ಕಂಪನಿ ಸಿಇಒ ನಡತೆಗೆ ಬೇಸರ; ಜಾಬ್ ಆಫರ್ ತಿರಸ್ಕರಿಸಿದ ಬೆಂಗಳೂರಿನ ಮಹಿಳೆ; ಅಂಥದ್ದೇನಿತ್ತು ಸಿಇಒ ವರ್ತನೆ..!
Vibha Gupta linkedIn post: ಬೆಂಗಳೂರಿನಲ್ಲಿ ಕಂಟೆಂಟ್ ರೈಟರ್ ಆಗಿರುವ ವಿಭಾ ಗುಪ್ತಾ ಎಂಬಾಕೆ ಇತ್ತೀಚಿನ ತಮ್ಮ ಜಾಬ್ ಇಂಟರ್ವ್ಯೂ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ಸಂದರ್ಶನದ ವೇಳೆ ಸಿಇಒ ವರ್ತನೆ ಬಗ್ಗೆ ತನಗೆ ಅಸಮಾಧಾನಗೊಂಡು ಕೆಲಸ ತಿರಸ್ಕರಿಸಿ ಬಂದಿದ್ದಾಗಿ ಹೇಳಿದ್ದಾರೆ. ಕೆಲಸ ಮಾಡುವ ಉದ್ಯೋಗಿಗಳ ಬಗ್ಗೆ ಅವರಿಗೆ ಗೌರವ ಇಲ್ಲ. ಇತರ ಸಂಸ್ಥೆಗಳ ಬಗ್ಗೆ ಗೌರವ ಇಲ್ಲ. ಹೀಗಾಗಿ ಜಾಬ್ ಆಫರ್ ತಿರಸ್ಕರಿಸಿದ್ದಾಗಿ ತಿಳಿಸಿದ್ದಾರೆ.
ಬೆಂಗಳೂರು, ಡಿಸೆಂಬರ್ 10: ಇಂಟರ್ವ್ಯೂ ವೇಳೆ ಕಂಪನಿಯ ಸಿಇಒ ವರ್ತನೆ ಬಗ್ಗೆ ಅಸಮಾಧಾನಗೊಂಡು ಮಹಿಳೆಯೊಬ್ಬರು ಕೆಲಸದ ಆಫರ್ ಅನ್ನೇ ತಿರಸ್ಕರಿಸಿ ಬಂದ ಘಟನೆ ಬೆಳಕಿಗೆ ಬಂದಿದೆ. ವೃತ್ತಿಯಲ್ಲಿ ಕಂಟೆಂಟ್ ರೈಟರ್ ಆಗಿರುವ ವಿಭಾ ಗುಪ್ತಾ ಎಂಬಾಕೆ ಲಿಂಕ್ಡ್ ಇನ್ ಪೋಸ್ಟ್ವೊಂದರಲ್ಲಿ ತಮ್ಮ ಜಾಬ್ ಇಂಟರ್ವ್ಯೂ ಪ್ರಸಂಗವನ್ನು ಹಂಚಿಕೊಂಡಿದ್ದಾರೆ. ತನಗಾಗಲೀ, ತನ್ನ ಕೆಲಸಕ್ಕಾಗಿ ಆ ಕಂಪನಿಯಲ್ಲಿ ಯಾವ ಬೆಲೆಯೂ ಇರುವುದಿಲ್ಲ ಎಂಬುದು ಸಿಇಒ ವರ್ತನೆಯಿಂದ ಸ್ಪಷ್ಟವಾಯಿತು ಎಂದು ಬೆಂಗಳೂರಿನ ಈಕೆ ಬರೆದಿದ್ದಾರೆ.
ಯಾವ ಕಂಪನಿಯ ಕೆಲಸದ ಸಂದರ್ಶನಕ್ಕೆ ಈಕೆ ಹೋಗಿದ್ದು, ಆ ಸಿಇಒ ಯಾರು ಎಂಬುದನ್ನು ಈಕೆ ಪೋಸ್ಟ್ನಲ್ಲಿ ಪ್ರಸ್ತಾಪಿಸಿಲ್ಲ. ಬೆಂಗಳೂರಿನ ಕಂಪನಿ ಅದಾಗಿದ್ದು, ಐದಾರು ಅಂಶಗಳಲ್ಲಿ ವಿಭಾ ಗುಪ್ತಾ ಅವರು ಸಿಇಒ ನಡತೆಯಲ್ಲಿ ಹುಳುಕುಗಳನ್ನು ಗಮನಿಸಿದ್ದಾರೆ. ತಾನು ಯಾಕೆ ಜಾಬ್ ಆಫರ್ ಅನ್ನು ತಿರಸ್ಕರಿಸುತ್ತಿರುವುದಾಗಿ ಕಾರಣವನ್ನೂ ತಿಳಿಸಿದ್ದಾರೆ.
ಉದ್ಯೋಗಿಗಳ ಬಗ್ಗೆ ಗೌರವ ಇಲ್ಲದ ಸಿಇಒ
ಕಂಪನಿ ಬಗ್ಗೆ ಎಚ್ಆರ್ರಿಂದ ವಿಡಿಯೋ ಕಳುಹಿಸಲಾಗಿತ್ತಾ ಎಂದು ಸಿಇಒ ಕೇಳಿದರು. ನಾನು ಇಲ್ಲ ಎಂದೆ. ಅವರು ಆಕೆಯನ್ನು ಕ್ಯಾಬಿನ್ಗೆ ಕರೆದು ನನ್ನೆದುರೇ ಬಯ್ದರು. ಅವರ ಉದ್ಯೋಗಿಗಳ ಬಗ್ಗೆ ಗೌರವವೇ ಇರಲಿಲ್ಲ. ಎಚ್ಆರ್ ತಪ್ಪು ಮಾಡಿದ್ದು ಹೌದು. ಆದರೆ, ಆಗಂತುಕ ವ್ಯಕ್ತಿ ಎದುರು ನಿಮ್ಮ ಉದ್ಯೋಗಿಗೆ ಅಗೌರವ ತೋರಿದ್ದು ಸರಿ ಅಲ್ಲ ಎಂದು ವಿಭಾ ಗುಪ್ತಾ ಹೇಳುತ್ತಾರೆ.
ಇದನ್ನೂ ಓದಿ: ಕೆಲ ಭಾರತೀಯರನ್ನು ರೊಚ್ಚಿಗೆಬ್ಬಿಸಿರುವ ಜಾರ್ಜ್ ಸೋರೋಸ್ ಎಂಬ ಉದ್ಯಮಿ ಯಾರು? ಇವರ ಆಸ್ತಿ, ಶಕ್ತಿ ಎಷ್ಟು?
ಕೆಲಸದ ಬಗ್ಗೆ ನಂಬಿಕೆ ಇಲ್ಲ…
ಕಾಪಿರೈಟಿಂಗ್ ಕೆಲಸವನ್ನು ಚಾಟ್ಜಿಪಿಟಿ ಎಂದು ಅವರು ಕರೆದರು. ನನ್ನ ಕೆಲಸವನ್ನು ಅವರು ಗೌರವಿಸುವುದಿಲ್ಲ ಎಂಬುದು ಗೊತ್ತಾಯಿತು ಎಂದು ತಿಳಿಸಿದ್ದಾರೆ ವಿಭಾ.
ಬೇರೆ ಸಂಸ್ಥೆಗಳಿಗೆ ಅಗೌರವ…
ನಾನು ಕೆಲಸ ಮಾಡುತ್ತಿರುವ ಮತ್ತು ಹಿಂದೆ ಮಾಡಿರುವ ಸಂಸ್ಥೆಗಳಲ್ಲಿನ ಕೆಲಸವನ್ನು ಬೋರಿಂಗ್ ಎಂದು ಈ ಸಿಇಒ ಹೇಳುತ್ತಾರೆ. ಆದು ಆ ಕಂಪನಿಗಳ ರೀತಿ ರಿವಾಜು ಎಂಬುದನ್ನು ಅರ್ಥ ಮಾಡಿಕೊಳ್ಳಲು ಅವರಿಗೆ ಆಗಲಿಲ್ಲ. ಎಲ್ಲ ಕಂಟೆಂಟ್ಗಳೂ ಕ್ಯಾಚಿಯಾಗಿರಬೇಕು, ಆಕರ್ಷಕವಾಗಿರಬೇಕು ಎಂದೇನಿಲ್ಲ. ನಾನು ಅವರ ಬಗ್ಗೆ ರೀಸರ್ಚ್ ಮಾಡಿದಾಗ ಅವರ ಕಂಟೆಂಟ್ಗಳು ಎಐನಿಂದ ಸೃಷ್ಟಿಯಾದಂತೆ ಕಂಡವು ಎಂದು ವಿಭಾ ಗುಪ್ತಾ ಅಸಮಾಧಾನ ತೋರ್ಪಡಿಸಿದ್ದಾರೆ.
ಇದನ್ನೂ ಓದಿ: ಆಯುಷ್ಮಾನ್ ಭಾರತ್: ಕೇವಲ 40 ದಿನದಲ್ಲಿ 25 ಲಕ್ಷ ಹಿರಿಯ ನಾಗರಿಕರಿಗೆ ಹೆಲ್ತ್ ಇನ್ಷೂರೆನ್ಸ್ ಕಾರ್ಡ್
ಆ ವ್ಯಕ್ತಿ ಆ ಸ್ಥಾನಕ್ಕೆ ಏರಲು ಸಾಕಷ್ಟು ಶ್ರಮ ಪಟ್ಟಿರಬಹುದು. ಆದರೆ, ನಿಮ್ಮ ಜೊತೆ ಕೆಲಸ ಮಾಡುವ ಜನರನ್ನು ಗೌರವದಿಂದ ನಡೆಸಿಕೊಳ್ಳಬೇಕು ಎಂಬುದು ನನ್ನ ಅನಿಸಿಕೆ. ಸಂದರ್ಶನದ ಬಳಿಕ, ಕ್ಯಾಬಿನ್ನಲ್ಲಿ ನಡೆದ ಸಂಗತಿಯನ್ನು ಎಚ್ಆರ್ಗೆ ಮೆಸೇಜ್ ಮೂಲಕ ತಿಳಿಸಿ, ನನ್ನ ಕ್ಯಾಂಡಿಡೇಚರ್ ಅನ್ನು ವಾಪಸ್ ಪಡೆಯುತ್ತಿರುವುದಾಗಿ ಹೇಳಿದೆ ಎಂದು ಈಕೆ ತಮ್ಮ ಪೋಸ್ಟ್ನಲ್ಲಿ ಬರೆದಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ