ಬೆಂಗಳೂರು, ಸೆಪ್ಟೆಂಬರ್ 20: ಭಾರತದ ಮಾಹಿತಿ ತಂತ್ರಜ್ಞಾನ ದಿಗ್ಗಜನಾದ ಇನ್ಫೋಸಿಸ್ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ ಕಾಲಿಡುತ್ತಿದೆ. ಮಲ್ಟಿ ಸೆನ್ಸರ್ ಸೆಟಿಲೈಟ್ಗಳನ್ನು ತಯಾರಿಸುವ ಬೆಂಗಳೂರಿನ ಗೆಲಾಕ್ಸ್ಐ (GalaxEye) ಸ್ಟಾರ್ಟಪ್ವೊಂದರಲ್ಲಿ ಇನ್ಫೋಸಿಸ್ ಹೂಡಿಕೆ ಮಾಡುತ್ತಿದೆ. ಇನ್ಫೋಸಿಸ್ ತನ್ನ ಇನ್ನೋವೇಶನ್ ಫಂಡ್ ಮೂಲಕ ಎರಡು ಮಿಲಿಯನ್ ಡಾಲರ್ (17 ಕೋಟಿ ರೂ) ಹಣವನ್ನು ಗೆಲಾಕ್ಸ್ಐಗೆ ಬಂಡವಾಳವಾಗಿ ನೀಡುತ್ತಿದೆ. ಬೆಂಗಳೂರಿನ ಈ ಸ್ಟಾರ್ಟಪ್ನಲ್ಲಿ ಈ ಹೂಡಿಕೆ ಮೂಲಕ ಇನ್ಫೋಸಿಸ್ ಅಲ್ಪ ಷೇರುಪಾಲನ್ನು ಪಡೆಯಲಿದೆ. ಶೇ. 20ಕ್ಕಿಂತಲೂ ಕಡಿಮೆ ಷೇರುಪಾಲು ಇನ್ಫೋಸಿಸ್ನದ್ದಾಗುತ್ತದೆ. ಸೆಪ್ಟೆಂಬರ್ 30ಕ್ಕೆ ಒಪ್ಪಂದ ಅಂತಿಮವಾಗಬಹುದು.
ಇನ್ಫೋಸಿಸ್ ಮತ್ತು ಗೆಲಾಕ್ಸ್ಐ ಸಂಸ್ಥೆಗಳು ಜೊತೆಯಾಗಿ ಸೇರಿ ಹೊಸ ಸ್ಪೇಸ್ ಟೆಕ್ನಾಲಜಿ ಪರಿಹಾರಗಳನ್ನು ಅಭಿವೃದ್ದಿಪಡಿಸಲಿವೆ. ಬಾಹ್ಯಾಕಾಶ ಕ್ಷೇತ್ರದಲ್ಲಿರುವ ಕಂಪನಿಗಳಿಗೆ ಇದು ಸಹಾಯಕವಾಗಲಿದೆ.
ಇದನ್ನೂ ಓದಿ: ಲಕ್ಷಾಂತರ ಗ್ರಾಹಕರನ್ನು ಕಳೆದುಕೊಂಡ ಜಿಯೋ, ವೊಡಾಫೋನ್, ಏರ್ಟೆಲ್; ಏಕೈಕ ವಿನ್ನರ್ ಬಿಎಸ್ಸೆನ್ನೆಲ್
2021ರಲ್ಲಿ ಐಐಟಿ ಮದ್ರಾಸ್ನ ಐವರು ವಿದ್ಯಾರ್ಥಿಗಳು ಸೇರಿ ಬೆಂಗಳೂರಿನಲ್ಲಿ ಗೆಲಾಕ್ಸ್ಐ ಸ್ಟಾರ್ಟಪ್ ಸ್ಥಾಪಿಸಿದ್ದಾರೆ. ಎಲ್ಲಾ ಹವಾಮಾನದಲ್ಲೂ ರಾಡಾರ್ ಮತ್ತು ಆಪ್ಟಿಕಲ್ ಸೆನ್ಸಾರ್ ಬಳಸಿ ಹೈ ರೆಸಲ್ಯೂಶನ್ ಇಮೇಜ್ಗಳನ್ನು ಸೆರೆಹಿಡಿಯಬಲ್ಲಂತಹ ಸೆಟಿಲೈಟ್ಗಳನ್ನು ಇದು ತಯಾರಿಸಬಲ್ಲುದು. ಕೃಷಿ, ರಕ್ಷಣಾ ಕ್ಷೇತ್ರದಿಂದ ಹಿಡಿದು ನಗರ ಯೋಜನೆ, ವಿಪತ್ತು ನಿರ್ವಹಣೆವರೆಗೂ ವಿವಿಧ ಕ್ಷೇತ್ರಗಳಲ್ಲಿ ಇದರ ತಂತ್ರಜ್ಞಾನ ಬಳಕೆ ಆಗಬಲ್ಲುದು.
ಗೆಲಾಕ್ಸ್ಐ ಸಂಸ್ಥೆ ಇತ್ತೀಚೆಗಷ್ಟೇ ವಿವಿಧ ಕಂಪನಿಗಳಿಂದ ಫಂಡಿಂಗ್ ಪಡೆದಿತ್ತು. ಮೇಲಾ ವೆಂಚರ್ಸ್, ಸ್ಪೆಷಾಲೆ ಇನ್ವೆಸ್ಟ್, ಐಡಿಯಾ ಫೋರ್ಜ್, ರೈನ್ಮ್ಯಾಟರ್ ಮೊದಲಾದ ಸಂಸ್ಥೆಗಳ ಮೂಲಕ 6.5 ಮಿಲಿಯನ್ ಡಾಲರ್ (ಸುಮಾರು 55 ಕೋಟಿ ರೂ) ಬಂಡವಾಳ ಪಡೆದಿತ್ತು. 2025ರಲ್ಲಿ ದೃಷ್ಟಿ ಮಿಷನ್ ಎನ್ನುವ ಸೆಟಿಲೈಟ್ ಅನ್ನು ಉಡಾವಣೆ ಮಾಡಲಿದೆ. ಆ ಕಾರ್ಯಕ್ಕೆ ಫಂಡಿಂಗ್ ಬಳಸಿಕೊಳ್ಳಲಿದೆ. ಇನ್ಫೋಸಿಸ್ನಿಂದ ಸಿಕ್ಕಿರುವ ಬಂಡವಾಳವನ್ನು ಎರಡೂ ಕಂಪನಿಗಳು ಜಂಟಿಯಾಗಿ ಟೆಕ್ನಾಲಜಿ ಸಲ್ಯೂಶನ್ಸ್ಗೆ ಬಳಸಲಿವೆ.
ಇದನ್ನೂ ಓದಿ: ಮಾಲ್ಡೀವ್ಸ್ ಸಂಕಷ್ಟಕ್ಕೆ ಭಾರತದಿಂದ ನೆರವು; ಎರಡನೇ ಬಾರಿ ಟ್ರೆಷರಿ ಬಿಲ್ ಪಾವತಿಗೆ ಗಡುವು ವಿಸ್ತರಣೆ
ಸ್ಪೇಸ್ ಟೆಕ್ನಾಲಜಿಗೆಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಡಾಟಾ ಅನಾಲಿಟಿಕ್ಸ್ ಎರಡೂ ಸಂಯೋಜನೆಗೊಂಡರೆ ದತ್ತಾಂಶ ಆಧಾರಿತವಾಗಿ ನಿಖರ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ಕ್ಷೇತ್ರದ ಉದ್ದಿಮೆಗಳಿಗೆ ಸಹಾಯವಾಗಲಿದೆ ಎಂಬುದು ಇನ್ಫೋಸಿಸ್ನ ಅನಿಸಿಕೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ