ಇಸ್ರೇಲ್ ಹಮಾಸ್ ಯುದ್ಧದ ಪರಿಣಾಮ; ಕಚ್ಛಾ ತೈಲಬೆಲೆ ಶೇ. 5ರಷ್ಟು ಹೆಚ್ಚಳ; ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಸಾಧ್ಯತೆ

|

Updated on: Oct 09, 2023 | 10:24 AM

Crude Oil Price Rise: ಇಸ್ರೇಲ್​ನಲ್ಲಿ ಸಂಭವಿಸುತ್ತಿರುವ ಯುದ್ಧದ ಪರಿಣಾಮವಾಗಿ ಜಾಗತಿಕ ತೈಲಬೆಲೆಗಳು ಶೇ. 5ರಷ್ಟು ಹೆಚ್ಚಾಗಿದೆ. ಸುತ್ತಮುತ್ತಲಿನ ಅರಬ್ ದೇಶಗಳು ಯುದ್ಧದಲ್ಲಿ ಭಾಗಿಯಾದರೆ ತೈಲ ಉತ್ಪಾದನೆ ಕುಂಠಿತಗೊಂಡು, ಬೆಲೆ ತೀವ್ರ ಮಟ್ಟದಲ್ಲಿ ಹೆಚ್ಚಳಗೊಳ್ಳುವ ಸಂಭಾವ್ಯತೆ ಇದೆ. ಡಬ್ಲ್ಯುಟಿಐ, ಬ್ರೆಂಟ್ ಕ್ರ್ಯೂಡ್ ಫ್ಯೂಚರ್ಸ್ ಮೊದಲಾದ ಬೆಂಚ್​ಮಾರ್ಕ್​ಗಳು ನಿರೀಕ್ಷೆಯಂತೆ ಏರಿವೆ. ಪರಿಣಾಮವಾಗಿ ಪೆಟ್ರೋಲ್ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ.

ಇಸ್ರೇಲ್ ಹಮಾಸ್ ಯುದ್ಧದ ಪರಿಣಾಮ; ಕಚ್ಛಾ ತೈಲಬೆಲೆ ಶೇ. 5ರಷ್ಟು ಹೆಚ್ಚಳ; ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಸಾಧ್ಯತೆ
ಕಚ್ಛಾ ತೈಲ
Follow us on

ನವದೆಹಲಿ, ಅಕ್ಟೋಬರ್ 9: ಇಸ್ರೇಲ್ ಮತ್ತು ಹಮಾಸ್ ಉಗ್ರರ ಮಧ್ಯೆ ಸಂಘರ್ಷ (Israel Hamas war) ನಡೆಯುತ್ತಿರುವ ಹಿನ್ನೆಲೆಯಲ್ಲಿ ನಿರೀಕ್ಷೆಯಂತೆ ಕಚ್ಛಾ ತೈಲ ಬೆಲೆಗಳು (crude oil prices) ಹೆಚ್ಚಳಗೊಂಡಿವೆ. ವಿಶ್ವದ ಪ್ರಮುಖ ಬೆಂಚ್​ಮಾರ್ಕ್​ಗಳೆನಿಸಿದ ಡಬ್ಲ್ಯುಟಿಐ ಮತ್ತು ಬ್ರೆಂಡ್ ಕ್ರ್ಯೂಡ್​ನಲ್ಲಿ ಕಚ್ಛಾ ತೈಲ ಬೆಲೆ ಶೇ. 4ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ಏರಿಕೆ ಆಗಿದೆ. ಅಮೆರಿಕದ ಡಬ್ಲ್ಯುಟಿಐ ಕ್ರ್ಯೂಡ್ ಬೆಂಚ್​ಮಾರ್ಕ್ ಶೇ. 5.1ರಷ್ಟು ಹೆಚ್ಚಾಗಿದೆ. ಅಲ್ಲಿ ಒಂದು ಬ್ಯಾರಲ್​ಗೆ 87.02 ಡಾಲರ್ (7,241 ರೂ) ಬೆಲೆ ಆಗಿದೆ. ಇನ್ನು, ಬ್ರೆಂಟ್ ಕ್ರ್ಯೂಡ್​ನಲ್ಲಿ ತೈಲ ಬೆಲೆ ಶೇ. 4.18ರಷ್ಟು ಏರಿಕೆ ಆಗಿದೆ. ಒಂದು ಬ್ಯಾರಲ್ ಕಚ್ಛಾ ತೈಲ ಬೆಲೆ 88.76 (7,386 ರೂ) ಡಾಲರ್ ಆಗಿದೆ.

ಇಸ್ರೇಲ್, ಪ್ಯಾಲಸ್ಟೀನ್ ಪ್ರದೇಶಗಳಲ್ಲಿ ತೈಲ ಉತ್ಪಾದನೆ ಆಗದೇ ಹೋದರೂ ಅದರ ಸುತ್ತಲೂ ತೈಲ ಉತ್ಪಾದಕ ದೇಶಗಳಿದ್ದು, ಈ ಯುದ್ಧದಿಂದ ಆ ದೇಶಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಬಹಳ ಹೆಚ್ಚಿದೆ. ಈ ಕಾರಣಕ್ಕೆ ಕಚ್ಛಾ ತೈಲ ಬೆಲೆಗಳು ಏರಿಕೆ ಕಂಡಿವೆ.

ಇದನ್ನೂ ಓದಿ: ಇಸ್ರೇಲ್-ಹಮಾಸ್ ಯುದ್ಧ; ದುಬಾರಿಯಾಗುತ್ತಾ ಚಿನ್ನ?; ಭಾರತದ ಷೇರುಪೇಟೆ ಮೇಲೇನು ಪರಿಣಾಮ?

ಹಮಾಸ್ ಉಗ್ರರ ಬೆಂಬಲಿಗ ದೇಶಗಳಲ್ಲಿ ಇರಾನ್ ಕೂಡ ಒಂದು. ಸಾಕಷ್ಟು ತೈಲ ರಫ್ತು ಮಾಡುವ ಇರಾನ್ ದೇಶ ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಭಾಗಿಯಾದರೆ ತೈಲ ಸರಬರಾಜಿಗೆ ಧಕ್ಕೆ ಆಗಲಿದೆ. ಒಂದು ಅಂದಾಜು ಪ್ರಕಾರ ಇರಾನ್ ದೇಶ ಯುದ್ಧದಲ್ಲಿ ಮುಳುಗಿಹೋದರೆ ಜಾಗತಿಕ ತೈಲ ಪೂರೈಕೆಯಲ್ಲಿ ಶೇ. 3ರಷ್ಟು ವ್ಯತ್ಯಯವಾಗಬಹುದು. ಮತ್ತೊಂದು ಪ್ರಮುಖ ತೈಲ ಉತ್ಪಾದಕ ದೇಶವಾದ ಸೌದಿ ಅರೇಬಿಯಾ ಕೂಡ ಹಮಾಸ್ ಉಗ್ರರನ್ನು ಬೆಂಬಲಿಸಿದೆ.

ಕಚ್ಛಾ ತೈಲ ಬೆಲೆ ಏರಿಕೆಯಿಂದ ಜಾಗತಿಕವಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳವಾಗಬಹುದು. ಭಾರತದಲ್ಲೂ ಪೆಟ್ರೋಲ್ ಬೆಲೆ ತುಸು ಏರಿಕೆ ಆಗುವ ಸಾಧ್ಯತೆ ಇದೆ. ಹಣದುಬ್ಬರ ನಿಯಂತ್ರಿಸಲು ಪರದಾಡುತ್ತಿರುವ ಭಾರತಕ್ಕೆ ಈ ಪೆಟ್ರೋಲ್ ಬೆಲೆ ಏರಿಕೆ ನಿಯಂತ್ರಿಸುವುದು ಬಹಳ ದೊಡ್ಡ ಸವಾಲಿನ ಕೆಲಸ ಆಗಬಹುದು.

ಇದನ್ನೂ ಓದಿ: ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದಲ್ಲಿ ಮೃತಪಟ್ಟವರ ಸಂಖ್ಯೆ 1,100ಕ್ಕೆ ಏರಿಕೆ

ಇದೇ ವೇಳೆ, ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಈವರೆಗಿನ ಸಾವಿನ ಸಂಖ್ಯೆ 1,100ರ ಗಡಿ ದಾಟಿದೆ. ಪ್ಯಾಲಸ್ಟೀನ್ ಅನ್ನು ಇಸ್ರೇಲ್​ನಿಂದ ಮುಕ್ತಗೊಳಿಸುವ ಉದ್ದೇಶದಿಂದ ಹಮಾಸ್ ಸಂಘಟನೆ ಭೀಕರ ದಾಳಿ ಮಾಡಿದೆ. ರಷ್ಯಾ, ಟರ್ಕಿ, ಸೌದಿ ಅರೇಬಿಯಾ, ಇರಾನ್, ಕತಾರ್ ಮೊದಲಾದ ದೇಶಗಳು ಹಮಾಸ್ ಸಂಘಟನೆಗೆ ಬೆನ್ನೆಲುಬಾಗಿ ಇವೆ.

ಅತ್ತ ಇಸ್ರೇಲ್​ಗೆ ಅಮೆರಿಕ ಹಾಗು ಅದರ ಮಿತ್ರಪಡೆಗಳು ಬೆಂಬಲ ಇದೆ. ಭಾರತ ಕೂಡ ಇಸ್ರೇಲ್​ಗೆ ಸ್ಪಷ್ಟ ಬೆಂಬಲ ಘೋಷಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 10:21 am, Mon, 9 October 23