ಪ್ಯಾರಿಸ್ ಒಪ್ಪಂದದ ಹವಾಮಾನ ಗುರಿ ಈಡೇರಿಸಲು ಅಭಿವೃದ್ಧಿಶೀಲ ದೇಶಗಳಿಗೆ ಬೇಕು 5.9 ಟ್ರಿಲಿಯನ್ ಡಾಲರ್: ಜಿ20 ಸಭೆ ಅನಿಸಿಕೆ

|

Updated on: Sep 10, 2023 | 1:09 PM

G20 Summit: ಪ್ಯಾರಿಸ್ ಒಪ್ಪಂದದ ಪ್ರಕಾರ ಭೂಮಿಯ ಹವಾಮಾನ ಬದಲಾವಣೆಯ ಅಪಾಯ ತಪ್ಪಿಸಲು ನಿಶ್ಚಿತ ಮಾಡಿರುವ ಗುರಿ ಈಡೇರಿಕೆಗೆ ಪ್ರತಿಯೊಂದು ದೇಶಗಳಿಗೆ ನಿರ್ದಿಷ್ಟ ವೆಚ್ಚವಾಗುತ್ತದೆ. 2030ರಷ್ಟರಲ್ಲಿ ಅಭಿವೃದ್ಧಿಶೀಲ ದೇಶಗಳಿಗೆ ಈ ಗುರಿ ಈಡೇರಿಕೆಗೆ 5.9 ಟ್ರಿಲಿಯನ್ ಡಾಲರ್ ಹಣ ಬೇಕಾಗುತ್ತದೆ. ನೆಟ್ ಝೀರೋ ಎಮಿಷನ್ಸ್ ಗುರಿ ಈಡೇರಿಕೆಗೆ ವರ್ಷಕ್ಕೆ 4 ಟ್ರಿಲಿಯನ್ ಡಾಲರ್ ಬೇಕಾಗುತ್ತದೆ ಎಂಬ ಅಂಶವನ್ನು ಜಿ20 ಸಭೆಯಲ್ಲಿ ಒಪ್ಪಲಾಗಿದೆ.

ಪ್ಯಾರಿಸ್ ಒಪ್ಪಂದದ ಹವಾಮಾನ ಗುರಿ ಈಡೇರಿಸಲು ಅಭಿವೃದ್ಧಿಶೀಲ ದೇಶಗಳಿಗೆ ಬೇಕು 5.9 ಟ್ರಿಲಿಯನ್ ಡಾಲರ್: ಜಿ20 ಸಭೆ ಅನಿಸಿಕೆ
ಜಿ20 ಸಭೆ
Follow us on

ನವದೆಹಲಿ, ಸೆಪ್ಟೆಂಬರ್ 10: ಜಾಗತಿಕ ಹವಾಮಾನ ಬದಲಾವಣೆಯ ಬಹುದೊಡ್ಡ ಅಪಾಯದ ತೂಗುಗತ್ತಿ ಈ ಜಗತ್ತಿನ ಮೇಲಿದೆ. ಇದನ್ನು ತಪ್ಪಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹವಾಮಾನ ಕ್ರಮಗಳ ಬಗ್ಗೆ ಒಪ್ಪಂದವಾಗಿದೆ. ಪ್ಯಾರಿಸ್​ನಲ್ಲಿ 2015ರಲ್ಲಿ ನಡೆದ ವಿಶ್ವಸಂಸ್ಥೆ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ (2015 UN Climate Change Conference) ವಿವಿಧ ಅಂಶಗಳ ಬಗ್ಗೆ ಎಲ್ಲಾ ದೇಶಗಳಿಗೂ ಕಟ್ಟುಪಾಡುಗಳನ್ನು ಹಾಕಲಾಗಿದೆ. ಗ್ಲೋಬಲ್ ವಾರ್ಮಿಂಗ್ ಅಥವಾ ಜಾಗತಿಕ ಉಷ್ಣತೆ ಏರಿಕೆಯನ್ನು (Global Warming) 1.5 ಡಿಗ್ರಿ ಸೆಲ್ಷಿಯಸ್​ಗೆ ಮಿತಿಗೊಳಿಸಲು ಗುರಿ ಇಡಲಾಗಿದೆ. ವಿಶ್ವಸಂಸ್ಥೆಯ ಅಡಿಯಲ್ಲಿರುವ ಎಲ್ಲಾ ದೇಶಗಳೂ ಈ ಹವಾಮಾನ ಸಮಸ್ಯೆ ವಿರುದ್ಧ ಕ್ರಮ ಕೈಗೊಳ್ಳಲು ಬದ್ಧತೆ ಹೊಂದಿರಬೇಕು. ಜಾಗತಿಕ ಉಷ್ಣತೆ ಏರಿಕೆಯನ್ನು 2 ಡಿಗ್ರಿ ಸೆಲ್ಷಿಯಸ್​ನೊಳಗೆ ಮಿತಿಗೊಳಿಸುವ ಗುರಿ ಈಡೇರಿಕೆಗೆ ಸಾಕಷ್ಟು ಪೂರಕ ಕ್ರಮಗಳನ್ನು ಕೈಗೊಳ್ಳಬೇಕು. ಅದಕ್ಕೆ ಬಹಳಷ್ಟು ವೆಚ್ಚವಾಗುತ್ತದೆ. 2030ರವರೆಗಿನ ಅವಧಿಯಲ್ಲಿ ಅಭಿವೃದ್ಧಿಶೀಲ ದೇಶಗಳ ಎನ್​ಡಿಸಿ (ನ್ಯಾಷನಲಿ ಡಿಟರ್ಮೈನ್ಡ್ ಕಾಂಟ್ರಿಬ್ಯೂಶನ್ಸ್) ಗುರಿ ತಲುಪಲು 5.9 ಟ್ರಿಲಿಯನ್ ಡಾಲರ್ (ಸುಮಾರು 490 ಲಕ್ಷಕೋಟಿ ರೂ) ಬೇಕಾಗುತ್ತದೆ ಎಂದು ಜಿ20 ಸಭೆಯಲ್ಲಿ ಅಂದಾಜು ಮಾಡಲಾಗಿದೆ.

2050ರಷ್ಟರಲ್ಲಿ ನಿವ್ವಳ ಶೂನ್ಯ ಹೊರಸೂಸುವಿಕೆ (Net Zero Emissions) ಗುರಿಯನ್ನು ತಲುಪಲು ಸ್ವಚ್ಛ ಇಂಧನ ತಂತ್ರಜ್ಞಾನದ ಅಭಿವೃದ್ಧಿ ಆಗಬೇಕಾಗುತ್ತದೆ. ಅದಕ್ಕಾಗಿ 2030ರವರೆಗೂ ಅಭಿವೃದ್ಧಿ ದೇಶಗಳಿಗೆ ವರ್ಷಕ್ಕೆ ಒಟ್ಟು 4 ಟ್ರಿಲಿಯನ್ ಡಾಲರ್ ಹಣ ಬೇಕಾಗುತ್ತದೆ ಎನ್ನುವ ಸಂಗತಿಯನ್ನೂ ಜಿ20 ಸಭೆಯಲ್ಲಿ ಗುರುತಿಸಲಾಗಿದೆ.

ಇದನ್ನೂ ಓದಿ: ಚೀನಾದ ಮಹತ್ವಾಕಾಂಕ್ಷಿ ಸಿಲ್ಕ್ ರೋಡ್ ಯೋಜನೆಗೆ ಎದುರಾಗಿ ಭಾರತದಿಂದ ಪರ್ಯಾಯ ಎಕನಾಮಿಕ್ ಕಾರಿಡಾರ್ ಪ್ರಾಜೆಕ್ಟ್

ಜಾಗತಿಕ ಹವಾಮಾನ ಬದಲಾವಣೆ ಸಮಸ್ಯೆ ವಿರುದ್ಧ ಹೋರಾಡಲು ಹಣಕಾಸು ಸಮಸ್ಯೆ ದೊಡ್ಡ ತೊಡಕಾಗಿದೆ. ಪ್ರತಿಯೊಂದು ದೇಶದಲ್ಲೂ ಮರುಬಳಕೆ ಇಂಧನಗಳ ಉತ್ಪಾದನೆ ಅಗಬೇಕು, ಪರಿಸರಸ್ನೇಹಿ ತಂತ್ರಜ್ಞಾನಗಳನ್ನು ಬಳಸಬೇಕು ಎಂದಿದೆ. ಆದರೆ, ಇವುಗಳನ್ನು ಪಡೆಯಲು ಬಹಳಷ್ಟು ವೆಚ್ಚ ಮಾಡಬೇಕಾಗುತ್ತದೆ. ಅಭಿವೃದ್ಧಿಶೀಲ ದೇಶಗಳಿಗೆ ಆರ್ಥಿಕ ಪ್ರಗತಿ, ಬಡತನ ನಿವಾರಣೆ, ಆರೋಗ್ಯಪಾಲನೆ, ಶಿಕ್ಷಣ ಇತ್ಯಾದಿ ಸಂಗತಿಗಳಿಗೆ ಹಣ ಕ್ರೋಢೀಕರಿಸುವುದೇ ದೊಡ್ಡ ಕಷ್ಟ. ಹೀಗಾಗಿ, ಹವಾಮಾನ ಸಮಸ್ಯೆಗಳಿಗೆ ಹಣ ಹೊಂದಿಸಲು ಕಷ್ಟಸಾಧ್ಯವಾಗುತ್ತಿದೆ.

ಇದನ್ನೂ ಓದಿ: 5ಜಿ ಅಲ್ಲ 6ಜಿ; ಭಾರತ ಮತ್ತು ಅಮೆರಿಕದಿಂದ ಜಂಟಿಯಾಗಿ 6ಜಿ ವೈರ್ಲೆಸ್ ತಂತ್ರಜ್ಞಾನ ಅಭಿವೃದ್ಧಿ; ಮಹತ್ವದ ಬೆಳವಣಿಗೆ

ಮುಂದುವರಿದ ದೇಶಗಳಿಂದಲೂ ನಿರೀಕ್ಷಿತ ರೀತಿಯಲ್ಲಿ ಹಣಕಾಸು ಹರಿವು ಬಂದಿಲ್ಲ. ಕುತೂಹಲವೆಂದರೆ 2009ರಲ್ಲಿ ಹವಾಮಾನ ಹಣಕಾಸು ನಿಧಿಗೆ ಪ್ರತೀ ವರ್ಷ 100 ಬಿಲಿಯನ್ ಡಾಲರ್ ಹಣವನ್ನು ಸೇರಿಸಲು ಮುಂದುವರಿದ ದೇಶಗಳು ಬದ್ಧತೆ ತೋರಿದ್ದವು. ಆದರೆ, 2020ರಲ್ಲಿ ಆ ನಿಧಿಗೆ ಒಟ್ಟು ಸೇರಿದ್ದು 83 ಬಿಲಿಯನ್ ಡಾಲರ್ ಮಾತ್ರ. ಈಗ ನವದೆಹಲಿ ಜಿ20 ಶೃಂಗಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಾಗಿದ್ದು, 2025ರವರೆಗೂ ವರ್ಷಕ್ಕೆ 100 ಬಿಲಿಯನ್ ಡಾಲರ್ ಹಣ ಹೊಂದಿಸಲು ಮತ್ತೆ ಸಂಕಲ್ಪಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:07 pm, Sun, 10 September 23