ನವದೆಹಲಿ, ಅಕ್ಟೋಬರ್ 27: ಜಾಗತಿಕ ಆರ್ಥಿಕ ಹಿನ್ನಡೆಯಲ್ಲೂ ಭಾರತದ ಜಿಡಿಪಿ ಗಣನೀಯವಾಗಿ ಹೆಚ್ಚುತ್ತಿದೆ. ಕೆಲ ಪ್ರಮುಖ ಬ್ರೋಕರೇಜ್ ಕಂಪನಿಗಳು ಭಾರತಕ್ಕೆ ಉತ್ತಮ ರೇಟಿಂಗ್ ನೀಡಿವೆ. ಮಾರ್ಗನ್ ಸ್ಟಾನ್ಲೀ, ನೊಮುರಾ, ಸಿಎಲ್ಎಸ್ಎ ಮೊದಲಾದ ಸಂಸ್ಥೆಗಳು ಭಾರತಕ್ಕೆ ‘ಓವರ್ವೈಟ್’ ರೇಟಿಂಗ್ ನೀಡಿವೆ. ಈ ಪಟ್ಟಿಗೆ ಜೆಪಿ ಮಾರ್ಗನ್ (J P Morgan Chase & Co) ಸೇರಿದೆ. ಇದರೊಂದಿಗೆ ಹೂಡಿಕೆದಾರರಿಗೆ ಭಾರತ ಅತಿಕಡಿಮೆ ರಿಸ್ಕ್ ಹೊಂದಿರುವ ದೇಶವೆಂದು ಬಹುತೇಕ ಬ್ರೋಕರೇಜ್ ಕಂಪನಿಗಳು ಪರಿಗಣಿಸಿದಂತಾಗಿದೆ.
ಜೆಪಿ ಮಾರ್ಗನ್ ಚೇಸ್ ಅಂಡ್ ಕೋ ಸಂಸ್ಥೆ ಅಮೆರಿಕದ ಅತಿದೊಡ್ಡ ಬ್ಯಾಂಕ್ ಎನಿಸಿದೆ. ಷೇರುಸಂಪತ್ತಿನಲ್ಲಿ ವಿಶ್ವದ ಅತಿದೊಡ್ಡ ಬ್ಯಾಂಕ್ ಕೂಡ ಹೌದು. ಭಾರತದ ಜಿಡಿಪಿ ವೃದ್ಧಿ, ಪ್ರಬಲ ದೇಶೀಯ ಬಾಂಡ್ ಮಾರುಕಟ್ಟೆ, ಸ್ಪರ್ಧಾತ್ಮಕ ರಿಟರ್ನ್ಸ್ ಇವೇ ಮೊದಲಾದ ಅಂಶಗಳನ್ನು ಪರಿಗಣಿಸಿ ಭಾರತಕ್ಕೆ ಓವರ್ವೈಟ್ ರೇಟಿಂಗ್ ಅನ್ನು ಜೆಪಿ ಮಾರ್ಗನ್ ನೀಡಿದೆ.
ಭಾರತ ಮಾತ್ರವಲ್ಲದೇ ಸೌದಿ ಅರೇಬಿಯಾವನ್ನೂ ಓವರ್ವೈಟ್ ಆಗಿ ರೇಟಿಂಗ್ ಅಪ್ಗ್ರೇಡ್ ಮಾಡಲಾಗಿದೆ. ಚೀನಾಗೂ ಕೂಡ ಓವರ್ವೈಟ್ ರೇಟಿಂಗ್ ಮುಂದುವರಿದೆ. ಆದರೆ, ಈ ಮೊದಲು ಓವರ್ವೈಟ್ ರೇಟಿಂಗ್ ಪಡೆದಿದ್ದ ದಕ್ಷಿಣ ಕೊರಿಯಾಗೆ ನ್ಯೂಟ್ರಲ್ ರೇಟಿಂಗ್ ಕೊಡಲಾಗಿದೆ.
ಜೆಪಿ ಮಾರ್ಗನ್ ಅಂಡ್ ಚೇಸ್ ಕಂಪನಿ ತನ್ನ ಎಮರ್ಜಿಂಗ್ ಮಾರ್ಕೆಟ್ ಮಾಡೆಲ್ ಪೋರ್ಟ್ಫೋಲಿಯೋಗೆ ಭಾರತದ ಸನ್ ಫಾರ್ಮಾಸ್ಯೂಟಿಕಲ್ ಇಂಡಸ್ಟ್ರೀಸ್, ಬ್ಯಾಂಕ್ ಆಫ್ ಬರೋಡಾ ಮತ್ತು ಹಿಂದೂಸ್ಥಾನ್ ಯೂನಿಲಿವರ್ ಸಂಸ್ಥೆಗಳನ್ನು ಒಳಗೊಂಡಿದೆ.
ಇದನ್ನೂ ಓದಿ: ಒಂದೇ ವಾರದಲ್ಲಿ 18 ಲಕ್ಷಕೋಟಿ ರೂ ಕಳೆದುಕೊಂಡ ಹೂಡಿಕೆದಾರರು; ಷೇರುಪೇಟೆ ಈ ಪರಿ ಅಲುಗಾಡುತ್ತಿರುವುದೇಕೆ?
ಇನ್ನು, ಭಾರತದಂತಹ ಎಮರ್ಜಿಂಗ್ ಮಾರ್ಕೆಟ್ ಅಥವಾ ಉದಯೋನ್ಮುಖ ಆರ್ಥಿಕತೆಯ ಮಾರುಕಟ್ಟೆ ಹೊಂದಿರುವ ದೇಶಗಳ ಈಕ್ವಿಟಿಗಳಿಗೆ ಸದ್ಯ ತುಸು ಸವಾಲಿನ ಘಳಿಗೆಯಾಗಿರುವುದನ್ನು ಜೆಪಿ ಮಾರ್ಗನ್ ಗಮನಿಸಿದೆ. ಅಮೆರಿಕದ ಬಡ್ಡಿದರ ಮೇಲಿನ ಮಟ್ಟದಲ್ಲಿ ಇರುವುದರಿಂದ ಮತ್ತು ಡಾಲರ್ ಪ್ರಬಲವಾಗಿರುವುದರಿಂದ ಅಭಿವೃದ್ಧಿಶೀಲ ದೇಶಗಳ ಷೇರುಮಾರುಕಟ್ಟೆಗೆ ಹಿನ್ನಡೆ ಆಗಿದೆ. ಆದರೆ, ಅಮೆರಿಕದಲ್ಲಿ ಈ ಬಡ್ಡಿದರ ಕಡಿಮೆ ಆದರೆ ಎಮರ್ಜಿಂಗ್ ಮಾರುಕಟ್ಟೆಗಳು ಮತ್ತೆ ಹೂಡಿಕೆಗಳನ್ನು ಪಡೆಯುತ್ತವೆ ಎಂಬುದು ಜೆಪಿ ಮಾರ್ಗನ್ ಅಂದಾಜು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ