Keshub Mahindra: ಮಹೀಂದ್ರ ಅಂಡ್ ಮಹೀಂದ್ರ ಮಾಜಿ ಛೇರ್ಮನ್ ಕೇಶಬ್ ಮಹೀಂದ್ರ ವಿಧಿವಶ; ಉದ್ಯಮ ವಲಯ ಶೋಕ
India's Great Industrialist 99 Year Old Keshub Mahindra Death: ಮಹೀಂದ್ರ ಅಂಡ್ ಮಹೀಂದ್ರಾ ಗ್ರೂಪ್ನ ಗೌರವ ಅಧ್ಯಕ್ಷರಾಗಿದ್ದ ಹಾಗೂ ಮಾಜಿ ಛೇರ್ಮನ್ ಕೇಶಬ್ ಮಹೀಂದ್ರ (99 ವರ್ಷ) ಏಪ್ರಿಲ್ 12ರಂದು ಇಹಲೋಕ ತ್ಯಜಿಸಿದ್ದಾರೆ. ಭಾರತ ಕಂಡ ಶ್ರೇಷ್ಠ ಉದ್ಯಮಿಗಳ ಸಾಲಿನಲ್ಲಿ ಅವರಿದ್ದಾರೆ.
ನವದೆಹಲಿ: ಭಾರತ ಕಂಡ ಶ್ರೇಷ್ಠ ಉದ್ಯಮಿಗಳ ಪೈಕಿ ಒಬ್ಬರೆನಿಸಿದ್ದ ಮತ್ತು ಮಹೀಂದ್ರ ಅಂಡ್ ಮಹೀಂದ್ರ ಗ್ರೂಪ್ನ ಮಾಜಿ ಛೇರ್ಮನ್ ಆಗಿದ್ದ ಕೇಶುಬ್ ಮಹೀಂದ್ರ (Keshub Mahindra) ಏಪ್ರಿಲ್ 12, ಬುಧವಾರ ನಿಧನರಾಗಿದ್ದಾರೆ. 99 ವರ್ಷದ ಕೇಶಬ್ ಮಹೀಂದ್ರ ಸ್ವರ್ಗಸ್ಥರಾದರೆಂದು ಬಾಹ್ಯಾಕಾಶ ಇಲಾಖೆಯ ಇನ್ಸ್ಪೇಸ್ ಸಂಸ್ಥೆಯ (INSPACe) ಛೇರ್ಮನ್ ಪವನ್ ಕೆ ಗೋಯೆಂಕಾ ಇಂದು ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ. ಕೇಶಬ್ ಮಹೀಂದ್ರ ಕೇವಲ ಉದ್ಯಮಿ ಮಾತ್ರವಾಗಿರದೇ ಸಾಮಾಜಿಕ ಕಾಳಜಿ ಇಟ್ಟುಕೊಂಡಿದ್ದ ವ್ಯಕ್ತಿತ್ವ ಅವರದ್ದಾಗಿತ್ತು. ಸರ್ಕಾರದ ಹಲವು ಸಮಿತಿಗಳಲ್ಲಿ ಅವರು ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಫೋರ್ಬ್ಸ್ನ ಅತ್ಯಂತ ಹಿರಿಯ ವಯಸ್ಸಿನ ಬಿಲಿಯನೇರ್ಗಳ ಪಟ್ಟಿಯಲ್ಲಿ ಕೇಶಬ್ ಅಗ್ರಸ್ಥಾನ ಪಡೆದಿದ್ದರು. ಇವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪವನ್ ಗೋಯಂಕಾ, ಔದ್ಯಮಿಕ ಜಗತ್ತು ಇವತ್ತು ಅತ್ಯುತ್ತಮ ವ್ಯಕ್ತಿತ್ವವನ್ನು ಕಳೆದುಕೊಂಡಿತು ಎಂದು ಹೇಳಿದ್ದಾರೆ.
“ಉದ್ಯಮ ಜಗತ್ತು ಇವತ್ತು ಅತ್ಯುತ್ತಮ ವ್ಯಕ್ತಿತ್ವವನ್ನು ಕಳೆದುಕೊಂಡಿದೆ. ಶ್ರೀ ಕೇಶಬ್ ಮಹೀಂದ್ರಗೆ ಯಾರೂ ಸಾಟಿ ಇರಲಿಲ್ಲ. ಅಂತಹ ವ್ಯಕ್ತಿಗೆ ನಾನು ಪರಿಚಯ ಆಗುವುದು ನನ್ನ ಸೌಭಾಗ್ಯವೆನಿಸಿತ್ತು. ಅವರನ್ನು ಭೇಟಿ ಆಗುವುದಕ್ಕೆ ನಾನು ಸದಾ ತುದಿಗಾಲಲ್ಲಿ ಇರುತ್ತಿದ್ದೆ. ವ್ಯವಹಾರ, ಆರ್ಥಿಕತೆ ಮತ್ತು ಸಾಮಾಜಿಕ ವಿಷಯಗಳನ್ನು ಅವರು ಹೇಗೆ ಬೆಸೆಯುತ್ತಿದ್ದರು ಎಂಬುದೇ ನನಗೆ ಸ್ಫೂರ್ತಿದಾಯಕ ಎನಿಸಿತ್ತು. ಓಂ ಶಾಂತಿ” ಎಂದು ಇನ್ಸ್ಪೇಸ್ ಛೇರ್ಮನ್ ಪವನ್ ಕೆ ಗೋಯಂಕಾ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ.
The industrial world has lost one of the tallest personalities today. Shri Keshub Mahindra had no match; the nicest person I had the privilege of knowing. I always looked forward to mtgs with him and inspired by how he connected business, economics and social matters. Om Shanti.
— Pawan K Goenka (@GoenkaPk) April 12, 2023
ಮಹೀಂದ್ರ ಅಂಡ್ ಮಹೀಂದ್ರ ಗ್ರೂಪ್ನ ಹಾಲಿ ಛೇರ್ಮನ್ ಆನಂದ್ ಮಹೀಂದ್ರ ಕುಟುಂಬ ವರ್ಗದ ಹಿರಿಯರಾದ ಕೇಶಬ್ ಮಹೀಂದ್ರ 1947ರಲ್ಲಿ ಈ ಕಂಪನಿಗೆ ಸೇರಿದ್ದರು. 1963ರಲ್ಲಿ ಅವರು ಛೇರ್ಮನ್ ಆದರು. ಅಮೆರಿಕದ ಪೆನ್ಸಿಲ್ವೇನಿಯಾ ಯೂನಿವರ್ಸಿಟಿಯಲ್ಲಿ ಪದವಿ ಪಡೆದ ಅವರು ಸಾಯುವ ಮುನ್ನ ಸಂಸ್ಥೆಯ ಗೌರವ ಛೇರ್ಮನ್ ಸ್ಥಾನದಲ್ಲಿ ಮುಂದುವರಿದಿದ್ದರು.
ಸರ್ಕಾರದ ಹಲವು ಸಮಿತಿಗಳಲ್ಲಿ ಕೇಶಬ್ ಮಹೀಂದ್ರ ಸೇವೆ
ಸಾಮಾಜಿಕ ಕಳಕಳಿ ಹೊಂದಿದ್ದ ಕೇಶಬ್ ಮಹೀಂದ್ರ ಅವರನ್ನು ವಿವಿಧ ಸರ್ಕಾರಗಳ ಅವಧಿಯಲ್ಲಿ ಹಲವು ಸಮಿತಿಗಳಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳಲಾಗಿತ್ತು. ಕಂಪನಿ ಕಾನೂನು ಬಗ್ಗೆ ಸಾಚಾರ ಆಯೋಗದಲ್ಲಿ ಅವರಿದ್ದರು. ಕೇಂದ್ರೀಯ ಉದ್ಯಮ ಸಲಹಾ ಮಂಡಳಿಯ ಸದಸ್ಯರಾಗಿದ್ದರು. ಗೃಹ ನಿರ್ಮಾಣ ಕ್ಷೇತ್ರದ ಹುಡ್ಕೋದ (HUDCO) ಸಂಸ್ಥಾಪಕ ಛೇರ್ಮನ್ ಅವರಾಗಿದ್ದರು. ಅಲ್ಲದೇ ದೇಶ ವಿದೇಶಗಳಲ್ಲಿ ಅವರಿಗೆ ಹಲವು ಗೌರವ ಪುರಸ್ಕಾರಗಳು ಸಿಕ್ಕಿವೆ.
ಇದನ್ನೂ ಓದಿ: IMF: ಭಾರತದ ಆರ್ಥಿಕ ಬೆಳವಣಿಗೆ ನಿರೀಕ್ಷೆಗಿಂತ ಕಡಿಮೆಯಾದರೂ ವಿಶ್ವದಲ್ಲೇ ಬೆಸ್ಟ್; ಚೀನಾಗಿಂತಲೂ ಬೆಟರ್; ಐಎಂಎಫ್ ಅಂದಾಜು
ಫ್ರಾನ್ಸ್ ಸರ್ಕಾರ 1987ರಲ್ಲಿ ಶೆವಲಿಯರ್ ಡೀ ಲಾರ್ಡರ್ (Chevalier de l’Ordre National de la Legion d’honneur) ಎಂಬ ಪ್ರಶಸ್ತಿಯನ್ನು ಕೇಶುಬ್ ಮಹೀಂದ್ರಗೆ ನೀಡಿ ಗೌರವಿಸಿತ್ತು. ಆಲ್ ಇಂಡಿಯಾ ಮ್ಯಾನೇಜ್ಮೆಂಟ್ ಅಸೋಸಿಯೇಶನ್ನ ಹಾನರರಿ ಫೆಲೋ ಗೌರವ ಅವರಿಗೆ ಸಿಕ್ಕಿತ್ತು. ಬ್ರಿಟನ್ನ ಯುನೈಟೆಡ್ ವರ್ಲ್ಡ್ ಕಾಲೇಜಸ್ ಕೌನ್ಸಿಲ್ನ ಸದಸ್ಯರಾಗಿದ್ದರು.
ಎಸ್ಎಐಎಲ್, ಟಾಟಾ ಸ್ಟೀಲ್, ಟಾಟಾ ಕೆಮಿಕಲ್ಸ್, ಇಂಡಿಯನ್ ಹೋಟೆಲ್ಸ್, ಐಎಫ್ಸಿ, ಐಸಿಐಸಿಐ ಇತ್ಯಾದಿ ಪ್ರತಿಷ್ಠಿತ ಸಂಸ್ಥೆಗಳ ವಿವಿದ ಮಂಡಳಿಗಳಲ್ಲಿ ಕೇಶಬ್ ಮಹೀಂದ್ರ ಸೇವೆ ಸಲ್ಲಿಸಿದ್ದರು. ಫೋರ್ಬ್ಸ್ ಪಟ್ಟಿ ಪ್ರಕಾರ ಕೇಶಬ್ ಮಹೀಂದ್ರ ಅವರು 1.2 ಬಿಲಿಯನ್ ಡಾಲರ್ (ಸುಮಾರು 10,000 ಕೋಟಿ) ಮೌಲ್ಯದ ಆಸ್ತಿವಂತರಾಗಿದ್ದರು. ವಿಶ್ವದ ಅತ್ಯಂತ ಹಿರಿಯ ಬಿಲಿಯನೇರ್ ಎನಿಸಿದ್ದರು.
ಉದ್ಯಮ, ವ್ಯವಹಾರ ವಿಭಾಗದಲ್ಲಿ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:11 pm, Wed, 12 April 23