ಆನ್‌ಲೈನ್ ಶಾಪಿಂಗ್ ಈಗ ಬಹಳ ಸಾಮಾನ್ಯವಾಗಿ ಹೋಗಿದೆ. ಸಣ್ಣ ಪುಟ್ಟ ವಸ್ತುಗಳನ್ನೂ ನಾವು ಆನ್‌ಲೈನ್ ಮೂಲಕವೇ ಖರೀದಿಸುವುದು ಅಭ್ಯಾಸವಾಗುತ್ತಿದೆ. ಅಂತೆಯೇ ಆನ್‌ಲೈನ್ ಸಂಬಂಧಿತ ಸೈಬರ್ ಕ್ರೈಮ್ (cyber crime cases) ಪ್ರಕರಣಗಳು ಹೆಚ್ಚೆಚ್ಚು ವರದಿಯಾಗುತ್ತಿವೆ. ಎಟಿಎಂ ಕಾರ್ಡ್ ವಿವರ ಪಡೆಯುವುದು, ನಕಲಿ ಲಿಂಕ್ ಮೂಲಕ ಹ್ಯಾಕ್ ಮಾಡುವುದು, ಸುಳ್ಳು ಭರವಸೆ ನೀಡಿ ಹಣ ಲಪಟಾಯಿಸುವುದು ಹೀಗೆ ನಾನಾ ರೀತಿಯಲ್ಲಿ ವಂಚನೆಗಳು ನಡೆಯುತ್ತವೆ. ದುಷ್ಕರ್ಮಿಗಳು ವಂಚನೆಯ ಹೊಸ ಹೊಸ ದಾರಿ ಹುಡುಕುತ್ತಿರುತ್ತಾರೆ. ಕೆಲವೊಮ್ಮೆ ನಾವು ಅಂದಾಜೂ ಮಾಡಲು ಸಾಧ್ಯ ಇಲ್ಲದಂತಹ ರೀತಿಯ ಪ್ರಕರಣಗಳನ್ನು ಕಾಣಬಹುದು. ಇದೀಗ ಕೊರಿಯರ್ ಕಂಪನಿಯ ಹೆಸರಿನಲ್ಲಿ ವಂಚನೆ ನಡೆದಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ನೀವು ಆನ್ಲೈನ್ನಲ್ಲಿ ಶಾಪಿಂಗ್ ಮಾಡಿದಾಗ ಸಾರಿಗೆ ಅಥವಾ ಕೊರಿಯರ್ ಕಂಪನಿಯು ಆ ಸರಕನ್ನು ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತದೆ. ಡೆಲಿವರಿಗೆ ಒಂದಷ್ಟು ಕಾಲಾವಕಾಶ ಇರುತ್ತದೆ. ಸಾಮಾನ್ಯವಾಗಿ ಇದು 1ರಿಂದ 5 ದಿನಗಳವರೆಗೆ ಸಮಯ ಇರುತ್ತದೆ. ನೀವು ಸ್ವಲ್ಪ ವ್ಯವಧಾನ ಕಳೆದುಕೊಂಡರೆ ಯಡವಟ್ಟಾಗುವ ಸಾಧ್ಯತೆ ಇರುತ್ತದೆ. ಬೇಗನೇ ಪಾರ್ಸಲ್ ಪಡೆಯಬೇಕೆಂಬ ಆಸೆಯಲ್ಲಿ ನೀವು ಕೊರಿಯರ್ ಕಂಪನಿಯ ಕಸ್ಟಮರ್ ಕೇರ್ ನಂಬರ್ ಅನ್ನು ಗೂಗಲ್ ಮೂಲಕ ಹುಡುಕಿ ಪಡೆಯುತ್ತೀರಿ.
ಗೂಗಲ್ನಿಂದ ಪಡೆದ ಆ ಸಂಖ್ಯೆಗೆ ಕರೆ ಮಾಡಿ, ಪಾರ್ಸಲ್ ಅನ್ನು ಬೇಗನೇ ಕಳುಹಿಸಿ ಎಂದು ಕರೆ ಮಾಡುತ್ತೀರಿ. ಆ ಫೋನ್ ರಿಸೀವ್ ಮಾಡಿದ ವ್ಯಕ್ತಿ, ತಾನು ಬೇಗನೆ ಪಾರ್ಸಲ್ ಡೆಲಿವರಿಗೆ ವ್ಯವಸ್ಥೆ ಮಾಡುವುದಾಗಿ ಹೇಳುತ್ತಾರೆ. ಆದರೆ 5 ರೂ ಇತ್ಯಾದಿ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ ಎಂದು ಹೇಳಿ ಕ್ಯೂಆರ್ ಕೋಡ್ ಅನ್ನು ನಿಮ್ಮ ಮೊಬೈಲ್ಗೆ ಕಳುಹಿಸಲಾಗುತ್ತದೆ. ನೀವು ಆ ಕ್ಯೂಆರ್ ಕೋಡ್ ಬಳಸಿ ಹಣ ಪಾವತಿಸಿದರೆ 5 ರೂ ಬದಲು 5,000 ರೂ, 10,000 ರೂ ಇತ್ಯಾದಿ ಅಧಿಕ ಮೊತ್ತದ ಹಣವು ಖಾತೆಯಿಂದ ಕಡಿತಗೊಳ್ಳುತ್ತದೆ. ಈ ಮೂಲಕ ನೀವು ವಂಚನೆಗೊಳಗಾಗುತ್ತೀರಿ.
ಇದನ್ನೂ ಓದಿ: ಅಂಗಡಿಯಲ್ಲಿ ಸಾಮಾನು ಖರೀದಿಸಿ ಬಿಲ್ ಅಪ್ಲೋಡ್ ಮಾಡಿ, 1 ಕೋಟಿ ರೂವರೆಗೆ ಬಹುಮಾನ ಗೆಲ್ಲಿ
ನಿಮಗೆ ಪಾರ್ಸೆಲ್‌ಗೆ ಸಂಬಂಧಿಸಿದ ಯಾವುದೇ ಮಾಹಿತಿ ಬೇಕಾದರೆ, ಕೊರಿಯರ್ ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅಲ್ಲಿ ಒದಗಿಸಲಾದ ವಿವರಗಳನ್ನು ಬಳಸಿ. Google ನಲ್ಲಿ ಹುಡುಕುವಾಗ ಜಾಗರೂಕರಾಗಿರಿ. ಹಲವು ನಕಲಿ ವೆಬ್‌ಸೈಟ್‌ಗಳಿಂದ ವಂಚನೆ ನಡೆಯುತ್ತಿದೆ. ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಅಲ್ಲದೆ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಸಂಖ್ಯೆಗಳ CVV ಅಥವಾ OTP ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ವಂಚನೆಯ ಸಂದರ್ಭದಲ್ಲಿ, ನೀವು ಭಾರತ ಸರ್ಕಾರದ ಸಹಾಯವಾಣಿ ಸಂಖ್ಯೆ 1930 ಗೆ ಕರೆ ಮಾಡಬೇಕು. ಯಾವುದೇ ರೀತಿಯ ಸೈಬರ್ ವಂಚನೆಯ ಸಂದರ್ಭದಲ್ಲಿ ನೀವು cybercrime.gov.in ನಲ್ಲಿ ದೂರು ಸಲ್ಲಿಸಬಹುದು .
ಮತ್ತಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ