ನವೆಂಬರ್​ನಲ್ಲಿ ಹಣದುಬ್ಬರ ಶೇ. 0.71; ಅಕ್ಟೋಬರ್​ಗಿಂತ 46 ಮೂಲಾಂಕಗಳಷ್ಟು ಬೆಲೆ ಹೆಚ್ಚಳ

2025 November inflation rate 0.71%: ಅಕ್ಟೋಬರ್​ನಲ್ಲಿ ಶೇ. 0.25ಕ್ಕೆ ಕುಸಿದಿದ್ದ ಹಣದುಬ್ಬರ 2025ರ ನವೆಂಬರ್​ನಲ್ಲಿ ಶೇ. 0.71ಕ್ಕೆ ಏರಿದೆ. ಆರ್​ಬಿಐ ನಿಗದಿ ಮಾಡಿದ ಹಣದುಬ್ಬರ ತಾಳಿಕೆಯ ಮಿತಿಯಾದ ಶೇ. 2ರ ದರಕ್ಕಿಂತ ಕಡಿಮೆಯೇ ಇದೆ. ಅಕ್ಟೋಬರ್​ಗೆ ಹೋಲಿಸಿದರೆ ನವೆಂಬರ್​ನಲ್ಲಿ ಆಹಾರವಸ್ತುಗಳ ಬೆಲೆ ಹೆಚ್ಚಿರುವುದರಿಂದ ಹಣದುಬ್ಬರವೂ ಹೆಚ್ಚಿದೆ.

ನವೆಂಬರ್​ನಲ್ಲಿ ಹಣದುಬ್ಬರ ಶೇ. 0.71; ಅಕ್ಟೋಬರ್​ಗಿಂತ 46 ಮೂಲಾಂಕಗಳಷ್ಟು ಬೆಲೆ ಹೆಚ್ಚಳ
ಹಣದುಬ್ಬರ

Updated on: Dec 12, 2025 | 5:14 PM

ನವದೆಹಲಿ, ಡಿಸೆಂಬರ್ 12: ಭಾರತದಲ್ಲಿ ನವೆಂಬರ್ ತಿಂಗಳ ರೀಟೇಲ್ ಹಣದುಬ್ಬರ (Inflation) ಶೇ. 0.71ರಷ್ಟಿದೆ. ಅಕ್ಟೋಬರ್ ತಿಂಗಳಲ್ಲಿ ಹಣದುಬ್ಬರ ದರ ಶೇ. 0.25ರಷ್ಟಿತ್ತು. ಅದಕ್ಕೆ ಹೋಲಿಸಿದರೆ ನವೆಂಬರ್​​ನಲ್ಲಿ 46 ಮೂಲಾಂಕಗಳಷ್ಟು ಪ್ರಮಾಣದಲ್ಲಿ ಹಣದುಬ್ಬರ ಹೆಚ್ಚಿದೆ. ಆದರೂ ಕೂಡ ಆರ್​ಬಿಐ ನಿಗದಿ ಮಾಡಿಕೊಂಡ ಹಣದುಬ್ಬರ ಗುರಿಗಿಂತ ಒಳಗೆಯೇ ಇದೆ. ಆಹಾರ ಹಣದುಬ್ಬರ ಮೈನಸ್ ಶೇ. 3.91ರಷ್ಟಿದೆ.

ಹಣದುಬ್ಬರದಲ್ಲಿ ಪ್ರಧಾನವಾಗಿರುವ ಆಹಾರ ವಸ್ತುಗಳು ನವೆಂಬರ್​ನಲ್ಲಿ ಬೆಲೆ ಕುಸಿತ ಕಂಡಿರುವುದು ಗಮನಾರ್ಹ. ಆದರೆ, ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ನವೆಂಬರ್​ನಲ್ಲಿ ಆಹಾರವಸ್ತುಗಳ ಬೆಲೆ ತುಸು ಏರಿಕೆ ಕಂಡಿವೆ. ತರಕಾರಿ, ಮೊಟ್ಟೆ, ಮಾಂಸ, ಮಸಾಲೆ, ಇಂಧನ, ವಿದ್ಯುತ್ ಇತ್ಯಾದಿ ದರಗಳು ತುಸು ಏರಿಕೆ ಕಂಡಿವೆ. ಹೀಗಾಗಿ, ಅಕ್ಟೋಬರ್​ಗಿಂತ ನವೆಂಬರ್​ನಲ್ಲಿ ಹಣದುಬ್ಬರ ಮೇಲ್ಮಟ್ಟದಲ್ಲಿದೆ.

ಇದನ್ನೂ ಓದಿ: ಭಾರತದ ಮ್ಯೂಚುವಲ್ ಫಂಡ್​ಗಳಲ್ಲಿದೆ ಪಾಕ್ ಜಿಡಿಪಿಗಿಂತ ಎರಡು ಪಟ್ಟು ಹೆಚ್ಚು ಹಣ

ಆಹಾರವಸ್ತುಗಳ ಬೆಲೆ ನವೆಂಬರ್​ನಲ್ಲಿ ಏರಿಕೆಯಾದರೂ ಒಟ್ಟಾರೆ ಅದು ಡೀಫ್ಲೇಶನ್ ಹಂತದಲ್ಲಿದೆ. ಅಂದರೆ, ಕಳೆದ ವರ್ಷದ ನವೆಂಬರ್​ಗೆ ಹೋಲಿಸಿದರೆ ಅವುಗಳ ಬೆಲೆ ಶೇ. 3.91ರಷ್ಟು ಕಡಿಮೆ ಆಗಿದೆ. ಅಕ್ಟೋಬರ್​ನಲ್ಲಿ ಇದು ಮೈನಸ್ ಶೇ. 5.02 ಇತ್ತು.

ಇನ್ನು, ಗ್ರಾಮೀಣ ಭಾಗದಲ್ಲಿ ಹಣದುಬ್ಬರ ಅಕ್ಟೋಬರ್​ನಲ್ಲಿ ಮೈನಸ್ ಶೇ. 0.25 ಇತ್ತು. ನವೆಂಬರ್​ನಲ್ಲಿ ಅದು ಶೇ. 0.10ಕ್ಕೆ ಏರಿದೆ. ಇದೇ ಗ್ರಾಮೀಣ ಭಾಗದಲ್ಲಿ ಆಹಾರ ಹಣದುಬ್ಬರ ಮೈನಸ್ ಶೇ. 4.05 ಇದೆ.

ನಗರ ಭಾಗದಲ್ಲಿ ಅಕ್ಟೋಬರ್​ನಲ್ಲಿ ಶೇ. 0.88ರಷ್ಟಿದ್ದ ಹಣದುಬ್ಬರ, ನವೆಂಬರ್​ನಲ್ಲಿ ಶೇ. 1.40ಕ್ಕೆ ಏರಿದೆ. ಇಲ್ಲಿ ಆಹಾರ ಹಣದುಬ್ಬರ ಮೈನಸ್ ಶೇ. 5.18ರಿಂದ ಮೈನಸ್ ಶೇ. 3.60ಗೆ ಏರಿದೆ.

ಇದನ್ನೂ ಓದಿ: ಬೆಂಗಳೂರು, ಚೆನ್ನೈನಲ್ಲಿ ಮೆಗಾಫ್ಯಾಕ್ಟರಿ ನಿರ್ಮಾಣಕ್ಕೆ ಆ್ಯಪಲ್ ಯೋಜನೆ: ವಿ ಅನಂತನಾಗೇಶ್ವರನ್

ಈ ವರ್ಷ (2025-26) ಹಣದುಬ್ಬರ ಶೇ. 2ರಷ್ಟಿರಬಹುದು ಎಂದು ಆರ್​ಬಿಐ ಎಂಪಿಸಿ ಸಭೆಯಲ್ಲಿ ಅಂದಾಜಿಸಲಾಗಿದೆ. ಒಟ್ಟಾರೆ, ಸರ್ಕಾರವು ಹಣದುಬ್ಬರವನ್ನು ಶೇ. 4ರ ಆಸುಪಾಸಿಗೆ ನಿಲ್ಲಿಸಬೇಕು ಎಂದು ಆರ್​ಬಿಐಗೆ ಗುರಿ ಕೊಟ್ಟಿದೆ. ಈ ನಿಟ್ಟಿನಲ್ಲಿ ತಾಳಿಕೆ ಮಿತಿಯಾಗಿ ಶೇ. 2ರಿಂದ ಶೇ. 6 ಅನ್ನು ಆರ್​ಬಿಐ ನಿಗದಿ ಮಾಡಿದೆ. ಕಳೆದ ಕೆಲ ತಿಂಗಳಿಂದ ಹಣದುಬ್ಬರವು ಈ ತಾಳಿಕೆಯ ಮಿತಿಗಿಂತ ಕೆಳಗೆಯೇ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ