ಭಾರತೀಯ ಅಂತರಿಕ್ಷ ನಿಲ್ದಾಣದ ರೂಪುರೇಖೆ ಅಂತಿಮಗೊಳಿಸಿದ ಇಸ್ರೋ ಮತ್ತು ಸರ್ಕಾರ

Bharatiya Antariksh Nildan's configuration complete: ಭಾರತ ಮೊದಲ ಬಾಹ್ಯಾಕಾಶ ನಿಲ್ದಾಣದ ಪೂರ್ಣ ರೂಪುರೇಖೆಯನ್ನು ಅಥವಾ ಕಾನ್ಫಿಗರೇಶನ್ ಅನ್ನು ಇಸ್ರೋ ಪೂರ್ಣಗೊಳಿಸಿದೆ. ಈ ವಿನ್ಯಾಸಕ್ಕೆ ಕೇಂದ್ರ ಸರ್ಕಾರವೂ ಕೂಡ ಹಸಿರುನಿಶಾನೆ ಕೊಟ್ಟಿದೆ. ಎಲ್ಲಾ ಅಂದುಕೊಂಡಂತೆ ಆದರೆ ಅಂತರಿಕ್ಷ ನಿಲ್ದಾಣದ ಮೊದಲ ಮಾಡ್ಯೂಲ್ 2028ಕ್ಕೆ, ಹಾಗೂ ನಿಲ್ದಾಣದ ಪೂರ್ಣ ಚಾಲನೆ 2035ಕ್ಕೂ ಆಗಲಿದೆ.

ಭಾರತೀಯ ಅಂತರಿಕ್ಷ ನಿಲ್ದಾಣದ ರೂಪುರೇಖೆ ಅಂತಿಮಗೊಳಿಸಿದ ಇಸ್ರೋ ಮತ್ತು ಸರ್ಕಾರ
ನಾಸಾದ ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್

Updated on: Dec 05, 2025 | 4:06 PM

ನವದೆಹಲಿ, ಡಿಸೆಂಬರ್ 5: ಭಾರತ ಮತ್ತೊಂದು ಮೈಲಿಗಲ್ಲು ಸ್ಥಾಪಿಸುವತ್ತ ಹೆಜ್ಜೆ ಇರಿಸುತ್ತಿದೆ. ಬಹಳ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುವ ಕನಸು ಸಾಕಾರಗೊಳ್ಳಲು ಇದು ಎಡೆ ಮಾಡಿಕೊಡಲಿದೆ. ಭಾರತೀಯ ಅಂತರಿಕ್ಷ ನಿಲ್ದಾಣದ (Bharatiya Antariksh Station) ರೂಪುರೇಖೆ ಅಥವಾ ಸ್ವರೂಪವನ್ನು ಇಸ್ರೋ ಸಂಸ್ಥೆ (ISRO) ಸಿದ್ಧಪಡಿಸಿದೆ. ಇದು ಭಾರತದ ಮೊದಲ ಸ್ಪೇಸ್ ಸ್ಟೇಷನ್ ಅಥವಾ ಬಾಹ್ಯಾಕಾಶ ನಿಲ್ದಾಣ (Space Station) ಎನಿಸಲಿದೆ.

ಅಂತರಿಕ್ಷ ನಿಲ್ದಾಣಕ್ಕೆ ಇಸ್ರೋ ಸಿದ್ಧಪಡಿಸಿರುವ ರೂಪುರೇಖೆಯನ್ನು ರಾಷ್ಟ್ರಮಟ್ಟದ ಪರಾಮರ್ಶ ಸಮಿತಿ ಪರಿಶೀಲನೆ ನಡೆಸಿ ಒಪ್ಪಿಗೆ ಕೊಟ್ಟಿದೆ. ಕೇಂದ್ರ ವಿಜ್ಞಾನ ಹಾಗು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಈ ಮಾಹಿತಿಯನ್ನು ಇತ್ತೀಚೆಗೆ ಲೋಕಸಭೆಗೆ ಹಂಚಿಕೊಂಡಿದ್ದಾರೆ.

ಭಾರತೀಯ ಅಂತರಿಕ್ಷ ನಿಲ್ದಾಣದಲ್ಲಿ ಐದು ಮಾಡ್ಯೂಲ್​ಗಳಿರುವಂತೆ ಯೋಜಿಸಲಾಗಿದೆ. ಈ ಎಲ್ಲಾ ಐದು ಮಾಡ್ಯೂಲ್​ಗಳಿರುವ ನಿಲ್ದಾಣವು 2035ರಲ್ಲಿ ಕಾರ್ಯಾಚರಿಸಲಾಗುವಂತೆ ಮಾಡುವ ಗುರಿ ಇದೆ. 2024ರ ಸೆಪ್ಟೆಂಬರ್​ನಲ್ಲಿ ಬಿಎಎಸ್-01 ಎನ್ನುವ ಮೊದಲ ಮಾಡ್ಯೂಲ್​ನ ಅಭಿವೃದ್ಧಿಗೆ ಸರ್ಕಾರ ಚಾಲನೆ ಕೊಟ್ಟಿತ್ತು. ಇದು ಮೂಲ ಮಾಡ್ಯೂಲ್ ಎಂದೇ ಪರಿಗಣಿತವಾಗಿದ್ದು 2028ಕ್ಕೆ ಮುಗಿಯಬಹುದು. ಈಗಾಗಲೇ ಮಾಡ್ಯೂಲ್​ನ ಟೆಕ್ನಾಲಜಿ ಸಬ್ಸಿಸ್ಟಂಗಳು, ಕಾಂಪೊನೆಂಟ್​ಗಳಿಗೆ ಎಂಜಿನಿಯರಿಂಗ್ ಕೆಲಸಗಳು ನಡೆಯುತ್ತಿವೆ.

ಇದನ್ನೂ ಓದಿ: ಆರ್​ಬಿಐನಿಂದ ಲಕ್ಷ ಕೋಟಿ ರೂ ಒಎಂಒ ಖರೀದಿ; 5 ಬಿಲಿಯನ್ ಡಾಲರ್ ಕರೆನ್ಸಿ ಖರೀದಿಗೆ ನಿರ್ಧಾರ; ಏನಿದರ ಮಹತ್ವ

ಇತರ ಅಂತಾರಾಷ್ಟ್ರೀಯ ಏಜೆನ್ಸಿಗಳ ಸಿಸ್ಟಂಗಳಿಗೆ ತಾಳೆಯಾಗಬೇಕು…

ಭಾರತೀಯ ಅಂತರಿಕ್ಷ ನಿಲ್ದಾಣದ ಮಾಡ್ಯೂಲ್​ಗಳನ್ನು ಇತರ ಅಂತಾರಾಷ್ಟ್ರೀಯ ಸ್ಪೇಸ್ ಏಜೆನ್ಸಿಗಳ ಸ್ಪೇಸ್​ಕ್ರಾಫ್ಟ್​ಗಳು ಬಳಸಲು ಸಾಧ್ಯವಾಗುವ ರೀತಿಯಲ್ಲಿ, ಇಂಟರಾಪರಾಬಿಲಿಟಿ ಸಾಧ್ಯವಾಗುವ ರೀತಿಯಲ್ಲಿ ನಿರ್ಮಿಸಲಾಗುತ್ತಿದೆ. ಇದರಿಂದ ಅಂತರಿಕ್ಷ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪ್ರಾಜೆಕ್ಟ್​ಗಳು ನಡೆಯಲು ಸಾಧ್ಯವಾಗುತ್ತದೆ. ಇಲ್ಲವಾದರೆ, ಭಾರತ ಮಾತ್ರವೇ ಈ ನಿಲ್ದಾಣಕ್ಕೆ ಹೋಗಿ ಬಂದು ಮಾಡಬೇಕಾಗುತ್ತದೆ.

ಬೇರೆ ಸ್ಪೇಸ್ ಸ್ಟೇಷನ್​ಗಳು ಎಷ್ಟಿವೆ?

ಸದ್ಯ ಚಾಲನೆಯಲ್ಲಿರುವ ಸ್ಪೇಸ್ ಸ್ಟೇಷನ್​ಗಳು ಎರಡೇ. ಒಂದು, ಅಮೆರಿಕದ ಐಎಸ್​ಎಸ್ ಅಥವಾ ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್. ಇನ್ನೊಂದು ಚೀನಾದ ಟಿಯಾಂಗೋಂಗ್ ಸ್ಪೇಸ್ ಸ್ಟೇಷನ್. ಇವೆರಡು ಕೂಡ ಭೂಮಿಯಿಂದ ಸುಮಾರು 350ರಿಂದ 450 ಕಿಮೀ ದೂರದಲ್ಲಿ ಒಂದು ಕಕ್ಷೆಯಲ್ಲಿ ಭೂಮಿಯನ್ನು ಸುತ್ತುತ್ತಿವೆ.

ಇದನ್ನೂ ಓದಿ: ಕೇಂದ್ರೀಯ ಅಬಕಾರಿ ತಿದ್ದುಪಡಿ ಮಸೂದೆಗೆ ಸಂಸತ್ ಅಸ್ತು; ರಾಜ್ಯಗಳಿಗೂ ಲಾಭ ಹಂಚಿಕೆ ಎಂದ ನಿರ್ಮಲಾ ಸೀತಾರಾಮನ್

ವಿಶ್ವದ ಮೊದಲ ಸ್ಪೇಸ್ ಸ್ಟೇಷನ್ ಅನ್ನು ರಷ್ಯಾ 1971ರಲ್ಲೇ ನಿರ್ಮಿಸಿದೆ. ಇಲ್ಲಿಯವರೆಗೆ 10ಕ್ಕೂ ಹೆಚ್ಚು ಸ್ಪೇಸ್ ಸ್ಟೇಷನ್​ಗಳು ನಿರ್ಮಾಣವಾಗಿವೆ. ಈಗ ಚಾಲನೆಯಲ್ಲಿರುವುದು ಮೇಲೆ ತಿಳಿಸಿದ ಎರಡು ಮಾತ್ರವೇ. ಉಳಿದವು ಈಗ ಇಲ್ಲ.

ರಷ್ಯಾ, ಅಮೆರಿಕ, ಚೀನಾ, ಯೂರೋಪ್, ಕೆನಡಾ ಮತ್ತು ಜಪಾನ್ ದೇಶಗಳು ಮಾತ್ರ ಸ್ಪೇಸ್ ಸ್ಟೇಷನ್ ನಿರ್ಮಾಣ ತಂತ್ರಜ್ಞಾನ ತಿಳಿದಿರುವುದು. ಆದರೆ, ಸ್ವಂತವಾಗಿ ಮತ್ತು ಏಕಾಂಗಿಯಾಗಿ ಸ್ಪೇಸ್ ಸ್ಟೇಷನ್ ನಿರ್ಮಿಸುವ ಸಾಮರ್ಥ್ಯ ರಷ್ಯಾ, ಚೀನಾ ಮತ್ತು ಅಮೆರಿಕಕ್ಕೆ ಮಾತ್ರ ಇರುವುದು. ಈ ಸಾಲಿಗೆ ಭಾರತವೂ ಸೇರ್ಪಡೆಯಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ