Karnataka Bank FD Interest Rates: ಕರ್ಣಾಟಕ ಬ್ಯಾಂಕ್​ನಿಂದ ಠೇವಣಿ ಬಡ್ಡಿ ದರಗಳ ಏರಿಕೆ

| Updated By: Srinivas Mata

Updated on: Jun 30, 2022 | 2:23 PM

ಮಂಗಳೂರು ಮೂಲದ ಕರ್ಣಾಟಕ ಬ್ಯಾಂಕ್ ವಿವಿಧ ಟರ್ಮ್ ಡೆಪಾಸಿಟ್​ಗಳ ಬಡ್ಡಿ ದರವನ್ನು ಜುಲೈ 1ರಿಂದ ಅನ್ವಯ ಆಗುವಂತೆ ಏರಿಕೆ ಮಾಡಿದೆ.

Karnataka Bank FD Interest Rates: ಕರ್ಣಾಟಕ ಬ್ಯಾಂಕ್​ನಿಂದ ಠೇವಣಿ ಬಡ್ಡಿ ದರಗಳ ಏರಿಕೆ
ಸಾಂದರ್ಭಿಕ ಚಿತ್ರ
Follow us on

ಮಂಗಳೂರು ಮೂಲದ ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ ಆದ ಕರ್ಣಾಟಕ ಬ್ಯಾಂಕ್ ಬುಧವಾರದಂದು ತನ್ನ ಠೇವಣಿ ಮತ್ತು ಎನ್‌ಆರ್‌ಇ ರುಪೀ ಟರ್ಮ್ ಡೆಪಾಸಿಟ್​ಗಳಲ್ಲಿ 2 ಕೋಟಿಗಿಂತ ಕಡಿಮೆ ಮೊತ್ತದ ಮೇಲಿನ ಬಡ್ಡಿ ದರಗಳನ್ನು ಕೆಲವು ಅವಧಿಗೆ ಹೆಚ್ಚಳ ಮಾಡಿದ್ದು, 10 ಬೇಸಿಸ್ ಪಾಯಿಂಟ್‌ಗಳಷ್ಟು ಜಾಸ್ತಿ ಮಾಡಲಾಗಿದೆ. ನಿಯಂತ್ರಕ ಫೈಲಿಂಗ್ ಪ್ರಕಾರ, ಠೇವಣಿಗಳ ಮೇಲೆ 10 ಬೇಸಿಸ್ ಪಾಯಿಂಟ್‌ಗಳ ಹೆಚ್ಚಳವು 1 ರಿಂದ 2 ವರ್ಷಗಳ ಟರ್ಮ್ ಡೆಪಾಸಿಟ್​ಗಳಿಗೆ (Term Deposit) ಮತ್ತು 2 ವರ್ಷದಿಂದ 5 ವರ್ಷಗಳ ಮೇಲಿನ ಠೇವಣಿಗಳಿಗೆ ಅನ್ವಯ ಆಗಲಿದೆ. ಠೇವಣಿ ಬಡ್ಡಿ ದರದಲ್ಲಿನ ಮೇಲ್ಮುಖದ ಪರಿಷ್ಕರಣೆಯು ಬ್ಯಾಂಕ್‌ನ ವಿವಿಧ ಅವಧಿಯ ಠೇವಣಿ ಯೋಜನೆಗಳಲ್ಲಿ ಹೆಚ್ಚಿನ ಹೂಡಿಕೆ ಮಾಡಲು ರೀಟೇಲ್ ಗ್ರಾಹಕರನ್ನು ಉತ್ತೇಜಿಸುತ್ತದೆ ಎಂದು ಕರ್ಣಾಟಕ ಬ್ಯಾಂಕ್ ತಿಳಿಸಿದೆ. ಹೊಸ ಬಡ್ಡಿ ದರಗಳು ಜುಲೈ 1, 2022ರಿಂದ ಜಾರಿಗೆ ಬರಲಿವೆ.

ಆ ಮೂಲಕ, ಸಾಮಾನ್ಯ ಸಾರ್ವಜನಿಕರಿಗೆ 2 ಕೋಟಿ ರೂಪಾಯಿಗಿಂತ ಕಡಿಮೆ ಅವಧಿ ಠೇವಣಿಗಳ ಮೇಲೆ ಜುಲೈ 1ರಿಂದ 1 ವರ್ಷದಿಂದ 2 ವರ್ಷಗಳ ಅವಧಿಗೆ ಈಗಿರುವ ಶೇ 5.25ರಿಂದ ವಾರ್ಷಿಕ ಶೇ 5.35 ಬಡ್ಡಿ ದರ ಆಗುತ್ತದೆ. 2 ವರ್ಷಗಳಿಂದ 5 ವರ್ಷಗಳ ಮೆಚ್ಯೂರಿಟಿ ಅವಧಿಗೆ ದರವು ಈಗಿನ ಶೇ 5.40ರಿಂದ 5.5 ಆಗಿರುತ್ತದೆ. ಟರ್ಮ್ ಡೆಪಾಸಿಟ್​ಗಳ ಮೇಲಿನ ಉಳಿದ ದರಗಳು ಬದಲಾಗಿಲ್ಲ. ಅಂದರೆ ಕರ್ಣಾಟಕ ಬ್ಯಾಂಕ್ 7 ದಿನಗಳಿಂದ 45 ದಿನಗಳ ಅವಧಿಗೆ ಶೇ 3.40, 46 ದಿನಗಳಿಂದ 90 ದಿನಗಳ ಅವಧಿಯವರೆಗೆ ಶೇ 4.90, 91 ದಿನಗಳಿಂದ 364 ದಿನಗಳವರೆಗೆ ಶೇ 5 ಮತ್ತು 5 ವರ್ಷದಿಂದ 10 ವರ್ಷಗಳ ಅವಧಿಗೆ ಶೇ 5.50 ನೀಡುವುದನ್ನು ಮುಂದುವರಿಸುತ್ತದೆ.

ಸದ್ಯಕ್ಕೆ, ಬ್ಯಾಂಕ್ 1-2 ವರ್ಷಗಳ ಮೆಚ್ಯೂರಿಟಿ ಅವಧಿಗೆ ರೂ. 2 ಕೋಟಿಗಿಂತ ಕಡಿಮೆ ಠೇವಣಿಗಳ ಮೇಲೆ ಹಿರಿಯ ನಾಗರಿಕರಿಗೆ ಶೇ 5.65ರ ಬಡ್ಡಿದರವನ್ನು ನೀಡುತ್ತದೆ. ದರವು 2 ವರ್ಷದಿಂದ 5 ವರ್ಷಗಳ ಅಧಿಕಾರಾವಧಿಯಲ್ಲಿ ಶೇ 5.80 ಮತ್ತು 5 ವರ್ಷದಿಂದ 10 ವರ್ಷಗಳ ಅಧಿಕಾರಾವಧಿಯಲ್ಲಿ ಶೇ 6 ಆಗಿದೆ. ಇನ್ನು ರೂ. 2 ಕೋಟಿಗಿಂತ ಕಡಿಮೆ ಮೊತ್ತದ NRE ರುಪೀ ಟರ್ಮ್ ಡೆಪಾಸಿಟ್​ಗಳ ಸಂದರ್ಭದಲ್ಲಿ ಬಡ್ಡಿದರವು 1-2 ವರ್ಷಗಳ ಅವಧಿಯ ಮೇಲೆ ಶೇ 5.35ಕ್ಕೆ ಮತ್ತು 2-5 ವರ್ಷಗಳ ಅವಧಿಯ ಮೇಲೆ ಶೇ 5.5ಕ್ಕೆ ಹೆಚ್ಚಾಗುತ್ತದೆ.

ಅಲ್ಲದೆ, ರೂ. 2 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ರುಪೀ ಟರ್ಮ್ ಠೇವಣಿಯನ್ನು ಅಕಾಲಿಕವಾಗಿ ಮುಕ್ತಾಯಗೊಳಿಸುವುದಕ್ಕಾಗಿ ಅನ್ವಯಿಸುವ ದರದ ಮೇಲೆ ಶೇ 1ರ ದಂಡವನ್ನು ವಿಧಿಸಲಾಗುತ್ತದೆ. ಈ ಉದ್ದೇಶಕ್ಕಾಗಿ, ಅನ್ವಯವಾಗುವ ದರ ಅಂದರೆ ಠೇವಣಿಯು ಬ್ಯಾಂಕ್‌ನಲ್ಲಿ ಉಳಿದಿರುವ ಅವಧಿಗೆ ಅನ್ವಯಿಸುವ ಬಡ್ಡಿ ದರ ಅಥವಾ ಒಪ್ಪಂದದ ದರ, ಯಾವುದು ಕಡಿಮೆಯೋ ಅದು.

ಇದನ್ನೂ ಓದಿ: SBI MOD: ಯಾವುದೇ ದಂಡ ಶುಲ್ಕ ಇಲ್ಲದೆ ಎಸ್​ಬಿಐ ಈ ಟರ್ಮ್​ ಡೆಪಾಸಿಟ್​ನಿಂದ ಹಣ ತೆಗೆಯುವುದು ಹೇಗೆ ಗೊತ್ತಾ?