ನವದೆಹಲಿ, ಸೆಪ್ಟೆಂಬರ್ 20: ಇತ್ತೀಚೆಗೆ ರೀಚಾರ್ಜ್ ದರಗಳನ್ನು ಗಣನೀಯವಾಗಿ ಹೆಚ್ಚಿಸಿದ್ದ ರಿಲಾಯನ್ಸ್ ಜಿಯೋ, ಭಾರ್ತಿ ಏರ್ಟೆಲ್, ವೊಡಾಫೋನ್ ಐಡಿಯಾ ಸಂಸ್ಥೆಗಳು ಜುಲೈ ತಿಂಗಳಲ್ಲಿ ಬಹಳಷ್ಟು ಗ್ರಾಹಕರನ್ನು ಕಳೆದುಕೊಂಡಿವೆ. ಕಡಿಮೆ ದರಕ್ಕೆ 4ಜಿ ಸರ್ವಿಸ್ ಆಪರೇಟ್ ಮಾಡುತ್ತಿರುವ ಬಿಎಸ್ಸೆನ್ನೆಲ್ ಕಡೆಗೆ ಇವರೆಲ್ಲರೂ ವಲಸೆ ಹೋಗಿರುವಂತೆ ತೋರುತ್ತಿದೆ. ಜುಲೈನಲ್ಲಿ ಬಿಎಸ್ಸೆನ್ನೆಲ್ ಮಾತ್ರವೇ ಗ್ರಾಹಕರ ಬಳಗ ಹೆಚ್ಚಿಸಿಕೊಂಡಿರುವುದು. ಟೆಲಿಕಾಂ ನಿಯಂತ್ರಕ ಸಂಸ್ಥೆಯಾದ ಟ್ರಾಯ್, ಜುಲೈ ತಿಂಗಳ ದತ್ತಾಂಶ ಬಿಡುಗಡೆ ಮಾಡಿದೆ.
2024ರ ಜುಲೈ ತಿಂಗಳಲ್ಲಿ ಭಾರ್ತಿ ಏರ್ಟೆಲ್ ಅತಿಹೆಚ್ಚು ಗ್ರಾಹಕರನ್ನು ಕಳೆದುಕೊಂಡಿದೆ. ವೊಡಾಫೋನ್ ಐಡಿಯಾ ಸಂಸ್ಥೆಯೂ ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಬ್ಸ್ಕ್ರೈಬರ್ಸ್ಗಳನ್ನು ದೂರ ಮಾಡಿಕೊಂಡಿದೆ. ಅತಿದೊಡ್ಡ ಟೆಲಿಕಾಂ ಆಪರೇಟರ್ ಆಗಿರುವ ರಿಲಾಯನ್ಸ್ ಜಿಯೋ ಕೂಡ ಸಾಕಷ್ಟು ಗ್ರಾಹಕರನ್ನು ಕಳೆದುಕೊಂಡಿದೆಯಾದರೂ ತೀರಾ ಹೆಚ್ಚಿನ ಮೊತ್ತವಲ್ಲ.
ಟ್ರಾಯ್ ವರದಿ ಪ್ರಕಾರ, ಭಾರ್ತಿ ಏರ್ಟೆಲ್ 16.9 ಲಕ್ಷ, ವೊಡಾಫೋನ್ ಐಡಿಯಾ 14.1 ಲಕ್ಷ ಹಾಗು ರಿಲಾಯನ್ಸ್ ಜಿಯೋ 7.58 ಲಕ್ಷ ಬಳಕೆದಾರರನ್ನು ಕಳೆದುಕೊಂಡಿವೆ. ಈ ಮೂರೂ ಟೆಲಿಕಾಂ ಕಂಪನಿಗಳಿಂದ ಜುಲೈನಲ್ಲಿ ದೂರವಾದ ಗ್ರಾಹಕರ ಸಂಖ್ಯೆ 38 ಲಕ್ಷಕ್ಕೂ ಹೆಚ್ಚು. ಅದೇ ವೇಳೆ, ಬಿಎಸ್ಸೆನ್ನೆಲ್ ಪಡೆದುಕೊಂಡ ಗ್ರಾಹಕರ ಸಂಖ್ಯೆ 29.3 ಲಕ್ಷ.
ಇದನ್ನೂ ಓದಿ: ಅಪ್ಪ ಇಷ್ಟು ಶ್ರೀಮಂತ ಅಂತ ದೊಡ್ಡವಳಾಗೋವರೆಗೂ ಗೊತ್ತೇ ಇರ್ಲಿಲ್ಲ: ಅಚ್ಚರಿ ಹುಟ್ಟಿಸುತ್ತವೆ ವಾರನ್ ಬಫೆಟ್ ಮಗಳ ಮಾತುಗಳು
ಕುತೂಹಲದ ಸಂಗತಿ ಎಂದರೆ ಜುಲೈ ತಿಂಗಳಲ್ಲಿ ಒಟ್ಟಾರೆ ಟೆಲಿಕಾಂ ಸಬ್ಸ್ಕ್ರಿಪ್ಷನ್ಸ್ ಸಂಖ್ಯೆ ಇಳಿಮುಖವಾಗಿದೆ. ಜೂನ್ ಅಂತ್ಯದಲ್ಲಿ 120.564 ಕೋಟಿ ಸಿಮ್ ಸಬ್ಸ್ಕ್ರಿಪ್ಷನ್ಸ್ ಇತ್ತು. ಜುಲೈನಲ್ಲಿ ಆ ಸಂಖ್ಯೆ 120.517 ಕೋಟಿ ಆಗಿದೆ. ಅಂದರೆ ಸುಮಾರು 4 ಲಕ್ಷಕ್ಕೂ ಅಧಿಕ ಜನರು ಬಳಕೆ ನಿಲ್ಲಿಸಿದ್ದಾರೆ. ಸಬ್ಸ್ಕ್ರಿಪ್ಷನ್ಸ್ ನಿಂತಿರುವುದು ಗ್ರಾಮೀಣ ಭಾಗದಲ್ಲೇ ಹೆಚ್ಚು.
ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್ಗಳನ್ನು ಹೊಂದಿರುವವರು, ಹೆಚ್ಚಿನ ಟೆಲಿಕಾಂ ದರಗಳಿಂದಾಗಿ ಹೆಚ್ಚುವರಿ ಸಿಮ್ ಬಳಕೆಯನ್ನು ನಿಲ್ಲಿಸಿರುವ ಸಾಧ್ಯತೆ ಇದೆ.
ಇದನ್ನೂ ಓದಿ: ಮಾಲ್ಡೀವ್ಸ್ ಸಂಕಷ್ಟಕ್ಕೆ ಭಾರತದಿಂದ ನೆರವು; ಎರಡನೇ ಬಾರಿ ಟ್ರೆಷರಿ ಬಿಲ್ ಪಾವತಿಗೆ ಗಡುವು ವಿಸ್ತರಣೆ
ಮೊಬೈಲ್ ಸಂಖ್ಯೆ ಬದಲಾವಣೆ ಮಾಡದೆಯೇ ಒಂದು ಟೆಲಿಕಾಂ ಕಂಪನಿಯಿಂದ ಇನ್ನೊಂದು ಟೆಲಿಕಾಂ ಕಂಪನಿಗೆ ಸೇವೆ ಬದಲಿಸಿಕೊಳ್ಳುವುದಕ್ಕೆ ಪೋರ್ಟಿಂಗ್ ಎನ್ನುತ್ತಾರೆ. ಈ ರೀತಿ ಜೂನ್ ಮತ್ತು ಜುಲೈನಲ್ಲಿ ಅತಿಹೆಚ್ಚು ಪೋರ್ಟಿಂಗ್ ಆಗಿರುವುದು ಉತ್ತರಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಕರ್ನಾಟಕ, ಮಧ್ಯಪ್ರದೇಶ ರಾಜ್ಯಗಳಲ್ಲಿನ ಗ್ರಾಹಕರಿಂದ ಎಂಬುದು ಟ್ರಾಯ್ ರಿಪೋರ್ಟ್ನಿಂದ ತಿಳಿದುಬರುತ್ತದೆ. ಜುಲೈ ತಿಂಗಳಲ್ಲಿ ಸುಮಾರು 1.37 ಕೋಟಿ ಗ್ರಾಹಕರು ಮೊಬೈಲ್ ನಂಬರ್ ಪೋರ್ಟಿಂಗ್ಗೆ ಮನವಿ ಸಲ್ಲಿಸಿದ್ದರೆನ್ನಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ