ್ ಕಾಮತ್ (Billionaire Nikhil Kamath) ಅವರು ಅಗ್ರಸ್ಥಾನವನ್ನು ಪಡೆದಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ IIFL ವೆಲ್ತ್ ಹುರುನ್ ಇಂಡಿಯಾ 40 ಪಟ್ಟಿಯಲ್ಲಿ 17,500 ಕೋಟಿ ರೂ.ಗಳ ನಿವ್ವಳ ಮೌಲ್ಯದೊಂದಿಗೆ ನಿಖಿಲ್ ಅಗ್ರಸ್ಥಾನ ಪಡೆದಿದ್ದು, 11,700 ಕೋಟಿ ರೂ. ನಿವ್ವಳ ಮೌಲ್ಯದೊಂದಿಗೆ ಓಲಾ ಎಲೆಕ್ಟ್ರಿಕ್‌ (Ola Electric)ನ ಭವಿಶ್ ಅಗರ್ವಾಲ್ (Bhavish Aggarwal) ಎರಡನೇ ಸ್ಥಾನ ಪಡೆದಿದ್ದಾರೆ. ಅಂದರೆ ನಿಖಿಲ್ ಅವರು ಭವಿಶ್ ಅವರಿಗಿಂತ 5,800 ಕೋಟಿ ರೂ. ಮುಂದಿದ್ದಾರೆ. ನಿಖಿಲ್ ಕಾಮತ್ 2021ರಲ್ಲಿ ಕೇವಲ 34ನೇ ವಯಸ್ಸಿನಲ್ಲಿ ಭಾರತದ ಅತ್ಯಂತ ಕಿರಿಯ ಬಿಲಿಯನೇರ್ ಆದವರು. ಅವರು ತಮ್ಮ ಜೀವನದ ಬಂಡಿ ಎಳೆಯಲು ಹಿಡಿದ ದಾರಿ ಲಕ್ಷಾಂತರ ಯುವಕರಿಗೆ ದೊಡ್ಡ ಕನಸುಗಳನ್ನು ಹೊಂದಲು ಮತ್ತು ಅವುಗಳನ್ನು ಸಾಧಿಸಲು ಸ್ಫೂರ್ತಿಯನ್ನು ತುಂಬಿಸಿದೆ.

ನಿಖಿಲ್ ಕಾಮತ್ ಯಾರು?

ಕಡಿಮೆ ಹಾಜರಾತಿಯಿಂದಾಗಿ ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗಲು ಅನುಮತಿಸದ ಕಾರಣ ಬುದ್ಧಿವಂತ ಬಿಲಿಯನೇರ್ ಹೂಡಿಕೆದಾರರು ಕೇವಲ 14 ವರ್ಷ ವಯಸ್ಸಿನಲ್ಲೇ ಶಾಲೆಯನ್ನು ತೊರೆದರು. ಇದು ಕಾಮತ್ ಅವರ ಹೆತ್ತವರಿಗೆ ಅಸಮಾಧಾನವನ್ನು ಉಂಟು ಮಾಡಿತ್ತು. ಶಾಲೆ ತೊರೆದ ನಂತರ ನಿಖಿಲ್‌ಗೆ ಜೀವನವನ್ನು ಹೇಗೆ ನಡೆಸಬೇಕು ಎಂಬುದು ತಿಳಿದಿರಲಿಲ್ಲ. ಅದರಂತೆ ಉದ್ಯೋಗಕ್ಕಾಗಿ ಹುಡುಕಾಟದಲ್ಲಿದ್ದ ನಿಖಿಲ್​ಗೆ ಕಾಲ್​ ಸೆಂಟರ್​ನಲ್ಲಿ ಕೆಲಸ ದೊರೆಯುತ್ತದೆ. 8 ಸಾವಿರ ವೇತನಕ್ಕೆ ಸೇರಿಕೊಂಡರು. ಈ ಸಂದರ್ಭದಲ್ಲಿ ನಿಖಿಲ್ 17 ವರ್ಷದ ಬಾಲಕರಾಗಿದ್ದರು.

ಔಪಚಾರಿಕ ಶಿಕ್ಷಣದಲ್ಲಿ ಉತ್ಸುಕರಾಗಿಲ್ಲದಿದ್ದರೂ ನಿಖಿಲ್ ಕಾಮತ್ ಚೆಸ್ ಆಟದಲ್ಲಿ ತೊಡಗಿದ್ದರು. ತನ್ನಲ್ಲಿನ ಕೌಶಲ್ಯಗಳನ್ನು ಮೆರುಗುಗೊಳಿಸಲು ಗಂಟೆಗಳ ಕಾಲ ಆಟದಲ್ಲೇ ಕಳೆದರು. ವಾಸ್ತವವಾಗಿ ಅವರು ವೃತ್ತಿಪರವಾಗಿಯೂ ಆಡಿದರು. ತನ್ನ ವೃತ್ತಿಜೀವನದಲ್ಲಿ ತನ್ನನ್ನು ಬೆಂಬಲಿಸಲು ಯಾವುದೇ ಕಾಲೇಜು ಪದವಿ ಇಲ್ಲದಿದ್ದರೂ ನಿಖಿಲ್ ಅಗತ್ಯವಿಲ್ಲದ ಏನನ್ನಾದರೂ ಮಾಡಬೇಕೆಂದು ತಿಳಿದಿದ್ದರು.

ಅದರಂತೆ ತನ್ನ 18ನೇ ವಯಸ್ಸಿನಲ್ಲಿ ಷೇರುಗಳಲ್ಲಿ ವ್ಯಾಪಾರ ಮಾಡಲು ಪ್ರಾರಂಭಿಸಿದರು. ಇದುವೇ ಅವರ ಜೀವನದಲ್ಲಿ ಒಂದು ಮಹತ್ವದ ತಿರುವನ್ನು ನೀಡಿತು. 2010 ರಲ್ಲಿ ನಿಖಿಲ್ ಮತ್ತು ಅವರ ಸಹೋದರ ನಿತಿನ್ ಕಾಮತ್ ಝೆರೋಧಾವನ್ನು ಒಂದು ವೇದಿಕೆಯಾಗಿ ಸ್ಥಾಪಿಸಿದರು. ಇದು ವ್ಯಾಪಾರಿಗಳು ಮತ್ತು ಹೂಡಿಕೆದಾರರಿಗೆ ವೆಚ್ಚ, ಬೆಂಬಲ ಮತ್ತು ತಂತ್ರಜ್ಞಾನದ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ವಾಸ್ತವವಾಗಿ ಅವರ ಕಂಪನಿಯ ಹೆಸರೂ ಇದನ್ನು ಸೂಚಿಸುತ್ತದೆ. ಅವರು ಟ್ರೂ ಬೀಕನ್ ಎಂಬ ಹೆಡ್ಜ್ ಫಂಡ್ ಅನ್ನು ಸಹ ಸ್ಥಾಪಿಸಿದ್ದಾರೆ. ಹೀಗೆ ನಿಖಿಲ್ ಕಾಮತ್ 34ನೇ ವಯಸ್ಸಿಗೆ ಭಾರತದ ಅತ್ಯಂತ ಕಿರಿಯ ಬಿಲಿಯನೇರ್ ಆಗಿ ಹೊರಹೊಮ್ಮಿದರು.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada