ಅಮೆರಿಕ ಜೊತೆ ಟ್ರೇಡ್ ಮಾತುಕತೆ; ಕರ್ನಾಟಕ ಐಎಎಸ್ ಅಧಿಕಾರಿ ದರ್ಪಣ್ ಜೈನ್ ಭಾರತದ ಮುಖ್ಯ ಸಂಧಾನಕಾರ

Darpan Jain is the new Chief Negotiator for India in trade talks with US: ಭಾರತ ಮತ್ತು ಅಮೆರಿಕ ದೇಶಗಳ ಉನ್ನತ ಮಟ್ಟದ ನಿಯೋಗಗಳು ಟ್ರೇಡ್ ಡೀಲ್​ಗೆ ಮಾತುಕತೆ ನಡೆಸುತ್ತಿವೆ. ಈ ವೇಳೆ ಭಾರತದ ಮುಖ್ಯ ಸಂಧಾನಕಾರರಾಗಿ ಕರ್ನಾಟಕದ ಐಎಎಸ್ ಅಧಿಕಾರಿ ದರ್ಪಣ್ ಜೈನ್ ಅವರನ್ನು ಆಯ್ಕೆ ಮಾಡಲಾಗಿದೆ. ಸಂಧಾನದಲ್ಲಿ ಭಾರತೀಯ ನಿಯೋಗವನ್ನು ಜೈನ್ ಮುನ್ನಡೆಸುತ್ತಾರೆ. ಡಿ. 9ರಂದು ಅಮೆರಿಕದ ನಿಯೋಗ ಬಂದಿದ್ದು, ಡಿ. 10 ಮತ್ತು 11ರಂದು ಪ್ರಮುಖ ಸಂಧಾನಗಳು ನಡೆಯುತ್ತವೆ.

ಅಮೆರಿಕ ಜೊತೆ ಟ್ರೇಡ್ ಮಾತುಕತೆ; ಕರ್ನಾಟಕ ಐಎಎಸ್ ಅಧಿಕಾರಿ ದರ್ಪಣ್ ಜೈನ್ ಭಾರತದ ಮುಖ್ಯ ಸಂಧಾನಕಾರ
ದರ್ಪಣ್ ಜೈನ್

Updated on: Dec 10, 2025 | 1:01 PM

ನವದೆಹಲಿ, ಡಿಸೆಂಬರ್ 10: ಇವತ್ತು ಮತ್ತು ನಾಳೆ ಅಮೆರಿಕದ ಜೊತೆ ನಡೆಯಲಿರುವ ವ್ಯಾಪಾರ ಒಪ್ಪಂದ ಮಾತುಕತೆಯಲ್ಲಿ ಭಾರತ ತಂಡದ (Indian delegation) ನೇತೃತ್ವವನ್ನು ದರ್ಪಣ್ ಜೈನ್ (Darpan Jain) ಅವರಿಗೆ ನೀಡಲಾಗಿದೆ. 2001ರ ಕರ್ನಾಟಕ ಕೇಡರ್​ನ ಐಎಎಸ್ ಅಧಿಕಾರಿಯಾದ ದರ್ಪಣ್ ಜೈನ್ ಅವರು ಭಾರತದ ಮುಖ್ಯ ಸಂಧಾನಕಾರರಾಗಿ (Chief Negotiator) ನಿಯುಕ್ತಿಗೊಂಡಿದ್ದಾರೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿರುವ ದರ್ಪಣ್ ಜೈನ್ ಅವರು ಅಂತಾರಾಷ್ಟ್ರೀಯ ವ್ಯಾಪಾರದ ನೀತಿ ನಿಯಮಗಳನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ವ್ಯಾಪಾರ ಸಂಧಾನಗಳ ಕಾರ್ಯದಲ್ಲೂ ನಿಷ್ಣಾತರಾಗಿದ್ದಾರೆ. ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ (India US trade deal) ಏರ್ಪಡಲು ನಡೆಸಲಾಗುವ ಮಾತುಕತೆ ಬಹಳ ಸಂಕೀರ್ಣ ಹಾಗೂ ಸೂಕ್ಷ್ಮವಾಗಿದೆ. ದರ್ಪಣ್ ಜೈನ್ ಈ ಕಾರ್ಯಕ್ಕೆ ಸೂಕ್ತ ವ್ಯಕ್ತಿ ಎಂದು ಪರಿಗಣಿಸಲಾಗಿದೆ.

ರಾಜೇಶ್ ಅಗರ್ವಾಲ್ ಅವರು ಈವರೆಗೂ ಭಾರತದ ಮುಖ್ಯ ಸಂಧಾನಕಾರರಾಗಿ ಕೆಲಸ ಮಾಡುತ್ತಿದ್ದರು. ರಾಜೇಶ್ ಅವರನ್ನು ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿಯಾಗಿ ಬಡ್ತಿ ಕೊಡಲಾಗಿದೆ. ಅಂತೆಯೇ, ಮುಖ್ಯ ಸಂಧಾನದ ಕಾರ್ಯವನ್ನು ದರ್ಪಣ್ ಜೈನ್ ಅವರಿಗೆ ವಹಿಸಲಾಗಿದೆ.

ಇದನ್ನೂ ಓದಿ: ಕ್ಲೇಮ್ ಆಗದೇ ಉಳಿದಿದೆ ಲಕ್ಷ ಕೋಟಿ ರೂ; ಜನರಿಗೆ ಹಣ ಮರಳಿಸಲು ಸರ್ಕಾರ ಹರಸಾಹಸ

48 ವರ್ಷದ ದರ್ಪಣ್ ಜೈನ್ ಅವರು ಕರ್ನಾಟಕ ಕೇಡರ್​ನ ಐಎಎಸ್ ಅಧಿಕಾರಿಯಾಗಿದ್ದರೂ, ಅವರು ದೆಹಲಿ ಯೂನಿವರ್ಸಿಟಿಯಲ್ಲಿ ಬಿಇ ಮಾಡಿದ್ದಾರೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್​ನಲ್ಲಿ ಎಂಎಸ್​ಸಿ ಮಾಡಿದ್ದಾರೆ. ಐಐಟಿ ದೆಹಲಿಯಿಂದ ಎಂಟಿಎಕ್ ಮಾಡಿದ್ದಾರೆ. ಪ್ರಸಕ್ತ ವಾಣಿಜ್ಯ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಕಳೆದ ಆರು ವರ್ಷಗಳಿಂದ ಕೆಲಸ ಮಾಡಿದ್ದಾರೆ.

ಕಠಿಣವಾಗಿರುವ ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಮಾತುಕತೆ

ಭಾರತದ ಸರಕುಗಳ ಮೇಲೆ ಅಮೆರಿಕ ಶೇ. 50ರಷ್ಟು ಟ್ಯಾರಿಫ್ ಹಾಕಿದೆ. ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಭಾರತಕ್ಕೆ ಕೆಲ ಪ್ರಮುಖ ತೊಡಕುಗಳಿವೆ. ಭಾರತದ ಕೃಷಿ ಕ್ಷೇತ್ರದ ಮಾರುಕಟ್ಟೆಯನ್ನು ಮುಕ್ತವಾಗಿ ತೆರೆಯಬೇಕು ಎಂಬುದೂ ಸೇರಿದಂತೆ ಅಮೆರಿಕದ ಕೆಲ ಬೇಡಿಕೆಗಳು ಭಾರತಕ್ಕೆ ತೊಡಕಾಗಿವೆ.

ಇದನ್ನೂ ಓದಿ: ಭಾರತದಲ್ಲಿ ಎಐ ಸೌಕರ್ಯ ನಿರ್ಮಾಣಕ್ಕೆ ಮೈಕ್ರೋಸಾಫ್ಟ್​ನಿಂದ 1.50 ಲಕ್ಷ ಕೋಟಿ ರೂ ಹೂಡಿಕೆ

ರಿಕ್ ಸ್ವಿಟ್ಜರ್ ನೇತೃತ್ವದಲ್ಲಿ ಅಮೆರಿಕದ ಉನ್ನತ ಮಟ್ಟದ ವ್ಯಾಪಾರ ನಿಯೋಗವೊಂದು ಭಾರತಕ್ಕೆ ಭೇಟಿ ನೀಡಿದೆ. ನಿನ್ನೆಯೇ ಈ ತಂಡ ಬಂದಿದೆ. ಆದರೆ, ಇವತ್ತು ಮತ್ತು ನಾಳೆ (ಡಿ. 10, 11) ಪ್ರಮುಖ ಮಾತುಕತೆಗಳು ನಡೆಯುತ್ತವೆ. ಮಾರುಕಟ್ಟೆ ಪ್ರವೇಶ, ಕೃಷಿ ಉತ್ಪನ್ನಗಳು, ಡಿಜಿಟಲ್ ಕಾಮರ್ಸ್, ಹೂಡಿಕೆ ಮತ್ತಿತರ ಸೂಕ್ಷ್ಮ ವಿಚಾರಗಳ ಬಗ್ಗೆ ಸಂಧಾನಗಳು ನಡೆಯಲಿವೆ. ಈ ಸಂದರ್ಭದಲ್ಲಿ ಭಾರತದ ಪರ ಸಂಧಾನದ ನೇತೃತ್ವ ವಹಿಸಲು ದರ್ಪಣ್ ಜೈನ್ ಸಮರ್ಥ ವ್ಯಕ್ತಿ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ