Milk Price: ಮತ್ತೊಮ್ಮೆ ಹಾಲಿನ ಬೆಲೆ ಹೆಚ್ಚಿಸಲು ಸರ್ಕಾರಕ್ಕೆ ಕೆಎಂಎಫ್ ಪ್ರಸ್ತಾವ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 30, 2022 | 11:11 AM

ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಹೆಚ್ಚು ಖರ್ಚು ಬರುತ್ತಿದೆ. ದರ ಹೆಚ್ಚಳದ ಲಾಭವನ್ನು ರೈತರಿಗೆ ವರ್ಗಾಯಿಸಲಾಗುವುದು ಎಂದು ಕೆಎಂಎಫ್ ಹೇಳಿದೆ.

Milk Price: ಮತ್ತೊಮ್ಮೆ ಹಾಲಿನ ಬೆಲೆ ಹೆಚ್ಚಿಸಲು ಸರ್ಕಾರಕ್ಕೆ ಕೆಎಂಎಫ್ ಪ್ರಸ್ತಾವ
ಸಂಗ್ರಹ ಚಿತ್ರ
Follow us on

ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಮತ್ತೊಂದು ಆಘಾತ ಎದುರಾಗುವ ನಿರೀಕ್ಷೆಯಿದೆ. ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳವು (Karnataka Milk Federation – KMF) ಒಂದು ಲೀಟರ್ ಹಾಲಿಗೆ ಮೂರು ರೂಪಾಯಿ ಹೆಚ್ಚಿಸುವಂತೆ ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಈ ವಿಚಾರವನ್ನು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್ ತಿಳಿಸಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ವಿವಿಧ ಬ್ರಾಂಡ್​ಗಳಲ್ಲಿ ನಂದಿನ ಹಾಲು ಮಾರಾಟವಾಗುತ್ತಿದ್ದು ದರಗಳು ₹ 37ರಿಂದ ಆರಂಭವಾಗುತ್ತವೆ. ಸರ್ಕಾರವು ಕೆಎಂಎಫ್ ಪ್ರಸ್ತಾವವನ್ನು ಒಪ್ಪಿಕೊಂಡರೆ ಒಂದು ಲೀಟರ್ ಹಾಲಿನ ಕನಿಷ್ಠ ದರವು ₹ 40 ಮುಟ್ಟಲಿದೆ. ದರಏರಿಕೆಗೆ ಸಮ್ಮತಿಸುವಂತೆ ಕೋರಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ವಿನಂತಿಸಿದ್ದಾರೆ.

ಕರ್ನಾಟಕದ 14 ಜಿಲ್ಲೆಗಳ ಹಾಲು ಒಕ್ಕೂಟಗಳು ಬೆಲೆ ಹೆಚ್ಚಿಸುವಂತೆ ಮನವಿ ಮಾಡಿವೆ. ಹಾಲಿನ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಹೆಚ್ಚು ಖರ್ಚು ಬರುತ್ತಿದೆ. ದರ ಹೆಚ್ಚಳದ ಲಾಭವನ್ನು ರೈತರಿಗೆ ವರ್ಗಾಯಿಸಲಾಗುವುದು. ಕೆಎಂಎಫ್ ಪ್ರಸ್ತಾವಕ್ಕೆ ಮುಖ್ಯಮಂತ್ರಿಗಳು ಪೂರಕವಾಗಿ ಸ್ಪಂದಿಸಿದ್ದು, ‘ಸಾಧಕ ಬಾಧಕ ನೋಡಿ ತೀರ್ಮಾನಿಸೋಣ’ ಎಂದಿದ್ದಾರೆ ಎಂದು ಕೆಎಂಎಫ್ ಎಂಡಿ ಸತೀಶ್ ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಪ್ರಸ್ತುತ ಒಂದು ದಿನಕ್ಕೆ ಸರಾಸರಿ 40 ಲಕ್ಷ ಲೀಟರ್​ ಪಾಕೆಟ್ ಹಾಲು ಮಾರಾಟವಾಗುತ್ತಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕರ್ನಾಟಕದ ಜಿಲ್ಲೆಗಳಲ್ಲಿ ಹಾಲಿನ ಸಂಗ್ರಹ ಪ್ರಮಾಣ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಐದು ವರ್ಷಗಳಲ್ಲಿ ಹಾಲು ಸಂಗ್ರಹವನ್ನು ದಾಖಲೆ ಮಟ್ಟಕ್ಕೆ ಹೆಚ್ಚಿಸಲು ಕೆಎಂಎಫ್ ಯೋಜನೆ ರೂಪಿಸಿದೆ. 2027ರ ವೆಳೆಗೆ ಒಂದು ದಿನಕ್ಕೆ 1.37 ಕೋಟಿ ಲೀಟರ್ ಹಾಲು ಸಂಗ್ರಹಿಸುವ ಹಾಗೂ ವಾರ್ಷಿಕ ವಹಿವಾಟನ್ನು ₹ 27 ಸಾವಿರ ಕೋಟಿಗೆ ಹೆಚ್ಚಿಸುವ ಗುರಿ ಇರಿಸಿಕೊಳ್ಳಲಾಗಿದೆ.

ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕೆಎಂಎಫ್ 12 ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಎಂಟು ಹೊಸ ಬಗೆಯ ಸಿಹಿ ಉತ್ಪನ್ನಗಳು, ಎರಡು ಬಗೆಯ ಬಿಸ್ಕೀಟ್, ಬೆಣ್ಣೆಮುರುಕು ಮತ್ತು ಗುಡ್​ಲೈಫ್ ಚಾಕೊಲೇಟ್​ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

Published On - 11:11 am, Tue, 30 August 22