ಆಯುಷ್ಮಾನ್ ಭಾರತ್: ಕೇವಲ 40 ದಿನದಲ್ಲಿ 25 ಲಕ್ಷ ಹಿರಿಯ ನಾಗರಿಕರಿಗೆ ಹೆಲ್ತ್ ಇನ್ಷೂರೆನ್ಸ್ ಕಾರ್ಡ್
AB PM JAY scheme for senior citizens: ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆ ಅಡಿ 70 ವರ್ಷ ವಯಸ್ಸು ದಾಟಿದ ಹಿರಿಯ ನಾಗರಿಕರಿಗೆ 5 ಲಕ್ಷ ವಿಮಾ ಕವರೇಜ್ ನೀಡಲಾಗುತ್ತಿದೆ. 2024ರ ಅಕ್ಟೋಬರ್ 29ರಂದು ಚಾಲನೆಗೊಂಡ ವಯ ವಂದನ ಸ್ಕೀಮ್ನಲ್ಲಿ 50 ದಿನದಲ್ಲಿ 25 ಲಕ್ಷ ವೃದ್ಧರಿಗೆ ಕಾರ್ಡ್ ನೀಡಲಾಗಿದೆ. 22 ಸಾವಿರಕ್ಕೂ ಅಧಿಕ ವೃದ್ಧರು ಈಗಾಗಲೇ ಟ್ರೀಟ್ಮೆಂಟ್ ಪಡೆದಿದ್ದಾರೆ ಎಂದು ಹೇಳಲಾಗಿದೆ.
ನವದೆಹಲಿ, ಡಿಸೆಂಬರ್ 9: ಆಯುಷ್ಮಾನ್ ಭಾರತ್ ಜನ್ ಆರೋಗ್ಯ ಯೋಜನೆ ಬಹಳ ಜನಪ್ರಿಯವಾಗುತ್ತಿದೆ. 2024ರ ಅಕ್ಟೋಬರ್ 29ಕ್ಕೆ ಆರಂಭವಾದ ಈ ಯೋಜನೆ ಅಡಿ ಆಯುಷ್ಮಾನ್ ವಯ ವಂದನ ಇನ್ಷೂರೆನ್ಸ್ ಕಾರ್ಡ್ಗಳನ್ನು ಪಡೆದವರ ಸಂಖ್ಯೆ 25 ಲಕ್ಷ ದಾಟಿದೆ. 40 ದಿನಗಳ ಒಳಗೆಯೇ ಈ ಮೈಲಿಗಲ್ಲು ಮುಟ್ಟಿರುವುದು ಯೋಜನೆಯ ಜನಪ್ರಿಯತೆಗೆ ಕೈಗನ್ನಡಿಯಾಗಿದೆ. ಸರ್ಕಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಈವರೆಗೆ 25 ಲಕ್ಷಕ್ಕೂ ಹೆಚ್ಚು ಹಿರಿಯ ನಾಗರಿಕರು ಆಯುಷ್ಮಾನ್ ಕಾರ್ಡ್ ಪಡೆದಿದ್ದಾರೆ. 22,000ಕ್ಕೂ ಹೆಚ್ಚು ವೃದ್ಧರು ಈ ಇನ್ಷೂರೆನ್ಸ್ ಸೌಲಭ್ಯದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಒಟ್ಟಾರೆ 40 ಕೋಟಿ ರೂಗೂ ಅಧಿಕ ವೆಚ್ಚವನ್ನು ವಿಮೆಯಲ್ಲಿ ಭರಿಸಲಾಗಿದೆ.
ಕೊರೋನರಿ ಏಂಜಿಯೋಪ್ಲಾಸ್ಟಿ, ಹಿಪ್ ರೀಪ್ಲೇಸ್ಮೆಂಟ್, ಗ್ಯಾಲ್ ಬ್ಲ್ಯಾಡ್ ತೆಗೆದಿರುವುದು, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಪ್ರೋಸ್ಟೇಟ್ ರಿಸೆಕ್ಷನ್, ಸ್ಟ್ರೋಕ್, ಹೀಮೋಡಯಾಲಿಸಿಸ್, ಎಂಟೆರಿಕ್ ಫಿವರ್ ಮತ್ತಿತರ ಬೇರೆ ಬೇರೆ ಕಾಯಿಲೆ ಹಾಗೂ ಆರೋಗ್ಯ ಸಮಸ್ಯೆಗಳಿಗೆ ಆಯುಷ್ಮಾನ್ ವಯ ವಂದನಾ ಕಾರ್ಡ್ ಅನ್ನು ಬಳಸಿ ಚಿಕಿತ್ಸೆ ಪಡೆಯಲಾಗಿದೆ.
ಇದನ್ನೂ ಓದಿ: ಕಲಿಕೆಗೆ ವಯಸ್ಸಿನ ಅಡ್ಡಿ ಇಲ್ಲ; ಎಐ, ಡ್ರೋನ್ ಇತ್ಯಾದಿ ವಿದ್ಯೆ ಕಲಿಯುತ್ತಿರುವ ಹಿರಿಯ ನಾಗರಿಕರು
ಏನಿದು ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆ?
ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆಯು (ಎಬಿ ಪಿಎಂ ಜೆಎವೈ) ಮೂಲತಃ ಅಶಕ್ತರು, ನಿರ್ಬಲರು, ಶೋಷಿತರು, ಬಡವರಿಗೆ ಉಚಿತ ಆರೋಗ್ಯ ವಿಮೆ ನೀಡುವ ಸ್ಕೀಮ್ ಆಗಿದೆ. ಅಕ್ಟೋಬರ್ 29ರಂದು ಈ ಯೋಜನೆಯನ್ನು 70 ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೂ ವಿಸ್ತರಿಸಲಾಗಿದೆ. ಹಿರಿಯ ನಾಗರಿಕಗೆ ಆಯುಷ್ಮಾನ್ ವಯ ವಂದನ ಕಾರ್ಡ್ ಅನ್ನು ವಿತರಿಸಲಾಗುತ್ತಿದೆ.
ಈ ಯೋಜನೆಯಲ್ಲಿ ಒಂದು ಕುಟುಂಬಕ್ಕೆ ಒಂದು ವರ್ಷದಲ್ಲಿ 5 ಲಕ್ಷ ರೂವರೆಗೆ ಆರೋಗ್ಯ ವಿಮೆ ಸೌಲಭ್ಯ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ ಪ್ರತ್ಯೇಕವಾಗಿ ಈ ಸೌಲಭ್ಯ ಸಿಗುತ್ತದೆ. ಖಾಸಗಿ ಇನ್ಷೂರೆನ್ಸ್ ಪಾಲಿಸಿ ಅಥವಾ ಇಎಸ್ಐ ಸ್ಕೀಮ್ ಹೊಂದಿರುವವರೂ ಕೂಡ ಆಯುಷ್ಮಾನ್ ಭಾರತ್ ಸ್ಕೀಮ್ ಅಡಿಯಲ್ಲಿ ಹೆಲ್ತ್ ಇನ್ಷೂರೆನ್ಸ್ ಪಡೆಯಲು ಅವಕಾಶ ಇದೆ.
ಬೇರೆ ಖಾಸಗಿ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳಿಗೆ ಹೋಲಿಸಿದರೆ ಆಯುಷ್ಮಾನ್ ಭಾರತ್ ಯೋಜನೆ ವಿಭಿನ್ನ ಎನಿಸುವುದು ಅದರ ಕವರೇಜ್ ವ್ಯಾಪ್ತಿ. ಯಾವುದೇ ಪೂರ್ವ ರೋಗಗಳಿದ್ದರೂ ಈ ಸ್ಕೀಮ್ ಅನ್ವಯ ಆಗುತ್ತದೆ. ನೀವು ಕಾರ್ಡ್ ಮಾಡಿಸಿದ ಮೊದಲ ದಿನದಿಂದಲೇ ಚಿಕಿತ್ಸೆ ಪಡೆಯಲು ಆರಂಭಿಸಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ