ನವದೆಹಲಿ, ಸೆಪ್ಟೆಂಬರ್ 10: ಏಷ್ಯಾ, ಯೂರೋಪ್ ಮತ್ತು ಆಫ್ರಿನ್ ದೇಶಗಳೊಂದಿಗೆ ಸರಾಗ ವ್ಯವಹಾರ ಸ್ಥಾಪಿಸಲು ಚೀನಾ ಕೈಗೊಂಡಿರುವ ಮಹತ್ವಾಕಾಂಕ್ಷಿ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ (BRI- Belt and Road Initiative) ಯೋಜನೆಗೆ ಮುಂದಿನ ದಿನಗಳು ಹೆಚ್ಚೆಚ್ಚು ತೊಡಕುಗಳನ್ನು ನಿರ್ಮಿಸುವ ಸಾಧ್ಯತೆ ಕಾಣುತ್ತಿದೆ. ಭಾರತದ ನೇತೃತ್ವದಲ್ಲಿ ನಡೆಯುವ ಇಂಡಿಯಾ ಮಿಡಲ್ ಈಸ್ಟ್ ಯೂರೋಪ್ ಎಕನಾಮಿಕ್ ಕಾರಿಡಾರ್ ಯೋಜನೆಯ ಘೋಷಣೆ ಆಗುತ್ತಿರುವಂತೆಯೇ ಚೀನಾದ ಸಿಲ್ಕ್ ರೋಡ್ ಪ್ರಾಜೆಕ್ಟ್ಗೆ ಒಂದು ಪ್ರಮುಖ ವಿಕೆಟ್ ಪತನಗೊಂಡಿದೆ. ಜಿ20 ಶೃಂಗಸಭೆಯ ಮೊದಲ ದಿನವಾದ ನಿನ್ನೆ (ಸೆ. 9) ಭಾರತ ಯೂರೋಪ್ ಇಕನಾಮಿಕ್ ಕಾರಿಡಾರ್ಗೆ ಎಂಒಯುಗೆ ಸಹಿಹಾಕಿದ ಬೆನ್ನಲ್ಲೇ ಇಟಲಿ ದೇಶ ಬಿಅರ್ಐನಿಂದ ಹೊರಬೀಳಲು ನಿರ್ಧರಿಸಿದೆ.
ಜಿ20 ಶೃಂಗಸಭೆಯ ವೇಳೆ ಚೀನಾದ ಪ್ರಧಾನಿ ಲಿ ಕಿಯಾಂಗ್ ಅವರನ್ನು ಖಾಸಗಿಯಾಗಿ ಭೇಟಿ ಮಾಡಿದ ಇಟಲಿ ಪ್ರಧಾನಿ ಜಾರ್ಜಿಯಾ ಮಿಲೋನಿ ಬೆಲ್ಟ್ ಅಂಡ್ ರೋಡ್ ಪ್ರಾಜೆಕ್ಟ್ನಿಂದ ಹೊರಬೀಳುವ ಆಲೋಚನೆಯಲ್ಲಿರುವುದಾಗಿ ತಿಳಿಸಿದರೆಂದು ಬ್ಲೂಮ್ಬರ್ಗ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಚೀನಾದ ಈ ಸಿಲ್ಕ್ ರೋಡ್ ಯೋಜನೆಯಿಂದ ಹೊರಬೀಳಲು ಇಟಲಿ ದಿಢೀರ್ ಆಗಿ ಕೈಗೊಂಡ ನಿರ್ಧಾರ ಅಲ್ಲ. ಬಿಆರ್ಐ ಯೋಜನೆಯಲ್ಲಿ ಇಟಲಿ ಜೋಡಿತವಾಗಿದ್ದು ಅಮೆರಿಕಕ್ಕೆ ಇರಿಸುಮುರುಸು ತಂದಿತ್ತು. ಅಮೆರಿಕ ಮತ್ತು ಇಟಲಿ ನಡುವಿನ ಸಂಬಂಧದಲ್ಲಿ ಬಿರುಕು ಮೂಡಬಹುದೇನೋ ಎಂದನಿಸಿತ್ತು. ಇದೇ ಹೊತ್ತಿನಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ನಡೆದ ಜಿ20 ಶೃಂಗಸಭೆಯಲ್ಲಿ ಹೊಸ ಎಕನಾಮಿಕ್ ಕಾರಿಡಾರ್ ಯೋಜನೆಯ ಘೋಷಣೆ ಆಗಿದ್ದು, ಇಟಲಿ ಸೇರಿದಂತೆ ಹಲವು ದೇಶಗಳು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿವೆ. ಹೀಗಾಗಿ, ಚೀನಾದ ಬಿಆರ್ಐ ಯೋಜನೆಯಿಂದ ಹೊರಬರುವುದು ಇಟಲಿ ನಿರ್ಧರಿಸುವುದು ಅನಿವಾರ್ಯ ಎಂದೆನ್ನಲಾಗಿದೆ.
ಇದನ್ನೂ ಓದಿ: ಚೀನಾದ ಮಹತ್ವಾಕಾಂಕ್ಷಿ ಸಿಲ್ಕ್ ರೋಡ್ ಯೋಜನೆಗೆ ಎದುರಾಗಿ ಭಾರತದಿಂದ ಪರ್ಯಾಯ ಎಕನಾಮಿಕ್ ಕಾರಿಡಾರ್ ಪ್ರಾಜೆಕ್ಟ್
ಚೀನಾದ ಬೆಲ್ಟ್ ಅಂಡ್ ರೋಡ್ ಪ್ರಾಜೆಕ್ಟ್ ಬಹಳ ದೊಡ್ಡ ಮಹತ್ವಾಕಾಂಕ್ಷಿ ಯೋಜನೆ ಎನಿಸಿದೆ. ಶತಮಾನಗಳ ಹಿಂದೆ ಚೀನಾ ಮತ್ತು ಯೂರೋಪ್ ನಡುವೆ ಸಾಕಷ್ಟು ವ್ಯವಹಾರಗಳ ಹರಿವು ಇತ್ತು. ಉದ್ದಕ್ಕೂ ಆರ್ಥಿಕ ಕಾರಿಡಾರ್ ಆಗಲೇ ನಿರ್ಮಾಣವಾಗಿತ್ತು. ಈಗ ಚೀನಾ ಗತ ಇತಿಹಾಸಕ್ಕೆ ಮರುಜೀವ ಕೊಡುತ್ತಿದೆ.
ಕೆಲವು ಟ್ರಿಲಿಯನ್ ಡಾಲರ್ನಷ್ಟು ಮೊತ್ತದ ಈ ಯೋಜನೆಯ ಮೂಲಕ ಚೀನಾ 2047ರಷ್ಟರಲ್ಲಿ 65 ದೇಶಗಳ ಕಾರಿಡಾರ್ ನಿರ್ಮಿಸಹೊರಟಿದೆ. ಪಾಕಿಸ್ತಾನ, ಶ್ರೀಲಂಕಾ ಮೊದಲಾದ ದೇಶಗಳಿಗೆ ಕಾರಿಡಾರ್ಗೆ ಪೂರಕವಾದ ಇನ್ಫ್ರಾಸ್ಟ್ರಕ್ಚರ್ ನಿರ್ಮಿಸಲು ಸಾಲಗಳನ್ನು ಒದಗಿಸುತ್ತದೆ. ದೊಡ್ಡ ವ್ಯವಹಾರದಿಂದ ಭವಿಷ್ಯದಲ್ಲಿ ಭರ್ಜರಿ ಲಾಭ ಸಿಗುವ ನಿರೀಕ್ಷೆಯಲ್ಲಿ ತಮ್ಮ ಆದಾಯಕ್ಕೆ ಮೀರಿದ ಸಾಲಗಳನ್ನು ಮಾಡಿ ಪಾಕಿಸ್ತಾನದಂಥ ದೇಶಗಳು ಶೂಲಕ್ಕೆ ಸಿಲುಕುವಂತಾಗಿವೆ.
ಇದನ್ನೂ ಓದಿ: ಪ್ಯಾರಿಸ್ ಒಪ್ಪಂದದ ಹವಾಮಾನ ಗುರಿ ಈಡೇರಿಸಲು ಅಭಿವೃದ್ಧಿಶೀಲ ದೇಶಗಳಿಗೆ ಬೇಕು 5.9 ಟ್ರಿಲಿಯನ್ ಡಾಲರ್: ಜಿ20 ಸಭೆ ಅನಿಸಿಕೆ
ಸಾಲ ನೀಡಿ ಶೂಲಕ್ಕೆ ಸಿಲುಕಿಸುವ ತಂತ್ರ ಅನುಸರಿಸುತ್ತಿರುವ ಚೀನಾ, ಆ ಮೂಲಕ ಒಂದು ದೇಶದ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ಮಾಡುತ್ತಿದೆ ಎಂಬ ಆರೋಪ ಇದೆ. ಜಿ20 ಶೃಂಗಸಭೆಯಲ್ಲಿ ಅಧ್ಯಕ್ಷನಾಗಿ ಭಾರತ ಈ ವಿಚಾರವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಚೀನಾವನ್ನು ಕುಟುಕಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ