
ಮುಂಬೈ, ಅಕ್ಟೋಬರ್ 28: ಮುಕೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ಗೆ ಸೇರಿದ ಜಿಯೋ ಪ್ಲಾಟ್ಫಾರ್ಮ್ಸ್ (Reliance Platforms) ಐಪಿಒ ಭರ್ಜರಿ ಯಶಸ್ಸು ಕಂಡಿದ್ದು, ಹಲವು ದಾಖಲೆ, ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ಜಿಯೋ ಇಂದು ಮಾರುಕಟ್ಟೆಗೆ ಭರ್ಜರಿಯಾಗಿ ಲಿಸ್ಟ್ ಆಗಿದೆ. ಜಿಎಂಪಿ ಲೆಕ್ಕಾಚಾರಕ್ಕೆ ಸರಿಯಾಗಿ ಜಿಯೋ ಶೇ. 21.4ರಷ್ಟು ಪ್ರೀಮಿಯಮ್ನಲ್ಲಿ ಲಿಸ್ಟ್ ಆಗಿದೆ. ಇದು ಸಾಲದೆಂಬಂತೆ, ಮೊದಲ ದಿನವೇ ಅದರ ಷೇರುಬೆಲೆ ಮತ್ತಷ್ಟು ಉಬ್ಬಿಹೋಗಿದೆ.
ಜಿಯೋ ಐಪಿಒದಲ್ಲಿ ಷೇರು ಬೆಲೆ 1,119 ರೂ ಇತ್ತು. 1,358 ರೂಗೆ ಇಂದು ಷೇರುಗಳು ಲಿಸ್ಟ್ ಆಗಿವೆ. ಇವತ್ತು ಟ್ರೇಡಿಂಗ್ ಕೊನೆಯಲ್ಲಿ ಜಿಯೋ ಷೇರುಬೆಲೆ 1,417.50 ರೂಗೆ ಏರಿದೆ. ಅಂದರೆ, ಜಿಯೋ ಐಪಿಒದಲ್ಲಿ ಹೂಡಿಕೆ ಮಾಡಿದವರಿಗೆ ಒಂದೇ ದಿನದಲ್ಲಿ ಸಿಕ್ಕಿರುವ ಆದಾಯ ಶೇ. 26ಕ್ಕಿಂತಲೂ ಹೆಚ್ಚು.
ಜಿಯೋ ಪ್ಲಾಟ್ಫಾರ್ಮ್ಸ್ನ ಎಂಟ್ರಿ ಅಕ್ಷರಶಃ ಬ್ಲಾಕ್ಬಸ್ಟರ್ ಆಗಿದೆ. ಅದರ ಒಟ್ಟು ಷೇರು ಸಂಪತ್ತು ಅಥವಾ ಮಾರ್ಕೆಟ್ ಕ್ಯಾಪಿಟಲ್ 13 ಲಕ್ಷ ಕೋಟಿ ರೂ ದಾಟಿದೆ. ಅತಿಹೆಚ್ಚು ಮಾರುಕಟ್ಟೆ ಕ್ಯಾಪ್ ಇರುವ ಕಂಪನಿಗಳ ಪಟ್ಟಿಯಲ್ಲಿ ಒಮ್ಮೆಲೇ 2ನೇ ಸ್ಥಾನಕ್ಕೆ ಹೋಗಿದೆ.
ಇದನ್ನೂ ಓದಿ: ಮ್ಯಾನುಫ್ಯಾಕ್ಚರಿಂಗ್ಗೆ ಸರ್ಕಾರದಿಂದ ಮತ್ತಷ್ಟು ಬಲ; ಕ್ರೀಡಾ ಸಾಮಗ್ರಿ ಮತ್ತು ಕಂಟೇನರ್ ತಯಾರಿಕೆಗೆ 11,856 ಕೋಟಿ ರೂ ಅನುದಾನ
ಕುತೂಹಲ ಎಂದರೆ, ಮೊದಲ ಸ್ಥಾನದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಇದೆ. ಇದು 15.92 ಲಕ್ಷ ಕೋಟಿ ರೂ ಮಾರ್ಕೆಟ್ ಕ್ಯಾಪಿಟಲ್ ಹೊಂದಿದೆ. ಅದರ ನಂತರದ ಸ್ಥಾನದಲ್ಲಿ ಜಿಯೋ ಇದೆ. ಮೊದಲೆರಡು ಸ್ಥಾನಗಳು ಅಂಬಾನಿಗೆ ಸೇರಿದ ಕಂಪನಿಗಳೇ ಆಗಿವೆ. ಮಾರ್ಕೆಟ್ ಕ್ಯಾಪ್ನಲ್ಲಿ ಟಾಪ್-5 ಕಂಪನಿಗಳ ಪಟ್ಟಿ ಈ ಕೆಳಕಂಡಂತಿದೆ:
ಜಿಯೋ ಪ್ಲಾಟ್ಫಾರ್ಮ್ಸ್ ಉತ್ತಮ ಆದಾಯ ಮತ್ತು ಲಾಭ ಹೊಂದಿರುವ ಸಂಸ್ಥೆಯಾಗಿದೆ. 2025-26ರ ಹಣಕಾಸು ವರ್ಷದಲ್ಲಿ ಅದು 1.47 ಲಕ್ಷ ಕೋಟಿ ರೂ ಆದಾಯ ದಾಖಲಿಸಿದೆ. ಇದರಲ್ಲಿ ತೆರಿಗೆ ಇತ್ಯಾದಿ ವ್ಯಯ ಕಳೆದು 30,049 ಕೋಟಿ ರೂ ನಿವ್ವಳ ಲಾಭ ಪಡೆದಿದೆ.
ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ದೀಪಾವಳಿ ಗಿಫ್ಟ್; ತುಟ್ಟಿಭತ್ಯೆ ಶೇ. 60ರಿಂದ 63ಕ್ಕೆ ಏರಿಕೆ
ಜಿಯೋ ಪ್ಲಾಟ್ಫಾರ್ಮ್ಸ್ನ ಪ್ರಮುಖ ಬ್ಯುಸಿನೆಸ್ಗಳೆಂದರೆ ಟೆಲಿಕಾಂ, ಡಿಜಿಟಲ್ ಅಪ್ಲಿಕೇಶನ್ಗಳು, ಹಾರ್ಡ್ವೇರ್ಗಳು. 52 ಕೋಟಿಗೂ ಅಧಿಕ ಮೊಬೈಲ್ ಮತ್ತು ಬ್ರಾಡ್ಬ್ಯಾಂಡ್ ಗ್ರಾಹಕರನ್ನು ಅದು ಹೊಂದಿದೆ. ಅದರಿಂದ ಹೆಚ್ಚಿನ ಲಾಭದ ಹರಿವು ಬರುತ್ತಿದೆ.
ಜಿಯೋಭಾರತ್ 4ಜಿ ಫೋನ್ಗಳು, ಜಿಯೋ ಏರ್ಫೈಬರ್ ರೂಟರ್ಗಳು, ಸೆಟ್ಟಾಪ್ ಬಾಕ್ಸ್ಗಳನ್ನು ವಿತರಿಸುತ್ತದೆ. ಅದರದ್ದೇ ಸಾಫ್ಟ್ವೇರ್ ಸ್ಟ್ಯಾಕ್ಗಳನ್ನು ಹೊಂದಿದೆ. ಜಿಯೋಟಿವಿ, ಜಿಯೋಸಾವನ್, ಜಿಯೋಕ್ಲೌಡ್ ಇತ್ಯಾದಿಗೆ 36 ಕೋಟಿ ಸಕ್ರಿಯ ಬಳಕೆದಾರರಿದ್ದಾರೆ. ಕ್ಲೌಡ್ ಸಲ್ಯೂಶನ್ಸ್, ಎಐ ಟೂಲ್ಸ್ ಇತ್ಯಾದಿ ಇನ್ನೂ ಕೆಲವು ಸೇವೆಗಳನ್ನು ಜಿಯೋ ಪ್ಲಾಟ್ಫಾರ್ಮ್ಸ್ ಒದಗಿಸುತ್ತಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ