ಎನ್ಪಿಎಸ್ ವಾತ್ಸಲ್ಯ ಅಕೌಂಟ್ ತೆರೆಯುವ ಮುನ್ನ ಸಾಧಕ, ಬಾಧಕಗಳೇನು ತಿಳಿದಿರಲಿ
NPS Vatsalya scheme pros and cons: ಸರ್ಕಾರ ವಾತ್ಸಲ್ಯ ಎನ್ಪಿಎಸ್ ಯೋಜನೆಯನ್ನು ಜಾರಿಗೆ ತಂದಿದೆ. ಮಕ್ಕಳ ಹೆಸರಲ್ಲಿ ಪಾಲಕರು ವಾತ್ಸಲ್ಯ ಅಕೌಂಟ್ ತೆರೆಯಬಹುದು. ಮಗು ವಯಸ್ಸು 18 ವರ್ಷ ಆದ ಬಳಿಕ ಅದನ್ನು ರೆಗ್ಯುಲರ್ ಎನ್ಪಿಎಸ್ ಅಕೌಂಟ್ಗೆ ಪರಿವರ್ತನೆ ಮಾಡಿಕೊಳ್ಳಬೇಕು. ಹೂಡಿಕೆ ಮುಂದುವರಿಸಬಹುದು, ಅಥವಾ ಎಕ್ಸಿಟ್ ಆಗಬಹುದು. ಎಕ್ಸಿಟ್ ಆದರೆ ಪೂರ್ಣ ಹಣ ಸಿಗೊಲ್ಲ. ಆ್ಯನುಟಿ ಪ್ಲಾನ್ ಖರೀದಿಸಬೇಕಾಗುತ್ತದೆ.
ಜನಪ್ರಿಯವಾಗುತ್ತಿರುವ ನ್ಯಾಷನಲ್ ಪೆನ್ಷನ್ ಸಿಸ್ಟಂ ಅನ್ನು ಸರ್ಕಾರ ಈಗ ಮಕ್ಕಳ ವ್ಯಾಪ್ತಿಗೂ ತಂದಿದೆ. ಅಪ್ರಾಪ್ತ ವಯಸ್ಸಿನ ಮಕ್ಕಳ ಹೆಸರಿನಲ್ಲಿ ಪಾಲಕರು ಎನ್ಪಿಎಸ್ ವಾತ್ಸಲ್ಯ ಅಕೌಂಟ್ ತೆರೆಯಬಹುದು. ಮಗು ವಯಸ್ಕ ಹಂತಕ್ಕೆ ಬಂದರೆ, ಅಂದರೆ 18 ವರ್ಷ ವಯಸ್ಸು ದಾಟಿದರೆ ಎನ್ಪಿಎಸ್ ವಾತ್ಸಲ್ಯ ಖಾತೆಯು ರೆಗ್ಯುಲರ್ ಅಕೌಂಟ್ ಆಗಿ ಪರಿವರ್ತನೆ ಆಗುತ್ತದೆ. ಭಾಗಶಃ ಹಣವನ್ನು ವಿತ್ಡ್ರಾ ಮಾಡಿಕೊಳ್ಳುವುದು ಸೇರಿದಂತೆ ಒಳ್ಳೆಯ ಫೀಚರ್ಗಳು ಎನ್ಪಿಎಸ್ನಲ್ಲಿವೆ.
ಬಹಳ ದೀರ್ಘಾವಧಿ ಹೂಡಿಕೆಗೆ ಅವಕಾಶ
ಎನ್ಪಿಎಸ್ ವಾತ್ಸಲ್ಯ ಯೋಜನೆಯು ಸುದೀರ್ಘಾವಧಿ ಹೂಡಿಕೆಯ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಉದಾಹರಣೆಗೆ, ಮಗುವಿನ ವಯಸ್ಸು 1 ವರ್ಷ ಇದ್ದಾಗ ನೀವು ಎನ್ಪಿಎಸ್ ಖಾತೆ ಆರಂಭಿಸುತ್ತೀರಿ ಎಂದಿಟ್ಟುಕೊಳ್ಳಿ. ಆ ಮಗು ಬೆಳೆದು ಯುವಕನಾಗಿ ಅದೇ ಖಾತೆಗೆ ಹೂಡಿಕೆ ಮುಂದುವರಿಸಿಕೊಂಡು ಹೋದರೆ ಹೆಚ್ಚೂಕಡಿಮೆ 60 ವರ್ಷ ಹೂಡಿಕೆ ಸಾಧ್ಯವಾಗುತ್ತದೆ. ನಿಮ್ಮ ಎನ್ಪಿಎಸ್ ಫಂಡ್ ವರ್ಷಕ್ಕೆ ಸರಾಸರಿಯಾಗಿ ಶೇ. 12ರ ದರದಲ್ಲಿ ಬೆಳವಣಿಗೆ ಹೊಂದಿದ್ದೇ ಆದಲ್ಲಿ ನೀವು ಮಾಸಿಕವಾಗಿ ಕೇವಲ 10,000 ರೂ ಮಾತ್ರವೇ ಹೂಡಿಕೆ ಮಾಡಿದರೂ ಮಗು ರಿಟೈರ್ ಆಗುವಾಗ 25 ಕೋಟಿ ರೂಗೂ ಹೆಚ್ಚಿನ ಸಂಪತ್ತನ್ನು ಹೊಂದಿರಬಹುದು. ಅದೇನೇ ಇರಲಿ, ಎನ್ಪಿಎಸ್ ವಾತ್ಸಲ್ಯ ಯೋಜನೆಯಲ್ಲಿ ಕೆಲವರಿಗೆ ತೊಡಕಾಗಬಹುದಾದ ಸಂಗತಿಗಳಿವೆ. ಆ ಬಗ್ಗೆಯೂ ಮಾಹಿತಿ ತಿಳಿದಿರುವುದು ಉತ್ತಮ.
ಎನ್ಪಿಎಸ್ ವಾತ್ಸಲ್ಯ ಯೋಜನೆ ಪಡೆಯುವ ಮುನ್ನ ಇವು ತಿಳಿದಿರಲಿ
ನೂರಕ್ಕೆ ನೂರು ಈಕ್ವಿಟಿ ಹೂಡಿಕೆ ಸಾಧ್ಯವಿಲ್ಲ
ಎನ್ಪಿಎಸ್ ವಾತ್ಸಲ್ಯ ಸ್ಕೀಮ್ನಲ್ಲಿ ನೀವು ಹೂಡಿಕೆ ಮಾಡಲು ಫಂಡ್ಗಳ ಆಯ್ಕೆ ಇರುತ್ತದೆ. ಮ್ಯೂಚುವಲ್ ಫಂಡ್ನಲ್ಲಿರುವಂತೆ ನೂರಕ್ಕೆ ನೂರು ಷೇರುಗಳಲ್ಲಿ ಹೂಡಿಕೆ ಮಾಡುವ ಫಂಡ್ಗೆ ಇಲ್ಲಿ ಅವಕಾಶ ಇಲ್ಲ. ಗರಿಷ್ಠ ಶೇ. 75ರಷ್ಟು ಮಾತ್ರವೇ ಈಕ್ವಿಟಿಗೆ ಎಕ್ಸ್ಪೋಷರ್ ಇರುವ ಫಂಡ್ ಸಿಗುತ್ತದೆ. ನೀವು ಯಾವ ಫಂಡ್ ಅನ್ನೂ ಆಯ್ಕೆ ಮಾಡದಿದ್ದರೆ ಶೇ. 50ರಷ್ಟು ಈಕ್ವಿಟಿಯಲ್ಲಿ ಹೂಡಿಕೆ ಮಾಡುವ ಫಂಡ್ ಡೀಫಾಲ್ಟ್ ಆಗಿ ಆಯ್ಕೆ ಆಗುತ್ತದೆ. ನೂರಕ್ಕೆ ನೂರು ಈಕ್ವಿಟಿ ಹೂಡಿಕೆ ಇಲ್ಲದೇ ಇರುವುದರಿಂದ ಗರಿಷ್ಠ ರಿಟರ್ನ್ಸ್ ನಿರೀಕ್ಷಿಸಲು ಆಗಲ್ಲ.
ಇದನ್ನೂ ಓದಿ: ಎನ್ಪಿಎಸ್ ವಾತ್ಸಲ್ಯ ಸ್ಕೀಮ್ ಲೋಕಾರ್ಪಣೆ; ಮಕ್ಕಳ ಉಜ್ವಲ ಭವಿಷ್ಯಕ್ಕಿರುವ ಈ ಯೋಜನೆ ಬಗ್ಗೆ ಸಮಗ್ರ ಮಾಹಿತಿ
ವಾತ್ಸಲ್ಯದಿಂದ ರೆಗ್ಯುಲರ್ ಅಕೌಂಟ್ಗೆ ಪರಿವರ್ತನೆ
ಮಕ್ಕಳ ಶಿಕ್ಷಣ ಅಥವಾ ಮದುವೆ ವೆಚ್ಚದ ಗುರಿ ಇಟ್ಟುಕೊಂಡು ಎನ್ಪಿಎಸ್ ವಾತ್ಸಲ್ಯ ಅಕೌಂಟ್ ತೆರೆಯುವುದು ಅಷ್ಟು ಸಮಂಜಸ ಆಗದು. ಈ ಅಕೌಂಟ್ನಿಂದ ನೀವು ಸ್ವಲ್ಪ ಭಾಗ ಮಾತ್ರವೇ ಹಿಂಪಡೆಯಬಹುದು.
ಮಗುವಿನ ವಯಸ್ಸು 18 ವರ್ಷ ಆಗುತ್ತಲೇ ರೆಗ್ಯುಲರ್ ಎನ್ಪಿಎಸ್ ಸ್ಕೀಮ್ಗೆ ಪರಿವರ್ತನೆ ಆಗುತ್ತದೆ. ಆಗ ಅಕೌಂಟ್ನಲ್ಲಿ ಶೇ. 2.5 ಲಕ್ಷ ರೂಗಿಂತ ಕಡಿಮೆ ಇದ್ದರೆ ಪೂರ್ಣ ಹಣ ಹಿಂಪಡೆಯಬಹುದು. ಒಂದು ವೇಳೆ ಹೆಚ್ಚು ಇದ್ದರೆ ಶೇ. 20 ಭಾಗವನ್ನು ಮಾತ್ರವೇ ಲಂಪ್ಸಮ್ ಆಗಿ ಹಿಂಪಡೆಯಲು ಸಾಧ್ಯ. ಉಳಿದ ಶೇ. 80ರಷ್ಟು ಹಣವನ್ನು ಮಾಸಿಕ ಆದಾಯ ತರುವ ಆ್ಯನುಟಿ ಪ್ಲಾನ್ ಖರೀದಿಗೆ ಬಳಸಬಹುದು. ಹೀಗಾಗಿ, ನೀವು ಮಗುವಿನ ಕಾಲೇಜು ಫೀಸು ಅಥವಾ ಮದುವೆಗೆ ಬೇರೆಯೇ ಫೈನಾನ್ಸ್ ಪ್ಲಾನ್ ಮಾಡಿರಬೇಕಾಗುತ್ತದೆ.
ಎನ್ಪಿಎಸ್ ವಾತ್ಸಲ್ಯ ಅಕೌಂಟ್ನಿಂದ ರೆಗ್ಯುಲರ್ ಅಕೌಂಟ್ ಆಗಿ ಪರಿವರ್ತನೆ ಆದ ಬಳಿಕ ಮಗು ಆ ಹೂಡಿಕೆಯನ್ನು ಮುಂದುವರಿಸಿಕೊಂಡು ಹೋಗುವುದು ಸೂಕ್ತ. ರೆಗ್ಯುಲರ್ ಎನ್ಪಿಎಸ್ ಸ್ಕೀಮ್ನಲ್ಲೂ ನೀವು ಎಲ್ಲೂ ಪೂರ್ಣ ಹಣದೊಂದಿಗೆ ಎಕ್ಸಿಟ್ ಆಗಲು ಸಾಧ್ಯವಿಲ್ಲ. ಶೇ. 40ಕ್ಕಿಂತ ಹೆಚ್ಚು ಹಣ ನಿಮಗೆ ಲಂಪ್ಸಮ್ ಆಗಿ ಸಿಗೊಲ್ಲ. ನೀವು ಎನ್ಪಿಎಸ್ ಸ್ಕೀಮ್ನಲ್ಲಿ ಹೂಡಿಕೆ ಮಾಡುವಾಗ ಇವಿಷ್ಟೂ ಅಂಶಗಳು ತಿಳಿದಿರಲಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ