ಪೆಟ್ರೋಲ್ ಉಳಿಸಲು ವರ್ಕ್ ಫ್ರಂ ಹೋಂ? ಕೋವಿಡ್ ಸಂದರ್ಭದ ರೂಲ್ಸ್ ಮತ್ತೆ ಜಾರಿ ಸಾಧ್ಯತೆ!
ಮಧ್ಯಪ್ರಾಚ್ಯ ಸೇನಾ ಸಂಘರ್ಷದ ಸಂದರ್ಭದಲ್ಲಿ ಇದೀಗ ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (IEA) ಇಂಧನ ಮತ್ತು ಗ್ಯಾಸ್ ಬಳಕೆ ಕಡಿತಕ್ಕೆ ಮಹತ್ವದ ಶಿಫಾರಸುಗಳನ್ನು ಮಾಡಿದೆ. ಜಗತ್ತಿನಲ್ಲಿ ಲಾಕ್‌ಡೌನ್ ಪರಿಸ್ಥಿತಿ ಸೃಷ್ಟಿಯಾಗುವ ಆತಂಕದ ನಡುವೆ, ಐಇಎ ಹೆದ್ದಾರಿ ವೇಗ ಮಿತಿ ಕಡಿತ, ಸಾರ್ವಜನಿಕ ಸಾರಿಗೆ ಪ್ರೋತ್ಸಾಹ, ಕಾರುಗಳ ಸಂಚಾರ ನಿಯಂತ್ರಣ, ಮತ್ತು ಎಲ್‌ಪಿಜಿ ಬಳಕೆ ನಿರ್ಬಂಧಗಳಂತಹ ಕ್ರಮಗಳನ್ನು ಸಲಹೆ ನೀಡಿದೆ.
ನವದೆಹಲಿ, ಮಾರ್ಚ್ 21: ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಎದುರಾದ ತುರ್ತು ಪರಿಸ್ಥಿತಿ ಮತ್ತೆ ಸೃಷ್ಟಿಯಾಗುತ್ತದೆಯಾ? ಇಂಥದ್ದೊಂದು ಪ್ರಶ್ನೆಗೆ ಇದೀಗ ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (IEA) ಮಾಡಿರುವ ಶಿಫಾರಸುಗಳು ಕಾರಣವಾಗಿದೆ. ಸದ್ಯ ಇರಾನ್, ಇಸ್ರೇಲ್, ಅಮೆರಿಕ ಯುದ್ಧದ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಬಿಕ್ಕಟ್ಟಿನ ಸನ್ನಿವೇಶ ಸೃಷ್ಟಿಯಾಗಿದೆ. ಇದನ್ನು ನಿರ್ವಹಿಸಲು ಇಂಧನ ಮತ್ತು ಗ್ಯಾಸ್ ಬಳಕೆ ಕಡಿತಗೊಳಿಸುವಂತೆ ಐಇಎ ಪ್ರಮುಖ ಶಿಫಾರಸುಗಳನ್ನು ಮಾಡಿದೆ. ಜಗತ್ತಿನಲ್ಲಿ ಲಾಕ್‌ಡೌನ್ ಪರಿಸ್ಥಿತಿ ಸೃಷ್ಟಿಯಾಗಬಹುದು ಎಂಬ ಕಳವಳಗಳ ನಡುವೆ ಈ ಕ್ರಮಗಳನ್ನು ಸೂಚಿಸಲಾಗಿದೆ. ಪೆಟ್ರೋಲ್ ಉಳಿಸುವುದಕ್ಕಾಗಿ ಮನೆಯಿಂದಲೇ ಕೆಲಸ ಮಾಡುವುದನ್ನು ಪ್ರೋತ್ಸಾಹಿಸುವುದು (ವರ್ಕ್ ಫ್ರಂ ಹೋಂ), ಇಂಧನ ಬಳಕೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಹೆದ್ದಾರಿಗಳಲ್ಲಿ ವಾಹನಗಳ ವೇಗ ಮಿತಿಯನ್ನು ಕನಿಷ್ಠ 10 ಕಿಲೋಮೀಟರ್‌ನಷ್ಟು ಕಡಿತಗೊಳಿಸಲು ಸಂಸ್ಥೆ ಸಲಹೆ ನೀಡಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೇಡಿಕೆಯನ್ನು ತಗ್ಗಿಸಲು ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸಲು, ಹಾಗೂ ದೊಡ್ಡ ನಗರಗಳಲ್ಲಿ ಸಮ-ಬೆಸ ಮಾದರಿಯಲ್ಲಿ ಕಾರುಗಳ ಸಂಚಾರವನ್ನು ನಿರ್ಬಂಧಿಸಲು ಐಇಎ ಶಿಫಾರಸು ಮಾಡಿದೆ. ಕಾರುಗಳಲ್ಲಿ ಪ್ರಯಾಣಿಸುವಾಗ ಶೇರಿಂಗ್ ಮೂಲಕ ಪ್ರಯಾಣ ಹೆಚ್ಚಿಸುವಂತೆ ಪ್ರೇರೇಪಿಸಲಾಗಿದೆ. ವಾಣಿಜ್ಯ ವಾಹನಗಳ ದಕ್ಷ ಚಾಲನೆಗಾಗಿ ಲೋಡ್ ಆಪ್ಟಿಮೈಸೇಷನ್ ಮತ್ತು ಉತ್ತಮ ನಿರ್ವಹಣೆಯನ್ನು ಪ್ರೋತ್ಸಾಹಿಸಲು ತಿಳಿಸಲಾಗಿದೆ.
ಎಲ್‌ಪಿಜಿ ಬಳಕೆಗೆ ಸಂಬಂಧಿಸಿದಂತೆ, ಅಡುಗೆಯಂತಹ ಅಗತ್ಯಗಳಿಗೆ ಮಾತ್ರ ಎಲ್‌ಪಿಜಿಯನ್ನು ಬಳಸಬೇಕು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ. ಸಾರಿಗೆ ಮತ್ತು ಇತರ ಕೆಲಸಗಳಿಗೆ ಎಲ್‌ಪಿಜಿ ಬಳಕೆ ಬೇಡ ಎಂದು ಹೇಳಲಾಗಿದೆ. ವಿಮಾನ ಪ್ರಯಾಣವನ್ನು ಸಾಧ್ಯವಾದಷ್ಟು ತಪ್ಪಿಸುವಂತೆ ಮತ್ತು ಎಲ್‌ಪಿಜಿ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಕರೆಂಟ್ ಸ್ಟವ್ ಹಾಗೂ ಪರ್ಯಾಯ ಆಯ್ಕೆಗಳನ್ನು ಪ್ರೋತ್ಸಾಹಿಸಲು ಸೂಚಿಸಲಾಗಿದೆ. ಕೈಗಾರಿಕೆಗಳಲ್ಲಿ ಎಲ್‌ಪಿಜಿ ಬದಲಿಗೆ ನೈಸರ್ಗಿಕ ಅನಿಲ, ಬ್ಯೂಟೇನ್, ಪ್ರೋಪೇನ್, ಇಥೇನ್ ಮುಂತಾದ ಅನಿಲಗಳನ್ನು ಬಳಸಲು ಐಇಎ ಸಲಹೆ ನೀಡಿದೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

