ನವದೆಹಲಿ, ಏಪ್ರಿಲ್ 18: ರಾಜ್ ಕುಂದ್ರಾ (Raj Kundra) ಅವರಿಗೆ ಸೇರಿದ್ದೆನ್ನಲಾದ 97.79 ಕೋಟಿ ರೂ ಮೌಲ್ಯದ ವಿವಿಧ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (ED) ಜಫ್ತಿ ಮಾಡಿದೆ. ಇದರಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ (Shilpa Shetty) ಹೆಸರಿನಲ್ಲಿರುವ ಮುಂಬೈನ ಜುಹುವಿನಲ್ಲಿರುವ ಫ್ಲ್ಯಾಟ್ ಕೂಡ ಒಳಗೊಂಡಿದೆ. ಸಿಂಗಾಪುರದಿಂದ ಕಾರ್ಯ ನಿರ್ವಹಿಸುವ ವೇರಿಯಬಲ್ ಟೆಕ್ ಪ್ರೈ ಲಿ ಎಂಬ ಸಂಸ್ಥೆಯ 6,600 ಕೋಟಿ ರೂ ಮೌಲ್ಯದ ಬಿಟ್ಕಾಯಿನ್ ಹಗರಣಕ್ಕೆ (Bitcoin scam) ಸಂಬಂಧಿಸಿದ ಬೆಳವಣಿಗೆ ಇದು. ಈ ಮಹಾ ಹಗರಣದಲ್ಲಿ ಪಾಪದ ಹಣದಲ್ಲಿ ರಾಜ್ ಕುಂದ್ರಾದ್ದೂ ಪಾಲಿದೆ ಎನ್ನುವುದು ಇಡಿ ಆರೋಪ. ಜಾರಿ ನಿರ್ದೇಶನಾಲಯ 2018ರಿಂದ ಈ ಪ್ರಕರಣದ ತನಿಖೆ ನಡೆಸುತ್ತಿದೆ. ಹೂಡಿಕೆದಾರರಿಗೆ ಸಖತ್ ಲಾಭ ಮಾಡಿಕೊಡುವ ಯೋಜನೆಯ ಆಮಿಷವೊಡ್ಡಿ ಸಾವಿರಾರು ಕೋಟಿ ರೂ ವಂಚನೆ ಎಸಗಲಾಗಿರುವ ಮಹಾ ಹಗರಣ ಇದು. ಈ ಹಗರಣದಲ್ಲಿ ರಾಜ್ ಕುಂದ್ರಾ ಪಾತ್ರ ಏನು, ಈ ಹಗರಣ ಯಾವುದು, ಇದರ ವಿವರ ಇಲ್ಲಿದೆ.
ಸಿಂಗಾಪುರದಲ್ಲಿ ಮುಖ್ಯ ಕಚೇರಿ ಹೊಂದಿರುವ ವೇರಿಯಬಲ್ ಟೆಕ್ ಪ್ರೈ ಲಿ ಸಂಸ್ಥೆ ಬಿಟ್ಕಾಯಿನ್ ಬಿಸಿನೆಸ್ನಿಂದ ಭಾರೀ ಲಾಭ ಕೊಡುವುದಾಗಿ ಆಮಿಷವೊಡ್ಡಿ ಭಾರತದಾದ್ಯಂತ 6,606 ಮೌಲ್ಯದ 80,000 ಬಿಟ್ಕಾಯಿನ್ಗಳನ್ನು ಸಂಗ್ರಹಿಸಿತ್ತು. ತಿಂಗಳಿಗೆ ಶೇ. 10ರಂತೆ ಲಾಭ ಸಿಗುತ್ತದೆ ಎಂಬ ಮಾತು ನಂಬಿ ಸಾವಿರಾರು ಜನರು ಬಿಟ್ಕಾಯಿನ್ ಖರೀದಿಸಿ ಕೊಟ್ಟಿದ್ದರು. ಇದರಲ್ಲಿ ಬಹಳಷ್ಟು ಮಲ್ಟಿ ಲೆವೆಲ್ ಮಾರ್ಕೆಟಿಂಗ್ ಅಥವಾ ಎಂಎಲ್ಎಂ ಏಜೆಂಟ್ಗಳ ಮುಖಾಂತರ ಈ ಕಾರ್ಯ ಮಾಡಿಸಲಾಗಿತ್ತು. ಅಜಯ್ ಭಾರದ್ವಜ್, ಮಹೇಂದರ್ ಭಾರದ್ವಜ್ ಅವರು ಈ ಹಗರಣದ ಪ್ರಮುಖ ಆರೋಪಿಗಳು. ಅಜಯ್ ಭಾರದ್ವಜ್ ಪತ್ನಿ ಸಿಂಪಿ ಭಾರದ್ವಜ್ ಸೇರಿದಂತೆ ಇನ್ನೂ ಹಲವರು ಆರೋಪಿಗಳಿದ್ದಾರೆ.
ಇದನ್ನೂ ಓದಿ: ಶಿಲ್ಪಾ ಶೆಟ್ಟಿ, ರಾಜ್ ಕುಂದ್ರಾಗೆ ಜಾರಿ ನಿರ್ದೇಶನಾಲಯ ಶಾಕ್; 98 ಕೋಟಿ ರೂಪಾಯಿ ಆಸ್ತಿ ಸೀಜ್
ಬಿಟ್ಕಾಯಿನ್ ಮೈನಿಂಗ್ ಮಾಡಲಾಗುವುದು. ಇದರಿಂದ ಭರ್ಜರಿ ಲಾಭ ಸಿಗುತ್ತದೆ ಎಂದು ಹೂಡಿಕೆದಾರರಿಗೆ ಭರವಸೆ ನೀಡಲಾಗಿತ್ತು. 2017 ಮತ್ತು 2918ರಲ್ಲಿ ದುಬೈ ಮತ್ತು ಮಕಾವೋದಲ್ಲಿ ಈ ಹೂಡಿಕೆ ಸ್ಕೀಮ್ ಬಗ್ಗೆ ವರ್ಣರಂಜಿತವಾಗಿ ಪ್ರಚಾರ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗಿತ್ತು. ಹೀಗೆ ನಾನಾ ರೀತಿಯ ಆಮಿಷಗಳ ಮೂಲಕ ಹೂಡಿಕೆದಾರರಿಂದ ಸುಮಾರು 80,000 ಬಿಟ್ಕಾಯಿನ್ಗಳನ್ನು ಸಂಗ್ರಹಿಸಲಾಗಿತ್ತು. ಈ ಬಿಟ್ಕಾಯಿನ್ಗಳನ್ನು ಒಂಬತ್ತು ಸಂಸ್ಥೆಗಳ ಮೂಲಕ ಬೇರೆ ಬೇರೆ ದೇಶಗಳಲ್ಲಿ ಆಸ್ತಿ ಖರೀದಿಸಲು ಬಳಸಲಾಗಿದೆ.
ಗೋಲ್ಡ್ ಮೈನಿಂಗ್ನಲ್ಲಿ ಚಿನ್ನವನ್ನು ಪಡೆದಂತೆ ಬಿಟ್ಕಾಯಿನ್ ಮೈನಿಂಗ್ ಕೂಡ. ಬಹಳ ಸಂಕೀರ್ಣವಾದ ಗಣಿತದ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಹೊಸ ಬಿಟ್ಕಾಯಿನ್ ಸೃಷ್ಟಿ ಮಾಡುವುದಕ್ಕೆ ಬಿಟ್ಕಾಯಿನ್ ಮೈನಿಂಗ್ ಎನ್ನುವುದು. ಬಿಟ್ಕಾಯಿನ್ ಬ್ಲಾಕ್ಚೈನ್ನಲ್ಲಿ ಹೊಸ ಬ್ಲಾಕ್ ಅನ್ನು ಸರಿಯಾಗಿ ವ್ಯಾಲಿಡೇಟ್ ಮಾಡುವ ಒಬ್ಬ ಮೈನರ್ಗೆ 6.25 ಬಿಟ್ಕಾಯಿನ್ ಸಿಗುತ್ತದೆ. ಆದರೆ, ಈ ರೀತಿಯ ಮೈನಿಂಗ್ಗೆ ಕಂಪ್ಯೂಟರ್ ಬಳಕೆ ಸಾಕಷ್ಟಾಗುತ್ತದೆ. ವಿದ್ಯುತ್ ಬಳಕೆ ತೀರಾ ಹೆಚ್ಚಿರುತ್ತದೆ. ಕೆಲ ವರದಿ ಪ್ರಕಾರ ಒಂದು ಬಿಟ್ಕಾಯಿನ್ ಮೈನ್ ಮಾಡಲು ಬೇಕಾಗುವ ವಿದ್ಯುತ್ ಅನ್ನು ಒಂಬತ್ತು ವರ್ಷ ಕಾಲ ಒಂದು ಮನೆಗೆ ಬಳಸಲು ಸಾಧ್ಯವಂತೆ.
ಇದನ್ನೂ ಓದಿ: ಚೈನ್ ಸ್ಮೋಕರ್ಸ್ 30 ವರ್ಷ ಬದುಕಬಲ್ಲುರು, ಈ ಎಫ್ ಅಂಡ್ ಒ ಟ್ರೇಡರ್ಸ್ ಬೇಗ ‘ಹೊಗೆ’ನೇ: ವಿಜಯ್ ಕೇದಿಯಾ
ಈ ಹಗರಣದ ಮಾಸ್ಟರ್ಮೈಂಡ್ ಎನ್ನಲಾದ ಅಮಿತ್ ಭಾರದ್ವಜ್ ಅವರಿಂದ ರಾಜ್ ಕುಂದ್ರಾ 285 ಬಿಟ್ಕಾಯಿನ್ಗಳನ್ನು ಪಡೆದಿದ್ದಾರೆ ಎನ್ನಲಾಗಿದೆ. ಉಕ್ರೇನ್ನಲ್ಲಿ ಬಿಟ್ಕಾಯಿನ್ ಮೈನಿಂಗ್ ಫಾರ್ಮ್ ಅನ್ನು ಸ್ಥಾಪಿಸುವ ಒಪ್ಪಂದದ ಭಾಗವಾಗಿ ರಾಜ್ ಕುಂದ್ರಾ ಈ ಬಿಟ್ಕಾಯಿನ್ ಪಡೆದಿದ್ದರು. ಆದರೆ, ಮೈನಿಂಗ್ ಫಾರ್ಮ್ ಸ್ಥಾಪನೆ ಆಗಿರಲಿಲ್ಲ. ಆದರೂ ಈ ಬಿಟ್ಕಾಯಿನ್ ಅನ್ನು ರಾಜ್ ಕುಂದ್ರಾ ಮರಳಿಸಿಲ್ಲ. ಇವುಗಳ ಈಗಿನ ಮೌಲ್ಯ 150 ಕೋಟಿ ರೂ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ಶಿಲ್ಪಾ ಶೆಟ್ಟಿ ಅವರ ಪತಿಯಾದ ರಾಜ್ ಕುಂದ್ರಾ ಹೆಸರು ನೀಲಿ ಸಿನಿಮಾ ನಿರ್ಮಾಣ, ಬೆಟ್ಟಿಂಗ್ ಹಗರಣಗಳಲ್ಲೂ ಕೇಳಿಬಂದಿತ್ತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ