ಹಣದುಬ್ಬರ ನವೆಂಬರ್​ನಲ್ಲಿ 70 ಮೂಲಾಂಕಗಳಷ್ಟು ಇಳಿಕೆ ಸಾಧ್ಯತೆ: ಮಾರ್ಗನ್ ಸ್ಟಾನ್ಲೀ ಅಂದಾಜು

|

Updated on: Dec 10, 2024 | 3:20 PM

November inflation rate: ಅಕ್ಟೋಬರ್ ತಿಂಗಳಲ್ಲಿ ಶೇ. 6.2ಕ್ಕೆ ಏರಿದ್ದ ಹಣದುಬ್ಬರ ನವೆಂಬರ್ ತಿಂಗಳಲ್ಲಿ ಶೇ. 5.5ಕ್ಕೆ ಬಂದಿರಬಹುದು ಎಂದು ಮಾರ್ಗನ್ ಸ್ಟಾನ್ಲೀ ಸಂಸ್ಥೆ ಅಭಿಪ್ರಾಯಪಟ್ಟಿದೆ. ಅಕ್ಟೋಬರ್​ನಲ್ಲಿ ತರಕಾರಿಗಳ ಹಣದುಬ್ಬರ ಶೇ. 42ಕ್ಕೆ ಹೋಗಿತ್ತು. ಇದರಿಂದಾಗಿ ರೀಟೇಲ್ ಹಣದುಬ್ಬರ ಕೈಮೀರಿ ಹೋಗಿತ್ತು. ನವೆಂಬರ್​ನಲ್ಲಿ ತರಕಾರಿಗಳ ಬೆಲೆ ಗಣನೀಯವಾಗಿ ತಗ್ಗಿದೆ. ಈ ಕಾರಣಕ್ಕೆ ನವೆಂಬರ್​ನಲ್ಲಿ ಹಣದುಬ್ಬರ ಕಡಿಮೆ ಆಗಿರಬಹುದು ಎನ್ನಲಾಗಿದೆ.

ಹಣದುಬ್ಬರ ನವೆಂಬರ್​ನಲ್ಲಿ 70 ಮೂಲಾಂಕಗಳಷ್ಟು ಇಳಿಕೆ ಸಾಧ್ಯತೆ: ಮಾರ್ಗನ್ ಸ್ಟಾನ್ಲೀ ಅಂದಾಜು
ಹಣದುಬ್ಬರ
Follow us on

ನವದೆಹಲಿ, ಡಿಸೆಂಬರ್ 10: ಭಾರತದಲ್ಲಿ ರೀಟೇಲ್ ಹಣದುಬ್ಬರ ನವೆಂಬರ್ ತಿಂಗಳಲ್ಲಿ 70 ಮೂಲಾಂಕಗಳಷ್ಟು ಇಳಿಕೆ ಆಗಬಹುದು ಎಂದು ಹೇಳಲಾಗುತ್ತಿದೆ. ಅಕ್ಟೋಬರ್ ತಿಂಗಳಲ್ಲಿ ಶೇ. 6.2ಕ್ಕೆ ಹೋಗಿದ್ದ ರೀಟೇಲ್ ಹಣದುಬ್ಬರ ದರ ನವೆಂಬರ್​ನಲ್ಲಿ 5.5 ಪ್ರತಿಶತಕ್ಕೆ ಇಳಿಕೆ ಆಗಬಹುದು ಎಂದು ಮಾರ್ಗನ್ ಸ್ಟಾನ್ಲೀ ಸಂಸ್ಥೆ ಅಂದಾಜು ಮಾಡಿದೆ. ಆಹಾರವಸ್ತುಗಳ ಬೆಲೆ ಕಡಿಮೆ ಆಗುತ್ತಾ ಬಂದಿರುವುದು ಗ್ರಾಹಕ ಬೆಲೆ ಅನುಸೂಚಿ ಆಧಾರಿತ ರೀಟೇಲ್ ಹಣದುಬ್ಬರ ದರ ಕಡಿಮೆ ಆಗಲು ಕಾರಣವಾಗಿರಬಹುದು. ಆಹಾರ ಮತ್ತು ಇಂಧನ ಹೊರತುಪಡಿಸಿದ ಮುಖ್ಯ ಹಣದುಬ್ಬರ ಭಾಗವೂ ನವೆಂಬರ್​ನಲ್ಲಿ ಕಡಿಮೆ ಆಗಿರಬಹುದು ಎಂದು ಅದು ಅಭಿಪ್ರಾಯಪಟ್ಟಿದೆ.

‘ಸಿಪಿಐ ಆಧಾರಿತ ಹಣದುಬ್ಬರ ನವೆಂಬರ್​ನಲ್ಲಿ ಶೇ. 5.5ಕ್ಕೆ ಇಳಿದಿರಬಹುದು ಎಂದು ನಿರೀಕ್ಷಿಸುತ್ತಿದ್ದೇವೆ. ಆಹಾರ ಬೆಲೆ, ಇಂಧನ ಬೆಲೆಗಳು ಇಳಿಕೆ ಆಗಿರುವುದು ಮತ್ತು ಕೋರ್ ಇನ್​ಫ್ಲೇಶನ್ ಕಡಿಮೆ ಆಗಿರುವುದು ರೀಟೇಲ್ ಹಣದುಬ್ಬರ ಇಳಿಕೆಗೆ ಕಾರಣವಾಗಿರಬಹುದು’ ಎಂದು ಜಾಗತಿಕ ಇನ್ವೆಸ್ಟ್​ಮೆಂಟ್ ಬ್ಯಾಂಕ್ ಆದ ಮಾರ್ಗನ್ ಸ್ಟಾನ್ಲೀ ಹೇಳಿದೆ.

ಕಳೆದ ವಾರ ನಡೆದ ಆರ್​ಬಿಐ ಮಾನಿಟರಿ ಪಾಲಿಸಿ ಕಮಿಟಿಯ ಸಭೆಯಲ್ಲೂ ಹಣದುಬ್ಬರ ಇಳಿಕೆ ಸಾಧ್ಯತೆಯನ್ನು ನಿರೀಕ್ಷಿಸಲಾಗಿತ್ತು. ಆಹಾರವಸ್ತುಗಳು, ಅದರಲ್ಲೂ ತರಕಾರಿಗಳ ಬೆಲೆ ಹೆಚ್ಚಳದಿಂದಾಗಿ ಅಕ್ಟೋಬರ್ ತಿಂಗಳಲ್ಲಿ ಹಣದುಬ್ಬರ ನಿರೀಕ್ಷೆಮೀರಿ ಏರಿಕೆಯಾಗಿ ಶೇ. 6.2 ತಲುಪಿತ್ತು. ತರಕಾರಿಗಳ ಹಣದುಬ್ಬರ ಶೇ. 42 ತಲುಪತ್ತು. ಈ ಕಾರಣಕ್ಕೆ ಎಂಪಿಸಿ ಸಭೆಯಲ್ಲಿ ರಿಪೋ ದರ ಇಳಿಸದೇ ಇರಲು ನಿರ್ಧರಿಸಿರುವ ಸಾಧ್ಯತೆ ಇದೆ.

ಇದನ್ನೂ ಓದಿ: ಹಣದುಬ್ಬರ, ಆರ್ಥಿಕ ಬೆಳವಣಿಗೆ ಮಧ್ಯೆ ಸಮತೋಲನ ಸಾಧಿಸುವ ಕೆಲಸವಾಗಬೇಕು: ಹೊಸ ಆರ್​ಬಿಐ ಗವರ್ನರ್​ಗೆ ದಾಸ್ ಸಲಹೆಗಳು…

ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ನವೆಂಬರ್ ತಿಂಗಳಲ್ಲಿ ತರಕಾರಿಗಳ ಬೆಲೆ ಕಡಿಮೆ ಆಗಿದೆ. ಮುಂಗಾರು ಬೆಳೆಗಳು ಉತ್ತಮ ಫಸಲು ಕೊಟ್ಟಿರುವುದರಿಂದ ಟೊಮೆಟೋ, ಈರುಳ್ಳಿ, ಆಲೂಗಡ್ಡೆಯಂತಹ ಪ್ರಮುಖ ತರಕಾರಿಗಳು ಸಾಕಷ್ಟು ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿವೆ. ಅದರಲ್ಲೂ ಟೊಮೆಟೊ ಬೆಲೆ ಗಣನೀಯವಾಗಿ ಇಳಿಕೆ ಆಗಿದೆ. ಇದರಿಂದಾಗಿ, ಅಕ್ಟೋಬರ್​ನಲ್ಲಿ ಶೇ. 42 ಇದ್ದ ತರಕಾರಿ ಹಣದುಬ್ಬರವು ನವೆಂಬರ್​ನಲ್ಲಿ ಶೇ. 27 ತಲುಪಿರಬಹುದು ಎಂದು ಹೇಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ