IMF: ಭಾರತದ ಆರ್ಥಿಕ ಬೆಳವಣಿಗೆ ನಿರೀಕ್ಷೆಗಿಂತ ಕಡಿಮೆಯಾದರೂ ವಿಶ್ವದಲ್ಲೇ ಬೆಸ್ಟ್; ಚೀನಾಗಿಂತಲೂ ಬೆಟರ್; ಐಎಂಎಫ್ ಅಂದಾಜು
Indian Economic Growth: ಈ ಹಣಕಾಸು ವರ್ಷದಲ್ಲಿ ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುವ ಆರ್ಥಿಕತೆ ಎಂಬ ದಾಖಲೆ ಭಾರತದ್ದಾಗಿರಲಿದೆ. ಐಎಂಎಫ್ ತನ್ನ ವಾರ್ಷಿಕ ವರದಿಯಲ್ಲಿ ಭಾರತದ ಅರ್ಥಿಕತೆಯ ಬೆಳವಣಿಗೆ ಬಗ್ಗೆ ತನ್ನ ಮಾಡಿರುವ ಅಂದಾಜುಗಳನ್ನು ತಿಳಿಸಿದೆ.
ಪ್ರಸ್ತುತ ಹಣಕಾಸು ವರ್ಷ (2023-24) ಭಾರತದ ಜಿಡಿಪಿ ಏರಿಕೆಯ ಅಂದಾಜನ್ನು ಐಎಂಎಫ್ (IMF) ತಗ್ಗಿಸಿದೆ. ಈ ಹಿಂದೆ ಶೇ. 6.1ರಷ್ಟು ಆರ್ಥಿಕ ಬೆಳವಣಿಗೆ (GDP Rate) ಆಗಬಹುದು ಎಂದು ಅಂದಾಜು ಮಾಡಿದ್ದ ಅಂತಾರಾಷ್ಟ್ರೀಯ ಹಣಕಾಸು ನಿಧಿ ಇದೀಗ ಶೇ. 5.9 ರಷ್ಟು ಮಾತ್ರ ಬೆಳವಣಿಗೆ ಆಗಬಹುದು ಎಂದು ಹೇಳಿ ತನ್ನ ಅಂದಾಜನ್ನು ಬದಲಿಸಿದೆ. ಇಷ್ಟಾದರೂ ವಿಶ್ವದ ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದ ಆರ್ಥಿಕ ಬೆಳವಣಿಗೆ ಉತ್ತಮವಾಗಿಯೇ ಇರಲಿದೆ. ಈ ಹಣಕಾಸು ವರ್ಷದಲ್ಲಿ ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುವ ಆರ್ಥಿಕತೆ ಎಂಬ ದಾಖಲೆ ಭಾರತದ್ದಾಗಿರಲಿದೆ. ಐಎಂಎಫ್ ತನ್ನ ವಿಶ್ವ ಆರ್ಥಿಕ ನೋಟ (World Economic Outlook) ಎಂಬ ವಾರ್ಷಿಕ ವರದಿಯಲ್ಲಿ ಭಾರತದ ಅರ್ಥಿಕತೆಯ ಬೆಳವಣಿಗೆ ಬಗ್ಗೆ ತನ್ನ ಮಾಡಿರುವ ಅಂದಾಜುಗಳನ್ನು ತಿಳಿಸಿದೆ. ಐಎಂಎಫ್, ಆರ್ಬಿಐ ಹಾಗೂ ಇತರೆ ಪ್ರಮುಖ ಹಣಕಾಸು ವಿಶ್ಲೇಷಕ ಸಂಸ್ಥೆಗಳು 2023-24ರ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ. 6ರ ಆಸುಪಾಸಿನಲ್ಲಿ ಇರಬಹುದು ಎಂದು ಅಭಿಪ್ರಾಯಪಟ್ಟಿವೆ.
ಇನ್ನು, ಐಎಂಎಫ್ ಮುಂದಿನ ಹಣಕಾಸು ವರ್ಷಕ್ಕೆ ಹಿಂದೆ ತಾನು ಮಾಡಿದ್ದ ಅಂದಾಜನ್ನೂ ತಗ್ಗಿಸಿದೆ. ಅಂದರೆ, ಏಪ್ರಿಲ್ 2024ರಿಂದ ಮಾರ್ಚ್ 2025ರ ವರ್ಷಕ್ಕೆ ಭಾರತದ ಜಿಡಿಪಿ ಶೇ. 6.8ರಷ್ಟು ವೃದ್ಧಿಸಬಹುದು ಎಂದು ಐಎಂಎಫ್ ಜನವರಿಯಲ್ಲಿ ಅಂದಾಜು ಮಾಡಿತ್ತು. ಇದೀಗ ಈ ಸಂಖ್ಯೆಯನ್ನು ಶೇ. 6.3ಕ್ಕೆ ತಗ್ಗಿಸಿದೆ. ಕುತೂಹಲವೆಂದರೆ 2023-23ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 6.8ರಷ್ಟು ವೃದ್ಧಿಸಬಹುದು ಎಂದು 2022ರಲ್ಲಿ ಐಎಂಎಫ್ ಅಂದಾಜು ಮಾಡಿತ್ತು. ಆದರೆ, ಜಾಗತಿಕ ಆರ್ಥಿಕ ಹಿನ್ನಡೆ, ಹಣದುಬ್ಬರ, ಉಕ್ರೇನ್ ರಷ್ಯಾ ಯುದ್ದ ಹಾಗೂ ಇವುಗಳು ಭಾರತದ ಆರ್ಥಿಕತೆಯ ಮೇಲೆ ಬೀರಿರುವ ಪರಿಣಾಮ ಇತ್ಯಾದಿಯನ್ನು ಪರಿಗಣಿಸಿ, ಐಎಂಎಫ್ ತನ್ನ ಅಂದಾಜನ್ನು ತಗ್ಗಿಸುತ್ತಾ ಬಂದು ಇದೀಗ ಶೇ. 5.9ಕ್ಕೆ ತಂದು ನಿಲ್ಲಿಸಿದೆ.
ಇನ್ನು, ಭಾರತೀಯ ರಿಸರ್ವ್ ಬ್ಯಾಂಕ್ ಈ ವಿಚಾರದಲ್ಲಿ ತುಸು ಆಶಾದಾಯಕವಾಗಿದೆ. 2022-23ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 7ರಷ್ಟು ಹೆಚ್ಚಾಗಬಹುದು. 2023-24ರ ಹಣಕಾಸು ವರ್ಷದಲ್ಲಿ ಶೇ. 6.4ರ ದರದಲ್ಲಿ ಬೆಳವಣಿಗೆ ಆಗಬಹುದು ಎಂದು ಆರ್ಬಿಐ ಅಭಿಪ್ರಾಯಪಟ್ಟಿದೆ. ಇದೇ ವೇಳೆ, 2022-23ರ ಹಣಕಾಸು ವರ್ಷದ ಅಧಿಕೃತ ಜಿಡಿಪಿ ಅಂಕಿ ಅಂಶಗಳನ್ನು ಕೇಂದ್ರ ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ.
ಐಎಂಎಫ್ ಪ್ರಕಾರ ಚೀನಾದ ಆರ್ಥಿಕ ಬೆಳವಣಿಗೆ ಎಷ್ಟು?
2023ರಲ್ಲಿ (ಕ್ಯಾಲೆಂಡರ್ ವರ್ಷ) ಚೀನಾದ ಆರ್ಥಿಕ ಬೆಳವಣಿಗೆ ಶೇ. 5.2 ಇರಬಹುದು ಎಂದು ಐಎಂಫ್ ಅಂದಾಜು ಮಾಡಿದೆ. ಇನ್ನು, 2024ರಲ್ಲಿ ಅದರ ಜಿಡಿಪಿ ದರ ಶೇ. 4.5 ಇರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಡಲಾಗಿದೆ. ಕೋವಿಡ್ನ ಹೊಸ ಅಲೆಯ ಕಾರಣಕ್ಕೆ 2022ರಲ್ಲಿ ಕೆಲ ತಿಂಗಳು ಚೀನಾದಲ್ಲಿ ಲಾಕ್ಡೌನ್ ಇತ್ಯಾದಿ ಕಠಿಣ ಕ್ರಮಗಳಿಂದ ಆರ್ಥಿಕ ಚಟುವಟಿಕೆ ಮಂಕಾಗಿತ್ತು. ಚೀನಾ ಪ್ರಮುಖ ಉತ್ಪಾದಕ ದೇಶವಾದ್ದರಿಂದ ಒಂದು ರೀತಿಯಲ್ಲಿ ಜಾಗತಿಕ ಸರಬರಾಜು ಸರಪಳಿ ವ್ಯವಸ್ಥೆಯಲ್ಲಿ ಅದರ ಪಾತ್ರ ಮಹತ್ವದ್ದು. ಅದು ಕಳೆಗುಂದಿದರೆ ಜಾಗತಿಕವಾಗಿ ಪರಿಣಾಮ ಉಂಟಾಗುತ್ತದೆ.
ಈ ವರ್ಷ (2023) ಜಾಗತಿಕ ಆರ್ಥಿಕ ಬೆಳವಣಿಗೆ ಶೇ. 2.8ರಷ್ಟಿರಬಹುದು. 2024ರಲ್ಲಿ ಇದು ಶೇ. 3ಕ್ಕೆ ಏರಬಹುದು ಎಂದು ಐಎಂಎಫ್ ಹೇಳಿದೆ. ಇನ್ನು, ಇಡೀ ವಿಶ್ವಕ್ಕೆ ತಲೆನೋವಾಗಿರುವ ಜಾಗತಿಕ ಹಣದುಬ್ಬರ ಹಂತ ಹಂತವಾಗಿ ಕಡಿಮೆ ಆಗುತ್ತಿರುವ ಆಶಾದಾಯಕ ಸುದ್ದಿಯನ್ನು ಐಎಂಎಫ್ ಉಲ್ಲೇಖಿಸಿದೆ. 2022ರಲ್ಲಿ ಶೇ. 8.7, 2023ರಲ್ಲಿ ಶೇ. 7 ಮತ್ತು 2024ರಲ್ಲಿ ಶೇ. 4.9ಕ್ಕೆ ಜಾಗತಿಕ ಹಣದುಬ್ಬರ ಬಂದು ನಿಲ್ಲಬಹುದು ಎಂಬುದು ಐಎಂಎಫ್ ಅಂದಾಜು.