ಬೆಂಗಳೂರಿನಷ್ಟೇ ದುಬಾರಿಯಾಗುತ್ತಿದೆ ಹೈದರಾಬಾದ್; ಪ್ರಮುಖ ನಗರಗಳಲ್ಲಿ ಐಷಾರಾಮಿ ಮನೆಗಳಿಗೆ ಬಲು ಬೇಡಿಕೆ
Residential Markets In India: ನೈಟ್ ಫ್ರಾಂಕ್ ಇಂಡಿಯಾ ಸಂಸ್ಥೆ ಬಿಡುಗಡೆ ಮಾಡಿದ ವರದಿಯೊಂದರ ಪ್ರಕಾರ 2023ರ ಜುಲೈನಿಂದ ಸೆಪ್ಟೆಂಬರ್ ಕ್ವಾರ್ಟರ್ನಲ್ಲಿ ಬೆಂಗಳೂರು ಸೇರಿದಂತೆ ಭಾರತದ ಎಂಟು ಪ್ರಮುಖ ನಗರಗಳಲ್ಲಿ 82,612 ವಾಸದ ಮನೆಗಳು ಮಾರಾಟವಾಗಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇವುಗಳ ಮಾರಾಟ ಶೇ. 12ರಷ್ಟು ಹೆಚ್ಚಳವಾಗಿದೆ. ಇನ್ನು, ಚದರಡಿಗೆ ಅತಿಹೆಚ್ಚು ಬೆಲೆ ಹೆಚ್ಚಳ ಕಂಡ ನಗರಗಳಲ್ಲಿ ಹೈದರಾಬಾದ್ ನಂಬರ್ ಎನಿಸಿದೆ.
ನವದೆಹಲಿ, ಅಕ್ಟೋಬರ್ 9: ಭಾರತದ ಆರ್ಥಿಕತೆ ಗರಿಗೆದರಿದಂತೆಲ್ಲಾ ರಿಯಲ್ ಎಸ್ಟೇಟ್ ಬಲಿಷ್ಠಗೊಳ್ಳುತ್ತಿದೆ. ಪ್ರಮುಖ ನಗರಗಳಲ್ಲಿ ಅಪಾರ್ಟ್ಮೆಂಟ್ ಇತ್ಯಾದಿ ವಾಸಸ್ಥಳಗಳಿಗೆ ಬಹಳ ಬೇಡಿಕೆ ಬಂದಿದೆ. ನೈಟ್ ಫ್ರಾಂಕ್ ಇಂಡಿಯಾ ಸಂಸ್ಥೆ (Knight Frank India) ಬಿಡುಗಡೆ ಮಾಡಿದ ವರದಿಯೊಂದರ ಪ್ರಕಾರ 2023ರ ಜುಲೈನಿಂದ ಸೆಪ್ಟೆಂಬರ್ ಕ್ವಾರ್ಟರ್ನಲ್ಲಿ ಭಾರತದ ಎಂಟು ಪ್ರಮುಖ ನಗರಗಳಲ್ಲಿ 82,612 ವಾಸದ ಮನೆಗಳು (Residential Property) ಮಾರಾಟವಾಗಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇವುಗಳ ಮಾರಾಟ ಶೇ. 12ರಷ್ಟು ಹೆಚ್ಚಳವಾಗಿದೆ.
ಮುಂಬೈ, ಬೆಂಗಳೂರು, ದೆಹಲಿ ಎನ್ಸಿಆರ್, ಚೆನ್ನೈ, ಹೈದರಾಬಾದ್, ಪುಣೆ ಮತ್ತು ಅಹ್ಮದಾಬಾದ್ ನಗರಗಳಲ್ಲಿನ ಮನೆಗಳ (Apartments/flats) ಮಾರಾಟವನ್ನು ಅವಲೋಕಿಸಿ ನೈಟ್ ಫ್ರಾಂಕ್ ವರದಿ ಮಾಡಿದೆ. ಇಲ್ಲಿ ಮನೆಗಳ ಸರಾಸರಿ ಬೆಲೆ ಲೆಕ್ಕಾಚಾರದಲ್ಲಿ ಹೈದರಾಬಾದ್ ಅತಿ ಹೆಚ್ಚಳಕಂಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಹೈದರಾಬಾದ್ನಲ್ಲಿ ಅಪಾರ್ಟ್ಮೆಂಟ್, ಫ್ಲ್ಯಾಟ್ ಬೆಲೆ ಶೇ. 11ರಷ್ಟು ಹೆಚ್ಚಾಗಿದೆ. ಬೆಂಗಳೂರನಲ್ಲಿ ಇದು ಶೇ. 6ರಷ್ಟು ಹೆಚ್ಚಾಗಿದೆ. ಆದರೆ, ಚದರಡಿಗೆ ಅತಿಹೆಚ್ಚು ಬೆಲೆ ಇರುವುದು ಮುಂಬೈನಲ್ಲಿ. ನಂತರದ ಸ್ಥಾನ ಬೆಂಗಳೂರಿನದ್ದು.
ಇದನ್ನೂ ಓದಿ: ಇಸ್ರೇಲ್ ಹಮಾಸ್ ಯುದ್ಧದ ಪರಿಣಾಮ; ಕಚ್ಛಾ ತೈಲಬೆಲೆ ಶೇ. 5ರಷ್ಟು ಹೆಚ್ಚಳ; ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಸಾಧ್ಯತೆ
ವಿವಿಧ ನಗರಗಳಲ್ಲಿ ಮನೆಗಳ ಬೆಲೆ ಚದರಡಿಗೆ
- ಮುಂಬೈ: 7,600 ರೂ
- ಬೆಂಗಳೂರು: 5,756 ರೂ
- ಹೈದರಾಬಾದ್: 5,518 ರೂ
- ದೆಹಲಿ ಎನ್ಸಿಆರ್: 4,669 ರೂ
- ಪುಣೆ: 4,463 ರೂ
- ಚೆನ್ನೈ: 4,429 ರೂ
- ಕೋಲ್ಕತಾ: 3,585 ರೂ
- ಅಹ್ಮದಾಬಾದ್: 3,012 ರೂ
ಸಾಕಷ್ಟು ಉದ್ಯಮಗಳನ್ನು ಆಕರ್ಷಿಸುತ್ತಿರುವ ಹೈದರಾಬಾದ್ನಲ್ಲಿ ಸಹಜವಾಗಿ ರಿಯಲ್ ಎಸ್ಟೇಟ್ ತ್ವರಿತವಾಗಿ ಬೆಳೆಯುತ್ತಿದೆ. ಅದರ ವಾಸಸ್ಥಳ ಮೌಲ್ಯ ಬಹುತೇಕ ಬೆಂಗಳೂರಿಗೆ ಸಮೀಪ ಬಂದಿದೆ.
ಇದನ್ನೂ ಓದಿ: ಬೆರಳೆಣಿಕೆಯ ಕಂಪನಿಗಳು ಭಾರತದ ಅಭಿವೃದ್ಧಿಯ ಹಣೆಬರಹ ಬರೆಯುವಂತಾಗಬಾರದು: ಉದಯ್ ಕೋಟಕ್
ದುಬಾರಿ ಮನೆಗಳು ಹೆಚ್ಚು ಸೇಲ್
ನೈಟ್ ಫ್ರ್ಯಾಂಕ್ ವರದಿಯಲ್ಲಿ ಕುತೂಹಲದ ಅಂಶವೊಂದನ್ನು ಕಾಣಬಹುದು. ಮೇಲಿನ ಈ ಎಂಟು ನಗರಗಳ ರೆಸಿಡೆನ್ಷಿಯಲ್ ಮಾರುಕಟ್ಟೆಯಲ್ಲಿ ಜುಲೈನಿಂದ ಸೆಪ್ಟೆಂಬರ್ವರೆಗೆ 82,612 ಯೂನಿಟ್ಗಳು ಮಾರಾಟವಾಗಿವೆ. ಇದರಲ್ಲಿ 1 ಕೋಟಿ ರೂಗಿಂತ ಹೆಚ್ಚಿನ ಬೆಲೆಯ ಪ್ರಾಪರ್ಟಿಗಳು ಮಾರಾಟವಾಗಿದ್ದು 28,642. ಇನ್ನು, 50 ಲಕ್ಷದಿಂದ 1 ಕೋಟಿ ರೂ ಒಳಗಿನ ಬೆಲೆಯ 29,827 ಯೂನಿಟ್ಗಳು ಸೇಲ್ ಆಗಿವೆ. 50 ಲಕ್ಷದೊಳಗಿನ ಬೆಲೆಯ ಮನೆಗಳು ಮಾರಾಟವಾಗಿದ್ದು 24,143 ಮಾತ್ರವೇ.
ಅಂದರೆ, ಜನರು ಸ್ವಂತ ಮನೆಗಾಗಿ ಹೆಚ್ಚು ಖರ್ಚು ಮಾಡುತ್ತಿರುವುದು ಈ ಅಂಕಿ ಅಂಶದಿಂದ ವೇದ್ಯವಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ