ವೈಯಕ್ತಿಕ ಸಾಲಕ್ಕೆ ಯಾಕೆ ಬಡ್ಡಿ ಎಷ್ಟು? ತೀರಾ ಹೆಚ್ಚು ಮೊತ್ತದ ಸಾಲ ಯಾಕೆ ಸಿಗಲ್ಲ?
Personal loan thumbrules: ಅಡಮಾನ ಪಡೆಯದೇ ನೀಡಲಾಗುವ ವೈಯಕ್ತಿಕ ಸಾಲಕ್ಕೆ ಸಹಜವಾಗಿ ಬಡ್ಡಿದರ ಹೆಚ್ಚು ವಸೂಲಿ ಮಾಡಲಾಗುತ್ತದೆ. ಆದರೂ ತುರ್ತಾಗಿ ಹಣಕಾಸು ಅಗತ್ಯ ಬಿದ್ದರೆ ಪರ್ಸನಲ್ ಲೋನ್ ಬಹಳ ಉಪಯುಕ್ತ ಎನಿಸುತ್ತದೆ. ಸಾಮಾನ್ಯವಾಗಿ ಮಾಸಿಕ ಆದಾಯ ಅಥವಾ ಸಂಬಳದ ಇಪ್ಪತ್ತು ಪಟ್ಟು ಹೆಚ್ಚು ಹಣವನ್ನು ಪರ್ಸನಲ್ ಲೋನ್ಗೆ ಮಿತಿಯಾಗಿ ನಿಗದಿ ಮಾಡಲಾಗಬಹುದು.
ಪರ್ಸನಲ್ ಲೋನ್ ಎಂಬುದು ಯಾವುದೇ ಅಡಮಾನ ಇಲ್ಲದೇ ಗ್ರಾಹಕರಿಗೆ ನೀಡಲಾಗುವ ವೈಯಕ್ತಿಕ ಸಾಲ. ನಿಮ್ಮ ಬಳಿಕ ಅಡವಾಗಿ ಇಡಲು ಚಿನ್ನ ಇಲ್ಲದೇ ಇದ್ದರೆ ಪರ್ಸನಲ್ ಲೋನ್ ಆಪತ್ಕಾಲಕ್ಕೆ ಆಗುವ ಗೆಳೆಯನಂತಿರುತ್ತದೆ. ಅಡಮಾನ ಇಲ್ಲದ ಕಾರಣ ಪರ್ಸನಲ್ ಲೋನ್ ಅನ್ನು ಅಸುರಕ್ಷಿತ ಸಾಲವೆಂದು ವರ್ಗೀಕರಿಸಲಾಗುತ್ತದೆ. ಹೀಗಾಗಿ, ಸಹಜವಾಗಿ ಈ ಸಾಲಕ್ಕೆ ಹೆಚ್ಚಿನ ಮಟ್ಟದ ಬಡ್ಡಿದರ ಇರುತ್ತದೆ. ಸಾಮಾನ್ಯವಾಗಿ ಶೇ. 12ರಿಂದ 18ರವರೆಗೆ ಬಡ್ಡಿಯಲ್ಲಿ ಇದರ ಸಾಲ ಸಿಗುತ್ತದೆ.
ನಿಮ್ಮ ಆದಾಯಕ್ಕೆ ಅನುಗುಣವಾಗಿ ಸಾಲದ ಮೊತ್ತ
ಬ್ಯಾಂಕುಗಳು ಇಂಥ ವ್ಯಕ್ತಿಗೆ ಇಷ್ಟೇ ಸಾಲ ಕೊಡಬೇಕು ಎನ್ನುವ ಯಾವ ನಿಯಮವೂ ಇಲ್ಲ. ಕೆಲ ಬ್ಯಾಂಕುಗಳು ಪರ್ಸನಲ್ ಲೋನ್ ಕೊಡಲು ಥಂಬ್ ರೂಲ್ ಮಾಡಿಕೊಂಡಿರಬಹುದು. ಒಬ್ಬ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಹೇಗಿದೆ ಎನ್ನುವುದು ಒಂದು ಮಾನದಂಡ. ಹಾಗೆಯೇ, ಕ್ರೆಡಿಟ್ ಸ್ಕೋರ್ ಬಗ್ಗೆ ಸಮಾಧಾನ ಎನಿಸಿದಲ್ಲಿ, ಆಗ ವ್ಯಕ್ತಿಯ ಸಂಬಳ ಇತ್ಯಾದಿ ಒಟ್ಟು ಆದಾಯ ಎಷ್ಟಿದೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಸಾಲ ಎಷ್ಟು ನೀಡಬೇಕು ಎನ್ನುವುದು ಈ ಹಂತದಲ್ಲಿ ನಿರ್ಧಾರ ಆಗಬಹುದು.
ಇದನ್ನೂ ಓದಿ: ಎನ್ಪಿಎಸ್ ವಾತ್ಸಲ್ಯ ಅಕೌಂಟ್ ತೆರೆಯುವ ಮುನ್ನ ಸಾಧಕ, ಬಾಧಕಗಳೇನು ತಿಳಿದಿರಲಿ
ಸಾಮಾನ್ಯವಾಗಿ ಒಬ್ಬ ವ್ಯಕ್ತಿಯ ಮಾಸಿಕ ಸಂಬಳ ಅಥವಾ ಮಾಸಿಕ ಆದಾಯದ 20 ಪಟ್ಟು ಹೆಚ್ಚು ಹಣವನ್ನು ಸಾಲ ಕೊಡುವ ಮಿತಿಯಾಗಿ ಪರಿಗಣಿಸಬಹುದು. ಉದಾಹರಣೆಗೆ, 25,000 ರೂ ಸಂಬಳ ಪಡೆಯುವ ವ್ಯಕ್ತಿ ಪರ್ಸನಲ್ ಲೋನ್ಗೆ ಅರ್ಜಿ ಸಲ್ಲಿಸಿದರೆ ಅವರಿಗೆ 5 ಲಕ್ಷ ರೂವರೆಗೆ ಸಾಲ ಕೊಡಬಹುದು. ಅದಕ್ಕಿಂತ ಹೆಚ್ಚಿಗೆ ಸಾಲ ಸಿಗುವುದು ಕಷ್ಟ.
ಒಬ್ಬ ವ್ಯಕ್ತಿ ಮೊದಲ ಬಾರಿಗೆ ಸಾಲ ಮಾಡುತ್ತಿದ್ದಾರೆ ಎಂದರೆ ಅವರಿಗೆ ಸುಲಭವಾಗಿ ಸಣ್ಣ ಮೊತ್ತದ ಸಾಲ ನೀಡಲಾಗುತ್ತದೆ. ಸರಿಯಾಗಿ ಮರುಪಾವತಿ ಮಾಡಿದ್ದೇ ಆದಲ್ಲಿ ಆ ಸಾಲ ತೀರಿಕೆ ಆದ ಬಳಿಕ ಹೆಚ್ಚಿನ ಮೊತ್ತದ ಸಾಲ ಕೊಡಲು ಮುಂದಾಗಬಹುದು.
50 ಲಕ್ಷ ರೂ ಮಿತಿ?
ಒಬ್ಬ ವ್ಯಕ್ತಿಯ ಸಂಬಳ ತಿಂಗಳಿಗೆ 5 ಲಕ್ಷ ರೂ ಇದ್ದು ಅವರು ಒಂದು ಕೋಟಿ ರೂ ಸಾಲಕ್ಕೆ ಅರ್ಜಿ ಸಲ್ಲಿಸಿದರೆ ಸಿಕ್ಕುವ ಸಾಧ್ಯತೆ ಕಡಿಮೆ. ಸಾಮಾನ್ಯವಾಗಿ ಬ್ಯಾಂಕುಗಳು ಪರ್ಸನಲ್ ಲೋನ್ಗೆ ಗರಿಷ್ಠ ಮಿತಿ ಹಾಕಿಕೊಂಡಿರುತ್ತವೆ. ಎಕ್ಸಿಸ್ ಬ್ಯಾಂಕ್ 40 ಲಕ್ಷ ರೂಗಿಂತ ಹೆಚ್ಚಿನ ಮೊತ್ತದ ಪರ್ಸನಲ್ ಲೋನ್ ಅನ್ನು ನೀಡುವುದಿಲ್ಲ. ಗ್ರಾಹಕರ ಮಾಸಿಕ ಸಂಬಳ 5 ಲಕ್ಷ ಇದ್ದರೂ ಆ ಮಿತಿಗಿಂತ ಹೆಚ್ಚಿನ ಮೊತ್ತದ ಸಾಲ ಸಿಗಲ್ಲ. ಒಂದೊಂದು ಬ್ಯಾಂಕ್ ಈ ವಿಚಾರದಲ್ಲಿ ಬೇರೆಯೇ ಲೆಕ್ಕಾಚಾರ ಹಾಕಿಕೊಂಡಿರುತ್ತವೆ.
ಇದನ್ನೂ ಓದಿ: Post Office MIS: ಈ ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಪಿಪಿಎಫ್ಗಿಂತಲೂ ಹೆಚ್ಚು ಬಡ್ಡಿ
ಕೆಲ ಬ್ಯಾಂಕುಗಳು ಇದರ ಮಿತಿಯನ್ನು 20 ಲಕ್ಷಕ್ಕೆ ನಿಗದಿ ಮಾಡಿರಬಹುದು. ಕೆಲವು 50 ಲಕ್ಷದವರೆಗೆ ಹೋಗಬಹುದು. ಕ್ರೆಡಿಟ್ ಸ್ಕೋರ್ ಮತ್ತು ಮಾಸಿಕ ಆದಾಯ ಎರಡೂ ಉತ್ತಮವಾಗಿದ್ದರೆ ಗರಿಷ್ಠ ಮೊತ್ತದ ಸಾಲ ಸಿಗುತ್ತದೆ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ