ನವದೆಹಲಿ, ಮೇ 15: ರೈಲಿನಲ್ಲಿ ಪ್ರಯಾಣಿಸಬೇಕಾದರೆ ಟಿಕೆಟ್ ಖರೀದಿಸಬೇಕು. ಈ ಟಿಕೆಟ್ (IRCTC train ticket) ಕೇವಲ ರೈಲು ಪ್ರಯಾಣಕ್ಕೆ ಮಾತ್ರವೇ ಇರುವುದು ಎಂದೇ ಬಹುತೇಕರು ಭಾವಿಸಿದ್ದಾರೆ. ಈ ರೈಲು ಟಿಕೆಟ್ನಿಂದ ಇನ್ನೂ ಹಲವು ಸೌಲಭ್ಯಗಳು ಸಿಗುತ್ತವೆ. ಆಹಾರದಿಂದ ಹಿಡಿದು ವೈದ್ಯಕೀಯ ಚಿಕಿತ್ಸೆಯವರೆಗೆ ಹಲವು ಸೇವೆಗಳ ಅವಕಾಶ ಈ ಒಂದು ರೈಲು ಟಿಕೆಟ್ನಿಂದ ಲಭ್ಯ ಇರುತ್ತದೆ. ರಿಸರ್ವೇಶನ್ ಮಾಡಿಸಿ ಖಚಿತಗೊಂಡ ರೈಲು ಟಿಕೆಟ್ ಅನ್ನು ಹೊಂದಿರುವ ಪ್ರಯಾಣಿಕರಿಗೆ ಕೆಲ ಸೇವೆಗಳು ಉಚಿತವಾಗಿ ಸಿಗುತ್ತವೆ. ಇನ್ನೂ ಕೆಲವು ಸೇವೆಗಳು ಅಗ್ಗದ ಬೆಲೆಗೆ ಲಭಿಸುತ್ತವೆ.
ಇದನ್ನೂ ಓದಿ: ಹೊಸ ಇಪಿಎಫ್ಒ ಆಟೊ ಸೆಟಲ್ಮೆಂಟ್ ನಿಯಮ; ಸುಲಭವಾಗಿ ಹಣ ಹಿಂಪಡೆಯಿರಿ
ನೀವು ಟಿಕೆಟ್ ಬುಕ್ ಮಾಡಿದ ಬಳಿಕವೂ ರಿಟೈರಿಂಗ್ ರೂಮ್ ಸೌಲಭ್ಯಕ್ಕೆ ಕಾಯ್ದಿರಿಸಬಹುದು. ಐಆರ್ಸಿಟಿಸಿ ವೆಬ್ಸೈಟ್ಗೆ ಹೋಗಿ ಲಾಗಿನ್ ಆಗಿ, ‘ಮೈ ಬುಕಿಂಗ್’ ಸೆಕ್ಷನ್ಗೆ ಹೋಗಿ ನಿಮ್ಮ ಟಿಕೆಟ್ ತೆರೆಯಿರಿ. ಕೆಳಗೆ ರಿಟೈರಿಂಗ್ ರೂಮ್ ಆಯ್ಕೆ ಕಾಣಬಹುದು. ಅದನ್ನು ಕ್ಲಿಕ್ ಮಾಡಿ ವಿವರ ತುಂಬಿಸಿದರೆ ರಿಟೈರಿಂಗ್ ರೂಮ್ ಅನ್ನು ಕಾಯ್ದಿರಿಸಬಹುದು. ಒಂದು ದಿನಕ್ಕೆ 20 ರೂ ಆಗುತ್ತದೆ.
ಆನ್ಲೈನ್ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡುವಾಗ ಇನ್ಷೂರೆನ್ಸ್ ಆಯ್ಕೆಯೂ ಇರುತ್ತದೆ. ರೈಲ್ವೆ ಟಿಕೆಟ್ ದರಕ್ಕಿಂತ ಕೇವಲ 35 ಪೈಸೆ ಹೆಚ್ಚು ನೀಡಿದರೆ ಟಿಕೆಟ್ ಜೊತೆಗೆ ಟ್ರಾವಲ್ ಇನ್ಷೂರೆನ್ಸ್ ಸಿಗುತ್ತದೆ. ಐದು ಲಕ್ಷ ರೂ ಕವರೇಜ್ ಇರುತ್ತದೆ. 49 ಪೈಸೆಗೆ 10 ಲಕ್ಷ ರೂ ಕವರೇಜ್ ಸಿಗುತ್ತದೆ. ರೈಲು ಪ್ರಯಾಣದಲ್ಲಿ ಏನಾದರೂ ಹೆಚ್ಚುಕಡಿಮೆ ಆದರೆ ಇದು ಸಹಾಯಕ್ಕೆ ಬರುತ್ತದೆ.
ಇದನ್ನೂ ಓದಿ: ವಂದೇ ಭಾರತ್ ರೈಲು ಖಾಲಿ ಓಡುತ್ತಿದೆ ಎಂದ ಕಾಂಗ್ರೆಸ್ ಟೀಕೆಗೆ ಸಚಿವ ವೈಷ್ಣವ್ ಉತ್ತರ ಇದು
ರೈಲು ಪ್ರಯಾಣದ ವೇಳೆ ನಿಮಗೆ ಅನಾರೋಗ್ಯವಾದಲ್ಲಿ ಅಥವಾ ವೈದ್ಯಕೀಯ ಚಿಕಿತ್ಸೆಯ ಅಗತ್ಯ ಇದ್ದಲ್ಲಿ ಆರ್ಪಿಎಫ್ಗೆ ಮಾಹಿತಿ ನೀಡಬೇಕು. ಅಥವಾ 139 ನಂಬರ್ಗೆ ಕರೆ ಮಾಡಬಹುದು. ರೈಲಿನಲ್ಲೇ ಪ್ರಥಮ ಚಿಕಿತ್ಸೆ ಕೊಡಲಾಗುತ್ತದೆ. ಚಿಕಿತ್ಸೆಗೆ ಬೇಕಾದ ಸೌಲಭ್ಯ ರೈಲಿನಲ್ಲಿ ಇಲ್ಲದಿದ್ದಲ್ಲಿ ಮುಂದಿನ ನಿಲ್ದಾಣದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ